ಉತ್ಥಾನ ದ್ವಾದಶಿ ಟ್ರಿಪ್.
ಉತ್ಥಾನ ದ್ವಾದಶಿ ಟ್ರಿಪ್.
ಹೆಸರಲ್ಲೇ ಏನೋ ವಿಶೇಷ ಕಾಣಿಸ್ತಾ... ಹೌದು ಕಾರಣ ಇದೆ.
ದೊಡ್ಡಪ್ಪ (ನನ್ನ ಮಾವನವರ ಅಣ್ಣ)... ನಮಗೆಲ್ಲ ತುಂಬಾ ಪ್ರೀತಿ ಪಾತ್ರರಾಗಿದ್ದವರು... ಅವರು ಶಿವನಪಾದ ಸೇರಿ ಒಂದು ವರ್ಷ ಕಳೆದು ಶ್ರಾದ್ಧ ಕಾರ್ಯಕ್ರಮಗಳು ನಡೆದಾಗ ಎಲ್ಲಾ ಕುಟುಂಬದ ಸದಸ್ಯರು ಒಟ್ಟಿಗೆ ಸೇರಿದ್ದೆವು. ಆಗಿನ ಮಾತುಕತೆಯ ವೇಳೆ ಆದ ನಿರ್ಧಾರ ...ಎಲ್ಲರೂ ಒಟ್ಟಿಗೆ ಹೋಗಿ ವರ್ಷಗಳೇ ಕಳೆದಿವೆ, ಏನಾದರೂ ಮಾಡಬೇಕು ಅನ್ನುವ ಒಂದು ಅಭಿಪ್ರಾಯ ಹೊಮ್ಮಿತು. ತಕ್ಷಣವೇ ಕಿರಿಯರ ಒಂದು ಗುಂಪು ಕಾರ್ಯಪ್ರವೃತ್ತವಾಯಿತು ಮತ್ತು ನವಂಬರ್ ಐದು ಮತ್ತು ಆರನೇ ತಾರೀಕು ಹೋಗಲು ನಿಶ್ಚಯಿಸಿತು.
ಹಿರಿಯ ತಲೆಗಳು ಒಂದೆರಡು ಯೋಚಿಸಿ ಅದು ಉತ್ಥಾನ ದ್ವಾದಶಿ ದಿನವಾದ್ದರಿಂದ ತುಳಸಿ ಪೂಜೆ ಮಾಡಬೇಕು.. ಹಾಗಾಗಿ ಕಷ್ಟ ಎಂಬ ಸಬೂಬು ಬಂತು. ತಕ್ಷಣವೇ ತುಳಸಿಯ ಗಿಡವನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಪೂಜೆ ಮಾಡುವುದೆಂದು ತರಲೆ ಸೂಚನೆಯೊಂದು ಬಂತು. ಹೇಗೋ ಎಲ್ಲರೂ ಒಪ್ಪಿದ್ದಾಯಿತು ತಕ್ಷಣವೇ ಕೊಟ್ಟ ಹೆಸರು "ಉತ್ಥಾನ ದ್ವಾದಶಿ ಟ್ರಿಪ್"...
ಆಗಲೇ ವಾಟ್ಸಪ್ ಗ್ರೂಪೊಂದು ಶುರುವಾಯಿತು.. ಏನೆಲ್ಲ ಮಾತುಕತೆಗಳು... ತರಲೆಗಳು ಸೇರಿ... ಸಂವಾದ ಗಳು ನಡೆದು ಕೊನೆಗೂ ಸಂಭವಿಸಿದ್ದೇ "ಉತ್ಥಾನ ದ್ವಾದಶಿ ಟ್ರಿಪ್."
ನವಂಬರ್ ಐದನೆಯ ತಾರೀಕು ಬೆಳಿಗ್ಗೆ 9:30 ಗಂಟೆಗೆ PES ಹತ್ತಿರ ನೈಸ್ ರಸ್ತೆಯ ಟೋಲ್ ಎದುರು ಎಲ್ಲರೂ ಸೇರಬೇಕೆಂದು ನಿರ್ಧಾರವಾಯಿತು. ಅಂತೂ ಎಲ್ಲರೂ ಸೇರಿದಾಗ 10:30 ಆಗಿತ್ತು. ಹೊರಟಿತು ನಮ್ಮ ಕಾರುಗಳ ಕಾರವಾನ್ ಸಂಭ್ರಮದೊಂದಿಗೆ.
ಕೆಲವೇ ದಿನಗಳ ಹಿಂದೆ ವರ್ಷ ಪೂರೈಸಿದ ಮಗುವು ನಮ್ಮ ಗುಂಪಿನ ಕಿರಿಯವ ಹಾಗೂ 96 ವರ್ಷದ ನನ್ನ ಮಾವನವರು ಅತಿ ಹಿರಿಯರು. ಇನ್ನೊಂದು ವೈವಿದ್ಯವೆಂದರೆ ನಮ್ಮಲ್ಲಿ ಕೆಲವರು ಕರ್ಮಠ ಸಸ್ಯಾಹಾರಿಗಳು. ಹಾಗಾಗಿ ಅವರುಗಳು ರೆಸಾರ್ಟ್ ನಲ್ಲಿ ಮಾಡಿದ ಅಡುಗೆಯನ್ನು ತಿನ್ನಲಾರದವರು.... ಊಟಕ್ಕೆ ಅವರದೇ ಏರ್ಪಾಟು ಮಾಡಿಕೊಂಡಿದ್ದರು. ಇದು ನಮ್ಮ ಗುಂಪಿನಲ್ಲಿದ್ದ ವಿವಿಧತೆಯಲ್ಲೂ ಏಕತೆ.
ಅಂತೂ ನಮ್ಮ ಗುರಿಯಾದ ತುಮಕೂರು ರಸ್ತೆಯ ಬಳಿಯ ಉತ್ಸವ್ ರೆಸಾರ್ಟ್ಸ್ ಅನ್ನು ಸುಮಾರು 12:30 ಕ್ಕೆ ಸೇರಿದೆವು.
ಎಲ್ಲರೂ ನಮ್ಮ ನಮ್ಮ ರೂಮುಗಳಲ್ಲಿ ತಂಗಿದ್ದಾಯಿತು... ಪಾಪ ಐದು ಜನಕ್ಕೆ ಮಾತ್ರ ಮಹಡಿಯ ಮೇಲೆ ಎಸಿ ಇಲ್ಲದ ರೂಮುಗಳು.
ಒಂದಷ್ಟು ಪರಿಚಯದ ಸುತ್ತಾಟ ಆದ ನಂತರ ಊಟ.. ಶುರುವಾಯಿತು ನಮ್ಮೆಲ್ಲರ ಆಟೊಟ.
ಕೆಲವರಿಗೆ ವಿಶ್ರಾಂತಿಯೂ ಆಟವೇ...
ಸೈಕಲ್ ತುಳಿಯುವುದು, ಹಗ್ಗದ ಮೇಲಿನ ಆಟಗಳು, ಕೇರಂ, ಟೇಬಲ್ ಟೆನ್ನಿಸ್, ಚೌಕಬಾರ , ರೈನ್ ಡ್ಯಾನ್ಸ್, ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಟ. ಇಲ್ಲಿ ನಮ್ಮ ಗುಂಪಿನ ಎರಡು ಚಿಕ್ಕ ಮಕ್ಕಳು ಈಜಿದ್ದು ನೋಡುವುದೇ ಕಣ್ಣಿಗೆ ಹಬ್ಬ..
ಇನ್ನು ನಮ್ಮ ಟ್ಯಾಲೆಂಟ್ ಪೂಲ್ ನ ವೈವಿಧ್ಯ ಕೇಳಬೇಕೆ? ಹಾಡುಗಳು, ನೃತ್ಯಗಳು, ಕ್ವಿಜ್, ಹೌಸಿ, ಹಾಗೂ ವಿವಿಧ ಗುಂಪಿನ ಆಟಗಳು ನಮ್ಮನ್ನು ಸಂತಸದ ಉತ್ತುಂಗಕ್ಕೆ ಏರಿಸಿದ್ದವು.
ಒಂದು ಸಣ್ಣ ಗುಂಪು ರಾತ್ರಿ ಕ್ಯಾಂಪ್ ಫೈರ್ ಮುಗಿಸಿ ಮಲಗಲು ಬಂದರು... ಆಗ ನಡೆದ
ಇನ್ನೊಂದು ವಿಷಯ ಹೇಳಲೇಬೇಕು.... ಇದು ಮಹಡಿಯ ಮೇಲಿನ ಐದು ಜನದ ವಿಷಯ...
ಅವರು ತಮ್ಮ ರೂಮನ್ನು ತೆಗೆದಾಗ ಕಂಡ ದೃಶ್ಯ... ಬರೀ ಜೇನಿನ ನೊಣಗಳು.... ಎಲ್ಲೆಲ್ಲೂ. ಆ ಸರಿ ರಾತ್ರಿಯಲ್ಲಿ ಅವರಿಗೆ ಬೇರೆಯ ರೂಮಿನ ವ್ಯವಸ್ಥೆಯಾಗಿತ್ತು (ಇದು ನನಗೆ ತಿಳಿದದ್ದು ಮಾತ್ರ ಬೆಳಿಗ್ಗೆಯೆ).
ac ಇಲ್ಲದ ರೂಮಿನಲ್ಲಿ ಇದ್ದವರಿಗೆ ಜೇನ್ನೊಣದ ಕೃಪೆಯಿಂದ ಸಿಕ್ಕಿದ್ದು ವೈಭವಯುತವಾದ ac ಬಂಗಲೆ.. ಇದಲ್ಲವೇ ಯೋಗಾ ಯೋಗ.
ಮೊದಲಾಗಿದ್ದೆಲ್ಲಾ... ಕೊನೆಯಾಗಲೇಬೇಕು ಹಾಗಾಗಿ ನಮ್ಮ" ಉತ್ಥಾನ ದ್ವಾದಶಿ ಟ್ರಿಪ್" ಸಹ ಕೊನೆಯ ಹಂತ ತಲುಪಿತು... ಅಲ್ಲಿಂದ ಮತ್ತೆ ಹೊರಟಿತು ನಮ್ಮ ಕಾರುಗಳ ಪಯಣ.
ಬರುವ ದಾರಿಯಲ್ಲಿ ಕಾಫಿ ಕುಡಿಯಲು ಇಳಿದಾಗ ನಮ್ಮ ಸದಸ್ಯೆ ಒಬ್ಬರು ಗಾಯ ಮಾಡಿಕೊಂಡಿದ್ದು, ಮತ್ತು ನರಸಿಂಹ ದೇವರ ದರ್ಶನ ಸಹ ನಮ್ಮ ಮನದಾಳದಲ್ಲಿ ಅಚ್ಚೊತ್ತಿತ್ತು....
ಇನ್ನೂ ಸಹ ವಾಟ್ಸಪ್ ಗುಂಪಿನಲ್ಲಿ ಫೋಟೋಗಳ ವೀಡಿಯೋಗಳ ಹಂಚಿಕೆ ನಡೆದಿದೆ ಜೊತೆ ಜೊತೆಗೆ ನೆನಪುಗಳ ಸರಮಾಲೆ....
ಒಂದೆರಡು ಫೋಟೋ ಹಾಕುವ ನನ್ನ ಆಸೆಗೆ... ಯಾಕೋ ನನ್ನ ಫೋನ್ ಸಹಕರಿಸಲಿಲ್ಲ.... ಅದು ನನ್ನ ಅಜ್ಞಾನದ ಗುರುತು...
ನಾನು ನನ್ನ ನೆನಪಿನ ಸರಮಾಲೆ ಯನ್ನು ನಿಮ್ಮೊಂದಿಗೆ ಹಂಚಿಕೊಂಡ ಖುಷಿಯೊಂದಿಗೆ.."(U)ಉತ್ಥಾನ (T)ದ್ವಾದಶಿ( D)ಟ್ರಿಪ್" ನ ನನ್ನ ಕಥನವನ್ನು ನಿಲ್ಲಿಸುವೆ.... ನಮಸ್ಕಾರ
ಅಣ್ಣ ನೀನಿದ್ದಲ್ಲಿ ಹರುಷದ ಹೊನಲು.ನಿಮ್ಮ ಮನೆಯಲ್ಲಿ ದೀರ್ಘಾಯುಗಳ ಕೊರತೆಯೇ?ಹಿರಿಯರ ಹಾರೈಕೆ ಕಿರಿಯರ ಕಲರವ ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ.ಇಂತಹ ಸಂದರ್ಭಗಳು ಹೆಚ್ಚಲಿ.ಸಂತೋಷ ಹೆಚ್ಚಲಿ.
ReplyDeleteNice superb 🙂👍 ಇದು ಒಂದು ತರಹ ಖುಷಿ ಟ್ರಿಪ್ .
ReplyDelete