ಸೂರ್ಯಗ್ರಹಣ - ಅದರದ್ದೊಂದು ಚಿಕ್ಕ ಪುರಾಣ:
ಗ್ರಹಣ ಅಂದಾಗ ನನ್ನ ಮನಸ್ಸಿಗೆ ಬರೋದು ರಾಹುಕೇತುಗಳು ಸೂರ್ಯ ಅಥವಾ ಚಂದ್ರನನ್ನು ನುಂಗು ಹಾಕುತ್ತಾರೆ. ಆಗ ಸೂರ್ಯ ಚಂದ್ರರು ನಮಗೆ ಕಾಣುವುದಿಲ್ಲ. ಇದು ನಮಗೆ ಸಾಮಾನ್ಯವಾಗಿ ತಿಳಿದಿದ್ದ ವಿಷಯ. ನಿಧಾನವಾಗಿ ಸೂರ್ಯ ಚಂದ್ರರು ಕಾಣೆಯಾಗುತ್ತಿದ್ದರಿಂದ... ನನಗೂ ಹಾಗೆ ಅನ್ನಿಸುತ್ತಿತ್ತು. ಯಾಕೆಂದರೆ ನಾನು ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೆ. ಇದನ್ನು ಮೂಢನಂಬಿಕೆಯೆಂದು ಮೂಗು ಮುರಿಯುವವರು ಇದ್ದಾರೆ. ಅದು ಸರಿಯೇ ಇರಬಹುದು.
ಆದರೆ ನಮ್ಮ ಪೂರ್ವಜರು ಗ್ರಹಣ ಸಂಭವಿಸುವುದನ್ನು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿ ಪಂಚಾಂಗದಲ್ಲಿ ಕೊಡುವುದನ್ನು ಗಮನಿಸಿದಾಗ, ಅದು ಈಗಲೂ ಅನೂಚಾನವಾಗಿ ಮುಂದುವರೆದು ಬರುತ್ತಿರುವುದರಿಂದ ನಮ್ಮ ಪೂರ್ವಜರ ಜ್ಞಾನ- ಆಕಾಶಕಾಯಗಳ ಚಲನೆಯ ವಿಚಾರವಾಗಿ - ಎಷ್ಟು ಉನ್ನತ ಮಟ್ಟದಲ್ಲಿ ಇತ್ತೆಂಬುದು ವಿಶದವಾಗುತ್ತದೆ.
ಇರಲಿ, ನನ್ನ ಪುರಾಣಕ್ಕೆ ಬರುತ್ತೇನೆ....
ಬಹುಶಃ ನಾನು ನಮ್ಮ ಹಳ್ಳಿಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಕಾರಣ ಗೊತ್ತಿಲ್ಲ ಅಂದು ಮನೆಯಲ್ಲಿದ್ದವರು ನಾನು ಮತ್ತು ನಮ್ಮಪ್ಪ ಶಾಮಣ್ಣ( ನಮ್ಮಪ್ಪನನ್ನು ನಾವು ಕರೆಯುತ್ತಿದ್ದುದು ಶಾಮಣ್ಣ ಎಂದೆ). ಸೂರ್ಯಗ್ರಹಣ ಅಂದು ತುಂಬಾ ಹೊತ್ತು ಇರುತ್ತದೆಂದು, ಬೆಳಿಗ್ಗೆ ಬೇಗ ಊಟ ಮಾಡಿ ನಂತರ ಸೂರ್ಯಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ಊಟ ಮಾಡಬೇಕು ಮಧ್ಯೆ ತಿನ್ನಲು ಏನು ಕೇಳಬಾರದೆಂದು ನಮ್ಮಪ್ಪನ ಅಜ್ಞೆ ,(?)
ಮನೆಯಲ್ಲಿದ್ದ ಹಾಲು ಮೊಸರು ಮುಂತಾದ ಕೆಲ ಪಾತ್ರೆಗಳ ಮೇಲೆ ದರ್ಭೆಯ ಎಸಳುಗಳನ್ನು ಇಟ್ಟಾಯ್ತು. ( ಕ್ಷಮಿಸಿ... ಅದರದ್ದೊಂದು ಸಣ್ಣ ವಿಷಯ ನಿಮ್ಮೊಡನೆ ಹಂಚಿಕೊಳ್ಳಲೇಬೇಕು.. ಮುಂಚೆ ಗ್ರಹಣ ಕಾಲದಲ್ಲಿ ವಿಕಿರಣಗಳಿಂದ ರಕ್ಷಿಸಲು ಎಲ್ಲ ಆಹಾರ ಪದಾರ್ಥದ ಪಾತ್ರೆಗಳ ಮೇಲೆ ದರ್ಭೆಯಿಂದ ಹೆಣೆದ ಚಾಪೆಗಳನ್ನು ಮುಚ್ಚುತ್ತಿದ್ದರಂತೆ. ಕಾಲಕ್ರಮೇಣ ಚಾಪೆ ಹರಿದಾಗ ಅದರ ಒಂದು ಭಾಗವನ್ನು ಉಪಯೋಗಿಸುತ್ತಿದ್ದ ರಂತೆ. ಕಡೆಗೆ ಅದು ದರ್ಭೆಯ ಒಂದು ಎಳೆಗೆ ಬಂದು ನಿಂತಿದ್ದಂತೆ.. ಇದು ನಾನು ಕೇಳಿದ್ದು ಅಷ್ಟೇ)
ಬೆಳಿಗ್ಗೆ ಹೊಟ್ಟೆತುಂಬಾ ಊಟವಾಯಿತು ಶಾಲೆಗೂ ರಜ ಹಾಗಾಗಿ ಗಮನವೆಲ್ಲ ಆಟದ ಮೇಲೆ.
ಮಧ್ಯಾಹ್ನದ ಹೊತ್ತಿಗೆ ಹಸಿವು ಶುರು... ಅಪ್ಪನ್ನ ಕೇಳಲು ಭಯ, ಹಸಿವಿನ ಕಾಟ ಒಂದೇ ಸಮ. ಗ್ರಹಣ ಹಿಡಿದಿದೆ ನೋಡು ಬಾ ಅಂತ ನಮ್ಮಪ್ಪ ಕರೆದು ನೀರಿನಲ್ಲಿ ಬಿಂಬವನ್ನು ತೋರಿಸಿದ್ದು ನೆನಪಿದೆ ಆದರೆ ಎಷ್ಟು ಗೊತ್ತಾಯ್ತು ಅನ್ನೋದು ಈಗಲೂ ಗೊತ್ತಿಲ್ಲ.
ಈಗ ಗ್ರಹಣ ಯಾವಾಗ ಬಿಡುತ್ತೆ ಅನ್ನುವುದೇ ನನ್ನ ಮುಂದಿದ್ದ ಪ್ರಶ್ನೆ. ಸುಮಾರು 5 ಗಂಟೆಗೆ ಬಿಡಬಹುದು ಅಂತ ಅಪ್ಪ ಹೇಳಿದ ನೆನಪು. ಮನೆಯಲ್ಲಿ ಗಡಿಯಾರ ಇಲ್ಲದ ಕಾರಣ ಸಮಯದ ಅಳತೆಗೋಲೂ ಇಲ್ಲ.
ಗ್ರಹಣ ಬಿಡ್ತಾ ಅನ್ನುವ ಪ್ರಶ್ನೆಯನ್ನು ನಮ್ಮಪ್ಪನ ಬಳಿ ನಾಲ್ಕಾರು ಸಲ ಕೇಳಿ, ಕೊನೆಗೆ ಬೈಗುಳ ತಿಂದು ಅದರಿಂದ ಹೊಟ್ಟೆ ಹಸಿವು ತುಂಬದೇ, ಸಪ್ಪೆ ಮುಖ ಮಾಡಿಕೊಂಡು ಒಂದು ಮೂಲೆಯಲ್ಲಿ ಕುಳಿತದ್ದು ಮಾತ್ರ ನನಗೆ ನೆನಪು. ನಿದ್ರಾದೇವಿ ಯಾವಾಗ ಆವರಿಸಿಕೊಂಡಳೋ... ದೇವರಿಗೇ ಗೊತ್ತು.
ಶಾಮಣ್ಣ ಎಚ್ಚರಿಸಿದಾಗಲೇ ನಾನು ಕಣ್ ತೆರೆದದ್ದು
ಅಷ್ಟೊತ್ತಿಗೆ ಆಗಲೇ ಸ್ನಾನ ಮಾಡಿ ಅಡಿಗೆಗೆ ಶುರು ಹಚ್ಚಿದ್ದರು. ನನಗೂ ಸ್ನಾನ ಮಾಡಿಸಿ ಪ್ರೀತಿಯಿಂದ ಹಣೆಗೆ ವಿಭೂತಿ ಇಟ್ಟು, ದೇವರಿಗೆ ನಮಸ್ಕಾರ ಮಾಡಿಸಿ, ಊಟಕ್ಕೆ ತಯಾರಿ ನಡೆಸಿದರು.
ಮರಿಗೆಯಲ್ಲಿ ( ಬಳಪದ ಕಲ್ಲಿನಲ್ಲಿ ಮಾಡಿದ ಒಂದು ಪಾತ್ರೆ ಎನ್ನಲೆ) ಮಾಡಿದ ಸೊಪ್ಪಿನ ಹುಳಿಯ ರುಚಿ ಇಂದಿಗೂ ನೆನಪಿದೆ. ಅದು ಶಾಮಣ್ಣನ ಪ್ರೀತಿಯ ಅಡಿಗೆಯ ರುಚಿಯೋ ಅಥವಾ ನನ್ನ ಹಸಿವಿನ ಪ್ರಭಾವವೋ ಆ ದೇವರೇ ಬಲ್ಲ ಎಂಬಲ್ಲಿಗೆ ಗ್ರಹಣದ ಪುರಾಣ ಮುಗಿಯಿತು.
ನಮಸ್ಕಾರ....
Comments
Post a Comment