ಠುಸ್ ...ಪಟಾಕಿ...
ಅಪ್ಪನ ಜೇಬಿನ ದುಡ್ಡುಗಳೆಲ್ಲ ಚಟಪಟ ಗುಟ್ಟುತ ಸಿಡಿಯುವುವು... ಒಪ್ಪದ ನೀತಿಯ ಮಾತುಗಳೆಲ್ಲ ಥಟ್ಟನೆ ಹಾದಿಯ ಹಿಡಿಯುವುವು...
ಇದು ನಾನು ಚಿಕ್ಕವನಾಗಿದ್ದಾಗ ಹೇಳಿಕೊಳ್ಳುತ್ತಿದ್ದ ಪದ್ಯದ ಸಾಲು.
ಆದರೆ ನಿಜ ಜೀವನದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನನ್ನಪ್ಪನ ಜೇಬಿನ ದುಡ್ಡು ಹೊರಕ್ಕೆ ಬರುತ್ತಲೇ ಇರಲಿಲ್ಲ. ಪಟಾಕಿ ಸಿಡಿಸುವ ಸಂಭ್ರಮ ಅಷ್ಟು ಸುಲಭವಾಗಿ ನಮ್ಮ ಕೈಗೆ ಎಟುಕುತ್ತಿರಲಿಲ್ಲ.
ಊರಿನ ಉಳ್ಳವರ ಮಕ್ಕಳು ಹಬ್ಬಕ್ಕೆ ಬಹಳ ಮುಂಚೆಯೇ ಪಟಾಕಿಗಳನ್ನು , ಸುರ್ಸುರ್ ಬಾಣಗಳನ್ನು ಸಿಡಿಸುತ್ತಿದ್ದರೆ, ಅದನ್ನು ಆಸೆ ಕಂಗಳಿಂದ ನೋಡಿ ನೋಡಿ ಸಂತೋಷಪಡುತ್ತಿದ್ದದ್ದೂ ಉಂಟು.
ನನ್ನ ದೊಡ್ಡಣ್ಣ... ಚೂಡಣ್ಣ ತರುತ್ತಿದ್ದ ಪಟಾಕಿಗಾಗಿ ಹಬ್ಬದ ದಿನದವರೆಗೂ ಎದುರು ನೋಡುತ್ತಿದ್ದೆವು
ನಮ್ಮ ಭಾಗದ ಪಟಾಕಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದೇ ಒಂದು ಸಂಭ್ರಮ. ಕಡಿಮೆ ಇರುತ್ತಿದ್ದರಿಂದ ಯಾವುದನ್ನು ಯಾವಾಗ ಹೊಡೆಯಬೇಕು ಎನ್ನುವ ಜಿಜ್ಞಾಸೆ - ಅದಲ್ಲದೆ ಉತ್ಥಾನ ದ್ವಾದಶಿ ದಿನಕ್ಕೆ ತುಳಸಿ ಹಬ್ಬಕ್ಕೆ ಒಂದಷ್ಟು ಇಡಬೇಕೆಂಬ ಅಮ್ಮನ ತಾಕಿತು ಬೇರೆ ನನ್ನನ್ನು ಗೊಂದಲಕ್ಕೀಡು ಮಾಡುತ್ತಿತ್ತು.
ನರಕ ಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು ತಲೆಗೆ ಮೈಕೈಗೆ ಅಮ್ಮನ ಆಶೀರ್ವಾದಪೂರ್ವಕ ಎಣ್ಣೆ ಒತ್ತುವಿಕೆ ಮುಗಿಯಲು ಕಾಯುತ್ತಿದ್ದ ನಾವು ಪಟಾಕಿ ಹೊಡೆಯಲು ಸಂಪೂರ್ಣ ತಯಾರು.
ಹೀಗೊಂದು ದೀಪಾವಳಿಯ ದಿನ ತುಂಬಾ ಮಳೆಯಿದ್ದ ಕಾರಣ ಬಹಳಷ್ಟು ಪಟಾಕಿಗಳು ಠುಸ್ ಎಂದಿದ್ದವು. ಇಂತಹ ಪಟಾಕಿ ಗಳಲ್ಲಿರುವ ಮದ್ದನ್ನು ಸಂಗ್ರಹಿಸಿ ಅದಕ್ಕೆ ಬೆಂಕಿ ಇಡುವ ಸೊಗಸೇ ಬೇರೆ.
ಹೀಗೊಂದು ಪಟಾಕಿ ಬಹಳ ಹೊತ್ತಾದರೂ ಹೊಡೆಯದಿದ್ದಾಗ, ಪರೀಕ್ಷಿಸಲು ಅದರ ಹತ್ತಿರ ಬಗ್ಗಿ ನೋಡುವಾಗ ಅದು ಠುಸ್ಸೆಂದು ಸಿಡಿದು ಮಣ್ಣೆಲ್ಲ ಕಣ್ಣಿಗೆ ಬಾಯಿಗೆ ಮುಖಕ್ಕೆ ಎಗರಿ ಅನುಭವಿಸಿದ ನೋವು ಈಗ ನಗೆ ತರಿಸುತ್ತದೆ. ಇದನ್ನು ಮನೆಯಲ್ಲಿಯೂ ಹೇಳಲಾಗದ ಧರ್ಮಸಂಕಟ. ಹೇಳಿದರೆ ಬೈಗುಳ ಖಂಡಿತ ಹೇಳದಿದ್ದರೆ ನೋವನ್ನು ಒಳಗೆ ಅನುಭವಿಸಬೇಕಾದ ಅನಿವಾರ್ಯತೆ. ಇದೊಂತರ ವಿಚಿತ್ರ ಸಂದಿಗ್ಧ.
ಇಷ್ಟೆಲ್ಲಾ ಆದರೂ ಪಟಾಕಿ ಹೊಡೆಯುವ ಸಂಭ್ರಮ ಒಂದಿಷ್ಟೂ ಕಡಿಮೆಯಾಗದು.
ಮಕ್ಕಳಾಗಿದ್ದಾಗಿನ ಇಂಥ ಅನುಭವಗಳು ಈಗ ಕಚಗುಳಿ ಇಡುತ್ತವೆ.
ಈಗ ಪರಿಸರದ ಕಾಳಜಿಯಿಂದ ಮಕ್ಕಳು ಸಹ ಪಟಾಕಿ ಹೊಡೆಯುವುದರಿಂದ ಸಾಕಷ್ಟು ಹಿಂದೆ ಸರಿದಿದ್ದಾರೆ. ಈಗಿನ ಮಕ್ಕಳ ಸಂಭ್ರಮವೇ ಬೇರೆಯದು.
ಎಲ್ಲರ ಜೀವನ ಬೆಳಕಿನಿಂದ ಕಂಗೊಳಿಸಲಿ ದೀಪಾವಳಿ ಎಲ್ಲರಿಗೂ ಶುಭವನ್ನು ತರಲಿ
Comments
Post a Comment