ಅತಿಥಿ
ಅತಿಥಿ ದೇವೋಭವ, ಇದು ಒಂದು ಪ್ರಮುಖವಾದ ನಾಣ್ಣುಡಿ. ಮನೆಗೆ ಬಂದ ಅತಿಥಿ ದೇವರ ಸ್ವರೂಪ ಎಂದು ನಂಬುವುದು ನಮ್ಮ ಹಿಂದಿನ ಕಾಲದಿಂದಲೂ ಬಂದ ಒಂದು ಸಂಪ್ರದಾಯ.
ಅತಿಥಿಸತ್ಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ನಾವುಗಳೂ ಸಹ ಭೂಮಿಗೆ ಬಂದ ಅತಿಥಿಗಳು ಎಂದು ನಂಬುವರು. ಅದರ ಅರ್ಥ ನಾವು ಇಲ್ಲಿ ಕೆಲಕಾಲ ಮಾತ್ರ ಇರುವವರು ಎಂದು.
ಸಾಮಾನ್ಯವಾಗಿ ನಾವು ಬೇರೆಯವರ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿನ ಪರಿಸರಕ್ಕೆ ತಕ್ಕಾಗಿ ಹೊಂದಿಕೊಂಡು ಹೋಗುವುದು ನಮ್ಮ ಸ್ವಭಾವ. ಅಲ್ಲಿ ನಮ್ಮ ಬೇಕು ಬೇಡಗಳಿಗೆ ಕೊನೆಯ ಸ್ಥಾನ. ನಮಗೆ ಅವರು ನೀಡುವ ಆದರ ಗೌರವಗಳನ್ನು ಸ್ವಲ್ಪ ಸಂಕೋಚದಿಂದಲೇ ಸ್ವೀಕರಿಸುತ್ತೇವೆ. ಅತಿಥಿಗಳಾಗಿ ನಾವು ನಮ್ಮ ಪರಿಮಿತಿಯಲ್ಲಿದ್ದಾಗ, ನಮ್ಮ ಅತಿಥೇಯರು ಸಹ ಅನುಕೂಲಕರವಾಗಿ, ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ.
ಹಾಗಾಗಿಯೇ " ಹಾಕ್ಮಣೆ, ತೋರ್ಮಣೆ, ನೂಕ್ಮಣೆ" ಎಂಬ ಮಾತು ಹುಟ್ಟಿರಬಹುದು. ಅತಿಥಿಗಳಾಗಿ ನಾವು ಅನುಕೂಲಕರವಾಗಿದ್ದರೆ - ಇನ್ನೂ ಸ್ಪಷ್ಟವಾಗಿ ಅವರ ಜೀವನಶೈಲಿಯಲ್ಲಿ ಪ್ರವೇಶಿಸದಿದ್ದರೆ ಮಣೆಯನ್ನು ಹಾಕಿ ಆದರಿಸುತ್ತಾರೆ. ಸ್ವಲ್ಪ ವ್ಯತ್ಯಾಸವಾದರೆ ಮಣೆಯನ್ನು ತೋರಿಸಿ ಕೂಡಲು ಹೇಳುತ್ತಾರೆ, ಅತಿಥಿಗಳಾಗಿ ಹೋದವರು ತಮ್ಮ ಮಿತಿಯನ್ನು ಮೀರಿದರೆ ಮಣೆಯನ್ನು ನೂಕಿ ನಮಗೆ ಜಾಗವನ್ನು ತೋರಿಸುತ್ತಾರೆ. ಅದು ತಿರಸ್ಕಾರದ ಒಂದು ಮುಖ.
ಹಾಗಾಗಿ ಅತಿಥಿಗಳಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದ್ದರೆ, ಅತಿಥಿಗಳಾಗಿ ಹೋದವರು, ಅತಿಥಿಗಳಾಗಿಯೇ ಹಿಂದಿರುಗಬಹುದು.
ಅತಿಥೇಯ ರಾಗಿಯೂ ಸಹ ನಾವು ನಮ್ಮ ಅತಿಥಿಗಳಿಗೆ ನಮ್ಮ ಶಕ್ತಿ ಮೀರಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತೇವೆ. ಅವರಿಗಾಗಿ ನಮ್ಮ ಕೆಲಸೌಲಭ್ಯ ಗಳನ್ನೂ ಸಹ ಬದಿಗಿಟ್ಟು ಸತ್ಕರಿಸುತ್ತೇವೆ.
ಈಚೆಗೆ ನನಗೆ ಅತಿಥಿ ಪದದ ಬೇರೆಯೇ ಒಂದು ಮುಖ ತೋರ್ಪಟ್ಟಿದೆ. ಇದು ತಿಳಿದದ್ದು 8.10.2022 ಶನಿವಾರದಂದು.
ನಮ್ಮ ಒಂದು ಸ್ವಯಂ ಸೇವಕರ ಗುಂಪು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ 10:30 ರಿಂದ 12.30 ರ ವರೆಗೆ ಅಶಕ್ತ ಪೋಷಕ ಸಭಾ ಎಂಬ ಹಿರಿಯ ನಾಗರಿಕರ ಒಂದು ಆಶ್ರಯ ತಾಣದಲ್ಲಿ ಅಲ್ಲಿರುವ ನಾಗರಿಕರೊಂದಿಗೆ ನಮ್ಮ ಸಮಯವನ್ನು ಕಳೆಯುತ್ತೇವೆ. ಒಂದಷ್ಟು ವ್ಯಾಯಾಮ, ಯೋಗಾಸನಗಳು, ಹಾಡು, ಆಟಗಳು ಹಾಗೂ ಒಂದಷ್ಟು ಮಾತುಕತೆ ಗಳೊಂದಿಗೆ ಅವರೊಡನೆ ಒಡನಾಡುತ್ತೇವೆ.
ಪ್ರತಿ ಶನಿವಾರದಂದು ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತೇವೆ.
ಮೊನ್ನೆ ಎಂಟರಂದು ಡಾ. ಗುರುರಾಜ ಕರ್ಜಗಿ ಯವರು ಬಂದಿದ್ದರು. ಅವರ ಮಾತುಕತೆಗಳನ್ನು ಎಲ್ಲರೂ ಸಂತೋಷದಿಂದ ಕೇಳಿ ಆನಂದಿಸಿದರು. ಇದರ ಮುಂದುವರಿದ ಭಾಗವಾಗಿ ಪ್ರಶ್ನೋತ್ತರ ವೇಳೆಯಲ್ಲಿ ಹಲವಾರು ಪ್ರಶ್ನೆಗಳು ಬಂದವು. ಅದರಲ್ಲಿ ಮುಖ್ಯವಾದದ್ದು "ಹಿರಿಯ ನಾಗರೀಕರು ತಮ್ಮ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆಯಲ್ಲಿ ಹೇಗಿದ್ದರೆ ಚೆನ್ನ " ಎಂಬ ಪ್ರಶ್ನೆ ತೂರಿಬಂತು. ಅದಕ್ಕೆ ಉತ್ತರ ತುಂಬಾ ಆಸಕ್ತಿದಾಯಕವಾಗಿತ್ತು. ಹಿರಿಯರು ತಮ್ಮ ಜೀವನದ ದುಡಿಯುವ ಘಟ್ಟವನ್ನು ದಾಟಿ , ಸಂಸಾರದ ಜಂಜಾಟದಿಂದ ದೂರ ಇರುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾದ ಸಮಯ. ಹಾಗಾಗಿ ಅವರುಗಳು ತಮ್ಮ ಸಮಯವನ್ನು ಸಂತೋಷದಿಂದ ಮನೆಯವರೊಡನೆ ಕಳೆಯುವುದು ಒಂದು ಸೊಗಸಾದ ಅನುಭವಕ್ಕೆ ದಾರಿಮಾಡಿಕೊಡುತ್ತದೆ. ಹಾಗಾಗಿ ಅವರುಗಳು ಮನೆಯಲ್ಲಿ ಅತಿಥಿಯಂತೆ ತಮ್ಮ ನಡವಳಿಕೆಗಳನ್ನು ರೂಪಿಸಿಕೊಂಡರೆ ಎಲ್ಲರಿಗೂ ಪ್ರಿಯವಾಗಿ ಜೀವನ ಸುಂದರವಾಗಿರುತ್ತದೆ. ಅತಿಥಿ ಯಾವುದನ್ನು ಅಧಿಕಾರಯುತವಾಗಿ ಕೇಳಿ ಪಡೆಯುವುದಿಲ್ಲ. ಅತಿಥೇಯರು ಕೊಟ್ಟ ಗೌರವ ಆದರ ಆತಿಥ್ಯವನ್ನು ಸಂತೋಷದಿಂದ ಅನುಭವಿಸುತ್ತಾರೆ. ಹೀಗೆ ನಾವುಗಳು ಮನೆಯಲ್ಲಿ ಇರಬಹುದಾದರೆ, ಇರುವಷ್ಟು ದಿನವೂ ಎಲ್ಲರ ಪ್ರೀತಿಗೆ ಪಾತ್ರರಾಗುತ್ತೇವೆ. ಎಷ್ಟು ಚೆನ್ನ ಅಲ್ವಾ ಈ ಚಿಂತನೆ. ಅಳವಡಿಸಿಕೊಳ್ಳುವುದು ಕಷ್ಟವಾಗಬಹುದು ಆದರೆ ಈ ದಿಕ್ಕಿನಲ್ಲಿ ಪ್ರಯತ್ನ ಮಾಡುವುದು ಖಂಡಿತ ಒಂದು ಧನಾತ್ಮಕವಾದ ಪ್ರಯತ್ನ... ಹಿರಿಯ ನಾಗರೀಕರಾಗಿ ನಾವು ಇದನ್ನು ಮಾಡಬೇಕಲ್ಲವೇ?
ಇನ್ನು ಕಿರಿಯರಿಗೆ ಕಿವಿಮಾತು- ಮನೆಯಲ್ಲಿರುವ ಅತಿಥಿಗಳ ರೂಪದ ಹಿರಿಯರಿಗೆ ನೀವು ಅತಿಥೇಯರಾಗಿ, ಇರುವಷ್ಟು ದಿನಗಳು ನಿಮ್ಮ ಹಿರಿಯರನ್ನು ಆದರದಿಂದ ನಡೆಸಿಕೊಳ್ಳಿ.
ಹಿರಿಯರು ಕಿರಿಯರೂ, ಇಬ್ಬರು ಅಳವಡಿಸಿಕೊಂಡರೆ ಸಂಸಾರದಲ್ಲಿ ಸ್ವರ್ಗವನ್ನೇ ಅನುಭವಿಸಬಹುದು..
ಎಲ್ಲರಿಗೂ ಒಳ್ಳೆಯದಾಗಲಿ..
ಅತಿಥಿಗಳಾಗಿ ರೋಣ... ಅತಿಥೇಯರಾಗಿಯೂ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ..
ನಮಸ್ಕಾರ...
ಅರ್ಥವಾಗುವಂತೆ ತಿಳಿಸಿದ್ದೀರ
ReplyDeleteನೈಸ್.👍
ReplyDelete