ಸೂರ್ಯಗ್ರಹಣ - ಅದರದ್ದೊಂದು ಚಿಕ್ಕ ಪುರಾಣ:
ಗ್ರಹಣ ಅಂದಾಗ ನನ್ನ ಮನಸ್ಸಿಗೆ ಬರೋದು ರಾಹುಕೇತುಗಳು ಸೂರ್ಯ ಅಥವಾ ಚಂದ್ರನನ್ನು ನುಂಗು ಹಾಕುತ್ತಾರೆ. ಆಗ ಸೂರ್ಯ ಚಂದ್ರರು ನಮಗೆ ಕಾಣುವುದಿಲ್ಲ. ಇದು ನಮಗೆ ಸಾಮಾನ್ಯವಾಗಿ ತಿಳಿದಿದ್ದ ವಿಷಯ. ನಿಧಾನವಾಗಿ ಸೂರ್ಯ ಚಂದ್ರರು ಕಾಣೆಯಾಗುತ್ತಿದ್ದರಿಂದ... ನನಗೂ ಹಾಗೆ ಅನ್ನಿಸುತ್ತಿತ್ತು. ಯಾಕೆಂದರೆ ನಾನು ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೆ. ಇದನ್ನು ಮೂಢನಂಬಿಕೆಯೆಂದು ಮೂಗು ಮುರಿಯುವವರು ಇದ್ದಾರೆ. ಅದು ಸರಿಯೇ ಇರಬಹುದು. ಆದರೆ ನಮ್ಮ ಪೂರ್ವಜರು ಗ್ರಹಣ ಸಂಭವಿಸುವುದನ್ನು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿ ಪಂಚಾಂಗದಲ್ಲಿ ಕೊಡುವುದನ್ನು ಗಮನಿಸಿದಾಗ, ಅದು ಈಗಲೂ ಅನೂಚಾನವಾಗಿ ಮುಂದುವರೆದು ಬರುತ್ತಿರುವುದರಿಂದ ನಮ್ಮ ಪೂರ್ವಜರ ಜ್ಞಾನ- ಆಕಾಶಕಾಯಗಳ ಚಲನೆಯ ವಿಚಾರವಾಗಿ - ಎಷ್ಟು ಉನ್ನತ ಮಟ್ಟದಲ್ಲಿ ಇತ್ತೆಂಬುದು ವಿಶದವಾಗುತ್ತದೆ. ಇರಲಿ, ನನ್ನ ಪುರಾಣಕ್ಕೆ ಬರುತ್ತೇನೆ.... ಬಹುಶಃ ನಾನು ನಮ್ಮ ಹಳ್ಳಿಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಕಾರಣ ಗೊತ್ತಿಲ್ಲ ಅಂದು ಮನೆಯಲ್ಲಿದ್ದವರು ನಾನು ಮತ್ತು ನಮ್ಮಪ್ಪ ಶಾಮಣ್ಣ( ನಮ್ಮಪ್ಪನನ್ನು ನಾವು ಕರೆಯುತ್ತಿದ್ದುದು ಶಾಮಣ್ಣ ಎಂದೆ). ಸೂರ್ಯಗ್ರಹಣ ಅಂದು ತುಂಬಾ ಹೊತ್ತು ಇರುತ್ತದೆಂದು, ಬೆಳಿಗ್ಗೆ ಬೇಗ ಊಟ ಮಾಡಿ ನಂತರ ಸೂರ್ಯಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ಊಟ ಮಾಡಬೇಕು ಮಧ್ಯೆ ತಿನ್ನಲು ಏನು ಕೇಳಬಾರದೆಂದು ನಮ್ಮಪ್ಪನ ಅಜ್ಞೆ ,(?) ಮನೆಯಲ್ಲಿದ್ದ ಹಾಲು ಮೊಸರು ಮು...