ದಸರಾ ಸಂಭ್ರಮ
ದಸರಾ ಹಬ್ಬ ಎಂದರೆ ನನಗೆ ಜ್ಞಾಪಕ ಬರುವುದು ರಜಾ ಮತ್ತು ಅದರೊಂದಿಗಿನ ಮಜಾ.
ಚಿಕ್ಕಂದಿನಲ್ಲಿ ನಾವು ಮಕ್ಕಳು ರಜಕ್ಕಾಗಿ ಹಾತೊರೆಯುವುದು ಸಾಮಾನ್ಯವಾಗಿತ್ತು ಹಾಗಾಗಿ ದಸರಾ ಹಬ್ಬ ನಮಗೆ ಯಾವಾಗಲೂ ಆಸೆಯಿಂದ ಕಾಯುವ ಹಬ್ಬ ವಾಗಿರುತ್ತಿತ್ತು.
ಇನ್ನೂ ಒಂದು ಮುಖ್ಯಕಾರಣವೆಂದರೆ ದಸರಾ ಹಬ್ಬದಲ್ಲಿ ನಾವೆಲ್ಲ ಒಟ್ಟಾಗಿ ಎಲ್ಲರ ಮನೆಗಳಿಗೂ ಹೋಗಿ ಗೊಂಬೆ ಕೂಡಿಸಿದ್ದಾರಾ ನೋಡಿ ಅಲ್ಲಿ ಹಾಡು-ನೃತ್ಯ ಹೀಗೆ ನಮಗೆ ಬಂದ ಎಲ್ಲಾ ವಿದ್ಯೆಗಳನ್ನು ಪ್ರದರ್ಶಿಸಿ ಅವರು ಕೊಡುವ ಬೊಂಬೆ ಬಾಗಿನಕ್ಕೆ ಕಾಯುವುದು ನಮಗೆ ಎಲ್ಲಿಲ್ಲದ ಖುಷಿ. ಬೊಂಬೆ ಬಾಗಿನಕ್ಕಾಗಿ ಕೊಡುತ್ತಿದ್ದುದು ಮೂರು ಅಥವಾ ನಾಲಕ್ಕು ಚಿಕ್ಕ ಚಿಕ್ಕ ಕೋಡುಬಳೆ, ಚಕ್ಕುಲಿ, ಬಿಸ್ಕತ್ತು ಹೀಗೆ ನಾನಾ ವ್ಯಂಜನಗಳು. ಅದನ್ನು ಸವಿಯಲು ನಮಗೆ ಎಲ್ಲಿಲ್ಲದ ಸಂತೋಷ.
ರಜದ ಶುರುವಿನಲ್ಲೇ ಬೊಂಬೆಯ ಪೆಟ್ಟಿಗೆಯನ್ನು ತೆಗೆದು ಅದರಲ್ಲಿರುವ ಬೊಂಬೆಗಳನ್ನು ಒಂದೊಂದಾಗಿ ನೋಡಿ ತೆಗೆದಿರಿಸಿ ಅದರ ಅಂದವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಈ ಸಮಯದಲ್ಲಿ ನಮ್ಮ ಅತಿ ಉತ್ಸಾಹದಿಂದ ಕೆಲ ಎಡವಟ್ಟುಗಳನ್ನು ಮಾಡಿ ಬೈಸಿಕೊಂಡದ್ದೂ ಇದೆ.
ಬೊಂಬೆಗಳಲ್ಲಿ ಪ್ರಾಮುಖ್ಯವಾದದ್ದು ಪಟ್ಟದ ಬೊಂಬೆಗಳು. ಇದಕ್ಕೆ ವಿಶೇಷ ಅಲಂಕಾರಗಳು ಹಾಗೂ ವಿಶೇಷ ಸ್ಥಾನಮಾನ. ನಾವುಗಳು ಆ ಗೊಂಬೆಗಳನ್ನು ಚೆನ್ನಗೀರಪ್ಪ ಹಾಗೂ ಚೆನ್ನಗೀರಮ್ಮ ಎಂದು ಕರೆಯುತ್ತಿದ್ದೆವು. ಕಾರಣ ಮಾತ್ರ ಇಂದಿಗೂ ಗೊತ್ತಿಲ್ಲ.
ಇನ್ನೊಂದು ಮುಖ್ಯ ಅಂಶ ಸರಸ್ವತಿ ಪೂಜೆ. ಸರಸ್ವತಿ ಪೂಜೆಗೆ ಪುಸ್ತಕಗಳನ್ನು ಇಟ್ಟರೆ ಆ ವಿಷಯಗಳು ನಮಗೆ ತುಂಬಾ ಸುಲಭವಾಗಿ ಅರ್ಥವಾಗುತ್ತದೆ ಎಂಬ ನಂಬಿಕೆ. ಆ ಕಾರಣದಿಂದ ನಮ್ಮೆಲ್ಲ ಪುಸ್ತಕಗಳು ಸರಸ್ವತಿ ಪೂಜೆಗೆ ಅರ್ಹತೆಯನ್ನು ಪಡೆಯುತ್ತಿದ್ದವು. ಒಳಗುಟ್ಟು ಏನೆಂದರೆ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಜೋಡಿಸಿದರೆ ಹಬ್ಬ ಮುಗಿಯುವವರೆಗೂ ಪುಸ್ತಕಗಳು ಇಲ್ಲ ಎಂಬ ಒಂದೇ ಕಾರಣದಿಂದ ನಾವು ಓದುವುದನ್ನು ಬರೆಯುವುದನ್ನು ತಪ್ಪಿಸಿಕೊಳ್ಳುತ್ತಿದ್ದೆವು.. ಎಂಥಾ ಆಲೋಚನೆ ಅಲ್ವಾ?
ವಿಜಯದಶಮಿಯ ಮುನ್ನಾದಿನ ನಮ್ಮೂರ ಈಶ್ವರನ ದೇವಸ್ಥಾನದ ಪಲ್ಲಕ್ಕಿಯಂತಹ ಉತ್ಸವಕ್ಕಾಗಿ ಉಪಯೋಗಿಸುತ್ತಿದ್ದ ಪರಿಕರವನ್ನು, ಮೇಲಿದ್ದ ಬಸವಣ್ಣನ ಪ್ರತಿಕೃತಿ ಮತ್ತು ಅದರ ಹಿತ್ತಾಳೆಯ ಪ್ರಭಾವಳಿಯನ್ನು ಹುಣಸೆಹಣ್ಣು ನೆನೆಸಿ ಹಾಕಿ ಉಜ್ಜಿ ತೊಳೆದು ಪಳಪಳ ಹೊಳೆಯುವ ಹಂಗೆ ತಯಾರು ಮಾಡುವುದು ನಮ್ಮೆಲ್ಲರ ಕೆಲಸ . ಇದಕ್ಕಾಗಿ ಭಾವಿಯಿಂದ ನೀರು ಸೇದಿ ಹುಯ್ಯುವುದು ಒಂದು ಮೋಜಿನ ಕೆಲಸವಾಗಿತ್ತು
ವಿಜಯದಶಮಿಯ ದಿನ ಉತ್ಸವ ಹೊರಡುವುದು ರಾತ್ರಿ. ನಾವುಗಳು ಸಂಜೆಯಿಂದ ಸಂಭ್ರಮಿಸಿ ಕುಣಿದು ಸುಸ್ತಾಗಿ ಮನೆಗೆ ಬಂದು ಊಟ ಮಾಡಿ ಹೊರಡುವ ತಯಾರಿ . ಅಷ್ಟರಲ್ಲಿ ನಿದ್ರಾದೇವಿಯ ಗಾಢವಾದ ಕರೆ . ಅದಕ್ಕೆ ಸೋಲದೆ ಇರಲು ಕಾರಣವೇ ಇಲ್ಲ ಹಾಗಾಗಿ ನಿದ್ದೆ ಮಾಡ ಬಿಡುತ್ತಿದ್ದೆ
ರಾತ್ರಿ ಒಂದು ಹೊತ್ತಿನಲ್ಲಿ ತಮಟೆ ಓಲಗ ಎಲ್ಲದರ ಸದ್ದು ಕೇಳಿದಾಗ ಉತ್ಸವ ನಮ್ಮ ಮನೆಯ ಬಳಿಯೇ ಬಂದಿರುತ್ತಿತ್ತು. ಮನೆಯ ಪಕ್ಕದಲ್ಲಿದ್ದ ಜಗಲಿಯ ಮೇಲೆ ನಿಂತು ಉತ್ಸವವನ್ನು ನೋಡಿ ಸಂಭ್ರಮಿಸಿ ತಕ್ಷಣ ಬಂದು ನಿದ್ರಾವಸ್ಥೆಗೆ ಸೇರುವುದು ನನಗೆ ಅನಿವಾರ್ಯವಾಗಿತ್ತು .
ಅಲ್ಲಿಗೆ ದಸರಾ ಉತ್ಸವವು ನನ್ನ ಪಾಲಿಗೆ ಮುಗಿದಿತ್ತು.
ಜಗಲಿಯ ವಿಷಯ ಹೇಳಲೇ ಬೇಕು...ಯಾವುದೇ ಉತ್ಸವ, ಮದುಮಕ್ಕಳ ಮೆರವಣಿಗೆ, ಕಡೆಗೆ ಸತ್ತವರ ಕೊನೆ ಯಾತ್ರೆಯನ್ನು ಜಗಲಿಯ ಮೇಲೆ ನಿಂತು ನೋಡುವುದು ಅಭ್ಯಾಸ, ನೋಡಲು ಅನುಕೂಲವಾದ್ದರಿಂದ. ಒಂದು ದಿನ ನನ್ನ ಕನಸಿನಲ್ಲಿ ನಾನು ಸತ್ತಿದ್ದೇನೆ...ನನ್ನ ಹೆಣದ ಮೆರವಣಿಗೆ... ನಾನು ಜಗಲಿಯ ಮೇಲೆ ನಿಂತು ನೋಡುತ್ತಿದ್ದೆ.....ಕನಸು ವಿಚಿತ್ರ... ಅದರ ನೆನಪು ಮಾತ್ರ ವಿಶಿಷ್ಟ.
ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು...
Comments
Post a Comment