ಬದಲಾವಣೆ ಜಗದ ನಿಯಮ
ಬದಲಾವಣೆ ಜಗದ ನಿಯಮ
ನಾವು ಒಂಭತ್ತು ಜನರ ಒಂದು ತಂಡ "ಅಶಕ್ತ ಪೋಷಕ ಸಭಾ" ಎಂಬ ವೃದ್ಧಾಶ್ರಮದಲ್ಲಿ ಅಲ್ಲಿರುವ ನಿವಾಸಿಗಳೊಡನೆ ಒಂದಷ್ಟು ಒಡನಾಟವನ್ನು ಇಟ್ಟುಕೊಂಡಿದ್ದೇವೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸುಮಾರು 100 ನಿಮಿಷಗಳ ಕಾಲ ಅವರೊಂದಿಗಿರುತ್ತೇವೆ- ವಿವಿಧ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುತ್ತಾ. ನಮ್ಮ ಮೂಲ ಉದ್ದೇಶ ಅಲ್ಲಿರುವ ಜನಗಳ ಏಕತಾನತೆಯನ್ನು ಕಳೆದು ಅವರು ಒಂದಷ್ಟು ಚಟುವಟಿಕೆಯಲ್ಲಿ ತೊಡಗಿಸುವುದು. ಸತತ ಪ್ರಯತ್ನದಿಂದ ಒಂದಷ್ಟು ಬದಲಾವಣೆ ಬಂದಿದೆ. ಸುಮಾರು ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಿಂದಿದ್ದಾರೆ. ಅವರಿಗೂ ಪ್ರೇರೇಪಿಸುವುದು ನಮ್ಮ ಗುರಿ.
(ಕರೋನ ಕಾರಣದಿಂದ ಈಗ ಸಧ್ಯ ನಿಂತಿದೆ)
ಸಾಮಾನ್ಯವಾಗಿ ದಿನದ ಕಾರ್ಯಕ್ರಮ ಶುರುವಾಗುವುದು ಪ್ರಾರ್ಥನೆಯೊಂದಿಗೆ- ಅದೂ ನಿವಾಸಿಗಳಿಂದ. ಎಲ್ಲರೂ ಹಾಡಬೇಕೆಂದು ನಾವುಗಳು ಆಗ್ರಹ ಪೂರ್ವಕವಾಗಿ ಹೇಳುತ್ತಿರುತ್ತೇವೆ.
ಅದೊಂದು ದಿನ (12.01.2020) ಒಂದು ಖುಷಿ ಕೊಡುವ ಸಂಗತಿ ನಡೆಯಿತು.
ಅಂದಿನ ವಿಶೇಷ - ಪ್ರಾರ್ಥನೆ ಮಾಡಿದ್ದು ನಾಗರತ್ನ (ನಾಗು). ನಾಗು ಬಗ್ಗೆ ಎರಡು ಮಾತು. ಸುಮಾರು ಎಪ್ಪತ್ತರ ವಯಸ್ಸು. ಯಾವಾಗಲೂ ನಗುಮುಖ. ಮಾತು ತುಂಬಾ ಕಡಿಮೆ, ಆಡಿದ್ದೂ ಸ್ಪಷ್ಟವಿಲ್ಲ. ಹಾಗಾಗಿ ಮಾತೇ ಕೇಳಿಲ್ಲ. ಸ್ವಾಗತ ಮತ್ತು ಬೀಳ್ಕೊಡುಗೆ ಸಹ ಮುಗಿದ ಕೈ ಮತ್ತು ನಗುವಿನೊಂದಿಗೆ. ಈ ನಾಗು ಮಾಡಿದ ಪ್ರಾರ್ಥನೆ ನಾ ಕಂಡ ಒಂದು ದೊಡ್ಡ ಬದಲಾವಣೆ. ಪ್ರಾರ್ಥನೆ ಮಾಡಲು ಬಂದ ನಾಗುವಿನ ಉತ್ಸಾಹದ ವರ್ಣನೆಗೆ ಪದಗಳಿಲ್ಲ. ನಾಗುವೇ ಈ ಬರಹಕ್ಕೆ ಸ್ಪೂರ್ತಿ.
"ಬದಲಾವಣೆ ಜಗದ ನಿಯಮ" - ಇದು ಕೃಷ್ಣ ಹೇಳಿದ ಮಾತು.
ಬದಲಾವಣೆ ನಿರಂತರ... ಬದಲಾಗದೆ ಇರುವುದು "ಬದಲಾಗುವ ಪ್ರಕ್ರಿಯೆ ಮಾತ್ರ" ಎಂಬುದು ಒಂದು ಹೇಳಿಕೆ.
ಪ್ರಕೃತಿಯಲ್ಲಿ ನಿರಂತರ ಬದಲಾವಣೆ. ಮರಗಿಡಗಳು ಚಿಗುರಿ, ಬೆಳೆದು, ಹೂ ಬಿಟ್ಟು, ಕಾಯಾಗಿ, ಹಣ್ಣಾಗಿ, ಕೊನೆಗೆ ಎಲ್ಲ ಉದುರಿ ಬೋಳಾಗಿ....ಮತ್ತೆ ಚಿಗುರುವ ಚಕ್ರ...
ಡಿವಿಜಿ ಯವರ ಕಗ್ಗದ ಈ ಪದ್ಯ ಎಷ್ಟು ಅರ್ಥಪೂರ್ಣ:
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ
ಸತತ ಕೃತಿಯೋ ಪ್ರಕೃತಿ - ಮಂಕುತಿಮ್ಮ
ಇನ್ನು ಮಾನವನಲ್ಲಿ ಬದಲಾವಣೆ, ಬಲು ಸಹಜ ಮತ್ತು ಬೇಗ ಸಹ. ಅದರಲ್ಲೂ ಕೆಡುವ ಬದಲಾವಣೆ.. ಅದಕ್ಕೇ ಇರಬೇಕು "ಸಹವಾಸದಿಂದ ಸನ್ಯಾಸಿ ಕೆಟ್ಟ" ಎಂಬ ನುಡಿಗಟ್ಟು ಪ್ರಸಿಧ್ದ. ಇನ್ನೊಂದು ಮುಖ ಸನ್ಯಾಸಿಗಳ ಸಹವಾಸದಿಂದ ಸರಿಯಾದ ದಾರಿಗೆ ಬಂದವರ ಉದಾಹರಣೆಗಳು ಸಾಕಷ್ಟು ಇವೆ. ಹಾಗಾದರೆ ಈ ಬದಲಾವಣೆಗೆ ಯಾರು ಹೇಗೆ ಪ್ರಭಾವ ಬೀರುತ್ತಾರೆ ಎಂಬುದು ಮುಖ್ಯವಾಗುತ್ತದೆ.
ಸಂಪಿಗೆ / ಮಲ್ಲಿಗೆ ಹೂಗಳು ತಮ್ಮ ಸುತ್ತು ಮುತ್ತಲಿನ ಎಲ್ಲಕ್ಕೂ ತಮ್ಮ ಘಮವನ್ನು ಹಂಚುತ್ತವೆ, ಅದೇ ಬೇವಿನ ಎಲೆ ಬೆಲ್ಲದ ಜೊತೆಯಲ್ಲಿದ್ದರೂ ಅದರ ಗುಣ ಬದಲಾಗುವುದಿಲ್ಲ. ಸಂಪಿಗೆ / ಮಲ್ಲಿಗೆ ಹೂಗಳು ತಮ್ಮ ತನವನ್ನು ಉಳಿಸಿಕೊಂಡು ಬೇರೆಯದರ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ, ಬೇವಿನ ಎಲೆ ತನ್ನ ತನವನ್ನು ಉಳಿಸಿಕೊಂಡರೂ ಬೇರೆಯದರ ಮೇಲೆ ತನ್ನ ಪ್ರಭಾವವನ್ನು ಬೀರಲಾರದು. ಹಾಗಾದರೆ ಬದಲು ಮಾಡುವವರು ಹಾಗೂ ಬದಲಾಗುವವರು ಇಬ್ಬರಲ್ಲೂ ಕೆಲವು ಬಲ ಅಥವಾ ಬಲಹೀನತೆಯ ಗುಣಗಳು ಪ್ರಭಾವವನ್ನು ಬೀರುತ್ತವೆ.
ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕು. ಹಾಗಾಗಿ ಬದಲಾವಣೆಗೆ ನಮ್ಮನ್ನು ತೆರೆದುಕೊಳ್ಳೋಣ. ಈಗಿನ ಕರೋನ ಸಂಧರ್ಭದಲ್ಲಿ, ಜೀವನಶೈಲಿಯೇ ಬದಲಾಗಿದೆ. ಆದರೆ ಮನಸ್ಸುಗಳ ಬದಲಾವಣೆ ಇನ್ನೂ ಆಗಬೇಕಿದೆ. ನಮ್ಮೆಲ್ಲರ ಆರೋಗ್ಯಕ್ಕಾಗಿ ಮಾಸ್ಕ್ ಧರಿಸೋಣ, ಅಂತರ ಕಾಯ್ದುಕೊಳ್ಳೋಣ, ಕೈ ತೊಳೆಯುವುದನ್ನು ಸಮಯೋಚಿತವಾಗಿ ಮಾಡೋಣ, ಎಲ್ಲಕ್ಕೂ ಮುಖ್ಯವಾಗಿ ಅತಿ ಅವಶ್ಯಕವಾಗಿದ್ದರೆ ಮಾತ್ರ ಹೊರಗೆ ಹೋಗೋಣ. ಈಗಿನ ಪರಿಸ್ಥಿತಿಯನ್ನು ನಮ್ಮೆಲ್ಲರ ಅನುಕೂಲಕ್ಕೆ/ ಆರೋಗ್ಯಕ್ಕೆ ಬದಲಿಸೋಣ.
☺️
ReplyDelete