ನನ್ನ ಶಾಲೆ, ನಮ್ಮೂರ ಆಂಜನೇಯ
ಕೆಲದಿನಗಳ ಹಿಂದೆ airport ಗೆ ಹೋಗುತ್ತಿದ್ದಾಗ, ದಾರಿಯಲ್ಲಿ ತುಂಬ ವಾಹನ ಸಂಚಾರವಿದ್ದು ತಡ ಆಗುತ್ತಿತ್ತು. ನಮ್ಮ ಕಾತುರ ಗಮನಿಸಿ taxi driver ಬೇರೊಂದು ದಾರಿಯಲ್ಲಿ ಕರೆದುಕೊಂಡು ಹೋಗುವುದಾಗಿ ಹೊರಟ. ಅಚಾನಕ್ಕಾಗಿ ನನಗೆ "ದೊಡ್ಡಜಾಲ" ರೈಲ್ವೇ ನಿಲ್ದಾಣ ಕಣ್ಣಿಗೆ ಬಿತ್ತು. ಮನಸ್ಸು ಗರಿಗೆದರಿತು. ದೊಡ್ಡಜಾಲ ನಾನು ಹುಟ್ಟಿ 8ನೇ ತರಗತಿವರೆಗೂ ಓದಿದ ಹಳ್ಳಿ. ಕೆಲ ನಿಮಿಷಗಳಲ್ಲಿ ನಮ್ಮ ಕಾರ್ ದೊಡ್ಡಜಾಲ ಊರ ಮುಂದೆ ಬಂತು. ನಾನು ಓದಿದ ಶಾಲೆ ಕಂಡಾಗ ನನ್ನ ಖುಷಿಗೆ ಮೇರೆಯೇ ಇರಲಿಲ್ಲ. 4-5 ನಿಮಿಷಗಳ ಕಾಲ ಅಲ್ಲಿ ಕಳೆಯಲು taxi driver ಮನ ಒಲಿಸಿದೆ. ಶಾಲೆ, ಆಂಜನೇಯ ದೇವಸ್ಠಾನ, ಅಶ್ವತ್ಥಕಟ್ಟೆ, ವೀರಭದ್ರ ದೇವಸ್ಠಾನ ಎಲ್ಲಾ ಸುತ್ತಿದೆ. ಸಮಯದ ಅಭಾವ, ಬೇಗ ಹೊರಡ ಬೇಕಾಯಿತು. ಪ್ರಯಾಣ ಮುಂದುವರಿಯಿತು, ಮನಸ್ಸು ನೆನಪಿನ ಲೋಕಕ್ಕೆ ಜಾರಿತು:
ಆ ದಿನಗಳಲ್ಲಿ ಶಾಲೆಯಲ್ಲಿ ಕೂತಾಗ ತರಗತಿಯ ಕಿಟಕಿ ಬಾಗಿಲಿನಿಂದ ಕಾಣುತ್ತಿದ್ದದ್ದು ಆಂಜನೇಯ ದೇವಸ್ಥಾನ. ನಮಗೆ ಬಾಯಾರಿದಾಗಲೆಲ್ಲ ಅಥವಾ ನೀರು ಕುಡಿಯಬೇಕೆನಿಸಿದಾಗಲೆಲ್ಲ (ಇದು ಬಹಳ ಸಲ ಆಚೆ ಹೋಗಲು ಒಂದು ಕಾರಣ) ಆಂಜನೇಯ ದೇವಸ್ಠಾನದ ಭಾವಿಯೇ ನಮಗೆ ನೀರಿನ ತಾಣ. ತೀರ ಚಿಕ್ಕವರಿದ್ದಾಗ ಅಲ್ಲಿನ ನೀರಿನ ಕೊಡದಲ್ಲಿ ಕುಡಿಯುವುದು, ಹಾಗೂ ಸ್ವಲ್ಪ ದೊಡ್ದವರಾದಾಗ - ಅಂದರೆ ಈಜು ಕಲಿತಮೇಲೆ- ಭಾವಿಯಲ್ಲಿ ಇಳಿದು ನೀರು ಕುಡಿಯುವುದು. ಹೀಗೆ ಆಂಜನೇಯನ ಹೆಸರು ದಿನಕ್ಕೆಷ್ಟು ಬಾರಿ ಬರುತ್ತಿತ್ತೊ ಆ ಆಂಜನೇಯನೇ ಬಲ್ಲ.
ಆಂಜನೇಯನ ದೇವಸ್ಠಾನ ಇಷ್ಟು ಹತ್ತಿರವಿದ್ದರೂ ಸಹ ದೇವಸ್ಥಾನದ ಒಳಗೆ ಹೋಗಲು ಆಗುತ್ತಿರಲಿಲ್ಲ. ನಮಗೆಲ್ಲಾ ಅಲ್ಲಿ ಹೋಗಲು ಭಯ ಇರುತ್ತಿತ್ತು. ಅದು ಸುಬ್ಬರಾಯಪ್ಪನ ಭಯ!! ಸುಬ್ಬರಾಯಪ್ಪ ಆ ದೇವಸ್ಠಾನದ ಆವರಣದಲ್ಲೇ ಒಂದು ಮನೆಯಲ್ಲಿ ವಾಸಿಸುತ್ತಿದ್ದರು. ದೇವಸ್ಠಾನದ ಎಲ್ಲ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ಸುಬ್ಬರಾಯಪ್ಪನಿಗೆ ಮದುವೆ ಆಗಿರಲಿಲ್ಲ ಎನ್ನುವುದು ನಮಗೆ ಹೇಗೋ ತಿಳಿದ ವಿಚಾರ. ಅದರ ಬಗ್ಗೆ ನಮ್ಮಗಳ ಸಂವಾದ:
"ಸುಬ್ಬರಾಯಪ್ಪ ಮದ್ವೇನೆ ಆಗಿಲ್ವಂತೆ ಗೊತ್ತಾ "
"ಯಾಕೋ"
"ಅವ್ರು ಆಂಜನೇಯನ ಭಕ್ತರಲ್ವಾ ಅದಕ್ಕೆ"
"ಆಂಜನೇಯ ಭಕ್ತರಾದ್ರೆ"
"ಆಂಜನೇಯ ಮದ್ವೆ ಆಗಿಲ್ಲ ಅಲ್ವಾ, ಅದಕ್ಕೆ ಸುಬ್ಬರಾಯಪ್ಪನೂ ಮದ್ವೆ ಆಗಿಲ್ಲ"
ಇದು ನಾವುಗಳು ಆಂಜನೇಯನ ಬ್ರಹ್ಮಚರ್ಯದ ಬಗ್ಗೆ ತಿಳಿದಿದ್ದ ಸಂಗತಿ.
ದೇವಸ್ಠಾನದ ಸುತ್ತಲೂ ಇರುವ ಕಲ್ಲು ಚಪ್ಪಡಿಗಳ ಕಂಪೌಂಡ್ ಒಳಗಡೆ ಹೂ ಗಿಡಗಳು. ನಾವು ಅದನ್ನು ಹಾಳು ಮಾಡುತ್ತೇವೆ ಅಂತಲೋ ಏನೋ ನಮ್ಮಗಳ ಪ್ರವೇಶಕ್ಕೆ ಅಡ್ದಿ ಇತ್ತು. ನೀರು ಕುಡಿಯಲು ಮಾತ್ರ ಅವರ ಕಣ್ಗಾವಲಿನಲ್ಲಿ ಪ್ರವೇಶ - ಆದ ತಕ್ಷಣ ಹೊರಗೆ ಬರುವುದು. ಸಂಜೆ ನಾವು ಆಟವಾಡುವ ಸಮಯದಲ್ಲಿ ಸುಬ್ಬರಾಯಪ್ಪ ಆಚೆ ಹೋಗುವುದನ್ನೇ ಕಾಯುತ್ತಿದ್ದ ನಾವುಗಳು. ದೇವಸ್ಠಾನದೊಳಗೆ ಹೋಗಿ, ದೇವರನ್ನು "ಸ್ವಾಮೀ ಕಾಪಾಡಪ್ಪ, ಒಳ್ಳೆ ಬುದ್ದಿ ಕೊಡಪ್ಪ" ಅಂತ ಕೇಳಿಕೊಂಡು ನಮಸ್ಕಾರ ಮಾಡಿ (ಗುಡಿಗೆ ಆಗ ಬಾಗಿಲು ಇರಲಿಲ್ಲ ಅಂತ ನೆನಪು) ಕಿತ್ತಲೆ ಬಣ್ಣದ ಪ್ರಸಾದ ಹಣೆಗೆ ಹಚ್ಚಿಕೊಂಡು ಓಡಿಬರುವುದು - ನಮ್ಮ ಆಂಜನೇಯ ಭಕ್ತಿಯ ಒಂದು ಮುಖ.
ಆಂಜನೇಯ ದೇವಸ್ಠಾನ ಅಂದಾಕ್ಷಣ ನೆನಪಿಗೆ ಬರುವ ಮತ್ತೊಂದು ವಿಷಯ- ನೀರಿನ ತೊಟ್ಟಿ. ಇದು ದೇವಸ್ಠಾನದ ಕಂಪೌಂಡ್ ಹೊರಗಡೆ ಇತ್ತು. ಇದಕ್ಕೆ ಪ್ರತಿದಿನ ಸುಬ್ಬರಾಯಪ್ಪ ಏತದಿಂದ ನೀರೆತ್ತಿ ತುಂಬಿಸುತ್ತಿದ್ದರು.
ನೀರೆತ್ತುವಾಗ ಅವರು ಮಾಡುತ್ತಿದ್ದ ವಿಚಿತ್ರ ಆದರೆ ಲಯಬದ್ದವಾದ ಶಬ್ದ ಮೊದಮೊದಲು ಕುತೂಹಲವಾಗಿದ್ದರೂ..ನಂತರ ಅದು ನೀರೆತ್ತುವ ಸೂಚನೆಯಾಗಿರುತ್ತಿತ್ತು. ಊರಿನ ದನಗಳು ಈ ಮಾರ್ಗವಾಗಿ ಹೋಗುವಾಗಲೆಲ್ಲಾ ತೊಟ್ಟಿಯಿಂದ ನೀರು ಕುಡಿದು ಹೋಗುತ್ತಿದ್ದವು. ಇದು ಆಂಜನೇಯ ಸ್ವಾಮಿ ಊರಿನ ರಾಸುಗಳ ಮೇಲೆ ಇಟ್ಟ ಕರುಣೆ ಎಂಬ ನಂಬಿಕೆ ನಮ್ಮದು.
ಆಂಜನೇಯನ ಬಗ್ಗೆ ನಾವು ಚಿಕ್ಕಂದಿನಲ್ಲಿ ಕೇಳಿದ ಕಥೆಗಳು ಅನೇಕ- ಅದರಲ್ಲೂ ಆಂಜನೇಯ ಲಂಕೆಗೆ ಹಾರಲು ಬೆಳೆದ ಬಗೆ "ಆಂಜನೇಯ ಬೆಳೆದ. ಬೆಳೆದಾ.. ಬೆಳೆದಾ..ಎಷ್ಟು ಎತ್ತರಕ್ಕೆ ಬೆಳೆದಾ ಅಂದರೆ ಬಾಣನೇ ಮುಟ್ಟೋ ಅಷ್ಟು" ( ಬಾಣ ಅಂದರೆ ಆಡುಮಾತಿನಲ್ಲಿ ಆಕಾಶ) . ಆ ಅಗಾಧತೆಯ ಕಲ್ಪನೆ ಮತ್ತು ಆಶ್ಚರ್ಯ ಆಗಿನ ಮುಗ್ಧ ಮನಸ್ಸಿನ ಮೇಲೆ ಬೀರಿದ ಪ್ರಭಾವ ಅಚ್ಚಳಿಯದೆ ಉಳಿದಿದೆ.
ಹಳ್ಳಿಯಲ್ಲಿ ಲಂಕಾದಹನ ನಾಟಕ, ಇದು ರಾತ್ರಿಯಿಂದ ಬೆಳಗಿನವರೆಗೂ ನಡೆಯುತ್ತಿದ್ದದ್ದು. ಮಕ್ಕಳಾದ ನಮಗೂ ಅದರಲ್ಲಿ ಪಾಲ್ಗೊಳ್ಳುವ ಆಸೆ. ದುಂಬಾಲು ಬಿದ್ದು ದೊಡ್ಡವರನ್ನು ಒಪ್ಪಿಸಿದ್ದು ಆಯ್ತು. ಅವರು ನಮಗೆ ಕೊಟ್ಟದ್ದು ವಾನರ ಸೈನ್ಯದಲ್ಲಿ ಪಾಲು. ಇದಕ್ಕೇನೂ ಪಾತ್ರಧಾರಿಗಳ ಮಿತಿಯಿಲ್ಲ. ಅದು ಚಿಕ್ಕ ಪಾತ್ರ ಅಂತ ಅತ್ತಾಗ - ಮಾಡಿದ ಸಮಾಧಾನ "ಕೋತಿಗಳೆಲ್ಲಾ ಆಂಜನೇಯನ ರೂಪ ಗೊತ್ತಾ..ಮಾಡಲ್ಲಾ ಅಂದರೆ ಆಂಜನೇಯ.... ಅಷ್ಟೆ". ಇಲ್ಲಿ ಭಯ ಅಭಿಮಾನ ಒಟ್ಟೊಟ್ಟಿಗೆ ಅನುಭವಿಸಿದ್ದು...
ಕೊನೆಯದಾಗಿ ಶನಿವಾರದ ಭಜನೆ - ಭಜನೆಯ ಕೊನೆಯಲ್ಲಿ:
ಆಂಜನೇಯ ವರದ ಗೋವಿಂದಾ..... ಗೋ.....ವಿಂದಾ
ಹನುಮಾನ್ ಕಿ .....ಜೈ
ಭಕ್ತ ಮಂಡಳೀ ಕಿ ...ಜೈ
ಹರ ನಮಃ ಪರ್ವತೀಪತಯೇ...ಹರ ಹರ ಮಹದೇವ್
ಹೇಳಿ ಮುಗಿಸುವುದರಲ್ಲಿ ನಮಗೆಲ್ಲ ಅಂದು ಕೊಡುವ ಚರ್ಪಿನ ಕಡೆ ಗಮನ ಮತ್ತು ಆತುರ.
ಹೀಗೆ ಆಂಜನೇಯ ಏನೆಲ್ಲಾ ರೂಪದಲ್ಲಿ ನಮ್ಮ ಬಾಲ್ಯದಲ್ಲಿ ಪ್ರಭಾವ ಬೀರಿದಾತ ಮತ್ತು ಸಂಗಾತಿ ಕೂಡ ಅನ್ನಬಹುದೇನೋ...
ಜೈ ಆಂಜನೇಯ.
Comments
Post a Comment