ಜೀವನೋತ್ಸಾಹ

ಕಿಟ್ಟಿಮೇಷ್ಟ್ರು
ಅವರು ತೆಗೆದ ಫೋಟೋ

ಜೀವನೋತ್ಸಾಹ

ಬಹಳಷ್ಟು ದಿನಗಳಿಂದ ನನ್ನ ಬೆಳಗಿನ ವಾಯುವಿಹಾರಕ್ಕೆ ಹೋಗುವುದು "ತಿಮ್ಮೇಶ ಪ್ರಭು ಉದ್ಯಾನವನ". ಇದು ಇತಿಹಾಸ ಪ್ರಸಿದ್ಢ ಗವಿ ಗಂಗಾಧರೇಶ್ವರ ದೇವಸ್ಥಾನದ ಬದಿಯಲ್ಲಿದೆ. ಇಲ್ಲಿ ನಮ್ಮದೇ ಆದ ಸ್ನೇಹಿತರ ಗುಂಪು ಇದ್ದರೂ ನಮ್ಮ ಮಾತು ಕಥೆ ಬಹಳಷ್ಟು ಮಂದಿಯ ಜೊತೆ ಇರುತ್ತದೆ. ನಾವುಗಳು ಜೊತೆಯಲ್ಲಿ ಕಳೆಯುವ ಹೊತ್ತು ನಿಜಕ್ಕೂ ಚೇತೋಹಾರಿ. ಮಾತನಾಡುವ ವಿಷಯಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಜಗತ್ತಿನ ಯಾವುದೇ ವಿಷಯವಾದರೂ ಸರಿ ಅದು ಬಹು ವಿಧ ನೋಟಗಳಿಂದ ವಿಶ್ಲೇಸಿಲ್ಪಡುತ್ತದೆ. (ಕೆಲವು ಸಲ ಅದು ಕಾಡು ಹರಟೆಯಲ್ಲಿ / ತಲೆಹರಟೆ ಯಲ್ಲಿ ಕೊನೆಗೊಳ್ಳಬಹುದು). ಇದು ಒಂದು ಮುಖವಾದರೆ, ಅಲ್ಲಿನ ವಾಯುವಿಹಾರಿಗಳು "ಸ್ನೇಹರಂಗ" ದ ಹೆಸರಿನಲ್ಲಿ ಒಗ್ಗೂಡಿ ಪ್ರತಿ ಸೋಮವಾರ ಭಜನೆ, ತಿಂಗಳಿಗೊಮ್ಮೆ, ಎರಡನೆಯ ಮಂಗಳವಾರ "ಕಾಫಿ ಡೇ" ಯಲ್ಲಿ ಇಲ್ಲಿರುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುತ್ತೇವೆ. ವರ್ಷಕ್ಕೊಮ್ಮೆ "ಪ್ರತಿಭಾ ಪುರಸ್ಕಾರ" ದಲ್ಲಿ 10 ನೇ ತರಗತಿ ಮತ್ತು ಪಿ.ಯು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ, ಮತ್ತು "ಕನ್ನಡ ರಾಜ್ಯೋತ್ಸವವನ್ನು ಆಟೊಟಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತೇವೆ.
ಈ ಎಲ್ಲ ಕಾರ್ಯಕ್ರಮಗಳೂ ಹಿರಿಯರಾದ ನಮ್ಮ ಪ್ರೀತಿಯ "ಕಿಟ್ಟಿ ಮೇಷ್ಟ್ರ" ಮುಂದಾಳತ್ವದಲ್ಲಿ ನಡೆಯುತ್ತದೆ. ಸೋಮವಾರದ ಭಜನೆಯಲ್ಲಿ ಅವರ ತೊಡಗಿಸಿಕೊಳ್ಳುವಿಕೆ ( mobile phone ನಲ್ಲಿ ಶೃತಿ ಪೆಟ್ಟಿಗೆ APP ಹಾಕಿಕೊಂಡು ಉಪಯೋಗಿಸುತ್ತಾರೆ) ಸಾಧ್ಯವಾದಷ್ಟು ವ್ಯಕ್ತಿಗಳನ್ನು ಭಜನೆಯಲ್ಲಿ ಹಾಡಲು ಪ್ರೇರೇಪಿಸಿದ್ದಾರೆ. ಯಾರಿರಲಿ ಬಿಡಲಿ ಸೋಮವಾರ ಬೆಳಿಗ್ಗೆ 6.30 ಕ್ಕೆ ಭಜನೆ ಶುರು. ಮೊದಲರ್ಧ ಅವರೇ ಹೇಳಿಕೊಡುತ್ತಾರೆ.

"ಕಿಟ್ಟಿ ಮೇಷ್ಟ್ರ" ಉತ್ಸಾಹ ನನಗೆ ಬಹಳ ಸಲ ಆಶ್ಚರ್ಯ ಮೂಡಿಸುತ್ತದೆ. ನಮ್ಮಪ್ಪನ ನೆನಪನ್ನೂ ಸಹ ತರುತ್ತದೆ. ( ನಮ್ಮಪ್ಪ 109 ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದರು - ದೈಹಿಕವಾಗಿ. ಅವರ ಜೀವನೋತ್ಸಾಹ ಇಂದಿಗೂ ನನಗೆ ಮಾರ್ಗದರ್ಶಕ) ಇವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಉದ್ಯಾನವನಕ್ಕೆ ಹಾಜರು. ಬಹುಷಃ ಈ ಉದ್ಯಾನವನ ಅವರ ಜೀವನದ ಅವಿಭಾಜ್ಯ ಅಂಗವೇನೋ ಅನಿಸುತ್ತದೆ. 90 ವರ್ಷ ದಾಟಿದ ನಂತರವೂ ಅವರು ನಮ್ಮಗಳ ಜೊತೆಯಲ್ಲಿ ಕಲೆತು ಮಾತನಾಡುವುದು, ವಿಚಾರ ವಿನಿಮಯ, ಅಂದಿನ ಅವರ ಮನಸ್ಸಿನಲ್ಲಿ ಇರುವ ವಿಷಯ / ಸಣ್ಣ ಕಥೆ ಯನ್ನು ನಮಗೆ ಹೇಳುವುದು. ಇದೆಲ್ಲ ಖುಶಿ ತರುತ್ತದೆ. ಅವರು ಹಾಕಿದ ಗಿಡಗಳು ಮರವಾಗಿ ಬೆಳೆದಿರುವುದು ನೊಡಿ ಸಂತೋಷ ಪಡುತ್ತಾರೆ. ಹಾಗೇ ತಮ್ಮ ಗೆಳೆಯರು ಹಾಕಿದ ಗಿಡ/ಮರಗಳು ಅವರುಗಳೊಂದಿಗೆ ಹೋಗಿರುವುದನ್ನು ನೆನಸುತ್ತಾರೆ.

ಮಾತಿನಮಧ್ಯದಲ್ಲಿ ತಿಂಡಿ ವಿಚಾರ ಬಂದರೆ ಉತ್ಸುಕರಾಗಿ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ನೆನಸಿಕೊಳ್ಳುತ್ತಾರೆ - ನಮಗೆಲ್ಲಾ ದೋಸೆಯನ್ನು ಅವರೇ ಕೊಡಿಸಿದ್ದಾರೆ.
ಆಗಾಗ್ಗೆ ಉದ್ಯಾನವನದ ಯಾವುದಾದರೂ ಗಿಡ/ಹೂಗಳ ಫೋಟೋ ತೆಗೆದು "FACE BOOK" ನಲ್ಲಿ ಹಾಕುತ್ತಾರೆ. "FACE BOOK" ನಲ್ಲಿ ಬಹಳ ACTIVE ಆಗಿ ಇದ್ದಾರೆ. ಈ ವಿಚಾರದಲ್ಲಿ ತಮಾಷೆ ಮಾಡಿದಾಗ ಅವರ ಉತ್ತರ -" ಬೇರೆ ಕೆಲಸ ಇಲ್ಲವಲ್ಲಾ ಅದಕ್ಕೆ". ಬೇರೆ ಕೆಲಸವಿಲ್ಲಾ ಅಂತ ಸುಮ್ಮನೇ ಕುಳಿತುಕೊಳ್ಳುವ ಮನಸ್ಸಿಲ್ಲ. ಇಂದಿನ Communication ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಂಡಿದ್ದಾರೆ.

ಹೋದವಾರ ಮಳೆಯ ಆರ್ಭಟದಲ್ಲಿ ಉದ್ಯಾನವನದಲ್ಲಿ ಬಿದ್ದ ಮರದ ಫೋಟೋ ತೆಗೆದು FACE BOOK" ನಲ್ಲಿ ಹಾಕಿದ್ದಾರೆ. ಅದೆಂತ ಉತ್ಸಾಹ.

ಕನ್ನಡ ಭಾಷೆಯನ್ನು ಇಂಗ್ಲೀಷ್ ಲಿಪಿಯಲ್ಲಿ ಬರೆಯುತ್ತಿದ್ದವರು ಕನ್ನಡದಲ್ಲೇ ಬರೆಯಬೇಕೆಂದು ಆಸೆಪಟ್ಟು ಪ್ರಯತ್ನಪಟ್ಟು ಸಣ್ಣ ಪುಟ್ಟ ಅಡಚಣೆಗಳನ್ನು ನಿವಾರಿಸಿಕೊಳ್ಳಲು ನಮ್ಮಲ್ಲಿ ಕೆಲವರ ಬಳಿ ಚರ್ಚಿಸಿ ಅದನ್ನು ಸಾಧಿಸಿದ್ದಾರೆ.
ಇಂದಿನ ವಿಶೇಷ - ನಮ್ಮ ಕಿಟ್ಟಿ ಮೇಷ್ಟ್ರ ಉತ್ಸಾಹದ ಮತ್ತೊಂದು ಮಜಲು. BLOG ನಲ್ಲಿ ಬರೆಯಬೇಕು ಅನಿಸಿದೆ. ಪ್ರಯತ್ನ ಪಟ್ಟಿದ್ದಾರೆ. ಎನೋ ಸ್ವಲ್ಪ ಅಡಚಣೆಯಾಗಿದೆ. ನನ್ನನು ಕರೆದು "ರಂಗನಾಥ, Blog ಓಪನ್ ಮಾಡಿ ಕೊಡು- ಸಾಧ್ಯವಾದರೆ ಈಗಲೇ" ಅಂತ ಅವರ ಫೋನ್ ಕೈಗಿಡಲು ತಯಾರಾದರು. ಅಬ್ಬಾ ಅವರ ಉತ್ಸಾಹವೇ!. BLOG ಹೆಸರೂ ನಿರ್ಧರಿತವಾಗಿದೆ " ಕಿಟ್ಟಿ ಸತ್ಸಂಗ". ನನಗೆ ಆ ಹಿರಿಯ ಜೀವಕ್ಕೆ ಈ ಕೆಲಸದಲ್ಲಿ ಕೈ ಜೋಡಿಸಲು ಹೆಮ್ಮೆ.
ನಮ್ಮ ಕಿಟ್ಟಿ ಮೇಷ್ಟ್ರ ಸಹವಾಸ, ಸಾನ್ನಿಧ್ಯ ನಮ್ಮಗಳ ಜೊತೆ ನೂರ್ಕಾಲ ಇರಲಿ ಎಂದು ಆಶಿಸುತ್ತಾ.... ...ನಮಸ್ಕಾರ ಸಾರ್...... ಜೈ ಗುರು


Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ