ಮೂರಕ್ಕೆ ಮುಕ್ತಾಯ ????

ಮೂರಕ್ಕೆ ಮುಕ್ತಾಯ ????

"ಮೂರು " ಎಣಿಕೆ ಚಿಕ್ಕದಾದರೂ ಪ್ರಾಮುಖ್ಯತೆ ಜೋರು.
ಸೃಷ್ಟಿ, ಸ್ಥ್ತಿತಿ ಮತ್ತು ಲಯ ಅದಕ್ಕೆ ಸಂಭಂದಿಸಿದಂತೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂರು ಮೂರು. ಜನನ, ಜೀವನ ಮತ್ತು ಮರಣ - ಹುಟ್ಟಿನಿಂದ ಸಾವಿನವರೆಗೆ ಅಕ್ಷರಗಳು ಮೂರು.
ಇನ್ನು ಜೀವಿಸಿರುವವರೆಗೂ ಮೂರರ ಪ್ರಭಾವ : ಜನನಿ, ಜನಕ, ಪಠನ, ಬರಹ, ಕೆಲಸ, ಮಡದಿ, ಮದುವೆ, ಮಕ್ಕಳು ಹೀಗೆ.
"ಮುಟ್ಟಿದರೆ ಮೂರು ಸಲ" "ಮೂರಕ್ಕೆ ಮುಕ್ತಾಯ" "ಮುಖ ಮೂರು ಕಡೆ" ಇವು ನುಡಿಗಟ್ಟುಗಳು.
ನದಿ ಅಥವಾ ಸಮುದ್ರದಲ್ಲಿ ಮೂರು ಸಲ ಮುಳುಗಿ, ಮೂರು ಸಲ ಆರ್ಘ್ಯ ಬಿಟ್ಟು, ದೇವರಿಗೆ ಮೂರು ಸುತ್ತು ಹಾಕಿ ಮಾಡುವುದು ಮೂರು ನಮಸ್ಕಾರ,
ಹಾಕಿ ಕೊಳ್ಳುವುದು (ಕೆಲವುಸಲ ಬೇರೊಬ್ಬರಿಗೆ ಹಾಕುವುದು?) ಮೂರು ನಾಮ,
ಕೊನೆಗೆ ನೆನಪಿಗೆ ಬಂದದ್ದು "ಗಂಗಮ್ಮ ಸಹ ಮೂರು ಸಲ ತೇಲಿಸಿ ಆಮೇಲೆ ಒಳಕ್ಕೆ ಎಳೆದುಕೊಳ್ಳುತ್ತಾಳೆ" ಅನ್ನುವ ಒಂದು ಮಾತು. ಈ ಮಾತು ಇಂದಿಗೂ ನನಗೆ ಒಂದು ತರಹ ಭಯ ಮತ್ತು ಗಾಬರಿಯನ್ನು ಉಂಟುಮಾಡುತ್ತದೆ.
ಹಳ್ಳಿಯ ವಾತವರಣದಲ್ಲಿ ಬೆಳೆದ ನಾನು ಈಜಲು ಕಲಿತದ್ದು 6, 7 ನೇ ವಯಸ್ಸಿನಲ್ಲಿ. ಕಲಿಯಲು ಆಸೆ, ನೀರಿಗೆ ಬೀಳಲು ಭಯ. ನಮ್ಮ ಗುಂಪು ಬೇಸಿಗೆ ರಜಾ ಕಾಲದಲ್ಲಿ ಈಜುವುದು, ಮಾವು, ಸೀಬೆ, ದಾಳಿಂಬೆ, ಹುಣಿಸೆ ಹೀಗೆ ಸಿಕ್ಕಿದ ಯಾವುದೇ ಕಾಯಿಯಾದರೂ ಸರಿ ಉಪ್ಪು ಮೆಣಸಿನ ಪುಡಿ ಬೆರೆಸಿ ತಿಂದು ಮನೆಗೆ ಬರುವುದು. ಹೀಗೊಂದು ದಿನ ಮನೆಗೆ ಬಂದಾಗ ಮನೆಯಲ್ಲಿ ಗಂಭೀರ ವಾತಾವರಣ. ಅಮ್ಮನ ಸಂಗಡಿಗರು ಸೇರಿದ್ದಾರೆ. ಒಂದಿಬ್ಬರು ಅಳುತ್ತಿದ್ದಾರೆ. ಕೆಲವರು ಸಮಾಧಾನ ಹೇಳುತ್ತಿದ್ದಾರೆ. ಈ ಸಮಯದಲ್ಲೇ ನಾನು ಕೇಳಿದ್ದು ""ಗಂಗಮ್ಮ ಸಹ ಮೂರು ಸಲ ತೇಲಿಸಿ ಆಮೇಲೆ ಒಳಕ್ಕೆ ಎಳೆದುಕೊಳ್ಳುತ್ತಾಳೆ" . ನನಗೆ ನೆನಪಿರುವ ಅಂದಿನ ಮಾತು ಕಥೆಯ ತಿಳುವಳಿಕೆ ಇಷ್ಟು:
ಯಾವುದೋ ಹುಡುಗ ( ನನಗೆ ಹೆಸರು ಸಹ ನೆನಪಿಲ್ಲ) ಈಜಲು ಕೆರೆಗೆ ಹೋಗಿದ್ದಾನೆ. ಈಜುವ ಮೋಜಿನಲ್ಲಿ, ಪಂದ್ಯದ ಹುರುಪಿನಲ್ಲಿ ಕೆರೆಯ ಮಧ್ಯಕ್ಕೆ ಹೋಗಿದ್ದಾನೆ. ಪಂದ್ಯ ಗೆದ್ದ ಉತ್ಸಾಹ ಉನ್ಮಾದ. ದೂರದಲ್ಲಿದ್ದ ಗೆಳೆಯರೆಲ್ಲಾ ಸಂಭ್ರಮಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಅವನು ಮುಳುಗಿ ಎದ್ದು ಮಾಡುತ್ತಿದ್ದಾನೆ. ಇದನ್ನು ಆಟವೆಂದು ತಿಳಿದು ದಡದಲ್ಲಿದ್ದ ಹುಡುಗರೆಲ್ಲಾ ಖುಷಿಯಿಂದ ಕಿರಿಚುತ್ತಿದ್ದಾರೆ. ಆದರೆ ಮುಳುಗಿದವ ಬಹಳ ಹೊತ್ತಾದರೂ ಮೇಲೆ ಏಳಲಿಲ್ಲ. ನೀರೊಳಗಿಂದಲೇ ಈಜಿ ಬೇರೆ ಕಡೆ ಮೇಲೇಳುತ್ತಾನೆ ಎಂದು ಸುತ್ತ ಮುತ್ತ ನೋಡಿದ್ದಾರೆ. ಆದರೆ ಹುಡುಗ ನಾಪತ್ತೆ. ಈಗ ಎಲ್ಲರಿಗೂ ಗಾಬರಿ. ಓಡಿ ದೊಡ್ಡವರಿಗೆ ವಿಷಯ ತಿಳಿಸಿದ್ದಾರೆ. ಬಹಳ ಕಷ್ಟ ಪಟ್ಟು ಹುಡುಗನ ದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಆಮೇಲೆ ಹೇಗೆ, ಏಕೆ, ಏನು ಎನ್ನುವ ವಿಷ್ಲೇಷಣೆ ನಡೆಯುತ್ತಿದ್ದಾಗ ನನ್ನ ಸಿಮೀತ ಬುದ್ದಿಗೆ ನಿಲುಕಿದ ಅಂಶ.
ತಾಯಿಯ ಗೋಳು ಹೇಳತೀರದು.

"ಪುತ್ರ ಶೋಕಂ ನಿರಂತರಮ್" ಬಹುಶಃ ಆತಾಯಿ ತನ್ನ ಜೀವವಿರುವತನಕ ತನ್ನ ಮಗನ ನೆನಪಿನಲ್ಲಿ ಎಷ್ಟು ಬಾರಿ ಅತ್ತಿದ್ದಾಳೋ. ನೆನಸಿಕೊಳ್ಳಲು ಬಲು ಕಹಿ.

Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ