ಅನಂತ ಸುಬ್ಬರಾಯರು

 


ಬೆಳಗಿನ ಜಾವ 5 ಘಂಟೆಯ ಸುಮಾರಿಗೆ ...ಬಕೆಟ್ ಗೆ ನೀರು ಬಿಡುವ ಶಬ್ದ...ಮೇಲಿಂದ ನೀರು ಸುರಿವ ಶಬ್ದ...ಕೇಳಿಸಿದರೆ.. ಸುಬ್ಬರಾಯರು ಊರಲ್ಲಿದ್ದಾರೆ, ಅವರ  ದಿನಚರಿ ಶುರುವಾಯಿತು ಎಂದು ಅರ್ಥ. ಇದಾದ ನಂತರ ಛಕ್ ಛಕ್ ಛಕ್....ಛಕ್ ಛಕ್ ಛಕ್ ಅಂತ ಲಯಬದ್ಧವಾಗಿ ಬಟ್ಟೆ  ಕಸಕುವ ಶೈಲಿ ಸುಬ್ಬರಾಯರ ಹೆಗ್ಗುರುತು. ಇನ್ನು ಅವರು ಬಟ್ಟೆ  ಒಗೆದು..ಪಂಚೆಗಳನ್ನು ಮಡಿಸಿ... ಕೈಯಿಂದ ತಟ್ಟಿ  ಮಟ್ಟಸಮವಾಗಿ ಒಣಗಲು ಹಾಕಿದ್ದನ್ನು ನೋಡಲು ಸೊಗಸು. ಶಿಸ್ತಿನ ಅಪರಾವತಾರ ಸುಬ್ಬರಾಯರು. 

ಸುಬ್ಬರಾಯರು, ನಾವು ಶ್ರೀನಗರದಲ್ಲಿ ಬಾಡಿಗೆಗೆ ಇದ್ದ ಮನೆಯ ಮಾಲಿಕರು, ಅದಕ್ಕೂ ಹೆಚ್ಚು  ಅವರು ನಮ್ಮ ಹಿತೈಷಿಗಳು.  

ನನ್ನ ಹೆಂಡತಿಯ ತವರು ಮನೆಯ ಹತ್ತಿರವೇ ಇದ್ದ ಸುಬ್ಬರಾಯರ ಬಗ್ಗೆ ಕೇಳಿ ತಿಳಿದಿದ್ದೆ. (ನಮ್ಮ ಮದುವೆಗೆ  ಬಂದಿದ್ದರೆಂದು ಗೊತ್ತು...ಆದರೆ ನೆನಪಿಲ್ಲ.   ಮದುವೆಯ Reception ನಲ್ಲಿ ನಾವಿಬ್ಬರೂ ಓಡಾಡಿಕೊಂಡು ಬಂದವರೊಡನೆ ಮಾತಾಡುತ್ತಿದ್ದದ್ದನ್ನು ಸುಬ್ಬರಾಯರು ನನಗೆ ಮೆಚ್ಚುಗೆ ಸೂಚಿಸಿದ್ದರು....ಈ ಮನೆಗೆಬಂದಮೇಲೆ...)   

ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ಒಂದು ಸುತ್ತು ಹಾಗೂ ಅವರ ಹೆಂಡತಿ ಶಾಂತಮ್ಮ ಅವರ ಜೊತೆ ಒಂದು ಸುತ್ತು ವಾಕಿಂಗ್ ಪ್ರತಿದಿನ ಹೋಗುತ್ತಾರೆ..ತುಂಬಾ ಶಿಸ್ತಿನ ಮನುಷ್ಯ ಎಂದು. 

ಅವರನ್ನು ಭೇಟಿ ಮಾಡುವ ಅವಕಾಶ  ಬಂದಿದ್ದು...ಅವರ ಮನೆಗೆ ಬಾಡಿಗೆಗೆ ಬರುವ ಸಂದರ್ಭದಲ್ಲಿ. ಮನಸ್ಸಿನಲ್ಲಿ ಇದ್ದದ್ದು ಭಯಮಿಶ್ರಿತ ಗೌರವ. ಮೊದಲ ಎರಡು ಮಾತುಗಳ ನಂತರ ಆತ್ಮೀಯತೆಯ ಗೌರವ. ಧಾರಾಳವಾಗಿ ಬನ್ನಿ ನಮಗೂ ಸಂತೋಷ ಅಂತ ಹೇಳಿ... ಬಾಡಿಗೆ ವಿಚಾರಕ್ಕೆ ಬಂದಾಗ 450 ರೂಪಾಯಿ ಎಂದು ಹೇಳಿದರು. ನಾನಾಗ.. ನನ್ನ ವ್ಯಾಪಾರ  ವ್ಯವಹಾರದಲ್ಲಿ ಪಾತಾಳವನ್ನು ಮುಟ್ಟಿದ್ದೆ... ಮೇಲಕ್ಕೆ ನೋಟ ಶುರುವಾಗಿತ್ತು... ಇನ್ನೂ ಏರುತ್ತಿರಲಿಲ್ಲ.. ಆ ಸಮಯದಲ್ಲಿ ಕೊಡುತ್ತಿದ್ದ 375 ರೂಪಾಯಿಂದ 450 ಕ್ಕೆ ಏರಲು ಧೈರ್ಯ ಸಾಲದಿತ್ತು. ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿ... ಮನಸ್ಸು ಮಾಡಿ ಸ್ವಲ್ಪ ನನ್ನ ಪರಿಸ್ಥಿತಿಯನ್ನು ವಿವರಿಸಿ.. ಆರು ತಿಂಗಳ ಕಾಲ 425 ರೂಪಾಯಿ ಕೊಡುತ್ತೇನೆಂದು ಹೇಳಿದಾಗ.. ಒಂದು ಕ್ಷಣವೂ ಯೋಚಿಸದೆ ಆಗಲಿ ಎಂದ ಮಹಾನುಭಾವರು.

ಯೋಗಾ ಯೋಗವೋ / ಋಣಾನುಬಂಧವೋ... ಯಾವುದಾದರೂ ಆಗಲಿ ಆ ಮನೆಗೆ ಬಂದು ಸೇರಿಕೊಂಡೆವು.... ನಮ್ಮ ಜೀವನ ಏರು ಗತಿಯಲ್ಲಿ ಚಲಿಸತೊಡಗಿತು.

ನಮ್ಮ ಜೀವನದ ಚೈತ್ರ ಮಾಸ.... ಮಗಳ ಆಗಮನ ಆಗಿದ್ದೇ ಆ ಮನೆಯಲ್ಲಿ... ಅಲ್ಲಿಂದ ಹೋಗಿದ್ದೆ ಸ್ವಂತ ಮನೆಗೆ...ಈ ಎಲ್ಲಕ್ಕೂ ಸುಬ್ಬರಾಯರು ಮತ್ತು ಮನೆಮಂದಿಯ ಶುಭ ಹಾರೈಸುವ ಮನಸ್ಸು ಒಂದು ಮುಖ್ಯ ಕಾರಣ ಎಂದು ನನ್ನ ನಂಬಿಕೆ.

ಒಟ್ಟಿನಲ್ಲಿ ಹೇಳುವುದಾದರೆ... ಒಂದು ನೆಮ್ಮದಿಯ ಆಶ್ರಯದಲ್ಲಿ ಇದ್ದಂತೆ.

ಸುಬ್ಬರಾಯರ ತಾಯಿ ರುಕ್ಮಿಣಮ್ಮ (ಮೈಸೂರಮ್ಮ) ಹಿರಿಯ ಜೀವ... ಹೋಗ್ತಾ ಬರ್ತಾ ಮಾತಾಡ್ಸೋದು... ಟೈಮ್ ಕೇಳೋದು... ಒಳ್ಳೆದಾಗಲಿ ಅಂತ ಹೇಳೋದು.. ನಿರಂತರವಾಗಿತ್ತು.

ಇನ್ನು ಶಾಂತಮ್ಮನವರೋ.. ಹೆಸರಿಗೆ ತಕ್ಕಂತೆ ಶಾಂತ ಮೂರ್ತಿ.... ನಾವು ಸಂಜೆ ಆಚೆ ಹೋಗಿದ್ದಾಗ... ಹಾಲು ಬಂದರೆ ಅದನ್ನು ಹಾಕಿಸಿಕೊಂಡು ಕಾಯಿಸಿ... ನಾವು ಬಂದಾಗ ಕೊಡುತ್ತಿದ್ದ ಮಾತೃ ಹೃದಯಿ. ಹೆಣ್ಣು ಮಕ್ಕಳಿಲ್ಲದಿದ್ದ ಅವರು ನನ್ನ ಹೆಂಡತಿ ವಿಜಯಳನ್ನು ಮಗಳಷ್ಟೇ ಪ್ರೀತಿಸುತ್ತಿದ್ದರು ( ಆಸ್ತಿಯಲ್ಲಿ ಪಾಲ್ಕೊಡುತ್ತಿದ್ದರು ಏನೋ... 😄😄)

ಸುಬ್ಬರಾಯರು ಪ್ರವಾಸ ಪ್ರಿಯರು... ಪ್ರವಾಸ ಹೊರಡಲು ಅವರಿಗೆ ಎಲ್ಲಿಲ್ಲದ ಉತ್ಸಾಹ.... ಜೊತೆಯಾದರೂ ಸರಿ... ಒಂಟಿಯಾದರೂ ಸರಿ... ಹಾಗೆಯೇ ಅವರದು ಅಧ್ಯಯನ / ಧ್ಯಾನದ ಪ್ರವಾಸಗಳು ಸಹ. ನಂತರ ಅವರು ತೆಗೆದುಕೊಂಡು ಹೋದ kit ಅನ್ನು ಸ್ವಚ್ಛ ಮಾಡಿ ಬಿಸಿಲಿಗೆ ಇಡುತ್ತಿದ್ದದ್ದು ಕಣ್ಣಿಗೆ ಕಟ್ಟಿದೆ.   ಇದರ ಪ್ರಭಾವವೇ, ಅವರ ಮೊಮ್ಮಗ ಅಲೋಕ ಸಹ ಆಗಾಗ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಿದ್ದ.



ಇನ್ನು ಸುಬ್ಬರಾಯರ ಸೇವಾ ಮನೋಭಾವ... ರಾಮಕೃಷ್ಣಾಶ್ರಮದ ಭಾನುವಾರದ ಆರೋಗ್ಯ ಶಿಬಿರಗಳಿಗೆ ಇವರದು ನಿಶ್ಚಿತ ಪಾಲುಗಾರಿಕೆ.

ವರ್ಷಕ್ಕೊಮ್ಮೆ ನಾವುಗಳು ಟ್ರಿಕ್ಕಿಂಗ್ ಹೊರಟಾಗ... ಅವರು ನಮ್ಮ ಜೊತೆಯಲ್ಲಿ ಬಸ್ ಸ್ಟ್ಯಾಂಡ್ ತನಕ ಬಂದು, ಬಸ್ ಹತ್ತಿಸಿ ಹೋಗುತ್ತಿದ್ದದ್ದು...ಅವರ ಉತ್ಸಾಹದ ಒಂದು ಮುಖ.

ಮನೆಯಲ್ಲಿದ್ದಾಗ... ಬೆಳಗಿನ ಯೋಗ/ ವ್ಯಾಯಾಮ, ನಂತರದ ಓದು... ಮನೆಯ ಸುತ್ತಮುತ್ತ ಇದ್ದ ಕಸ ಕಡ್ಡಿ ತೆಗೆಯುವುದು, ಸಂಜೆ ಗೋಖಲೆ ಇನ್ಸ್ಟಿಟ್ಯೂಟ್, ಬ್ರಹ್ಮ ಚೈತನ್ಯ ಮಂದಿರ... ಯಾವುದಾದರೂ ಒಂದು ಕಾರ್ಯಕ್ರಮಕ್ಕೆ ಹೋಗುವುದು.. ಹೀಗೆ ಚಟುವಟಿಕೆಯಿಂದಿದ್ದವರು.

ಈಗಿನ ಯುವಕರ ಶಿಸ್ತಿನ ಕೊರತೆ... ಹಾಗೆ ವ್ಯವಸ್ಥೆಯ ಬಗ್ಗೆ ಒಂದಷ್ಟು ಬೇಸರವಿದ್ದವರು... ಸ್ವಲ್ಪ ಗೊಣಗಾಟವೂ ಇತ್ತು.

ಅವರ ವ್ಯಕ್ತಿತ್ವದ ಪರಿಚಯಕ್ಕೆ ಒಂದು ಘಟನೆ ಹೇಳಲೇಬೇಕು.... ಒಂದು ಹಂತದಲ್ಲಿ... ನಾವಿದ್ದ ಮನೆಗೆ ಬಾಡಿಗೆಯ ಬದಲು... ಭೋಗ್ಯಕ್ಕೆ ಬದಲಾಯಿಸಬೇಕು ಎಂಬ ಪ್ರಸ್ತಾಪ ಬಂತು... ನನಗೂ ಸ್ವಲ್ಪ ಶಕ್ತಿ ಬಂದಿತ್ತು... ಒಪ್ಪಿಗೆಯಾಯಿತು. ಹಣವನ್ನು ಕೊಟ್ಟು ಬಂದೆ. ಹಿಂದಿನ ಯಾವ ಸಂದರ್ಭದಲ್ಲೂ ಹಣದ ವ್ಯವಹಾರವನ್ನು ಅಕ್ಷರರೂಪಕ್ಕೆ ಇಳಿಸಿರಲಿಲ್ಲ. ಅವರಿಗೆ ಏನನ್ನಿಸಿತೋ,  " ರಂಗ ಅವರೇ ಬನ್ನಿ" ಎಂದು ಕರೆದು ಕೂಡಿಸಿಕೊಂಡು.. ಇದಕ್ಕೆ ಒಂದು ಅಗ್ರಿಮೆಂಟ್ ಮಾಡಿಕೊಳ್ಳೋಣ ಎಂಬ ಸಲಹೆ.... ನನಗೆ ಅವರ ಬಗ್ಗೆ ಇದ್ದ ಅಭಿಮಾನ ಗೌರವದಿಂದ.. ಅದು ಬೇಕೆನಿಸಲಿಲ್ಲ.. ಬೇಡ ಸರ್ ಅಂದೆ.. ಅದಕ್ಕೆ ಅವರು ಕೊಟ್ಟ ಉತ್ತರ ಇಂದಿಗೂ ಮರೆತಿಲ್ಲ.."What if I croak one day without returning it...huge money"... ಕೊನೆಗೂ ಅವರ ಕೈಯಾರ ಸ್ಟ್ಯಾಂಪ್ ಹಚ್ಚಿದ ಪೇಪರ್ ಮೇಲೆ ಬರೆದುಕೊಟ್ಟು ಇದನ್ನು ಇಟ್ಟುಕೊಳ್ಳಿ ಎಂದಾಗ ನಾನು ಒಪ್ಪಲೇ ಬೇಕಾಯಿತು. ಅವರ ಚಿಂತನೆಯಲ್ಲಿನ ಸ್ಪಷ್ಟತೆ ನನಗೆ ಈಗಲೂ ಮೆಚ್ಚುಗೆ.

ನಾವು ಆ ಮನೆಯನ್ನು ಬಿಟ್ಟರೂ... ಆ ಮನೆಯವರ ಜೊತೆಗಿನ ನಮ್ಮ ಒಡನಾಟ ಈಗಲೂ ಇದೆ. ಅವರ  ಮೊದಲ ಮಗ ಶ್ರೀನಿವಾಸ ಶರ್ಮ ಮಿತ ಭಾಷಿ, ಸ್ನೇಹಜೀವಿ... ಸಿಕ್ಕಾಗ ಪ್ರೀತಿಯಿಂದ ಮಾತು. ಎರಡನೆಯ ಮಗ ಮಂಜುನಾಥನೊಡನೆ ನನ್ನ ಸಂಬಂಧ ಜಾಸ್ತಿ. ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ವಿಶ್ವಾಸಿಗಳೇ.



ಮನೆಗೆ "ಪರಿಶ್ರಮ" ಹೆಸರಿನ ಫಲಕ ಮಂಜು ಹಾಕಿದಾಗ... ಸುಬ್ಬರಾಯರ ಶ್ರಮದ ಸಾರ್ಥಕ ಎಂದೆನಿಸಿದ್ದು ಸತ್ಯ.

ಅವರ ಮನೆಗೆ ಹೋದಾಗಲೆಲ್ಲ ಸುಬ್ಬರಾಯರನ್ನು ಕೆಲ ಹೊತ್ತು ಮಾತನಾಡಿಸುವುದು ವಾಡಿಕೆ. ವಯೋ ಸಹಜವಾಗಿ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಅವರ ಚಟುವಟಿಕೆಯು ಕಡಿಮೆಯಾಗಿತ್ತು. 

ಹೀಗೊಂದು ಸಲ ಅವರನ್ನು ನೋಡಲು  ಹೋದಾಗ ಮನೆಯಲ್ಲಿ ಒಬ್ಬರೇ ಇದ್ದರು. ಮಾತಿನ ಮಧ್ಯದಲ್ಲಿ ಅವರು ಹೇಳಿದ್ದು  "ನಾನು ಭಾರ ಆಗ್ತಾ ಇದ್ದೇನೆ...ಅವರಿಗೂ ಕಷ್ಟ" ... ಮೊದಲ ಬಾರಿ ಸುಬ್ಬರಾಯರ ಬಾಯಲ್ಲಿ ಇಂತಹ ಮಾತು ಕೇಳಿದ್ದು. ಮನಸ್ಸು ಸಲ್ಪ ಪೆಚ್ಚಾಯಿತು. 

ಅನಾರೋಗ್ಯ ಜಾಸ್ತಿಯಾಗುತ್ತಿದ್ದಂತೆ... ಅವರದೇ ಸಲಹೆಯಂತೆ... ಯಾವುದಾದರೂ ವೃದ್ಧಾಶ್ರಮಕ್ಕೆ (ಆಸ್ಪತ್ರೆಗೆ ಬೇಡ)  ಸೇರಿಸಬೇಕೆಂದು ಮಂಜು ಯೋಚಿಸುತ್ತಿದ್ದಾಗ... ಅವನ ಜೊತೆ  "ಆನಂದ ಸೇವಾ ಸದನ " ನೋಡಿದ್ದು... ಅಲ್ಲಿನ ಪರಿಸರ ಒಪ್ಪಿಗೆಯಾಗಿ....  ಸುಬ್ಬರಾಯರ ವಾಸ್ತವ್ಯ ಅಲ್ಲಿಗೆ ಬದಲಾಯಿತು.

ಒಮ್ಮೆ ಅವರನ್ನು ನೋಡಲು ಆನಂದ ಸೇವಾ ಸದನಕ್ಕೆ ಹೋದಾಗ... ಮೊದಲು ಗುರುತು ಹಿಡಿಯದಿದ್ದರೂ... "ನಾನು ಡಿಸಿ ರಂಗ" ಎಂದು ಜೋರಾಗಿ ಹೇಳಿದಾಗ ಅವರ ಕಣ್ಣರಳಿತು... ಕೆಲಕಾಲ ಮೌನ... ವಿಜಯ ಹೇಗಿದ್ದಾರೆ? ಅಣ್ಣಂದಿರು ಹೇಗಿದ್ದಾರೆ? ಪ್ರಶ್ನೆಗಳು. ಎಲ್ಲಾ ಅನುಕೂಲತೆಗಳು ಇದ್ದರೂ ಸಹ... ತುಂಬ ಸೊರಗಿದ್ದರು... ನೋವು ಪಡುತ್ತಿದ್ದರು ಎಂದು ನನಗನಿಸಿತು.." ದೇವರೇ ಮುಕ್ತಿ ಕೊಡಪ್ಪ" ಎಂದು ಪ್ರಾರ್ಥಿಸಿದೆ.( ಕಟುಕತನವೇ?)

ಒಂದು ರಾತ್ರಿ, ಅವರ ಮನೆಯಲ್ಲಿ ಕಳೆಯಲಿ ಎಂಬ ಆಸೆಯಿಂದ ಸುಬ್ಬರಾಯರನ್ನು " ಪರಿಶ್ರಮ"ಕ್ಕೆ ಕರೆತರಲಾಯಿತು.... ನಾನು ಹೋಗಿದ್ದೆ... ಅವರ ಸ್ಪಂದನೆ ತೀರ ಕುಂಠಿಸಿತ್ತು.


ಜಾತಸ್ಯ ಮರಣಂ ಧ್ರುವಂ.....

ಅನಂತ ಸುಬ್ಬರಾಯರು ಅನಂತದಲ್ಲಿ ಲೀನವಾದರು. ನನಗೊಂದು ಸಣ್ಣ ಕೊರಗು... ನನ್ನ ಬೆನ್ನು ಉಳುಕಿದ್ದರಿಂದ... ಬಗ್ಗಲು ಸಾಧ್ಯವಾಗುತ್ತಿರಲಿಲ್ಲ.... ಹಾಗಾಗಿ ಬಗ್ಗಿ ನಮಸ್ಕಾರ ಮಾಡಲಿಲ್ಲ... ಅವರ ಶವಕ್ಕೆ ಹೆಗಲು ಕೊಡಲೂ ಆಗಲಿಲ್ಲ... ವಾಹನದಲ್ಲಿ ಇಡುವಾಗ ಒಂದು ಗಳಿಗೆ ಕೈ ಕೊಟ್ಟೆ , ಕಾಲು ಮುಟ್ಟಿದೆ ಅನ್ನುವುದೇ ಸಮಾಧಾನ.

ಹಿರಿ ಜೀವಕ್ಕೆ ನನ್ನ ನುಡಿ ನಮನ....

ನಮಸ್ಕಾರ ಸರ್  🙏🙏


-------------------------------------------------

D C Ranganatha Rao

9741128413



    

Comments

  1. ಅನಂತ ಸುಬ್ಬರಾವ್ ಅವರು ಆನಂದ ವಾಗಿ ಬದುಕಿ ಅನಂತ ದಲ್ಲಿ ಲೀನ ರಾದ ಬಗ್ಗೆ ಬರೆದಿರುವ ನಿಮ್ಮ ಲೇಖನ ಸಹಜತೆಯೊಂದಿಗೆ ಮೂಡಿ ಬಂದಿದೆ. ಮಾದರಿಯ ವ್ಯಕ್ತಿ ರಾಯರಿಗೆ ನಮ್ಮ ಅಂತಿಮ ನಮನ ವನ್ನು ಸಲ್ಲಿಸುತ್ತಾ ಇದ್ದೀನಿ 🙏

    ReplyDelete
  2. ಎಲ್ಲರಿಗೂ ವಯಸ್ಸಾಗಿ ಮುಪ್ಪು ಆವರಿಸುತ್ತದೆ. ಅದು ಪ್ರಕೃತಿಯ ನಿಯಮ.

    ಆದರೆ ದಿ: ಅನಂತಸುಬ್ಬರಾಯರಂತೆ ಬದುಕಿನಲ್ಲಿ ಒಂದು ನಿಷ್ಠೆ, ಹಣದ ಬಗ್ಗೆ ನಿಯತ್ತು, ಆರೋಗ್ಯಕ್ಕಾಗಿ ನಡಿಗೆ, ಸದಾಚಾರದೊಂದಿಗೆ ಬದುಕಿದರೆ ಸಾಕು. ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.

    ಸಾವು ಖಚಿತ...ಅಲ್ಲಿಯವರೆವಿಗೂ ಜೀವನ್ಮುಖಿಗಳಾಗೋಣ.

    ಆದರಗಳೊಡನೆ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  3. 🙏🙏🙏

    ReplyDelete
  4. ತಮ್ಮ ಅನಂತ ಸುಬ್ಬರಾಯರು ಲೇಖನ ಉತ್ತಮವಾಗಿದೆ ಮೂಡಿಬಂದಿದೆ.ಧನ್ಯವಾದಗಳು.ಅನಂತ ಸುಬ್ಬರಾಯರು ಶಿಸ್ತು,ಬಾಡಿಗೆದಾರರಿಗೆ ಅವರು ನೀಡುತ್ತಿದ್ದ ಗೌರವ ಹಾಗೂ ಅವರ ಕೊನೆಯ ದಿನಗಳ ಬಗ್ಗೆ ವಿವರಣೆ ಚೆನ್ನಾಗಿ ಬಂದಿದೆ.ಎಲ್ಲಾ ವಿಚಾರದಲ್ಲಿ ಶಿಸ್ತು ಉತ್ತಮ ಸಂದೇಶವಾಗಿದೆ.ಮತ್ತೊಮ್ಮೆ ಧನ್ಯವಾದಗಳು. ದೇವೇಂದ್ರಪ್ಪ

    ReplyDelete
  5. ತುಂಬಾ ಚೆನ್ನಾಗಿ ವರ್ಣಿಸಿದ್ದೀರಾ, ನಿಮಗೆ ಹಳೆಯದೆಲ್ಲಾ ಎಷ್ಟು ಚೆನ್ನಾಗಿ ನೆನಪಿದೆ, ನಿಮ್ಮ ನುಡಿ ಮುತ್ತುಗಳನ್ನು ಪದಪುಂಜದ ಅಕ್ಷರಗಳಲ್ಲಿ ಪೋಣಿಸಿ ನೆನಪಿನ ಸರಮಾಲೆಯ ಅರ್ಪಣೆ ಅನಂತ ಸುಬ್ಬರಾಯರ ಪಾದಕ್ಕೆ ತಲುಪಲಿ , ಧನ್ಯವಾದಗಳು🙏

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ