ಮೂರ್ಖರ ದಿನಾಚರಣೆ
ವಿಶೇಷವೆಂದರೆ ಏಪ್ರಿಲ್ ಒಂದನ್ನು ಅಂತರರಾಷ್ಟ್ರೀಯ ಮೂರ್ಖರ ದಿನ ಅಂತ ಇದುವರೆಗೂ ಯಾವ ಸಂಸ್ಥೆಯೂ (UNESCO ಸೇರಿ) ಘೋಷಣೆ ಮಾಡಿರದಿದ್ದರೂ... ಈ ದಿನವನ್ನು ಶ್ರದ್ಧೆಯಿಂದ ಆಚರಿಸುವ ಜನಸಂಖ್ಯೆ ಸುಮಾರು. ಅದರಲ್ಲೂ ಮಕ್ಕಳು ಹಾಗೂ ಯುವ ಜನತೆ ಸ್ವಪ್ರೇರಣೆಯಿಂದ ಆಚರಿಸುವ ದಿನ ಇದು ಮಾತ್ರ ಎಂದು ನನ್ನ ಅನಿಸಿಕೆ. ಅಷ್ಟೇ ಏಕೆ ವರ್ಷಪೂರ್ತಿ.. ಮೂರ್ಖರಾಗುವ / ಆಗಿಸುವ ಕಾಯಕ ನಡೆಯುತ್ತಲೇ ಇರುತ್ತದೆ.
ಮನುಷ್ಯನ ಒಂದು ಸ್ವಭಾವ( Sadistic behaviour).. ಬೇರೊಬ್ಬರನ್ನು ಮುಜುಗರಕ್ಕೆ ಸಿಕ್ಕಿಸಿ/ ನೋಯಿಸಿ ಸಂತೋಷಪಡುವುದು.
ನಾನಾಗ ಹೈ ಸ್ಕೂಲ್ ನಲ್ಲಿ ಓದುತ್ತಿದ್ದೆ... ಬೆಂಗಳೂರಿಗೆ ಬಂದು ವರ್ಷ ವಾಗಿತ್ತು.... ಒಂದಷ್ಟು ಸಂಕೋಚ ಕಳೆದಿತ್ತು. ಬೇಸಿಗೆಯ ರಜಕ್ಕೆ ದೊಡ್ಡಜಾಲಕ್ಕೆ ಹೋಗಬೇಕು.... ಖುಷಿ.....ಏಪ್ರಿಲ್ ಒಂದು...ನನಗೇನೂ ತಿಳಿಯದು. ನನ್ನ ಸ್ನೇಹಿತ TR ಶ್ರೀನಿವಾಸ ರಾವ್ ಮನೆಗೆ ಹೋಗಿ ಹೇಳಿ ಹೊರಡುವ ಮನಸು....ಯಾವ ಮಾಯದಲ್ಲೋ ಒಂದು plastic ಚೇಳನ್ನು ನನ್ನ ಮೇಲೆಸೆದ... ಗಾಬರಿಯಿಂದ ನಾನು ಒದ್ದಾಡುತ್ತಿದ್ದಾಗ ಅವನ ಅಕ್ಕ ಬಂದು ತೋರಿಸಿ ಸಮಾಧಾನ ಮಾಡುತ್ತಿದ್ದಾಗ ಅವನು ಹೇಳಿದ್ದೆ ” ಏಪ್ರಿಲ್ ಫೂಲ್ ... ಏಪ್ರಿಲ್ ಫೂಲ್.." ಇದು ಏಪ್ರಿಲ್ ಫೂಲ್ ಜೊತೆ ನನ್ನ ಮೊದಲ ಮುಖಾಮುಖಿ... ಹಾಗೂ ಮೊದಲ ಬೇಸ್ತು.
ಹಾಗೆ ದಾರಿಯಲ್ಲಿ ಹೋಗುವಾಗ ಗಡಿಯಾರ ಕಟ್ಟಿಕೊಂಡಿರುವರನ್ನು ನೋಡಿ " ಎಸೆ ಕೆಮಿಸ್ಟ್ರಿ" ಅಂತ ಬಹಳ ವೇಗವಾಗಿ ಕೇಳೋದು... ಅವರು ಟೈಮ್ ಹೇಳಿದರೆ ಜೋರಾಗಿ ನಕ್ಕು... ಏಪ್ರಿಲ್ ಫೂಲ್ ಅಂತ ಹೇಳೋದು.... ಕೆಲವರ ಕೈಲಿ ಬೈಸಿಕೊಂಡದ್ದೂ ಇದೆ..
ಇನ್ನು ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಏಪ್ರಿಲ್ ಫೂಲ್ ಹೇಳುವುದು ಒಂದು ಆಟಾನೇ ಆಗಿತ್ತು..." ಮುಂದಿನ ಚಕ್ರ ಹಿಂದಕ್ ತಿರುಗ್ತಾ ಇದೆ.... ಅಯ್ಯೋ ಹಿಂದ್ಗಡೆ ಚಕ್ರ ಪಂಚರಾಗಿದೆ..... ರಕ್ತ ಬರ್ತಾ ಇದೆ ಹೀಗೆ.... ಎಷ್ಟೋ ಸಲ ಅದರ ಪರಿಣಾಮ ಶೂನ್ಯ.... ಅಥವಾ ವ್ಯತಿರಿಕ್ತ.... ಅವಮಾನ ಅನ್ನಿಸಿದಾಗ ಕೋಪ, ತಾಪ, ಜಗಳ... ಅದಕ್ಕೆ " ಏಪ್ರಿಲ್ ಫೂಲ್ ಬನಾಯ.. ತೊ ಉನಕೋ ಗುಸ್ಸಾ ಆಯಾ.." ಹಾಡು.
ಗ್ರೆಗೋರಿಯನ್ ಕ್ಯಾಲೆಂಡರ್ ನ ಹೊಸ ವರ್ಷವನ್ನು ಏಪ್ರಿಲ್ ನಿಂದ ಜನವರಿಗೆ ಬದಲಾಯಿಸಿದಾಗ.... ಇನ್ನೂ ಹೊಂದಿಕೊಳ್ಳಲಾಗದ ಜನ... ಏಪ್ರಿಲ್ ನಲ್ಲಿ ಹೊಸ ವರ್ಷ ಆಚರಿಸಿದಾಗ ಅವರನ್ನು ಛೇಡಿಸುತ್ತಿದ್ದದ್ದೇ "ಏಪ್ರಿಲ್ ಫೂಲ್" ನ ಉಗಮಕ್ಕೆ ಕಾರಣ ಎನ್ನುವುದು ಒಂದು ಮಾತು. ಕಾಲಾಂತರದಲ್ಲಿ ಈ ದಿನ ಕುಚೇಷ್ಟೆಗೆ, ತಮಾಷೆಗೆ... ಬೇರೆಯವರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನಗಳಿಗೆ.... ಹಾಗೂ ಅದೆಲ್ಲವನ್ನು ಸಂತೋಷಪಡುವ ದಿಕ್ಕಿನಲ್ಲಿ ರೂಪುಗೊಂಡಿರಬಹುದು.
ಏಪ್ರಿಲ್ ನಿಂದ ಹೊಸ ವರ್ಷ ಶುರು ನಮಗೇನು ಹೊಸದಲ್ಲ ಎಂದು ನನ್ನ ನಂಬಿಕೆ. ನಮ್ಮ ಹೊಸ ವರ್ಷ ಯುಗಾದಿ ಬರುವುದು ಈ ದಿನಗಳ ಅಸು ಪಾಸಿನಲ್ಲೇ.... ಪ್ರಕೃತಿಯೂ ಇದಕ್ಕೆ ಪೂರಕವಾಗಿದೆ... ಮರ-ಗಿಡಗಳು ತಮ್ಮೆಲ್ಲ ಹಳೆಯ ಎಲೆಗಳನ್ನು ಕಳಚಿ ಹೊಚ್ಚ ಹೊಸದಾಗಿ ಮೆರುಗು ಪಡೆಯುವ ಸಮಯ... ಎಲ್ಲೆಲ್ಲೂ ಹಸಿರಿನ ಎಳೆಯ ಎಲೆಗಳ ನೋಟ.
ಭಾರತದ ಹೊಸ ವಿತ್ತೀಯ ವರ್ಷ ಆರಂಭವಾಗುವುದು ಏಪ್ರಿಲ್ ಒಂದರಿಂದಲೇ... ಹೊಸ ವರ್ಷ ಹೊಸ ಲೆಕ್ಕ...ಕಾಕತಾಳೀಯವೋ... ಸ್ವಾಭಾವಿಕವೊ... ಏಪ್ರಿಲ್ ಒಂದರಂದು ಶುರುವಾಗುವ ಹೊಸ ಲೆಕ್ಕದಲ್ಲೂ ಬೇರೆಯವರನ್ನು ಮೂರ್ಖರನ್ನಾಗಿ ಮಾಡುವ ಒಂದು ಪದ್ಧತಿ ನಮ್ಮಲ್ಲಿದೆ.. ಅದೇ ರಾಮನ ಲೆಕ್ಕ, ಕೃಷ್ಣನ ಲೆಕ್ಕ.... ಒಪ್ತೀರ ಅಲ್ವಾ?
ರಾಮನ ಲೆಕ್ಕ ರಾಮನ ಚರಿತ್ರೆಯಂತೆ ತೆರೆದ ಪುಸ್ತಕ ಎಲ್ಲೂ ಏನೂ ಗುಟ್ಟು ಗೋಪ್ಯತೆ ಇಲ್ಲ... ಆದರೆ ಕೃಷ್ಣನ ಲೆಕ್ಕದಲ್ಲಿ ಇವೆಲ್ಲವೂ ಉಂಟು.... ನಾರಿಯರ ಸೀರೆ ಕದ್ದ, ಗೋಪಿಯರ ಮನಸ್ಸು ಕದ್ದ, ಬೆಣ್ಣೆ ಕದ್ದ.... ಆಯಾ ಸಮಯಕ್ಕೆ ಸರಿಯಾಗಿ... ಸೂಕ್ತವಾದ ತಂತ್ರವನ್ನು ಹೆಣೆಯಬಲ್ಲ ಚತುರ.... ಹಾಗಾಗಿ ಈ ಲೆಕ್ಕಕ್ಕೆ ಕೃಷ್ಣನ ಹೆಸರನ್ನು ಇಟ್ಟಿರಬಹುದೇ... ಈ ಲೆಕ್ಕವು ಸರ್ಕಾರಕ್ಕಂತೂ ಅಲ್ಲವೇ ಅಲ್ಲ... ಲೆಕ್ಕದ ಆರಂಭ ಆಗುವುದು ಏಪ್ರಿಲ್ ಒಂದರಂದು ಆದರೂ.. ವರ್ಷಪೂರ್ತಿ ಈ ಲೆಕ್ಕವೂ ಸತತವಾಗಿ ಮುಂದುವರಿಯುತ್ತದೆ ಅಂದರೆ... ಮೂರ್ಖರನ್ನಾಗಿ ಮಾಡುವ ಕಾಯಕ ವರ್ಷಪೂರ್ತಿಯೂ ಇರುತ್ತದೆ. ಎಲ್ಲಿಯ ತನಕ ಮೂರ್ಖರಾಗಲು... ಟೋಪಿ ಹಾಕಿಸಿಕೊಳ್ಳಲು ಜನರು ಇರುತ್ತಾರೋ ಅಲ್ಲಿಯ ತನಕ... ಟೋಪಿ ಹಾಕುವವರು ಹಾಗೂ ಮೂರ್ಖರನ್ನಾಗಿ ಮಾಡುವ ಚಾಣಾಕ್ಷರು ಇದ್ದೇ ಇರುತ್ತಾರೆ....
ಚೀಟಿ ಹಾಕಿ ಮೋಸ ಹೋಗುವವರು, ಹಣ ಎರಡರಷ್ಟು ಮಾಡುವ ಆಸೆಗೆ ಬಲಿಯಾಗುವವರು, ಮಾಯಾ ಮಾಟಗಳಿಂದ, ವಿಶೇಷ ಪೂಜೆಗಳಿಂದ ಹಣ ಮಾಡುವ ಆಸೆಯಿಂದ, ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಪೂಜೆಗಿಟ್ಟು ಕಳೆದುಕೊಳ್ಳುವವರು ...ಇವರೆಲ್ಲರನ್ನು ಮರಳು ಮಾಡಿ, ಮೂರ್ಖರನ್ನಾಗಿಸುವ ಚಾಣಾಕ್ಷರು ತುಂಬ ಜನರಿದ್ದಾರೆ.
ಇನ್ನು ಮಾರಾಟದ ಆಫರ್ ಗಳ ಭರಾಟೆ ಹೇಳತಿರದು....80% ರಿಯಾಯಿತಿ ಕೊಡಬಲ್ಲರಾದರೆ... ಅವರ ಲಾಭದ ಭಾಗ ಎಷ್ಟಿರಬಹುದು ಊಹಿಸಿ.... ಇದು ಗ್ರಾಹಕರಿಗೆ ಹಾಕುವ ದೊಡ್ಡ ಟೋಪಿಯೇ ಸರಿ.
ಈಗಂತೂ ಎಲೆಕ್ಷನ್ ಕಾಲ... ರಾಜಕಾರಣಿಗಳಿಂದ ಭರ್ಜರಿ ಆಶ್ವಾಸನೆ.... ಕೆಲಸಲ ಅತಿರೇಕದ... ಕಾರ್ಯರೂಪಕ್ಕೆ ತರಲಾಗದ ಆಶ್ವಾಸನೆಗಳು ಸಹ ಬರುತ್ತದೆ... ಅದಕ್ಕೊಂದು ಉದಾಹರಣೆ ಮಾತಿನ ಭರದಲ್ಲಿ ಕೊಟ್ಟ..“ಬೆಂಗಳೂರಿನಲ್ಲೂ ಹಡಗು ಕಟ್ಟೆ ನಿರ್ಮಿಸುವ” ಆಶ್ವಾಸನೆ...
ಕೆಲ ಸರ್ಕಾರಿ ಕಾರ್ಯಕ್ರಮಗಳು ಏಪ್ರಿಲ್ 1 ರಂದು ಶುರುವಾಗುವ ಕಾರಣ... ಎಷ್ಟೋ ಸಲ ಅವುಗಳು ಹಾಸ್ಯಕ್ಕೆ ತುತ್ತಾಗಿರುವ ನಿದರ್ಶನಗಳು ಉಂಟು.
ಇನ್ನು ಮತದಾನ ಮಾಡದ ಕೆಲವರು... ಸಣ್ಣಪುಟ್ಟ ಆಮಿಷಕ್ಕೆ ಬಲಿಯಾಗಿ ಅನರ್ಹರಿಗೆ ಮತ ಕೊಡುವ ಕೆಲವರು... ಒಂದು ದಿವಸದ ಮೂರ್ಖತನದಿಂದಾಗಿ... ಮುಂದಿನ ಐದು ವರ್ಷ ಅದರ ಫಲವನ್ನು ಅನುಭವಿಸಬೇಕಾಗುತ್ತದೆ..... ಆಯ್ಕೆ ನಮ್ಮದು... ಸೂಕ್ತವಾಗಿ ವಿವೇಚನೆಯಿಂದ ಮತದಾನ ಮಾಡಿ ಮೂರ್ಖರಾಗುವುದನ್ನು ತಪ್ಪಿಸಿಕೊಳ್ಳೋಣ.
ಮೂರ್ಖರನ್ನಾಗಿಸುವ ಪರಿಪಾಠ ಪ್ರಾಚೀನ ಕಾಲದಿಂದಲೂ ಬಂದಿದೆ. ಮೋಹಿನಿ ಭಸ್ಮಾಸುರ ಕಥೆ ಇದಕ್ಕೊಂದು ಸೂಕ್ತ ಉದಾಹರಣೆ..... ಭಸ್ಮಾಸುರನ ವರವನ್ನೇ ಅವನಿಗೆ ಮುಳುವಾಗಿ ಮಾಡುವ ಸಂಮೋಹನ ಕ್ರಿಯೆ.... ಹಾಗೇ ಸಮುದ್ರ ಮಂಥನದ ಕಾಲದಲ್ಲಿ ಅಮೃತವು ರಾಕ್ಷಸರ ಕೈಗೆ ಸಿಗದೇ ಇರುವ ಹಾಗೆ ಕೈಚಳಕ ಮಾಡಿ... ರಾಕ್ಷಸರನ್ನು ಮೂರ್ಖರನ್ನಾಗಿ ಮಾಡಿದ್ದು ಸಹ ಮೋಹಿನಿಯೇ.
ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ
" ಇದನ್ನು ನೋಡಿದರೆ/ ಓದಿದರೆ ಶಾಕ್ ಆಗ್ತೀರಾ" ಎನ್ನುವ ಸಾಲನ್ನು ನೋಡಿ... ಅದನ್ನು ಓದಿ... ಅದೊಂದು ಲೊಳಲೊಟ್ಟೆ ಎಂದು ತಿಳಿದಾಗ ನಾನು ಮೂರ್ಖನಾಗಿದ್ದಿದೆ.
ಮೂರ್ಖನ ಜೊತೆ ವಾದ ಮಾಡಬೇಡ..... ಅವನು ನಿನ್ನನ್ನು ಅವನ ಮಟ್ಟಕ್ಕೆ ಇಳಿಸಿಬಿಡುತ್ತಾನೆ.... ಜೊತೆಗೆ ನೋಡುವವರಿಗೆ ಯಾರು ಮೂರ್ಖ ಎಂದು ತಿಳಿಯುವುದು ಕಷ್ಟ... ಇದು ತಿಳಿದವರು ಹೇಳಿದ ಮಾತು.
ನನ್ನಮ್ಮ " ಮೂರ್ಖ ಪಟ್ಟು ನಿಂದು ".... ಎಂದು ಬೈದದ್ದಿದೆ... ಯಾವಾಗಲಾದರೂ ನಾನು ನನ್ನದೇ ವಾದಕ್ಕೆ ಪಟ್ಟುಬಿಡದೆ ಗಟ್ಟಿಯಾಗಿ ನಿಂತಾಗ.
ಇನ್ನು mica (ಕಾಗೆ ಬಂಗಾರ) ವನ್ನು ಮೂರ್ಖರ ಚಿನ್ನ ಎಂದು ಕರೆಯುತ್ತಾರೆ.... ಕಾಗೆ ತನ್ನ ಗೂಡಿನಲ್ಲಿ ಇದನ್ನು ಸಂಗ್ರಹಿಸಿಡುತ್ತದೆ ಎನ್ನುವ ಮಾತುಂಟು.
ನಮ್ಮ ಸರ್ವಜ್ಞನ ವಚನ " ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು ಗೋರ್ಕಲ್ಲ ಮೇಲೆ ಮಳೆಗರೆದರಾಕಲ್ಲು ನೀರ್ಕೊಳ್ಳಬಹುದೇ.. ಸರ್ವಜ್ಞ"... ಎಷ್ಟು ಸಮಂಜಸ ಅಲ್ಲವೇ.
TV ಯನ್ನು ಮೂರ್ಖರ ಪೆಟ್ಟಿಗೆ ಎಂದೇ ಕರೆಯುತ್ತಾರೆ..... ಅದು ನಮ್ಮನ್ನು ಅಷ್ಟರಮಟ್ಟಿಗೆ ಆಳುತ್ತಿದೆ.
Fools build the house ...wise people live in it ಎನ್ನುವುದು ಒಂದು ಇಂಗ್ಲಿಷ್ ನಾಣ್ಣುಡಿ .... ಅದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಇರುವೆ ಕಟ್ಟಿದ ಹುತ್ತವನ್ನು ಹಾವು ಬಂದು ಆಕ್ರಮಿಸಿಕೊಂಡು ವಾಸಿಸುವುದು.
ಮನಸ್ಸಿನಲ್ಲಿ ಮಾಸದೇ ಉಳಿದಿರುವ ಒಂದು ಘಟನೆ..... ನನ್ನ ಗೆಳೆಯ ಮಂಜುನಾಥ... ಪ್ರತಿ ವರ್ಷವೂ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಜಾರಿಯಲ್ಲಿಟ್ಟಿದ್ದಾನೆ.... ಕೆಲಸಲ ಯಶಸ್ವಿಯೂ ಆಗಿದ್ದಾನೆ. ಒಂದು ವರ್ಷ ಅವರ ತಂದೆ ಅನಂತ ಸುಬ್ಬರಾಯರು( ಅವರ ಆರೋಗ್ಯ ಅಷ್ಟು ಸರಿ ಇರಲಿಲ್ಲ) ನನ್ನನ್ನು ನೋಡಬೇಕು ಎಂಬ ಒಂದು ಸಂದೇಶ ನನಗೆ ಬಂತು.... ಅನಂತ ಸುಬ್ಬರಾಯರ ಬಗ್ಗೆ ನನಗೆ ವಿಶೇಷ ಒಲವು... ಹಾಗಾಗಿ ತಕ್ಷಣ ಅವರ ಮನೆಗೆ ಹೋದೆ... ಮನೆ ಬೀಗ ಹಾಕಿತ್ತು... ಮತ್ತಷ್ಟು ಗಾಬರಿ.... ಫೋನ್ ಮಾಡಿದಾಗ ತಮಾಷೆಯ ಲಹರಿಯಲ್ಲಿದ್ದ ಮಂಜು... ತಿಳಿಸಿದ್ದು ಅದು ಏಪ್ರಿಲ್ ಫೂಲ್‌ನ ಆಟ ಎಂದು. ನಾನು ಮೂರ್ಖನಾದೆ ಅನ್ನಿಸಲಿಲ್ಲ... ಆದರೆ ಇದು ಒಂದು cruel joke ಅನ್ನಿಸಿದ್ದು ಸತ್ಯ. ಕೆಲಸಲ ಉತ್ಸಾಹದಲ್ಲಿ ಎಡವಟ್ಟುಗಳು ಆಗುವುದು ಸಾಮಾನ್ಯವೇ.
bloody fool ಎಂಬ ಬೈಗುಳ ಸಾಮಾನ್ಯವಾಗಿ ಕೇಳಿದ್ದೇವೆ... ರಕ್ತಗತವಾಗಿ ಬಂದ ಮೂರ್ಖತನ ಎನ್ನಬಹುದೇ?
ಗೊತ್ತಿದ್ದರೂ ಪೆದ್ದ ಕೆಲಸಮಾಡುವವನನ್ನು foolish fellow ಎನ್ನಬಹುದೇ?
living in fools paradise (ಮೂರ್ಖರ ಸ್ವರ್ಗದಲ್ಲಿ ವಾಸ ಎಂದು ಕನ್ನಡೀಕರಿಸಲೇ?)... ಅವಾಸ್ತವಿಕ ನೆಲೆಯಲ್ಲಿ.. ಕಲ್ಪನಾ ಲೋಕದಲ್ಲಿ ವಿಹರಿಸುವ ಆನಂದಿಸುವ ಒಂದು ಸ್ಥಿತಿ.... ಅಲ್ಲಿಂದ ವಾಸ್ತವಕ್ಕೆ ಬಂದು ಬೀಳಲೇಬೇಕಾದ ಅನಿವಾರ್ಯ ಇದ್ದೇ ಇದೆ...
ತಿರುಕನ ಕನಸು ಎಂಬ ಪದ್ಯದ ಕೊನೆಯ ಸಾಲುಗಳು " ಮುನಿದು ನೃಪರ ದಂಡು ಬಂದು ಮನೆಯ ಮುತ್ತಿದಂತೆ ಆಗಿ... ಕನಸು ಕಾಣುತ್ತಿದ್ದ ತಿರುಕ ಕಣ್ಣು ತೆರೆದನು" ಅರ್ಥಪೂರ್ಣವಾಗಿದೆ.
ವಾಸ್ತವಕ್ಕೆ ಬಂದರೆ ಇಂದು ಯುಗಾದಿ ಹಬ್ಬ... ಹೊಸ ವರ್ಷ, ಹೊಸ ಹರುಷ.. ಎಲ್ಲವೂ ಹೊಸತನದಿಂದ ಕೂಡಿ.... ಬೇವು ಬೆಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಸನ್ನು ದೇವರು ನಮಗೆಲ್ಲಾ ಕೊಡಲಿ ಎಂದು ಪ್ರಾರ್ಥಿಸುತ್ತಾ...
ನಿಮಗೆಲ್ಲರಿಗೂ ಕ್ರೋಧಿ ನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
DC Ranganatha Rao
9741128413
ಮೂರ್ಖರನ್ನು ಬಹು ಸುಂದರವಾಗಿ ಎಲ್ಲಾ ಆಯಾಮಗಳಿಂದ ಚಿತ್ರಿಸಿದ್ದೀರಿ.ಧನ್ಯವಾದಗಳು.
ReplyDeleteನಿಮ್ಮ ಬರಹ ಒಂದು ವಿಕಿಪಿಡಿಯಾ ಇದ್ದಂತೆ (ಅಂದರೆ ಸಮಗ್ರ ಮಾಹಿತಿಯ ಆಗರ)
ನಿಮ್ಮ ಲೇಖನಕ್ಕೆ ಈ ಮೂರ್ಖನದ್ದು ಎರಡು ಕೊಡುಗೆ. ದಯವಿಟ್ಟು ಒಪ್ಸಿಸಿ ಕೊಳ್ಳಿ.
*ಮೂರ್ಖರ ರಾಜ್ಯಕ್ಕೆ ಮುಠ್ಠಾಳನೆ ರಾಜನಂತೆ
**ಜಾಣನಿಗೆ ಕೆಲವು ಪ್ರಶ್ನೆಗಳಿರುತ್ತವೆ, ಬುದ್ಧಿವಂತನಿಗೂ ಸ್ವಲ್ಪ ಪ್ರಶ್ನೆಗಳಿರುತ್ತವೆ. ಆದರೆ
ಮೂರ್ಖನಿಗೆ ಪ್ರಶ್ನೆಗಳೇ ಇರುವುದಿಲ್ಲ. ಕಾರಣ ಅವನಿಗೆ ಎಲ್ಲವೂ ತಿಳಿದಿರುತ್ವದಂತೆ.
ವಂದನೆಗಳೊಂದಿಗೆ,
ಗುರುಪ್ರಸನ್ನ
ಚಿಂತಾಮಣಿ
💐👏
Deleteಮೂರ್ಖರ ದಿನಾಚರಣೆ- ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ನಾನು ಬಿ.ಎಸ್.ಸಿ ಕೃಷಿ ಓದುತ್ತಿದ್ದಾಗ ನನ್ನ ಸ್ನೇಹಿತ ರಾಮಾನಾಯ್ಕ(ಈಗ ವಿಧಿವಶರಾಗಿದ್ದಾರೆ) ಏಪ್ರಿಲ್ ಒಂದರಂದು ನನ್ನನ್ನು ಮೂರ್ಖನನ್ನಾಗಿ ಮಾಡಿದ್ದು ಇನ್ನೂ ನೆನಪಿದೆ.ಇತ್ತೀಚಿನ ದಿನಗಳಲ್ಲಿ ವರ್ಷವಿಡೀ ಜನರನ್ನು/ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುವ ಪ್ರಕ್ರಿಯೆಯು ಅ ನೇಕ ಉದಾಹರಣೆ ಮೂಲಕ ವಿವರಣೆ ನೀಡಿದ್ದೀರಿ.ಅಂತಹ ಸಂದರ್ಭಗಳಲ್ಲಿ ಮೂರ್ಖರಾಗಬೇಡಿ ಎಂಬುದು ಮುಖ್ಯ ಸಂದೇಶವಾಗಿದೆ.ಮತ್ತೊಮ್ಮೆ ಧನ್ಯವಾದಗಳು.ದೇವೇಂದ್ರಪ್ಪ ಬೆಂಗಳೂರು
ReplyDelete