ಕೃತಜ್ಞತೆ - ತೃಪ್ತಿ - ಅಭಿಲಾಷೆ
ದೇವ ನಿನ್ನ ರಾಜ್ಯದ ನ್ಯಾಯವಿದೇನಾ?
ಲೋಕಕೆಲ್ಲ ಒಬ್ಬ ಸೂರ್ಯ ಒಬ್ಬನೇ ಚಂದಿರ
ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ,
ಆದರೇನು ಜಗದಲಿ ಭೇದ ಭಾವನಾ, ಈ ಭೇದ ಭಾವನಾ...
ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಹಾಡು. ಹೌದು... ಮನುಕುಲಕ್ಕೆಲ್ಲ ಇರುವುದು ಒಂದು ಭೂಮಿ, ಒಂದು ಆಕಾಶ, ಒಂದು ಸೂರ್ಯ, ದಿನದಲ್ಲಿ 24 ಗಂಟೆ... ಇದರಲ್ಲಿ ಭೇದ ಭಾವವಿಲ್ಲ... ಆದರೆ ಮನುಷ್ಯನ ಬೆಳವಣಿಗೆ ....ಎಲ್ಲರದೂ ಒಂದೇ ರೀತಿ ಇರುವುದಿಲ್ಲ... ಸಾಕಷ್ಟು ವ್ಯತ್ಯಾಸಗಳು... ಅಜಗಜಾಂತರ...
ಇದು ಯಾಕಿರಬಹುದೆಂದು ಯೋಚಿಸಿದಾಗ ಅನಿಸಿದ್ದು.... ಸಮಾನ ಅವಕಾಶಗಳಿದ್ದಾಗಲೂ ಸಹ ...ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಅವರವರ ಬೆಳವಣಿಗೆ. ಒಂದೇ ಸಾಮರ್ಥ್ಯ ಇರುವಂತಹ ವ್ಯಕ್ತಿಗಳಲ್ಲೂ ಸಹ.. ಬೆಳವಣಿಗೆಗಳು ವ್ಯತ್ಯಾಸವಾಗಬಹುದು... ಇದಕ್ಕೆ ಕಾರಣ ಅದೃಷ್ಟ ಎನ್ನಬಹುದೇ? ಅಥವಾ ಕಾಣದ ಕೈಗಳ ಪ್ರಭಾವವೇ?
ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ...ನಿನ್ನ ಕೆಲಸ ನೀ ಮಾಡು....ಫಲಾಫಲಗಳು ನಿನ್ನ ಭಾಗ್ಯದಂತೆ.....ಅಂದರೆ ಬಂದ ಫಲವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದು ನೆಮ್ಮದಿಯ ಜೀವನದ ಲಕ್ಷಣ. ಇದನ್ನೇ ಇದ್ದುದರಲ್ಲಿ ತೃಪ್ತಿ ಹೊಂದುವುದು ಎನ್ನುವುದು.
ಇದು ಸಾಧ್ಯವಾಗದಿದ್ದಾಗ... ಬೇರೆಯವರಲ್ಲಿರುವುದನ್ನು... ನೋಡಿ ನನಗಿಲ್ಲ ಎಂದು ಹಳಹಳಿಸುವುದು... ನಮ್ಮ ಜೀವನ ಶೈಲಿಯನ್ನೇ ತಲೆಕೆಳಗು ಮಾಡುತ್ತದೆ. ಇಲ್ಲಿ ಋಣಾತ್ಮಕ ಭಾವನೆಗಳು ಹೆಚ್ಚಾಗಿ ಕೆಲಸ ಮಾಡುತ್ತವೆ. ಅಚ್ಚ ಬಿಳಿ ಬಟ್ಟೆಯ ಮೇಲೆ ಇರುವ ಕಪ್ಪು ಚುಕ್ಕೆಯನ್ನು ನೋಡಿ ಅದನ್ನೇ ಎತ್ತಿ ತೋರಿಸುವಂತಹ ಮನಸ್ಸು. "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂಬ ಅಡಿಗರ ಪದ್ಯದ ಸಾಲುಗಳಂತೆ.... ಎಷ್ಟಿದ್ದರೂ ತೃಪ್ತಿ ಇಲ್ಲದಿದ್ದರೆ ಅಶಾಂತಿಯೇ.
ಇನ್ನೊಂದು ಮಾತಿದೆ “ತೃಪ್ತಿಯಿಂದ ಇರುವುದು" ಎನ್ನುವುದು ತುಂಬಾ ಕಷ್ಟ ಸಾಧ್ಯವಾದ ಮಾನಸಿಕ ಸ್ಥಿತಿ. ಅದು ಕ್ಷಣಿಕ. ಮನುಷ್ಯನನ್ನು ಕೆಲ ಸಮಯದ ಮಟ್ಟಿಗಾದರೂ ತೃಪ್ತಿಯ ಸ್ಥಿತಿಗೆ ತೆಗೆದುಕೊಂಡು ಹೋಗುವುದು ಊಟ ಮಾತ್ರ... ಹೊಟ್ಟೆ ತುಂಬಿದಾಗ ಸಾಕು ಎನ್ನುವ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಮತ್ತೆ ಬೇಕು ಎನ್ನುತ್ತಾನೆ. ಬೇರಾವ ಐಹಿಕ ವಸ್ತುಗಳೂ ಭೋಗ ಭಾಗ್ಯಗಳೂ ಸಾಮಾನ್ಯ ಮನುಷ್ಯನಿಗೆ ಈ ತೃಪ್ತಿಯನ್ನು ನೀಡಲಾರವು.
ನಮಗೆ ಇರುವುದನ್ನೆಲ್ಲ ಗುರುತಿಸಿಕೊಂಡು... ಅದರಲ್ಲೂ ನಮಗಿಂತ ಹೀನಾಯ ಸ್ಥಿತಿಯಲ್ಲಿರುವವರನ್ನು ನೋಡಿ... ನಾವೆಷ್ಟು ಅದೃಷ್ಟವಂತರು ಎಂದುಕೊಳ್ಳುವ ಮನೋಭಾವದಿಂದ....( ಚಪ್ಪಲಿ ಇಲ್ಲದೆ ಕೊರಗುವ ವ್ಯಕ್ತಿ ಕಾಲಿಲ್ಲದವನನ್ನು ನೋಡಿ... ಓ ದೇವರೇ ಧನ್ಯವಾದ ಎಂದು ಹೇಳಲು ಸಾಧ್ಯವಾದರೆ) ಅದು ಕೊಟ್ಟ ಆ ಕಾಣದ ಕೈಗೆ ಧನ್ಯವಾದ ಹೇಳುವುದೇ ಕೃತಜ್ಞತೆ. ನಿಜವಾಗಲೂ ಕೃತಜ್ಞತೆ ಸಲ್ಲಬೇಕಾದದ್ದು ಪ್ರತ್ಯಕ್ಷ ದೇವರುಗಳಾದ ಅಪ್ಪ ಅಮ್ಮ, ಗುರುಗಳು ಹಾಗೂ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಹಿತೈಷಿಗಳಿಗೆ.
ಇತ್ತೀಚೆಗೆ ನಾನು ಕಂಡ ಕೃತಜ್ಞತಾ ಸಮರ್ಪಣೆಯ ಒಂದು ವಿಶಿಷ್ಟ ಉದಾಹರಣೆ.
ನಾನು ಸ್ವಲ್ಪ ಒಡನಾಟ ಇಟ್ಟುಕೊಂಡಿರುವ ಸ್ನೇಹ ಸೇವಾ ಟ್ರಸ್ಟ್ ಒಂದು ಸೇವಾ ಸಂಸ್ಥೆ... ಅದು ಆರ್ಥಿಕವಾಗಿ ಹಿಂದುಳಿದಿರುವ ಅರ್ಹ ವಿದ್ಯಾರ್ಥಿಗಳಿಗೆ ಓದಲು ಎಲ್ಲ ರೀತಿಯ ನೆರವು ನೀಡುತ್ತಿದೆ. ಅದರಲ್ಲಿ ಇಂಜಿನಿಯರಾದವರಿದ್ದಾರೆ, ಇನ್ನೇನು ಡಾಕ್ಟರ್ ಆಗಿ ಹೊರಬರುವ ಹೆಣ್ಣುಮಗಳಿದ್ದಾಳೆ, ಪದವಿಗಳಿಸಿದ ಮಕ್ಕಳು ಸಾಕಷ್ಟು ಜನರಿದ್ದಾರೆ. ಅಂತಹ ಒಬ್ಬ ಹುಡುಗ.. ಹೆಸರು ಮಲ್ಲಿಕಾರ್ಜುನ... ಇಂಜಿನಿಯರ್ ಆದವನು... ಕೆಲಸಕ್ಕೆ ಸೇರಿದ ನಂತರ ತನ್ನ ಒಂದು ತಿಂಗಳ ಸಂಬಳವನ್ನು ಟ್ರಸ್ಟ್ ಗೆ ಕೊಟ್ಟಿದ್ದಾನೆ... ನನಗೆ ಇದು ತುಂಬಾ ಮೆಚ್ಚುಗೆಯಾದ ಸಂಗತಿ.... ಇದಲ್ಲವೇ ಕೃತಜ್ಞತೆ ಎಂದರೆ.... ಮತ್ತಷ್ಟು ಮಕ್ಕಳಿಗೆ ಅದರಿಂದ ಅನುಕೂಲವಾಗಲಿದೆ.
ಕೃತಜ್ಞತೆ ಎನ್ನುವುದು.. ನಾವು ಪಡೆದ ಸಂತೋಷದ ಕ್ಷಣಗಳಿಗೆ / ಅನುಭವಗಳಿಗೆ... ಮನಃಪೂರ್ವಕವಾಗಿ , ವಿನೀತ ಭಾವದಿಂದ ಅರ್ಪಿಸುವ ಧನ್ಯವಾದ ಎಂದು ನನ್ನ ನಂಬಿಕೆ.
ಕೃತಜ್ಞತೆ ಎನ್ನುವುದು ಸಾಲದ ವ್ಯಾಪಾರವಲ್ಲ... ಅದು ಆಗಾಗಲೇ ಚುಕ್ತ ಮಾಡಬೇಕಾದಂತ ವ್ಯವಹಾರ. ಹಾಗಾಗಿ ನಮ್ಮ ಕೃತಜ್ಞತೆಯನ್ನು ತತ್ ಕ್ಷಣ ವ್ಯಕ್ತಪಡಿಸಬೇಕಾದದ್ದು ಧರ್ಮ... ಮರೆತರೆ ನಾವು ಕೃತಘ್ನರಾಗುತ್ತೇವೆ. ಕೆಲವರು ಹೇಳುವ " ಚಿರಋಣಿ" " ಜೀವ ಇರುವವರೆಗೂ ಮರೆಯುವುದಿಲ್ಲ" ಹಾಗೂ " ಜೀವನಪರ್ಯಂತ ಆಭಾರಿಯಾಗಿರುತ್ತೇವೆ"... ಸ್ವಲ್ಪ ಉತ್ಪ್ರೇಕ್ಷೆಯಾದರೂ... ಪಡೆದ ಸಹಾಯದ ಅಘಾದತೆಯನ್ನು ಎತ್ತಿ ಹಿಡಿಯುತ್ತದೆ.
ಇನ್ನು ತೃಪ್ತಿಯಿಂದ ಇರಬೇಕೆನ್ನುವುದು ಮುಖ್ಯ ಎನಿಸಿದರೂ ಸಹ..... ಜೀವನಕ್ಕೆ ಗುರಿ ಬೇಕು ಅದಕ್ಕಾಗಿ ಆಸೆಗಳು , ಅಶೋತ್ತರಗಳು, ಅಭಿಲಾಷೆಗಳು ಇರಲೇಬೇಕು... ಇಲ್ಲದಿದ್ದರೆ ಜೀವನ ಸತ್ವಹೀನ ಹಾಗೂ ನಿಸ್ಸಾರವಾದೀತು. ಆದರೆ ನಮ್ಮ ಆಸೆಗಳು ನಮ್ಮ ಶೈಕ್ಷಣಿಕ, ವ್ಯವಹಾರಿಕ ಹಾಗೂ ವಾಸ್ತವಿಕ ಶಕ್ತಿಗಳಿಗೆ ಹತ್ತಿರವಾದಂತ ಮಿತಿಯಲ್ಲಿದ್ದರೆ... ಸಾಧಿಸಲು ಅನುಕೂಲ... ಹಾಗೂ ಅದಕ್ಕೆ ಪೂರಕವಾದ ಸತತ ಪ್ರಯತ್ನ ಮತ್ತು ನಮ್ಮ ಗುರಿಯಡೆಗೆ ಕೇಂದ್ರೀಕೃತ ಲಕ್ಷ್ಯ ಇದ್ದಲ್ಲಿ ಯಶಸ್ಸು ಖಂಡಿತ. ಅದಿಲ್ಲದೆ...ನಕ್ಷತ್ರಕ್ಕೆ ಕೈಚಾಚಿದರೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕೆ ಬುದ್ಧ ಹೇಳಿದ್ದು ಆಸೆಯೇ ದುಃಖಕ್ಕೆ ಕಾರಣ.... ಆದರೆ ಈಗಿನ ಕಾಲಮಾನಕ್ಕೆ ಅದನ್ನು "ದುರಾಸೆಯೇ ದುಃಖಕ್ಕೆ ಕಾರಣ " ಎಂದು ಬದಲಾಯಿಸಬೇಕೆನ್ನುವ ಅಭಿಮತ ನನ್ನದು.
ಇಲ್ಲಿ SWOT analysis ಬಗ್ಗೆ ಎರಡು ಮಾತು... ಇದು ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ನಾವೇ ಅಳೆಯುವ ಸಾಧನ. ನಮ್ಮಲ್ಲಿರುವ
S - strength ..ಶಕ್ತಿ
W- weakness.. ದೌರ್ಬಲ್ಯಗಳು
O- opportunity .. ಅವಕಾಶಗಳು ... ಹಾಗೂ
T- threats.. ಸವಾಲುಗಳು... ಜೊತೆಗೆ time ...ಇರುವ ಕಾಲಾವಕಾಶ.
ಇದರ ವಿಶ್ಲೇಷಣೆ ...ನಾವು ಗುರಿಯನ್ನು ತಲುಪಲು ಬೇಕಾದ ಎಲ್ಲ ವಿಶೇಷ ಪರಿಣತಿಗಳನ್ನು ಗುರುತಿಸಿಕೊಡುತ್ತದೆ.
ಸುತ್ತು ಬಳಸು ಮಾತೇಕೆ.... ಇಷ್ಟೆಲ್ಲಾ ಬರೆಯಲು ಕಾರಣ ನಾನು ತಡ ಮಾಡದೆ ಸಲ್ಲಿಸಬೇಕಾದ ಕೃತಜ್ಞತೆಗೆ ಸೋಪಾನ. ಇದು ನನ್ನ 75 ನೇ ಬ್ಲಾಗ್. 48 ರಲ್ಲಿ ನಾನು ನಿಂತು ನನ್ನ ಅಳಲನ್ನು ನಿಮ್ಮಲ್ಲಿ ತೋಡಿಕೊಂಡಾಗ ನೀವೆಲ್ಲಾ ನನ್ನ ಬೆನ್ನು ತಟ್ಟಿ ಮುನ್ನಡೆಯಲು ಪ್ರೋತ್ಸಾಹಿಸಿ... ವಿಶ್ವಾಸವನ್ನು ತುಂಬಿದ್ದೀರಾ... ಹಾಗಾಗಿ ಇಷ್ಟು ಬೇಗ ಈ ಘಟ್ಟವನ್ನು ಮುಟ್ಟಲು ಸಾಧ್ಯವಾಯಿತು.... ನಿಮ್ಮೆಲ್ಲರಿಗಲ್ಲದೆ ಬೇರೆ ಯಾರಿಗೆ ಸಲ್ಲಬೇಕು ನನ್ನ ಈ ಕೃತಜ್ಞತಾ ಪೂರ್ವಕ ನಮಸ್ಕಾರಗಳು... ನೀವೇ ಅತಿ ಅರ್ಹರು. ಈ ಘಟ್ಟದಲ್ಲಿ ಓದುಗರ ಸಂಖ್ಯೆಯೂ ಜಾಸ್ತಿಯಾಯಿತು... ಜೊತೆ ಜೊತೆಗೆ ನಿಮ್ಮ ಅಭಿಪ್ರಾಯಗಳು, ಸಲಹೆಗಳು ನನಗೆ ನನ್ನ ಮೇಲಿನ ವಿಶ್ವಾಸವನ್ನು ವೃದ್ಧಿಸಿತು.
ಹೃದಯ ತುಂಬಿ ಬಂದಿದೆ.... ಈ ಸಮಯದಲ್ಲಿ ಮಾತುಗಳು ಹೊರಡದು....
ವೈಯುಕ್ತಿಕವಾಗಿ ನನ್ನೊಡನೆ ಮಾತನಾಡಿ, ಫೇಸ್ಬುಕ್ ವಾಟ್ಸಪ್ ಗಳಲ್ಲಿ ಮೆಚ್ಚುಗೆ ಸೂಚಿಸಿ, ಬ್ಲಾಗ್ ನಲ್ಲೆ ಅಭಿಪ್ರಾಯಗಳನ್ನು ಬರೆದು ಪ್ರೋತ್ಸಾಹಿಸಿದ ಎಲ್ಲರಿಗೂ... ಏನೂ ಬರೆಯದೆ ಓದಿದವರಿಗೂ ನನ್ನ ಹೃತ್ಪೂರ್ವಕ ನಮನಗಳು.
ಒಂದು ಸಣ್ಣ ಕೊರತೆ..... ಬ್ಲಾಗ್ ನಲ್ಲಿ ಅಭಿಪ್ರಾಯಗಳನ್ನು ಬರೆದ ಕೆಲವರು ತಮ್ಮ ಹೆಸರನ್ನು ಸೂಚಿಸಿಲ್ಲ. ದಯಮಾಡಿ ನಿಮ್ಮ ಹೆಸರನ್ನು ಸೂಚಿಸಿ... ಅದು ನನಗೆ ಬಹಳ ಖುಷಿಕೊಡುತ್ತದೆ.
ಇಷ್ಟು ದಿನ ಬರೆದಿದ್ದರಲ್ಲಿ ನನ್ನ ಮಟ್ಟಿಗೆ ತೃಪ್ತಿಯಿದೆ, ನಿಮ್ಮೆಲ್ಲರ ಬೆನ್ನು ತಟ್ಟುವಿಕೆಗೆ ಕೃತಜ್ಞತಾ ಭಾವವಿದೆ... ಹಾಗೂ ಇದನ್ನು ಬಿಡದೆ ಮುಂದುವರಿಸಬೇಕು ಎಂಬ ಅಭಿಲಾಷೆಯೂ ಇದೆ.
ಅಭಿಲಾಷೆ ಎಂಬ ಪದದ ಮೇಲೆ ನನಗೊಂದಿಷ್ಟು ವ್ಯಾಮೋಹವಿದೆ.... ನಾನು ನಡೆಸುತ್ತಿದ್ದ ಸಣ್ಣ ಕಾರ್ಖಾನೆಯ ಹೆಸರು " ಅಭಿಲಾಷಾ ಇಂಜಿನಿಯರಿಂಗ್".... ಮಾಡಬಹುದಾದ ಕೆಲಸಗಳನ್ನು ಹೇಳುವಾಗ... ತಮಾಷೆಯಾಗಿ .... ಅಭಿಲಾಷಾದಲ್ಲಿ ಏನು ಮಾಡಬಹುದು ಎಂದರೆ... ಕನ್ನಡದ ವರ್ಣಮಾಲೆ ಅ ಇಂದ ಶುರುವಾಗಿ ಷ ದವರೆಗೆ ಎಲ್ಲವೂ.... ಸಹ....ಆದರೆ ಸ ಹ ಳ ಮಾತ್ರ ಹೊರತು.
ದೇವರು ತುಂಬ ದಯಾ ಮಯ.... ಇಷ್ಟು ಸುದೀರ್ಘ ಜೀವನದಲ್ಲಿ... ಎಷ್ಟು ಜನರ ಮೂಲಕ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ಹಾಗೂ ನೆರವು.... ಕಲ್ಪಿಸಿಕೊಟ್ಟಿದ್ದಾನೆ.. ಸಾಧ್ಯವಾದಾಗಲೆಲ್ಲ ನಾನು ಆ ಮಹನೀಯರನ್ನು, ನೆನೆಯುತ್ತೇನೆ... ಮನಸ್ಸಿನಲ್ಲಿ ವಂದಿಸುತ್ತೇನೆ... ಹಾಗೂ ಅದೇ ಮನಸ್ಸಿನಿಂದ ಆ ದೇವರಿಗೂ ಕೃತಜ್ಞತೆ ಸಲ್ಲಿಸುತ್ತಲೇ ಇರುತ್ತೇನೆ... ಅದು ಬಹುಶಃ ನನ್ನ ಜೀವನದ ಭಾಗವೇ ಆಗಿದೆ ಎಂದರೂ ಸರಿಯೇ...
ನೋಡೋಣ...... ಮುಂದಿನ ದಿನಗಳು.. ಚೆನ್ನಿರಲಿ ಎಂಬ ಆಶಾಭಾವನೆಯೊಂದಿಗೆ....
ಈ ಲೇಖನಕ್ಕೆ ಪೂರ್ಣವಿರಾಮ ಹಾಕುತ್ತೇನೆ.
ನಮಸ್ಕಾರ.
ಜೀವನದ ಹಾಸುಹೊಕ್ಕಾಗಿರುವ ದ್ವಂದ್ವಗಳನ್ನು ಬಹಳ ಚೆನ್ನಾಗಿ ನಿ ಚಿಕ್ಕಪ್ಪ, ಆಸೆ ಹಾಗೂ ಅಭಿಲಾಷೆ ಇವುಗಳ ನಡುವೆ ಇರುವ ಒಂದು ಸಣ್ಣ ಅಂತರ ಅರ್ಥವಾದರೆ ಬಹಳ ಚೆನ್ನು ಆದರೆ ವಿಪರ್ಯಾಸ ಅದು ಬಹಳ ಕಷ್ಟದ ಕೆಲಸ ಅಲ್ಲವೇ - ಅನು
ReplyDeleteನನ್ನ ಅಭಿಲಾಷೆ ಸಹ ಅದೇ.ನಿನ್ನ ಜೀವನಾನುಭವದ ಫಲ ಓದುಗರಿಗೆ ಸಿಗಲಿ.ಭಾವಪೂರ್ಣಲೇಖನ ಮನಸ್ಸಿಗೆ ಮುದವನ್ನು ಕೊಟ್ಟಿತು.-ಜಯಸಿಂಹ
ReplyDeleteತಮ್ಮ ಕೃತಜ್ಞತೆ-ತೃಪ್ತಿ- ಅಭಿಲಾಷೆ .ಶೀರ್ಷಿಕೆಯು ಅನೇಕ ಉತ್ತಮ ಅಂಶಗಳನ್ನು ಒಳಗೊಂಡಿದೆ.ತಮಗೆ ಧನ್ಯವಾದಗಳು.ಕೃತಜ್ಞತೆ ಯಲ್ಲಿ ಸ್ನೇಹ ಸೇವಾ ಟ್ರಸ್ಟಿನ ಮಲ್ಲಿಕಾರ್ಜುನ ಇವರು ತಮ್ಮ ಮೊದಲ ತಿಂಗಳ ಸಂಬಳವನ್ನು ಟ್ರಸ್ಟಿಗೆ ಕೊಟ್ಟಿರುವುದು ಉತ್ತಮ ಮಾದರಿಯಾಗಿದೆ ಹಾಗೂ ತಮ್ಮ ಬ್ಲಾಗ್ ಲೇಖನಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿರುವುದು ಎಲ್ಲರೂ ಅರಿತುಕೊಳ್ಳಬೇಕಾದ ಅಂಶವಾಗಿದೆ.ತೃಪ್ತಿಯಲ್ಲಿ ಇದ್ದುದರಲ್ಲೇ ತೃಪ್ತಿ ಪಡುವುದು ಹಾಗೂ ಬೇರೆಯವರಿಗೆ ಹೋಲಿಸದೇ ನೆಮ್ಮದಿಯಿಂದ ಬದುಕುವುದು ಇವು ಉತ್ತಮ ಅಂಶಗಳಾಗಿವೆ.ತಾವುSWOT ಬಗ್ಗೆ ತಿಳಿಸಿರುವುದೂ ಉತ್ತಮ ಅಂಶವಾಗಿದೆ.ಒಟ್ಟಾರೆ ಕೃತಜ್ಞತೆ ಸಲ್ಲಿಸುವುದು ಹಾಗೂ ಇದ್ದುದರಲ್ಲೇ ತೃಪ್ತಿ ಪಡುವುದು ಇವು ಮುಖ್ಯ ಸಂದೇಶಗಳಾಗಿವೆ.ಮತ್ತೊಮ್ಮೆ ಧನ್ಯವಾದಗಳು ಸರ್. ದೇವೇಂದ್ರಪ್ಪ
ReplyDeleteಈ ಬಾರಿ ಒಮ್ಮೆಗೆ ಮೂರು ವಿಷಯಗಳನ್ನು ಆಯ್ದುಕೊಂಡಿರುವುದು ಅಭಿನಂದನಾರ್ಹ. ಈ ಮೂರು ವಿಷಯಗಳನ್ನು ಒಂದು ಕಂಡಿಕೆಯಲ್ಲಿ ನಮೂದಿಸಿರುವುದು ನಿಮ್ಮ ನಿರೂಪಣಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ReplyDeleteSWOT ಪದದ ವಿಶ್ಲೇಷಣೆ ಸೊಗಸಾಗಿದೆ. ಅಂತೆಯೇ ಅಭಿಲಾಷೆಯ ಒಳಾರ್ಥವು ಆಕರ್ಷಕವಾಗಿದೆ.
ನೀವು ಬರೆದು ಬೆಳೆದರೆ, ನಾವುಗಳು ಅದನ್ನು ಓದಿ ಬೆಳೆಯುತ್ತಿದ್ದೇವೆಯೆಂದರೆ ಅತಿಶಯೋಕ್ತಿಯೇನಲ್ಲ. ಕಾರಣ ನಿಮ್ಮ ಅನುಭವ,ಅನುಭಾವ ಚೆನ್ನಾಗಿದೆ. ಹೀಗಾಗಿ ನಮಗೂ ಜೀವನದ ನೈಜ ದರ್ಶನವಾಗುತ್ತಿದೆ.
ದೋಣಿ ಸಾಗಲಿ,ಮುಂದೆ ಹೋಗಲಿ, ದೂರ ತೀರವ ಸೇರಲಿ ಎಂದು ನಿಮ್ಮನ್ನು ಪ್ರೋತ್ಸಾಹಿಸುವುದೇ ನಮ್ಮ ಹೆಮ್ಮೆಯಾಗಿದೆ.
ಆದರಗಳೊಡನೆ,
ಗುರುಪ್ರಸನ್ನ
ಚಿಂತಾಮಣಿ
ನಿಜ ಜೀವನದ ದ್ವಂದ್ವಗಳು, ತೃಪ್ತಿಯ ಮಹತ್ವ, ಆಸೆ-ಅಭಿಲಾಷೆಗಳ ನಡುವಣ ಅಂತರ, ಕೃತಜ್ಞತೆಯ ರೀತಿನೀತಿಗಳು ಎಲ್ಲವನ್ನೂ ಚಿಕ್ಕದಾಗಿ ಚೊಕ್ಕವಾಗಿ ತಿಳಿಸಿ ಕೊಟ್ಟು ಅದರೊಂದಿಗೇ SWOT ವಿಷಯದ ಅರ್ಥವನ್ನೂ ತಳಿಸಿಕೊಡುವ ನಿಮ್ಮ
ReplyDeleteಅದ್ಭುತವಾದ ಲೇಖನ, ಅದರ ಓಟ ಒಂದು ಮಾದರಿಯೇ ಆಗಿದೆ.