ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರ
22.01.2024 ಈ ದಿನ ಮುಂದಿನ ಪೀಳಿಗೆಯವರಿಗೆ ಚರಿತ್ರೆಯಲ್ಲಿ ಇರಬಹುದಾದಂತ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ನಾವು ಈ ದಿನದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿಯಾದರೂ ಭಾಗವಹಿಸಿದ್ದೇವೆಂಬ ಹೆಮ್ಮೆ ಪಡ ಬಹುದಾದಂತಹ ಜನ.
ಎಲ್ಲೆಲ್ಲೂ ಜೈ ಶ್ರೀ ರಾಮ್ ಎಂಬ ಘೋಷಣೆ... ಭಜನೆಗಳು ಅಲ್ಲಲ್ಲಿ... ಹೆಣ್ಣು ಗಂಡು ಎಂಬ ಭೇದವಿಲ್ಲದೆ...ಖುಷಿಯಿಂದ ಕುಣಿಯುತ್ತಿರುವ...ಜನತೆ.... ಕಾರ್ಯಕರ್ತರ ಓಡಾಟ, ಮಾಧ್ಯಮದವರ ಉತ್ಸಾಹ.. ಎಲ್ಲದರ ನೋಟ ದೂರದರ್ಶನದಲ್ಲಿ ನೋಡಿ ಪುಳಕಗೊಂಡ ನಾವು.... ಇನ್ನು ಅಲ್ಲಿಗೇ ಹೋಗಿ ಸಂಭ್ರಮದಲ್ಲಿ ಪಾಲ್ಗೊಂಡವರ ಮನಸ್ಸಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಮೈ ನವಿರೇಳುತ್ತದೆ.
90 ವರ್ಷ ಮೀರಿದ ಕೆ.ಪರಾಶನ್ ಅವರನ್ನು ಕಂಡಾಗ ಭಕ್ತಿ ಭಾವ ಉಕ್ಕಿ ಬಂತು... ನ್ಯಾಯಾಲಯದಲ್ಲಿ ರಾಮನ ಪರವಾಗಿ ವಾದ ಮಂಡಿಸುವಾಗ ಬರಿಗಾಲಲ್ಲಿ ನಿಂತು ವಾದ ಮಾಡಿದ್ದನ್ನು ಕೇಳಿ ತಿಳಿದಿದ್ದೆ...ಎಂಥಾ ನಿಷ್ಟೆ..
ಮತ್ತೊಂದು ಮನಕರಗುವ ದೃಶ್ಯ... ರಾಮಮಂದಿರಕ್ಕಾಗಿ ಗುಂಡೇಟು ತಿಂದು ಬಲಿದಾನ ಮಾಡಿದ ರಾಮ್ ಕೊಠಾರಿ ಹಾಗೂ ಶರತ್ ಕೊಠಾರಿ ( ಇಬ್ಬರು 18... 20 ವರ್ಷದ ಅಣ್ಣ ತಮ್ಮಂದಿರು) ಇವರ ಅಕ್ಕ ಮಾತನಾಡಿದ ಪರಿ.
ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ ಭಕ್ತಿ ಎಷ್ಟು ಹೇಳಿದರೂ ಕಮ್ಮಿಯೇ ...ತುಂಬಾ ಮೆಚ್ಚುಗೆ ಆಯ್ತು...
ಎಲ್ಲವನ್ನೂ ಹೇಳಲು ನೆನಪಿಗೆ ಬಾರದು... ಸ್ಥಳವೂ ಸಾಲದು... ಆದರೆ ಸುಮಾರು ಐದು ಗಂಟೆಗಳ ಕಾಲ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಭಾವಪರವಶನಾಗಿ ಮುಳುಗಿದ್ದು ಮಾತ್ರ ಸತ್ಯ. ಶತಮಾನಗಳ ಕಾಲ ಹೋರಾಟ ಮಾಡಿ ಕೊನೆಗೂ... ರಾಮ ಮಂದಿರ ನಿರ್ಮಾಣ, ಬಾಲರಾಮನ ಪ್ರತಿಷ್ಠಾಪನೆ ಇದನ್ನು ಕಾಣುವ ಭಾಗ್ಯ ನಮ್ಮದು.... ಆದರೆ ಈ ಹೋರಾಟದಲ್ಲಿ ಪಾಲ್ಗೊಂಡ, ಯೋಗದಾನ ನೀಡಿದ, ಬಲಿದಾನ ಮಾಡಿದ... ನಮ್ಮ ಜೊತೆಯಲ್ಲಿ ಈಗಿಲ್ಲದ ಆ ಲಕ್ಷಾಂತರ ಚೇತನಗಳ ಋಣ ತೀರಿಸಲು ಸಾಧ್ಯವೇ.... ನಾನು ಮಾಡ ಬಹುದಾದದ್ದು ಒಂದು ಹೃದಯ ಪೂರ್ವಕ ನಮಸ್ಕಾರ ಮಾತ್ರ.
ನನ್ನ ವೈಯುಕ್ತಿಕ ನೆಲೆಯಲ್ಲಿ. ...ಎದ್ದಾಗಿನಿಂದ ಏನೋ ಸಂಭ್ರಮ. ...ಎಲ್ಲ ಕೆಲಸ ಮುಗಿಸಿ ಬೇಗ ಬಂದು TV ಮುಂದೆ ಕೂಡಬೇಕೆಂದು ಯೋಜನೆ. ಎಂದಿನಂತೆ key board ಮುಂದೆ ಕೂತಾಗ.. ರಾಮನ ಪ್ರೇರಣೆಯಿಂದ... ಅವನ ಮೇಲಿನ ಸುಮಾರು 15 ಹಾಡುಗಳನ್ನು ನುಡಿಸಿ ಸಮರ್ಪಿಸಿದ್ದೇನೆ... ನಾನು ಸುಮಾರು 9 ವರ್ಷಗಳಿಂದ ಕಲಿತದ್ದನ್ನು ಮೊದಲ ಬಾರಿಗೆ ಹೀಗೆ ಮಾಡಿದ್ದು..... ಏನೋ ಸಂತೃಪ್ತಿ.
ಎಲ್ಲ ಮುಗಿದು... ಇಂದಿಗಾಗಿ ಮಾಡಿದ್ದ ಸಿಹಿಯನ್ನು ತಿಂದು... ಟಿವಿಯಲ್ಲಿ ನೋಡಿದ ದೃಶ್ಯಗಳನ್ನು ಮೆಲುಕು ಹಾಕುತ್ತಾ ಕೂತಾಗ... ಮನಸ್ಸಿಗೆ ಬಂದದ್ದೇ ಶ್ರೀ ರಾಮನ ಪ್ರಭಾವ ನಮ್ಮ ಮೇಲೆ ಹೇಗೆ ಬೀರಿದೆ ಎನ್ನುವ ವಿಚಾರ... ಇದೋ ನಿಮ್ಮ ಮುಂದೆ...
ನಮಗೆ ಅರಿವು ಮೂಡುವ ಮೊದಲೇ.... ಬಹುಶಃ ಎರಡು ಮೂರು ತಿಂಗಳ ವಯಸ್ಸಿನಲ್ಲಿ... ಕಣ್ಣಿನ ದೃಷ್ಟಿಯನ್ನು ಹದಗೊಳಿಸುವ ಒಂದು ಆಟ.... ಕೈನ ಐದು ಬೆರಳುಗಳನ್ನು... ಮಗುವಿನ ಮುಖದ ಮುಂದೆ ಆಡಿಸುತ್ತಾ ಹಾಡುವ ಹಾಡು.... ತಾರಮ್ಮಯ್ಯ ರಘುಕುಲ ರಾಮ ಚಂದಿರನ... ಸ್ವಲ್ಪ ಬೆಳೆದಂತೆ ಕೈಯಿಂದ ಚಪ್ಪಾಳೆ ಹೊಡೆಸಿ ರಾಮ್ ರಾಮ್ ಸೀತಾರಾಮ್... ಹೇಳುವ ಪ್ರಕ್ರಿಯೆ.
ನಾನು ಕನ್ನಡ ಚಂದವಾಗಿ ಬರೆಯಲು ಕಲಿತದ್ದು ರಾಮನಾಮ ಕಾಪಿ ಪುಸ್ತಕದ ಮೂಲಕ... ಶುದ್ಧ ಬ್ರಹ್ಮ ಪರಾತ್ಪರ ರಾಮ... ಬರೆಯುತ್ತಾ..
ಮನೆಯಲ್ಲಿ ಅಮ್ಮ ಮತ್ತು ಅಕ್ಕಂದಿರು ಹೇಳುತ್ತಿದ್ದ ರಾಮಕಥೆ ಹಾಡು... ಧನುವನೆತ್ತಿದ ರಾಮ ಗುಣಧಾಮ ಪರಮ ಮಂಗಳನಾಮ. ರಾಮ ...ಸೀತಾ ಸ್ವಯಂವರದಲ್ಲಿ ಧನುವನ್ನು ಮುರಿದ ನಂತರದ ಘಟ್ಟದಲ್ಲಿ ಅದು ಧನುವ ಮುರಿದ ರಾಮ ಎಂದು ಬದಲಾಗುತ್ತಿತ್ತು.
ಮೊದಲು ಮಾಡಿದ ಕನ್ನಡದ ವಾಕ್ಯ.. ರಾಮನು ಕಾಡಿಗೆ ಹೋದನು.. ಇನ್ನು ಸಂಸ್ಕೃತದ ಕಲಿಕೆ.. ವರ್ಣಮಾಲೆಯ ನಂತರ.... ಅಕಾರಂತ ಪುಲ್ಲಿಂಗ ರಾಮ ಶಬ್ದಃ ದಿಂದ... ರಾಮಃ, ರಾಮೌ, ರಾಮಾಃ ಬಾಯಿಪಾಠ ಮಾಡುವುದರಿಂದ.
ಇನ್ನು ನನ್ನೂರು ದೊಡ್ಡ ಜಾಲದಲ್ಲಿ ಚಿಕ್ಕಂದಿನಲ್ಲಿ ಕಿವಿಗೆ ಬೀಳುತ್ತಿದ್ದ ಹೆಸರುಗಳು ರಾಮಾಂಜಿನಪ್ಪ, ರಾಮಣ್ಣ, ಸೀತಾರಾಮು, ರಾಮಚಂದ್ರ ಶಾಸ್ತ್ರಿಗಳು, ರಾಮದಾಸ, ರಾಮಲಿಂಗಾಚಾರ್ ಹೀಗೆ.
ಶನಿವಾರದ ಭಜನೆಯಲ್ಲಿ ರಾಮನ ಹಾಡುಗಳು ಹೇಳುವುದು ಖಾತ್ರಿ. ಅದರಲ್ಲೂ ರಾಮಾಂಜಿನಪ್ಪ ತಾಳ ಸಮೇತ ಹೇಳುತ್ತಿದ್ದ... ರಾಮಾ.. ನೀ ಸಮಾನಮೆವರೋ... ಇನ್ನೂ ನನ್ನ ಮನಃ ಪಟಲದಲ್ಲಿದೆ.
ಇನ್ನು ನನ್ನಕ್ಕ... ಶಿವಕ್ಕ.. ಮಾಡುತ್ತಿದ್ದ ಶನಿವಾರದ ರಾಮನ ಪೂಜೆ.. ಹಾಗೂ ನೈವೇದ್ಯಕ್ಕೆ ಮಾಡುತ್ತಿದ್ದ ಪ್ರಸಾದ ನನಗೆ ಇಷ್ಟ.
ರಾಮ ಕೋಟಿ ಬರೆಯುವ ನನ್ನ ಆಸೆ ( ಕೋಟಿಯ ಅಗಾಧತೆ ತಿಳಿಯದ... ಆದರೆ ಬರೆಯಬೇಕೆಂಬ ಹುಚ್ಚು)... ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲಿ ಬೇರೆ ಬೇರೆ ಪುಸ್ತಕಗಳಲ್ಲಿ ಬರೆದು.... ರಾಮಕೋಟಿ ಟೋಟಲ್ ಬುಕ್ ಅನ್ನುವ ಪುಸ್ತಕದಲ್ಲಿ ಬರೆದದ್ದನ್ನು ಲೆಕ್ಕ ಹಾಕಿ ಇಟ್ಟಿದ್ದು.... ಅದು ಹೇಗೆ ನಿಂತು ಹೋಯಿತೋ ನನ್ನರಿವಿಗೆ ಇಲ್ಲ.. ಆ ರಾಮನೇ ಬಲ್ಲ...
ನಮ್ಮ ಮನೆಯಲ್ಲಿ ರಾಮನವಮಿ ಹಬ್ಬವನ್ನು ಆಚರಿಸಿದ್ದು ನೆನಪಿಲ್ಲ... ಆದರೆ ಬೇರೆಯವರ ಮನೆಗೆ ಹೋಗಿ ಕೋಸಂಬರಿ, ಪಾನಕ, ನೀರು ಮಜ್ಜಿಗೆ ಕುಡಿದದ್ದು ಮಾತ್ರ ರಾಮನಷ್ಟೇ ಸತ್ಯ.
ನನಗೆ ಪರಿಚಯವಿದ್ದ ಲೀಲಾ ಮತ್ತು ಸರಸ್ವತಿ ಅಕ್ಕತಂಗಿಯರು ಯಾವಾಗಲೂ ಹೇಳುತ್ತಿದ್ದ ಹಾಡು ...ಅಲ್ಲಿ ನೋಡಲು ರಾಮ... ಇಲ್ಲಿ ನೋಡಲು ರಾಮ... ಅದೊಂದೇನಾ ಅವರಿಗೆ ಬರುತ್ತಿದ್ದದ್ದು... ಅಥವಾ ಅದು ಅವರಿಗೆ ಪ್ರಿಯವಾದ ಹಾಡು ಇರಬೇಕು.
ಒಂದು ಕಥೆ... ಎಲ್ಲವೂ ನೆನಪಿಲ್ಲ.. ಆದರೆ ಅದರಲ್ಲಿನ ಒಬ್ಬ ವ್ಯಕ್ತಿ....ಮರಾ..ಮರಾ ಎಂದು ಜಪ ಮಾಡುತ್ತಾ... ಅದು ರಾಮ ರಾಮ ಆಗಿ ಪರಿವರ್ತನೆ ಯಾದದ್ದು.. ಅಷ್ಟೇ ಗೊತ್ತು.
ನನ್ನಮ್ಮನಿಗೆ ನಾನು ಮುಂದಿನ ದಿನಗಳ ವಿಷಯ ಮಾತನಾಡುತ್ತಾ... ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀನಿ ಅಂತ ಹೇಳಿದಾಗ ನನ್ನಮ್ಮನ ಉತ್ತರ.. ಹೋಗೋ.. ಯಾವತ್ತಿದ್ರು... ಗಂಡನ ರಾಜ್ಯ ...ರಾಮ ರಾಜ್ಯ... ಮಕ್ಕಳ ರಾಜ್ಯ... ಯಮರಾಜ್ಯ ಅಂತ... ಸರಿ ಇರಬಹುದೇನೋ... ಅಲ್ಲಿ ಸ್ವಾತಂತ್ರ್ಯ ಮತ್ತು ಹಕ್ಕು ಎರಡೂ ಇರುತ್ತದೆ.
ರಾಮನ ಹೆಸರನ್ನು... ಬೇರೆಯವರನ್ನು ಮೂದಿಸಲೂ ಬಳಸುವುದುಂಟು... ಯಾರಾದರೂ ಹೇಳಿದ್ದನ್ನೇ ಹೇಳಿದರೆ... "ನಿಲ್ಸಪ್ಪ ನಿನ್ ರಾಮಾಯಣನ"... ಕೆಲವರ ಮಾತುಗಳು ಇಷ್ಟವಾಗದಿದ್ದಾಗ ನಮ್ಮ ಸ್ವಗತ" "ಶುರು ಆಯ್ತಪ್ಪ ಇವನ್ ರಾಮಾಯಣ"... ಮಗು ಒಂದೇ ಸಮನೆ ಗೋಳುಗುಟ್ಟಿದಾಗ ಹೇಳುವ ಮಾತು.." ನಿಂದೇನೋ.. ರಾಮಾಯಣ" .. ಹೀಗೆ
ಎಷ್ಟೋ ಸಲ ನಮ್ಮ ಪ್ರತಿಕ್ರಿಯೆಗಳು ಸಹ ರಾಮನ ಮೂಲಕ ಆಗುತ್ತೆ.... ಉದಾಹರಣೆಗೆ ಆಶ್ಚರ್ಯ ವ್ಯಕ್ತಪಡಿಸುವ "ಅಯ್ಯೋ ರಾಮ" ನೋವು ಅನುಭವಿಸುವಾಗ" ರಾಮಾ......" ಅಸಹನೆ ವ್ಯಕ್ತಪಡಿಸುವ " ರಾಮ್ ರಾಮಾ.." ಅಸಹಾಯಕತೆಯ ಸಮಯದಲ್ಲಿ " ಆ ರಾಮನೇ ಕಾಪಾಡಬೇಕು"......
ನನಗೆ ತುಂಬ ಮೆಚ್ಚುಗೆಯಾದ ರಾಮನ ವರ್ಣನೆ.... ಅದೂ ರಾವಣನಿಂದ.... ರಾವಣ ಸೀತೆಯನ್ನು ಸನ್ಯಾಸಿಯ ರೂಪದಲ್ಲಿ ಹೋಗಿ ಅಪಹರಿಸ ಬೇಕೆಂದು ನಿರ್ಧರಿಸಿದಾಗ... ಅವನಿಗೆ ಬಂದ ಸಲಹೆ... ನೀನು ರಾಮನ ರೂಪದಲ್ಲಿ ಹೋಗಿ ಸೀತೆಯನ್ನು ಕರೆದು ತಾ.. ಎಂದು. ಅದಕ್ಕೆ ರಾವಣನ ಉತ್ತರ.... "ರಾಮನ ರೂಪ ಧರಿಸಿದ ತಕ್ಷಣ ಅವನ ಏಕಪತ್ನಿ ವ್ರತವೂ... ಹಾಗೂ ಪರಸ್ತ್ರೀಯನ್ನು ಗೌರವದಿಂದ ಕಾಣುವ ಸ್ವಭಾವವು ಮೈಗೂಡುತ್ತದೆ ...ಹಾಗಾಗಿ ಅಪಹರಿಸುವ ಭಾವವೇ ಇಲ್ಲವಾಗುತ್ತದೆ"..... ಇದಲ್ಲವೇ ರಾಮನ ಪ್ರಭಾವ.
ಗಜಾನನ ಶರ್ಮ ಎಂಬುವರು ಬರೆದ..... "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಹಾಡಿನ ಕೆಲವು ಸಾಲುಗಳು ನನಗೆ ತುಂಬಾ ಇಷ್ಟ... ಅದರಲ್ಲೂ ಕಷ್ಟಗಳ ಕೊಡಬೇಡ ಎನಲಾರೆ ರಾಮ.... ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ... ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ..... ಇದು ರಾಮನ ಸಹನೆಯನ್ನು ಎತ್ತಿ ತೋರುತ್ತದೆ.
ಇನ್ನೊಂದು ವಿಶೇಷ ಶ್ಲೋಕವಿದೆ... ಇದರಲ್ಲಿ ರಾಮನನ್ನು ಯಾರು ಹೇಗೆ ಸಂಭೋದಿಸುತ್ತಾರೆ ಎನ್ನುವ ವಿಶ್ಲೇಷಣೆ...
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ
ರಾಮ ಎಂದು ಕರೆಯುತ್ತಿದ್ದದ್ದು ದಶರಥ. ರಾಮಭದ್ರಾ ಎಂದು ಪ್ರೀತಿಯಿಂದ ಕರೆಯುತ್ತಿದ್ದದ್ದು ಕೌಸಲ್ಯ, ರಾಮಚಂದ್ರ ಎಂದು ಕರೆಯುತ್ತಿದ್ದದ್ದು ಕೈಕೆಯಿಯಂತೆ.. ಕೈಕೇಯಿಗೆ ರಾಮನನ್ನು ಕಂಡರೆ ಬಲು ಪ್ರೀತಿ... ರಾಮನಿಗೆ ಚಂದ್ರನನ್ನು ತೋರಿಸುತ್ತಿದ್ದವಳು ಅವಳೇ.. ಹಾಗಾಗಿ ರಾಮಚಂದ್ರ ಎಂದು ಕರೆದಳಂತೆ... ವೇಧಸೇ ಎಂದು ಕರೆಯುತ್ತಿದ್ದದ್ದು ಋಷಿ ಮುನಿಗಳು.. ಅವನು ವೇದಪಾರಂಗತನೆಂದು.. ಅಯೋಧ್ಯೆಯ ಜನ ರಾಮನನ್ನು ಸಂಭೋಧಿಸುತ್ತಿದ್ದದ್ದು ರಘುನಾಥ....ಎಂದು (ರಘು ವಂಶದ ಕುಡಿ ... ಹಾಗಾಗಿ)... ನಾಥ ಎಂದು ಕರೆಯುತ್ತಿದ್ದದ್ದು ಸೀತೆ ಮಾತ್ರ.. ಅದು ಅವಳ ಹಕ್ಕು ಏಕ ಪತ್ನಿಯಾಗಿ. ಇನ್ನು ಸೀತೆಯ ತವರು ಮಿಥಿಲೆಯ ಜನ ತಮ್ಮ ಅಳಿಯನನ್ನು ಕರೆಯುತ್ತಿದ್ದದ್ದು ಸೀತಾಪತಿ ಎಂದು... ಮಗಳ ಗುರುತಿನ ಮೂಲಕ... ಎಷ್ಟು ಚಂದ ಅಲ್ಲವೇ?
ಕೈಕೇಯಿಯ ಬಗ್ಗೆ ಹೇಳುವುದಾದರೆ... ರಾಮನ ವನವಾಸಕ್ಕೆ ಅವಳೇ ಕಾರಣ... ತನ್ನ ಆಪ್ತೆ ಮಂಥರೆಯ ಪ್ರಚೋದನೆಯಿಂದ. ಮತ್ತೆ ಸೀತೆಯ ವಿಷಯವಾಗಿ ವಿವಾದದ ಮಾತಾಡಿದ ಅಗಸ ಇವರನ್ನು ವಿಘ್ನ ಸಂತೋಷಿಗಳು ಎನ್ನಲೇ... ಆಕಾಲದಲ್ಲೇ ರಾಮನನ್ನು ಬಿಡದ ಈ ಜನ ಈಗ ಸುಮ್ಮನಿದ್ದಾರೆಯೇ.... ಜನಸಂಖ್ಯೆಗೆ ಅನುಗುಣವಾಗಿ ಈಗ ವಿಘ್ನ ಸಂತೋಷಿಗಳು ತುಂಬಾ ಜನ ಇದ್ದಾರೆ.... ಎನಾದರೇನು... ಅಂತಿಮ ಕ್ಷಣ ರಾಮನ ಪರವಾಗಿಯೇ.. ಅಥವಾ ರಾಮನು ಬಿಂಬಿಸಿದ ಕಲ್ಯಾಣ ಗುಣಗಳ ಪರವಾಗಿಯೇ ಅಲ್ಲವೇ? ಈಗಿನ ವಿಘ್ನ ಸಂತೋಷಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ, ಯಾರನ್ನೋ ಮೆಚ್ಚಿಸಲು ಅಥವಾ ರಾಜಕಾರಣದ ಕ್ಷಣಿಕ ಲಾಭಕ್ಕಾಗಿ ಕೆಳಮಟ್ಟಕ್ಕೆ ಇಳಿಯುತ್ತಾರೆ.
ಹೆಣ್ಣು ಮಕ್ಕಳು ರಾಮನಂತಹ ಏಕ ಪತ್ನಿ ವ್ರತಸ್ಥ ಗಂಡನಿಗಾಗಿ ಹಂಬಲಿಸುತ್ತಾರೆ... ವಿಪರ್ಯಾಸವೆಂದರೆ ಸೀತೆಪಟ್ಟ ಕಷ್ಟಗಳನ್ನು ತಾವು ಸಹಿಸಲು ನಿರಾಕರಿಸುತ್ತಾರೆ...
ನಮ್ಮ ಕುಮಾರವ್ಯಾಸ ಹೇಳಿದಂತೆ " ತಿಣುಕಿದನು ಫಣಿರಾಯ... ರಾಮಾಯಣದ ಕವಿಗಳ ಭಾರದಲಿ ..." ರಾಮನ ಚರಿತೆಯನ್ನು ಬರೆದಿರುವ ಕವಿಗಳು ಕಾವ್ಯಗಳು ಲೆಕ್ಕವಿಲ್ಲದಷ್ಟು.... ರಾಮ ಭಜನೆಗಳು, ಹಾಡುಗಳು, ರಾಮಾಯಣದ ವಿವಿಧ ಸನ್ನಿವೇಶಗಳು ಹಾಗೂ ವ್ಯಕ್ತಿ ಚಿತ್ರಣಗಳು ಎಲ್ಲವನ್ನು ಸೇರಿಸಿದರೆ ರಾಮಾಯಣಕ್ಕಿಂತ ಅತಿದೊಡ್ಡ ಪುಸ್ತಕವಾಗಬಹುದೇನೋ.
ಶ್ರೀರಾಮ ನಮ್ಮ ಜೀವನದಲ್ಲಿ ಎಷ್ಟು ಹಾಸು ಹೊಕ್ಕಿದ್ದಾನೆಂದರೆ... ಜನ ಸಾಮೂಹಿಕವಾಗಿ ಊಟ ಮಾಡುವಾಗ.... ಮಧ್ಯದಲ್ಲಿ ದೇವರ ಧ್ಯಾನ ಮಾಡಿ.. ಭೋಜನಕಾಲೇ ಸೀತಾಕಾಂತ ಸ್ಮರಣೆ... ಜೈ ಜೈ ರಾಮ್ ಎಂದು ಹೇಳುವ ಪರಿಪಾಠ ನಮ್ಮಲ್ಲಿತ್ತು... ಈಗಲೂ ಕೆಲವೆಡೆ ಇದೆ.
ಜೀವನದ ಕೊನೆಯ ಯಾತ್ರೆಯಲ್ಲಿಯೂ ಸಹ ರಾಮನಾಮ ಮುಖ್ಯವಾಗುತ್ತದೆ... ರಾಮನಾಮ ಸತ್ಯ ಹೈ ಎಂದು ಶವವಾಹಕರು ಹೇಳುತ್ತಾರೆ. ಗಾಂಧೀಜಿಗೆ ಗುಂಡು ತಗುಲಿದಾಗ..ಅವರು "ಹೇ ರಾಮ್" ಎಂದರೆಂದು ಹೇಳುತ್ತಾರೆ...ಅವರ ಸಮಾಧಿಯ ಮೇಲೆ "ಹೇ ರಾಮ್" ಎಂಬ ಬರಹ ಇದೆ.
ಹೀಗೆ ನಮ್ಮನ್ನು ಆವರಿಸಿಕೊಂಡಿರುವ ಶ್ರೀ ರಾಮನ... ಅಯೋಧ್ಯೆಯಲ್ಲಿನ ಮೂರ್ತಿಯನ್ನು ನೋಡುವ ಆಸೆ ಮನದಲ್ಲಿದೆ... ರಾಮನಿಚ್ಛೆ ಹೇಗಿದೆಯೋ ಹಾಗೆ ಆಗಲಿ.
ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರ ರಾಮನಿಂದ ...ರಾಷ್ಟ್ರ ಎಂಬ ಆಶಯ ಈಡೇರಲಿ ಹಾಗೂ ಎಲ್ಲ ಜನರಿಗೂ ರಾಮನ ಆಶೀರ್ವಾದ ಸಿಗಲಿ ಎಂದು ಅದೇ ರಾಮನನ್ನು ಪ್ರಾರ್ಥಿಸುತ್ತಾ..... ಜೈ ಶ್ರೀ ರಾಮ್....
ಜೈ ಶ್ರೀ ರಾಮ್ 🙏
ReplyDeleteSriram jairam jai jai ram
ReplyDeleteಜೈ ಶ್ರೀ ರಾಮ್ 🙏
ReplyDeleteJai Shree Ram
ReplyDeleteರಾಮ ಮಯದ ಲೇಖನ ರಮಣೀಯ ರಮ್ಯ ರಂಜನೀಯ ಹಾಗೂ ಆನಂದಮಯ ವಾಗಿದೆ.
ReplyDeleteRemarkable
ReplyDeleteಎಲ್ಲೆಲ್ಲೂ ನೋಡಿದರೆ ಅಲ್ಲಿ ರಾಮಚಂದ್ರ ಶೀರ್ಷಿಕೆಯು ಅನೇಕ ಉತ್ತಮ ಅಂಶಗಳಿಂದ ಕೂಡಿದೆ.ಧನ್ಯವಾದಗಳು.ದಶಾವತಾರದ ಒಂದು ಅವತಾರವಾದ ಶ್ರೀರಾಮನ ರಾಮನಾಮದ ಶಕ್ತಿ ಯ ಬಗ್ಗೆ ವಿವರಣೆ ಉತ್ತಮವಾಗಿದೆ.ಒಟ್ಟಾರೆ ಏನೇ ಸಮಸ್ಯೆಬಂದಾಗ ಪರಿಹಾರಕ್ಕಾಗಿ ರಾಮನಾಮ ಜಪ ಮತ್ತು ಸ್ಮರಣೆ ಮಾಡುವುದು ಉತ್ತಮ ಸಂದೇಶವಾಗಿದೆ.ಮತ್ತೊಮ್ಮೆ ಧನ್ಯವಾದಗಳು.ದೇವೇಂದ್ರಪ್ಪ
ReplyDelete