ಹೊಸ ವರ್ಷ- ನಿರ್ಣಯಗಳು
ಸಾಮಾನ್ಯವಾಗಿ ಹೊಸ ವರ್ಷದ ಶುರುವಿನಲ್ಲಿ ಏನಾದರೂ ಮಾಡಬೇಕು ಎನ್ನುವ ನಿರ್ಣಯ ಬಹಳ ಜನ ಮಾಡುತ್ತಾರೆ.... ನಾನೇನೂ ಹೊರತಲ್ಲ...New Year resolutions ...ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನನ್ನ ಭಾವನೆ...
ಆದರೆ ಹೀಗೆ ಮಾಡುವೆ ಎಂದು ಶಪಥ ಮಾಡುವುದು.... ಹಾಗೂ ಪ್ರತಿಜ್ಞೆ ಮಾಡುವುದು ನಮಗೇನು ಹೊಸದಲ್ಲ.... ತನಗೆ ಅವಮಾನ ಮಾಡಿದವರು ಸಾಯುವ ತನಕ ತನ್ನ ಮುಡಿಯನ್ನು ಕಟ್ಟುವುದಿಲ್ಲವೆಂದು ನಿರ್ಧಾರ ಮಾಡಿದ ದ್ರೌಪದಿ..... ಅದಕ್ಕೆ ದುಶ್ಯಾಸನನ ರಕ್ತವನ್ನು ಎಣ್ಣೆಯಾಗಿ ಹಚ್ಚುವೆನೆಂದು ಶಪಥ ಮಾಡಿದ ಭೀಮ...... ದ್ರೌಪದಿಗೆ ಅವಮಾನ ಆಗುತ್ತಿದ್ದರೂ, ಅಸಹಾಯಕನಾಗಿ ತನ್ನ ಯಾವುದೋ ಪ್ರತಿಜ್ಞೆಗೆ ಕಟ್ಟು ಬಿದ್ದು, ಅವಳ ಸಹಾಯಕ್ಕೆ ಮುಂದಾಗದ ಭೀಷ್ಮ ಪಿತಾಮಹ..( ಭೀಷ್ಮ ಪ್ರತಿಜ್ಞೆ ಎನ್ನುವುದು ಜನಜನಿತ) ಇವರೆಲ್ಲ ನಮ್ಮ ಮಹಾಭಾರತದ ಕಾಲದವರು. ಇದಲ್ಲದೆ ಇಂತಹ ಪ್ರತಿಜ್ಞೆಗಳನ್ನು ಮಾಡಿ ಉಳಿಸಿಕೊಂಡವರು , ಸೋತವರು ಬಹಳಷ್ಟು ಮಂದಿ ಇದ್ದಾರೆ...
ಬಡತನವನ್ನು ಭಾರತದಿಂದ ತೊಲಗಿಸುತ್ತೇವೆ ಎಂದು ನಿರ್ಧಾರ ಮಾಡಿ... ಜನಗಳಿಗೆ ಆಶ್ವಾಸನೆಯನ್ನು ಇತ್ತ ನಮ್ಮ ರಾಜಕಾರಣಿಗಳು.... ಈಗ ಆ ನಿಟ್ಟಿನಲ್ಲಿ ಸಾಕಷ್ಟು ವಸ್ತುಗಳನ್ನು ಬಿಟ್ಟಿಯಾಗಿ ಕೊಟ್ಟು.. (ಏನೂ ಕೆಲಸ ಮಾಡದೆ ಗಳಿಸಿದ್ದು...) ಜನರನ್ನು ಸೋಮಾರಿಗಳಾಗಿ ಮಾಡುತ್ತಿರುವ ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ...... ವಿದೂಷಕರಂತೆ ಕಾಣುತ್ತಾರೆ. ಇರಲಿ ಅದು ರಾಜಕೀಯ ಕಸರತ್ತು.
ಕ್ಷಮಿಸಿ... ವಿಷಯ ಸ್ವಲ್ಪ ಹಾದಿ ತಪ್ಪಿತು.... ಕೆಲ ಸಮಯದ ನನ್ನ ನಿರ್ಧಾರಗಳದೇ ರೀತಿ....
ನಿರ್ಣಯ ಮಾಡುವುದು... ನಿರ್ಧಾರ ಮಾಡುವುದು ತುಂಬಾ ಸುಲಭದ ಕೆಲಸ ಎಂದು ನನ್ನ ಭಾವನೆ. ಸರಿಯಾದ ನಿರ್ಣಯ/ ನಿರ್ಧಾರ ಮಾಡುವುದು ಯಾವುದೇ ಕೆಲಸ ಮಾಡಲು ಬೇಕಾದ ಮೊದಲನೆಯ ಹೆಜ್ಜೆ.... A work well started is half done ಎಂಬ ನಾಣ್ಣುಡಿ ಇದ್ದರೂ... ಅದನ್ನು ಆಗ ಮಾಡುವ ಎರಡನೆಯ ಮತ್ತು ಮುಂದಿನ ಹೆಜ್ಜೆಗಳು ತುಂಬಾ ಮುಖ್ಯ..... ಎಡವುವುದು ಸಾಮಾನ್ಯವಾಗಿ ಇಲ್ಲಿಯೇ.... ನಮ್ಮ ಸಂಪ್ರದಾಯದಲ್ಲಿ ಅಥವಾ ಇನ್ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಾಗ 'ಸಂಕಲ್ಪ ' ಎನ್ನುವ ಒಂದು ವಿಧಿ ಇದೆ.... ಅದೂ ನಿರ್ಧಾರ ಮಾಡುವುದೇ...
ಈ ಲೇಖನ ಬರೆಯುವ ಮಧ್ಯದಲ್ಲಿಯೇ ಇನ್ನೊಂದು ಅನಿವಾರ್ಯವಾಗಿ ಸಂಕಲ್ಪ ಮಾಡಬೇಕಾದ ಕಾರ್ಯದಲ್ಲಿ ನಾನು ಭಾಗಿಯಾಗಬೇಕಾಯಿತು. ಅದು ನನ್ನ ನಾದಿನಿ ಮಣಿಯ ಮಕ್ಕಳು ...ಅವರ ಅಪ್ಪನ (ಎಸ್.ಕೆ. ನಾಗರಾಜ್... ನನ್ನ ಷಡ್ಢಕ) ಅಂತ್ಯ ಸಂಸ್ಕಾರದ ಸಂಕಲ್ಪ... ಆ ಸಂದರ್ಭದಲ್ಲಿನ ಮಕ್ಕಳ ನಿಜವಾದ ದುಃಖ... ಅಪ್ಪನನ್ನು ಕಳೆದುಕೊಂಡ ನೋವನ್ನು ಅನುಭವಿಸಿದ ಪರಿ ಒಂದು ಹೃದಯವಿದ್ರಾವಕ ನೋಟ.... ಆಗಲೇ ಹೇಳಿದಂತೆ ಇದು ಅನಿವಾರ್ಯ... ಬಯಸಿ ಮಾಡುವ ಸಂಕಲ್ಪವಲ್ಲ. ಸಾವು ನಮ್ಮ ಜೀವನದ ಅವಿಭಾಜ್ಯ ಅಂಗತಾನೇ...
ಮತ್ತೆ ವಿಷಯ ಬದಲಾಯಿತು.... ಏನು ಮಾಡಲಿ ಇದು ನನ್ನ ಮನಃ ಪಟಲದಿಂದ ಇನ್ನು ಜಾರಿರದ ವಿಷಯ.
ಮೊನ್ನೆ 1ನೇ ತಾರೀಖು ವಾಟ್ಸಪ್ ನಲ್ಲಿನ ಒಂದು ತಮಾಷೆಯಾದ ಸಂದೇಶ ಹೀಗಿತ್ತು.." ಎಚ್ಚರಿಕೆ! ಪ್ರತಿ ದಿನ ವಾಕಿಂಗ್ ಹೋಗುವ ಜನಗಳಿಗೆ.. ಈ ವಾರ ವಿಪರೀತ ಜನಸಂದಣಿ ಆಗುವ ಸಂಭಾವ್ಯವಿದೆ... ಹೊಸ ವರ್ಷದ ನಿರ್ಣಯಮಾಡಿದ ಜನಗಳಿಂದ" ... ಇದು ಎಷ್ಟು ಸಹಜವಾಗಿತ್ತು ಅಂದರೆ... ಪ್ರತಿ ವರ್ಷವೂ ಈ ಜನಸಂದಣಿಯನ್ನು ಎದುರಿಸಿದ ನನ್ನ ಅನುಭವವನ್ನು ಬಲಪಡಿಸಿದಂತೆ...
ಇದಕ್ಕೆ ಕಾರಣ ಆರಂಭ ಶೂರತ್ವ ..... ಪಾನಪ್ರಿಯರ ಭಾಷೆಯಲ್ಲಿ ಹೇಳುವುದಾದರೆ... Soda bottle spirit... ಜೊತೆಗೆ ಒಂದಷ್ಟು ಸೋಮಾರಿತನ... ಯಾವುದಾದರೂ ನೆಪವೊಡ್ಡಿ ಮುಂದೂಡುವ ಮನಸ್ಥಿತಿ. ಇಂಥದೇ ಮನಸ್ಥಿತಿ ಉಳ್ಳ ನನ್ನ ಸ್ನೇಹಿತನೊಬ್ಬ.. ನಿರ್ಧಾರವನ್ನು ಕೈಬಿಟ್ಟಾಗ ಹೇಳಿದ್ದು ಮತ್ತದೇ ಒಂದನೇ ಜನವರಿ... ಇಸವಿ ಮಾತ್ರ ಆಗಲೂ ಹೇಳಿರಲಿಲ್ಲ ಈಗಲೂ ಹೇಳಿಲ್ಲ.... ಎಂಥಾ ಜಾಣತನ ಅಲ್ಲವೇ?
ಮಾಜಿ ರಾಷ್ಟ್ರಪತಿ ಕಲಾಂ ಸರ್ ಹೇಳಿದಂತೆ... ಕನಸು ಕಾಣಬೇಕು... ಆ ಕನಸನ್ನು ನನಸು ಮಾಡುವ ಸತತ ಪ್ರಯತ್ನವೂ ಬೇಕು.... ಇಲ್ಲದಿದ್ದರೆ ಕನಸು ನನಸಾಗಲು ಸಾಧ್ಯವೇ ಇಲ್ಲ....
ಮಂತ್ರಿಸಿದರೆ ಮಾವಿನಕಾಯಿ ಬೀಳುವುದೇ ಎಂಬುವುದು ಕನ್ನಡದ ನಾಣ್ಣುಡಿ... ಹಾಗೆಯೇ ಸಂಸ್ಕೃತದ ಒಂದು ಶ್ಲೋಕ.." ಉದ್ಯಮೇ ನಹಿ ಸಿದ್ಯಂತಿ ಕಾರ್ಯಾಣಿ ನ ಮನೋ ರಥೈಃ/ ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶ್ಯಂತಿ ಮುಖೇ ಮೃಗಾಃ// ". ಯಾವುದೇ ಕೆಲಸಗಳು ಅಥವಾ ಮನೋಭಿಲಾಷೆಗಳು ಕಷ್ಟ ಪಡದೆ ಸಿದ್ಧಿಸುವುದಿಲ್ಲ... ಹೇಗೆಂದರೆ ಮಲಗಿರುವ ಸಿಂಹದ ಬಾಯಿಯಲ್ಲಿ ಯಾವುದೇ ಜಿಂಕೆಯು ಬಂದು ಬೀಳುವುದಿಲ್ಲ.... ಕಟು ಸತ್ಯ.
ಹಿಂದು ಮುಂದಿನ ಪರಿಣಾಮಗಳನ್ನು ಯೋಚಿಸದೇ ಮಾಡಿದ ದುಡುಕು ನಿರ್ಧಾರ... ಕೋಪದಲ್ಲಿ ಮಾಡಿದ ನಿರ್ಧಾರ.. ಇವು ಸಂಕಷ್ಟಕ್ಕೆ ಸಿಲುಕಿಸುತ್ತವೆ.... ಕೋಪದಲ್ಲಿ ಕತ್ತರಿಸಿಕೊಂಡ ಮೂಗು... ನಂತರ ಬರುವುದಿಲ್ಲ ಎಂಬ ನಾಣ್ಣುಡಿಯಂತೆ..
ಏನೋ ನಿರ್ಧಾರ ಮಾಡಿ ಅದನ್ನು ಡಂಗೂರ ಹೊಡೆದು ಪ್ರಚಾರ ಮಾಡಿ.... ಬೇರೆಯವರನ್ನು ಕ್ಷಣಿಕವಾಗಿ ಮೆಚ್ಚಿಸಿ.... ಅದರಿಂದ ವಿಮುಖವಾಗುವವನು ಅಧಮ ಎಂದಿದ್ದಾನೆ..ಸರ್ವಜ್ಞ ತನ್ನ ಈ ವಚನದಲ್ಲಿ..
ಆಡದೇ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮನು.. ಅಧಮ ತಾನಾಡಿಯೂ ಮಾಡದವ ಸರ್ವಜ್ಞ...
ದೃಢ ನಿರ್ಧಾರ ಎಂಬ ಪದ... ನಿರ್ಧಾರವು ಬಹಳ ಗಟ್ಟಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ... ಹಾಗೆಂದರೆ ಈ ಪದವನ್ನು ಬಳಸಿದವರು.... ದೃಢ ಎಂಬ ವಿಶೇಷಣ ಇಲ್ಲದ ನಿರ್ಧಾರ ಟೊಳ್ಳು ಎಂದು ಭಾವಿಸಿರಬಹುದೇ?
ಸಮಯೊಚಿತ ನಿರ್ಧಾರ... ತುಂಬಾ ಮುಖ್ಯವಾದ ಜಾಣತನದ ಲಕ್ಷಣ.... ಆ ಸಮಯಕ್ಕೆ ಸರಿಯಾಗಿ ತಡಮಾಡದೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನಾಯಕತ್ವದ ಲಕ್ಷಣ...
ಹೊಸ ವರ್ಷದ ನಿರ್ಣಯಗಳ ಬಗ್ಗೆ ಒಂದು ಮಾತು... ನಿರ್ಣಯ ಮಾಡಲು ಹೊಸ ವರ್ಷವೇ ಬೇಕಿಲ್ಲ ಮನಸ್ಸಿದ್ದರೆ ಎಲ್ಲ ದಿನಗಳು ಒಂದು ಹೊಸ ವರ್ಷದ ಆರಂಭವೇ... ಇಂದಿನ ದಿನವೇ ಶುಭದಿನವು... ಹಾಗಾಗಿ.... ನಾಳೆ ಮಾಡುವುದನ್ನು ಇಂದು ಮಾಡು ಇಂದು ಮಾಡುವುದನ್ನು ಈಗ ಮಾಡು ಎನ್ನುವ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವ ವಿಶೇಷ ನಿರ್ಣಯದ ಅವಶ್ಯಕತೆಯೇ ಇರುವುದಿಲ್ಲ..
ಒಂದು ಪ್ರಸಂಗ 2024 ಜನವರಿ ಒಂದರಂದು ನಡೆದದ್ದು...ಪ್ರದೀಪ್ ( ನನ್ನ ಮಗಳು ಚೈತ್ರಳ ಗಂಡ....ಆಳಿಯ) 1ನೇ ತಾರೀಖಿನಿಂದ ಜಿಮ್ ಗೆ ಹೋಗಲು ಎಲ್ಲ ತಯಾರಿ ಆಗಿತ್ತು...ದುಡ್ಡು ಕೊಟ್ಟಾಗಿತ್ತು. ಇನ್ನೇನು ಹೊರಡಬೇಕು...ಅಷ್ಟರಲ್ಲಿ ಒಂದು ಸಂದೇಶ..."ಇಂದು ಜಿಮ್ ಗೆ ರಜ...ತಡವಾಗಿ ತಿಳಿಸಿದ್ದಕ್ಕೆ ಕ್ಷಮೆ ಇರಲಿ" ಹೊಸ ವರ್ಷದ ನಿರ್ಣಯ...ಢಮಾರ್.....ಕಾರಣ ಯಾರೇ ಇರಲಿ..
I am moving clouds today.... tomorrow I will try mountains ಎನ್ನುವುದು ಒಂದು ಪ್ರಭಾವಿ ಹೇಳಿಕೆ.... ಆತ್ಮವಿಶ್ವಾಸದ ಪ್ರಕಟಣೆಯ ನಿರ್ಧಾರ.... ಇದನ್ನು ಬಿಂಬಿಸುವ ಒಂದು ಚಿತ್ರ ನನ್ನಲ್ಲಿತ್ತು... ಈಗ ಕೈಗೆ ಸಿಕ್ಕಿಲ್ಲ... ಸಾಧ್ಯವಾದರೆ ಮುಂದೆ ಯಾವಾಗಲಾದರೂ ಹಂಚಿಕೊಳ್ಳುತ್ತೇನೆ ಎಂಬುದು ನನ್ನ ಸಧ್ಯದ ನಿರ್ಣಯ.
ನನ್ನ ಹೊಸ ವರ್ಷದ ನಿರ್ಣಯಗಳ ಅವಲೋಕನ ಮಾಡಿದಾಗ..." ಹೊಸ ವರ್ಷಕ್ಕೆ ಯಾವ ನಿರ್ಣಯವನ್ನೂ ಮಾಡದೇ ಇರುವುದು" ಎಂಬ ನಿರ್ಣಯವೇ ಹೆಚ್ಚು ಕಾರ್ಯರೂಪಕ್ಕೆ ಬಂದದ್ದು.... ವಿಪರ್ಯಾಸ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ... ಕರ್ಮಣ್ಯೇ ವಾಧಿಕಾರಾಸ್ತೇ...ಮಾಫಲೇಷು ಕದಾಚನಃ.... ನಿತ್ಯ ಸತ್ಯ....ಹಾಗೆಯೇ
ಬಾರದು ಬಪ್ಪದು.. .....ಬಪ್ಪದು ತಪ್ಪದು.... ಎನ್ನುವ ಮಾತನ್ನು ಮನಸಾ ನಂಬಿ.... ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ...ಬಂದಿದ್ದನ್ನು ಸ್ವೀಕರಿಸುವುದೇ ಜೀವನದ ಸಂತೋಷದ ಹಾದಿ....
2024 ರಲ್ಲಿ ಆ ಸಂತೋಷದ ಹಾದಿ ಎಲ್ಲರಿಗೂ ಸುಲಭವಾಗಿ ದಕ್ಕಲಿ ಎಂದು ಆಶಿಸುತ್ತಾ... ನಮಸ್ಕಾರ
I also agree with your last paragraph words sir. We should do our work with sincerity and rest will follow
ReplyDeleteEvery day is a new day..we must be happy with our share of the almighty blessings..
ReplyDeleteBeautifully penned sir..
Baaradu bappadu..bappadu tappadu😁sooper agi ide
ReplyDeleteಹೊಸ ವರ್ಷದ ನಿರ್ಣಯಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಮಹಾಭಾರತದ ಉದಾಹರಣೆ, ರಾಜಕೀಯ ಪಕ್ಷಗಳ ನಿರ್ಣಯಗಳು,ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಾಣ್ಣುಡಿ ಬಹಳ ಉತ್ತಮವಾಗಿ ಮೂಡಿ ಬಂದಿವೆ.ತಾವು ಬರೆದಂತೆ ಕಷ್ಟಪಟ್ಟರೆ ಮಾತ್ರ ಫಲ, ಮಾಡುವ ಕೆಲಸಗಳನ್ನು ಈಗಲೇ ಮಾಡುವುದು ಮತ್ತು ಇದ್ದುದ್ದರಲ್ಲೇ ತೃಪ್ತಿ ಪಡಿಸುವುದು ಇವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಉತ್ತಮ ಸಂದೇಶ.ತಮಗೆ ಧನ್ಯವಾದಗಳು. ದೇವೇಂದ್ರಪ್ಪ
ReplyDeleteಈ ರೀತಿಯ ಪ್ರಕ್ರಿಯೆ ಗೆ ನಾವು ಯಾವುದೇ ದಿನಾಂಕ, ಸಮಯದ ಮೊರೆ ಹೋಗದೆ ಇಂದಿನಿಂದಲೇ ಮಾಡುತ್ತೇನೆಂದು ಪ್ರಾರಂಭಿಸುವುದು ಉತ್ತಮ.
ReplyDeleteಲೇಖನ ಹಲವಾರು ಆಯಾಮಗಳಿಂದ ಕೂಡಿ ಸೊಗಸಾಗಿದೆ. ನಿರೂಪಣೆ ಸುಲಲಿತವಾಗಿದೆ.
ಪಂಚ್:
೧)ಸಿಗರೇಟ್ ಸೇದುವುದನ್ನು ಬಿಡುವುದು ಸುಲಭ, ನಾನು ಈವರೆವಿಗೂ ೧೫ ಸಲ ಬಿಟ್ಟಿದ್ದೇನೆಂದು ಯಾರೋ ಒಬ್ಬ ಹೇಳಿದನಂತೆ.
೨)ಒಂದನೇ ತಾರೀಖಿನಿಂದ ನಾನು ಯೋಗಾಸನವನ್ನು ಮಾಡಲು ಪ್ರಾರಂಭಿಸುತ್ತೇನೆಂದು ಮತ್ತೊಬ್ಬ ಧೃಢಸಂಕಲ್ಪ ಮಾಡಿ, ಯಾವ ಮಾಹೆಯ ಒಂದನೇ ತಾರೀಖು ಎಂಬುದನ್ನು ಇನ್ನು ನಿರ್ಧರಿಸಿಲ್ಲವಂತೆ.
ಧನ್ಯವಾದಗಳೊಡನೆ,
.
ಗುರುಪ್ರಸನ್ನ,
ಚಿಂತಾಮಣಿ