ಅಳಿಯತನ, ಮಾವನ ಮನೆ, ದೀಪಾವಳಿ

ಈ ವರ್ಷ ದೀಪಾವಳಿ ಹಬ್ಬದ ಆಚರಣೆ ನಮಗಿಲ್ಲ... ಅಣ್ಣ ಮತ್ತು ಅತ್ತಿಗೆ ತೀರಿಕೊಂಡ ಕಾರಣದಿಂದ. ಆದರೂ ಈ ದೀಪಾವಳಿ ನಮಗೆ ವಿಶೇಷವಾಗಿತ್ತು. ಮೊದಲನೆಯ ಕಾರಣ ನನ್ನ ಮಾವ ಶ್ರೀ ಎಚ್ ಪಿ ಕೃಷ್ಣಮೂರ್ತಿಯವರು, ಹಬ್ಬಕ್ಕೆ ಉಡುಗೊರೆಯಾಗಿ ಹಣವನ್ನು ನನ್ನ ಕೈಗೆ ಕೊಟ್ಟಿದ್ದು... ಮುಂಚಿನ ದಿನಗಳಲ್ಲಿ ಅವರ ಮಗಳ ಕೈಗೆ ಕೊಟ್ಟು ನನಗೆ ತಲುಪಿಸುತ್ತಿದ್ದರು. 96 ವರ್ಷದ ಹಿರಿಯರು ಬೆಳಿಗ್ಗೆಯೇ ಆಟೋ ಮಾಡಿಕೊಂಡು ಬಂದು... ಎಲ್ಲರಿಗೂ ಕೊಟ್ಟಾಯ್ತು ನಿನಗೆ ಮಾತ್ರ ಇನ್ನು ಕೊಟ್ಟಿಲ್ಲ... ಹಬ್ಬಕ್ಕೆ ಮುಂಚೆ ಕೊಡಬೇಡವೇ ಎಂದು ಹೇಳಿ...76 ವರ್ಷದ ನನಗೆ ಕೊಟ್ಟು ಹೋದದ್ದು ಅವರ ಪ್ರೀತಿಯ ದ್ಯೋತಕ. ಕೊಡುವ  ಹಿಂದಿನ ಭಾವ ಬಹು ಮುಖ್ಯ. ನಾನೂ ಒಬ್ಬ ಮಾವನಾಗಿ ಹೀಗೆ ಮಾಡಿಲ್ಲ.

ಎರಡನೆಯದು, ಸೋಮವಾರ ಸಂಜೆ ನನ್ನ ಭಾವ ಮೈದುನ, ಕುಮಾರನ ( ಎಚ್ ಕೆ ಹರೀಶ್)  ಮನೆಯಲ್ಲಿ ಕಳೆದ ಕೆಲ ಗಂಟೆಗಳು. ನಮ್ಮ ಮಾವನವರ  ಜೊತೆಯಲ್ಲಿ..  ಅವರ ನಾಲ್ಕನೇ ತಲೆಮಾರಿನ...  ಅಭಿನವ ಶಂಕರ...(   ಸ್ನೇಹ ಳ ಮಗ)  ಪಟಾಕಿ ಹಚ್ಚಿದ್ದನ್ನು ನೋಡುವ ಸಂಭ್ರಮ.... ಅಭಿನವ ಶಂಕರನ ಮುದ್ದು ಮುದ್ದು ..ಜೊತೆಗೆ ತರಲೆಯ ಆಟ ಕಣ್ಣಿಗೊಂದು ಹಬ್ಬ.... 

ಇದಕ್ಕೆ ಕಾರಣ ಲಕ್ಷ್ಮಿ... ಆಗ್ರಹಪೂರ್ವಕವಾಗಿ ನಮ್ಮನ್ನು ಹಬ್ಬಕ್ಕೆ ಕರೆದು... ಸಂಭ್ರಮಿಸುವಂತೆ ಮಾಡಿ... ಪ್ರೀತಿಯಿಂದ ಉಡುಗೊರೆ ಕೊಟ್ಟು ಕಳಿಸಿದ್ದು. ಯಾವ ಪ್ರೇರಣೆಯೋ ಕಾಣೆ... ನನ್ನ ಮದುವೆಯಾದ 44 ವರ್ಷಗಳ ನಂತರ ಈ ಅನುಭವವನ್ನು ಕೊಟ್ಟಿದ್ದು ಲಕ್ಷ್ಮಿ... 

ಸಾಮಾನ್ಯವಾಗಿ, ನಮ್ಮಲ್ಲಿ..... ಮದುವೆಯಾದ ನಂತರದ ಮೊದಲ ದೀಪಾವಳಿಯ ಸಂಭ್ರಮ... ಅಳಿಯನಿಗೆ ಮಾವನ ಮನೆಯಲ್ಲಿ.... ಇದು ಅಳಿಯತನದ ಒಂದು ಸುಂದರಘಟ್ಟ..... ಅದೇಕೋ ಕಾಣೆ ಒಂದು ಮಾತು ಇದೆ.." ದಿಕ್ಕೆಟ್ಟ ಅಳಿಯ ದೀಪಾವಳಿಗೆ ಬಂದ"  ಅಂತ.  ಮಾವನ ಮನೆಯಲ್ಲೇ ಬೀಡುಬಿಟ್ಟು ಮನೆ ಅಳಿಯನಾಗಿ, ಅಳಿಯತನವನ್ನು ಮಾಡಿ, ಅಲ್ಲಿಯೇ ಉಳಿದವನಿಗೆ   " ಜಾಮಾತಾ ದಶಮಗ್ರಹಃ" ಎಂದು ಹೇಳಿರಬಹುದು... ಇದೊಂದು ಗ್ರಹಚಾರ ಎನ್ನುವ ಅರ್ಥದಲ್ಲಿ.

ಅಳಿಯತನ ಹಾಗೂ ಅದನ್ನು ಸಂಭ್ರಮಿಸುವ ಮಾವನ ಮನೆಯ ಮೊದಲ ನೆನಪು ನನ್ನ ಹಳ್ಳಿ ದೊಡ್ಡಜಾಲದಿಂದಲೇ ಶುರು.... ನನ್ನ ದೊಡ್ಡ ಭಾವ ಅನಂತರಾಮಯ್ಯನವರು..... (ನಾ ಹುಟ್ಟುವ ಮೊದಲೇ ನನ್ನ ದೊಡ್ಡಕ್ಕನ ಮದುವೆಯಾಗಿತ್ತು...) ನನಗೆ ನೆನಪಿರುವಂತೆ ಶನಿವಾರ ಸಂಜೆ ಬೆಂಗಳೂರಿ ನಿಂದ.. ನಮ್ಮೂರಿಗೆ ಸೈಕಲ್‌ನಲ್ಲಿ ಬರುತ್ತಿದ್ದರು... ಆಗಿನ ಕಾಲಕ್ಕೆ ಸೈಕಲ್ಲು ಇರುವುದೇ ಒಂದು ಹೆಮ್ಮೆಯ ವಿಚಾರ.  ನನ್ನ ಅಜ್ಜಿಗೆ ಭಾವನ ಆಗಮನ (ಅವರಿಗೆ ಮೊಮ್ಮಳಿಯ) ಸಂಭ್ರಮಕ್ಕೆ ಕಾರಣ... ಅಜ್ಜಿಯ ಸ್ವಗತವನ್ನು ...  ಮಾರನೆಯ ದಿನದ ಬೆಳಗಿನ ಅಡಿಗೆಯ ಚಿಂತನೆ .... "ರಾಯ ಬಂದನಪ್ಪ ಬಾನ ಇಳೀಬೇಕು" ನಾನು ಕೇಳಿದ್ದೇನೆ.. ಬಾನ ಎಂದಾಕ್ಷಣ.. ವಿಶೇಷ ಅಡಿಗೆ ಏನಲ್ಲ... ಅಜ್ಜಿ ಬೆಳಿಗ್ಗೆ ಮಾಡುತ್ತಿದ್ದದ್ದು ಘಮಘಮಿಸುವ ಹುಣಸೆ ಸಾರು, ಕೆಂಪಕ್ಕಿ ಅನ್ನ, ಮೇಲೊಂದು ಚಮಚ ತುಪ್ಪ... ಭಾವನ ಜೊತೆ ಉಂಡ ಆ ಊಟ, ಜೊತೆಗೆ ಅಜ್ಜಿಯ ಪ್ರೀತಿ....ವಾಹ್.. ಅವಿಸ್ಮರಣೀಯ .

ಇದರ ಜೊತೆ ಇನ್ನೊಂದು ನೆನಪು... ಇದನ್ನು ಹೇಳಿದ್ದು ನನ್ನಕ್ಕ... ಲಲಿತಕ್ಕನೇ ಇರಬಹುದು... ನಂದು ಒಂದೇ ಹಠ ಭಾವನ ಜೊತೆ ಮಲಗಬೇಕು ಎಂದು... ಪಾಪ ನಮ್ಮ ಭಾವ ನನಗೆ ನಿದ್ರೆ ಮಾಡಿಸಿ... ನನ್ನಮ್ಮನ ಬಳಿ ಕಳಿಸಿ...

ಇನ್ನು ಎರಡನನೆಯ ಭಾವ ನಂಜುಂಡಯ್ಯನವರು ನಮ್ಮಪ್ಪನ ಸೋದರಳಿಯ... ಹಾಗಾಗಿ ಅಳಿಯತನದ ವಿಶೇಷ ಸೌಲಭ್ಯ ಅವರಿಗಿರಲಿಲ್ಲವೇನೋ... ಮೊದಲಿಂದಲೂ ಮನೆಯ ಭಾಗವಾಗಿದ್ದವರಲ್ಲವೇ?

ಇನ್ನು ನಂತರದ ಬೆಂಗಳೂರು ವಾಸದ ಸಮಯದಲ್ಲಿ... ಬೇರೆ ಊರಲ್ಲಿದ್ದ ಕೊನೆಯ ಭಾವ ರಾಮರಾಯರು ಬಂದು ರಾತ್ರಿ ಉಳಿದರೆ.... ಉಡಲು ಪಂಚೆ ...ಜೊತೆಗೆ ಟವಲ್ ಕೊಡುವುದು,  ಜೊತೆಯಲ್ಲಿ ಕೂತು ಊಟ, ಮಲಗಲು ಹಾಸಿಗೆ ರೆಡಿ ಮಾಡುವುದು ...ಇವು ಅಳಿಯನಿಗೆ ತೋರುತ್ತಿದ್ದ ಪ್ರೀತಿಯ ಬಗೆ.

ಇನ್ನು ಈ ಹಬ್ಬದಲ್ಲಿ ಕಂಡದ್ದು... ನಮ್ಮ ಮನೆಯ ಕೆಲಸದ ಸಹಾಯಕ್ಕಾಗಿ ಬರುವ.. ಪ್ರಭ... ಸಂಭ್ರಮಪಟ್ಟಿದ್ದು... ಈ ವರ್ಷವೇ ಮಗಳ ಮದುವೆ ಮಾಡಿ.. ದೀಪಾವಳಿಗೆ ಅಳಿಯ ಬರುವ... ಹಾಗೂ ಮಾಡಬೇಕಾದ ... ಒಬ್ಬಿಟ್ಟು ಹಾಗೂ ಇತರ  ಆಚರಣೆಗಳ ಬಗ್ಗೆ ನನ್ನ ಹೆಂಡತಿಯೊಂದಿಗೆ ಹೇಳುತ್ತಿದ್ದದ್ದು... ಹೇಳುವಾಗಿನ ಉತ್ಸಾಹವೇ... ಅಷ್ಟಿದ್ದದ್ದು... ಇನ್ನು ಮಾಡುವಾಗಿನದು ಹೇಗಿರಬೇಡ...?

ಮೊದಲ ದೀಪಾವಳಿಯ ಸಂಭ್ರಮ ಮಾವನ ಮನೆಯಲ್ಲಿ ಕಳೆಯುವ ಭಾಗ್ಯ ನಮ್ಮದಾಗಿರಲಿಲ್ಲ... ( ಆಗಿನ ಕಾಲಕ್ಕೆ ನನಗೆ ಹೆಣ್ ಕೊಟ್ಟಿದ್ದೇ ಹೆಚ್ಚು ಇದು ಬೇರೆ ಯಾಕೆ.. ಅಂತ ಇರಬಹುದಾ...ಹ್ಹ ಹ್ಹ ಹ್ಹಾ...) ಇದ್ದದ್ದು ಮಾತ್ರ ಮಾವನ ಮನೆಯಲ್ಲಿ ..ಆದರೆ ಮನೆ ಕಾಯುವ ಕಾಯಕ ಮಾಡುತ್ತಾ... ಮಾವನ ಮನೆಯ ಎಲ್ಲರೂ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದ ಕಾರಣ ಮಾವನ ಮನೆಯನ್ನು ನಾನು ಮತ್ತು ನನ್ನ ಹೆಂಡತಿ ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದೆವು... ವಾಸ ಮಾವನ ಮನೆಯಲ್ಲಿ ಹಬ್ಬದ ಆಚರಣೆ ಅಮ್ಮನ ಮನೆಯಲ್ಲಿ... ಇದೂ ಒಂದು ವಿಶಿಷ್ಟ ಅನುಭವ... ಬೇರಾರಿಗೂ ದಕ್ಕಿಲ್ಲವೇನೋ...

ಈ ಸಮಯದಲ್ಲೇ ರವಿಯ ( ಅಂಬೂರ್ .. ತುಂಬಾ ತಮಾಷೆಯಾಗಿರುತ್ತಿದ್ದ ಹುಡುಗ... ವಿಜಯ ಮಾಡಿದ ಹೊಸ ಪ್ರಯೋಗದ ಅಡಿಗೆಗಳನ್ನು ಮೊದಲ ರುಚಿ ನೋಡುವ.. ಟೇಸ್ಟ್ ಮಾಸ್ಟರ್... ಟ್ರೆಕ್ಕಿಂಗ್ ಹೋದಾಗ ಟೀ ಮಾಡುತ್ತಿದ್ದ ಚಿಕ್ಕ ಅಡುಗೆ ಭಟ್ಟ.... ದುರದೃಷ್ಟವಶಾತ್ ಅವನು ಈಗ ಇಲ್ಲ) ಪರಿಚಯ, ಹಾಗೂ ಪಕ್ಕದ ಮನೆಯ ಮಾಮಿಯ ತಮಾಷೆ... ಹಾಗೂ ಸಲಹೆ ಸದಾ ನೆನಪಿನಲ್ಲಿರುವಂಥದ್ದು.

ಈ ಸಮಯದಲ್ಲಿನ ಇನ್ನೊಂದು ಘಟನೆ.... ಮೊದಲನೇ ದೀಪಾವಳಿ ನಾವು ಅಮ್ಮನ ಮನೆಯಲ್ಲಿ ಕಳೆದಾಗ... ಯಾರೊಂದಿಗೋ ಮಾತನಾಡುತ್ತಿದ್ದ ನನ್ನಮ್ಮ ಹೇಳಿದ್ದು..." ತಾಯಿ ಇದ್ದಿದ್ರೆ ಹೀಗಾಗಕ್ಕೆ ಬಿಡ್ತಿದ್ಲಾ... ಹೆಣ್ಣು ಮಕ್ಕಳಿಗೆ ಸುಖ ಪಡಕ್ಕೆ ತಾಯಿ ಇರಬೇಕು"... ಅದರಲ್ಲಿ ವಿಷಾದ ಇತ್ತಾ... ಬೇಜಾರಿತ್ತಾ..... ತಿಳಿಯದು.

ಹೌದು ತಾಯಿಲ್ಲದ ತವರು.... ಬೇರೆಲ್ಲರ ಪ್ರೀತಿ ಇದ್ದರೂ... ಒಂದಷ್ಟು ಕೊರತೆಯ ಭಾವವನ್ನು ಮೂಡಿಸುವುದಂತೂ ಸತ್ಯ.... ಇದು ನಾನು ಹೆಂಡತಿಯೂ ಸೇರಿ ಅಂತಹ ಹೆಣ್ಣು ಮಕ್ಕಳನ್ನು ಮಾತಾಡ್ಸುವಾಗ ಅರಿತದ್ದು.

ನಮ್ಮ ಮದುವೆಯ ಹೊತ್ತಿಗೆ ನನ್ನತ್ತೆ ಇರಲಿಲ್ಲ. ಅತ್ತೆಯ... ಪ್ರೀತಿಯನ್ನು ನಾನರಿಯೆ... ಆದರೆ ಇಲ್ಲೂ ಒಂದು ವಿಶೇಷ... ನನ್ನತ್ತೆಯ ಪ್ರೀತಿ ( ಅತ್ತೆಯಾಗಿ ಅಲ್ಲದಿದ್ದರೂ) " ಭಾಗು ಅತ್ತಿಗೆ" ಎಂದು ನಾನು ಕರೆಯುತ್ತಿದ್ದ. .. ಭಾಗಿರಥಮ್ಮನ ಪ್ರೀತಿ ನನಗೆ ದಕ್ಕಿದೆ. ನನ್ನನ್ನು ಅಳಿಯನನ್ನಾಗಿ ಮಾಡಿಕೊಳ್ಳವ ಆಸೆ ತುಂಬಿದ್ದ ಅವರು... ನನಗೆ ಮೊಗೆ ಮೊಗೆದು ಕೊಟ್ಟ ಆ ಮಾತೃ ಹೃದಯದ ಪ್ರೀತಿ ಮತ್ತು ಅಭಿಮಾನ ವರ್ಣಿಸಲು ಪದಗಳೇ ಇಲ್ಲ... ನಾನು ಶಹಾಬಾದಿನಲ್ಲಿದ್ದಾಗ , ಅವರು ಮಾಡಿ ಬಡಿಸುತ್ತಿದ್ದ ಮಧ್ಯಾಹ್ನದ ಊಟ, ಆ ಪ್ರೀತಿಯ ಸವಿ... ಹಸಿರು. ಮುಂದೆ ಆಗುವ ಅಳಿಯನಿಗಾಗಿ ಕೊಡಬೇಕಾದ ಎಲ್ಲ ಪ್ರೀತಿಯನ್ನು.... ಮುಂಚೆಯೇ ಕೊಟ್ಟು ..( ಮುಂದೆ ಕೊಡಲಾಗುವುದಿಲ್ಲ ಎಂಬ ಅರಿವಿತ್ತಾ?) ಜೀವನಪೂರ್ತಿ ಆ ನೆನಪಿನಲ್ಲಿ ಸುಖ ಪಡಲಿ ಎಂದಿರಬಹುದು... ಕಣ್ಣು ತುಂಬಿ ಬರುತ್ತಿದೆ... ಭಾಗುವನ್ನು ಅತ್ತೆಯಾಗಿ ಕಾಣುವ ಸೌಭಾಗ್ಯ ನನಗಿಲ್ಲ... ಇರಲಿ.. ಆದರೆ ನೆನಪು ಸಾಗರದಷ್ಟು.

ಈ ನೆನಪಿನ ಸುರುಳಿಯನ್ನು ಬಿಚ್ಚಲು ಕಾರಣಳಾದ... ನಮ್ಮತ್ತೆಯ ಪ್ರತಿನಿಧಿಯಂತೆ ಅಭಿಮಾನ  ತೋರಿದ ಲಕ್ಷ್ಮಿಗೆ ನನ್ನ ಹೃದಯಪೂರ್ವಕ ವಂದನೆಗಳು..Thank you Lakshmi...

 

Comments

  1. .
    ಮನ ತುಂಬಿ ಬಂತು.

    ReplyDelete
  2. ಕಣ್ಣು ತುಂಬಿ ಬಂತು. ಧನ್ಯವಾದಗಳು Bhavaji ನನಗೂ ಇದೆಲ್ಲಾ ಗೊತ್ತಿಲ್ಲದೆ ನಡೆದದ್ದು. ಗೊತ್ತಿದ್ದರೆ ಇನ್ನೂ ಚೆನ್ನಾಗಿ ಪ್ಲಾನ್ ಮಾಡ ಬಹುದಾಗಿತ್ತು ಅನ್ನಿಸಿತು. ಕರೆಗೆ ಮನ್ನಿಸಿ ಆಗಮಿಸಿದ tamibbarigu ಧನ್ಯವಾದಗಳು 🙏

    ReplyDelete
  3. ನಿಮ್ಮ ಕಥೆಗಳ ಜೊತೆಗೆ ನಿಮ್ಮ ನೆನಪಿನ ಶಕ್ತಿ ಬಗ್ಗೆ ಖುಷಿ ಎನಿಸುತ್ತದೆ

    ReplyDelete
  4. chendada bhava baraha. ishtavayithu

    ReplyDelete
  5. ಪ್ರೀತಿಯ ರಂಗಣ್ಣ,
    ನೀವು ಬರೆದಿರುವ ದೀಪಾವಳಿಯ ಅನುಭವ ಮನಮುಟ್ಟುವಂತೆ ಇದೆ. ತುಂಬಾ ಸ್ವಾರಸ್ಯಕರವಾಗಿದೆ . ಕೆಲವು ವಿಷಯಗಳು ಸಂತೋಷದಿಂದ ಹಿಗ್ಗುವಂತೆ ಮಾಡಿದರೆ ಕೆಲವು ಕಣ್ಣಾಲ್ಲಿಗಳು ತುಂಬುವಂತೆ ಇವೆ. ಒಟ್ಟಿನಲ್ಲಿ ನಿಮ್ಮ ಗಂಡ ಹೆಂಡತಿಯರ ದೀಪಾವಳಿಯ ಸಡಗರದ ಅನುಭವ ಅದ್ಭುತ. ಎಲ್ಲರಿಗೂ ಈ ತರಹದ ಅವಕಾಶ ಸಿಗುವುದಿಲ್ಲ. ಅದನ್ನು savida ನೀವೇ ಧನ್ಯರು .
    ಧನ್ಯವಾದಗಳೊಂದಿಗೆ
    ರಾಮನಾಥ್

    ReplyDelete
  6. Sooper chikappa

    ReplyDelete
  7. ದೀಪಾವಳಿಯ ಹಬ್ಬದ ಸುಂದರ ಆಚರಣೆ ತುಂಬಾ ಸುಂದರವಾಗಿ ಅಕ್ಷರದ ಮೂಲಕ ಮೂಡಿ ಬಂದಿದೆ. ಇಂಥ ಅನುಭವಕ್ಕೆ ಕಾರಣಳಾದ ಲಕ್ಷ್ಮಿಗೆ ನನ್ನದು ಧನ್ಯವಾದಗಳು.

    ReplyDelete
  8. ನಾಗೇಂದ್ರ ಬಾಬು19 November 2023 at 10:55

    ನಮ್ಮ ತಲೆಮಾರಿನ ದೀಪಾವಳಿಯ ಸಂಭ್ರಮ ನೆನಪಿಗೆ ಬಂತು, 50 ರೂ ಪಟಾಕಿ ನಾಲ್ಕಾರು ಮಕ್ಕಳು ಹಂಚಿಕೊಂಡು ಮೂರು ದಿನಗಳ ತನಕ ಬಚ್ಚಿಟ್ಟು ,ಕದ್ದು, ಪಟಾಕಿ ಸಿಡಿಸಿ ಸಂಭ್ರಮ ಪಡೆದದ್ದು, ಬಹು ಮಹಡಿ ಕಟ್ಟಡ ಇಲ್ಲದೇ ಇದ್ದುದರಿಂದ ರಾಕೆಟ್ ಮೇಲೆ ಹೋದಾಗ ಪಟ್ಟ ಖುಷಿ, ಸಗಣಿ ಇಂದ ಮಾಡಿದ ಬಲಿ ಗೆ ಚೆಂಡು ಹೂವಿನ ಅಲಂಕಾರ,ದೊಡ್ಡ ರಂಗೋಲೆ,ಎಣ್ಣೆ ಸ್ನಾನ, ಮುಂಜಾವಿನ ರೇಡಿಯೊದ ನಾದಸ್ವರ ಎಲ್ಲವನ್ನೂ ನೆನಪಿಸಿದ ನಿಮ್ಮ ಬರಹಕ್ಕೆ ಧನ್ಯವಾದಗಳು.....ನನ್ನ ಅಳಿಯ ಪಟಾಕಿ ಪ್ರಿಯ ಅದರಿಂದಾಗಿ ಹಲವಾರು ವರ್ಷಗಳಿಂದ ಕೈ ಬಿಟ್ಟಿದ್ದ ಪಟಾಕಿ ಸಿಡಿಸುವ
    ಸಂಭ್ರಮಕ್ಕೆ ಮತ್ತೆ ಚಾಲನೆ...ಈ ದಿನ ಭಾರತ ವಿಶ್ವ ಕಪ್ ಗೆದ್ದರೆ ಮತ್ತೊಂದು ದೀಪಾವಳಿ
    ಧನ್ಯವಾದಗಳು
    ಬಾಬು

    ReplyDelete
  9. ದೀಪಾವಳಿ ಹಬ್ಬದ ಆಚರಣೆ ಸಣ್ಣವರಿದ್ದಾಗ ಮತ್ತು ಇಲ್ಲಿಯವರೆಗೆ ಆದ ಘಟನೆಗಳನ್ನು ಉತ್ತಮವಾಗಿ ಬರೆದಿದ್ದೀರಿ.ತಮ್ಮ ನೆನಪಿನ ಶಕ್ತಿ ಅದ್ಬುತ.ತಮಗೆಲ್ಲರಿಗೂ ಒಳ್ಳೆಯದಾಗಲಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ