ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ

 ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ

ನೆನ್ನೆಯ ದಿನದ ಕಾರ್ಯಕ್ರಮದ ಗುಂಗಿನಲ್ಲೇ ಬೆಳಗ್ಗೆ ಎದ್ದೆ... ಈಗೀಗ ಎದ್ದು ಬೆಳಗಿನ ಶುಚಿ ಕಾರ್ಯ ಕ್ರಮಗಳು ಮುಗಿದ ಕೂಡಲೇ ಫೋನ್ ಕೈಗೆತ್ತಿಕೊಳ್ಳುವುದು ಒಂದು ಚಟವೇ ಆಗಿದೆ. ಎಂದಿನಂತೆ ಫೋನ್ ಕೈಗೆತ್ತಿಕೊಂಡಾಗ ಅದರ ವಾಟ್ಸಪ್ ಮೆಸೇಜುಗಳ ಒಂದು ಪಟ್ಟಿ.. ಅಶಕ್ತ ಪೋಷಕ ಸಭಾ ಸಮೂಹ ಎಂಬ ಗ್ರೂಪ್ನಲ್ಲಿ ಚಿತ್ರಗಳು ಹಾಗೂ ವೀಡಿಯೋಗಳ ಸುರಿಮಳೆ...

ಈ ಚಿತ್ರಗಳು ಹಾಗೂ ವಿಡಿಯೋಗಳು ನೆನ್ನೆಯ ದಿನ ಅಶಕ್ತ ಪೋಷಕ ಸಭಾ ದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಿದ್ದು.... ಅದನ್ನು ನೋಡುತ್ತಾ ಸಭಾದ ನಿವಾಸಿಗಳು ನಡೆಸಿಕೊಟ್ಟ ಕಾರ್ಯಕ್ರಮ... ಹಾಗೂ ಅವರಲ್ಲಿ ಆದ ಬದಲಾವಣೆಗಳ ನೆನಪಿನ ಓಟ ಮನಸ್ಸಿನಲ್ಲಿ ಮೂಡಿತು.

ಅಶಕ್ತ ಪೋಷಕ ಸಭಾ ಒಂದು ವೃದ್ಧಾಶ್ರಮ, ಬೆಂಗಳೂರಿನ ವಿಶ್ವೇಶ್ವರಪುರ ದಲ್ಲಿ ಇದೆ. ಇದು ಶತಮಾನ ಕಂಡಿರುವ ಒಂದು ಸಂಸ್ಥೆ. ಇದರಲ್ಲಿ 120ಕ್ಕೂ ಹೆಚ್ಚು ಜನ ನಿವಾಸಿಗಳಿದ್ದಾರೆ. ಎಲ್ಲವೂ ಅಚ್ಚುಕಟ್ಟು ಹಾಗೂ ಎಲ್ಲವೂ ಉಚಿತ.... ಇದು ಈ ಸಂಸ್ಥೆಯ ವಿಶೇಷತೆ. ಒಂದು ಸಂಸ್ಥೆ ಒಂದು ಶತಮಾನದ ಕಾಲ ನಡೆದು ಬಂದಿದೆ ಎನ್ನುವುದೇ ಒಂದು ವಿಶೇಷ... ಇದಕ್ಕೆ ಮೂಲತಃ ಅಡಿಪಾಯ ಹಾಕಿದ ಮಹನೀಯರ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗೂ ಬದ್ಧತೆ... ಅದನ್ನು ಉಳಿಸಿ ಪೋಷಿಸಿ ಬೆಳೆಸಿದ ಮುಂದಿನ ತಲೆಮಾರಿನ ಮಹನೀಯರು ಹಾಗೂ ಇಂದಿನ ಆಡಳಿತ ವರ್ಗ ಹಾಗೂ ಸಿಬ್ಬಂದಿಯ ಮುಂದುವರಿದ ಅದೇ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗೂ ಬದ್ಧತೆಯೇ ಕಾರಣ ಎಂದು ನನ್ನ ನಂಬಿಕೆ.

ನಿವಾಸಿಗಳಿಗೆ ಹಸನಾದ ಜೀವನಕ್ಕೆ ಬೇಕಾದ ಎಲ್ಲ ಅನುಕೂಲಗಳು ಇಲ್ಲಿವೆ... ಅದಲ್ಲದೆ ಆವರಣದಲ್ಲಿರುವ ಆಂಜನೇಯನ ದೇವಸ್ಥಾನ, ಅಲ್ಲಿ ನಡೆಯುವ ನಿತ್ಯ ಪೂಜೆ , ಭಜನೆ, ಪೂರ್ಣಿಮೆಯ ದಿನದಂದು ಸತ್ಯನಾರಾಯಣ ಪೂಜೆ.. ಹೀಗೆ ಜೀವನ ಸಂಜೆಯಲ್ಲಿರುವ, ಯಾವುದೋ ಕಾರಣದಿಂದ ನೊಂದು, ಬಂದು ಇಲ್ಲಿ ಸೇರಿರುವ ನಿವಾಸಿಗಳಿಗೆ ಚೇತೋದಾಯಕ. 

ನಾನು ನಾಲ್ಕಾರು ವೃದ್ಧಾಶ್ರಮಗಳನ್ನು ನೋಡಿದ್ದೇನೆ, ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದ್ದೇನೆ, ಕೆಲ ವೃದ್ಧಾಶ್ರಮಗಳ ಬಗ್ಗೆ ಕೇಳಿ ತಿಳಿದಿದ್ದೇನೆ,  ಆದರೆ ಎಲ್ಲವನ್ನೂ ಉಚಿತವಾಗಿ, ಜೊತೆಗೆ ಅಚ್ಚುಕಟ್ಟಾಗಿ ನಿವಾಸಿಗಳ ಕ್ಷೇಮ ವನ್ನು ನೋಡುವ ಸಂಸ್ಥೆಗಳು ಕಡಿಮೆ ಏನೋ...

ಈ ಸಂಸ್ಥೆಯೊಂದಿಗೆ ನನ್ನ ಮತ್ತು ನಮ್ಮ ತಂಡದ ಒಡನಾಟ ಶುರುವಾಗಿದ್ದು 2016ರಲ್ಲಿ.... ಆಡಳಿತ ವರ್ಗದವರ ಮೊದಲ ಭೇಟಿಯಲ್ಲಿ ನನಗೆ ಸಿಕ್ಕ ಮಾಹಿತಿ..." ನಿವಾಸಿಗಳಿಗೆ ಕಾಫಿ ತಿಂಡಿ ಊಟ ಇವೆಲ್ಲವೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ.. ಅದರ ನಂತರ ಅವರಿಗಾಗಿ ಏನೂ ಚಟುವಟಿಕೆಗಳು ಇಲ್ಲದ ಕಾರಣ, ಅವರು ಅಲ್ಲಿ ಇಲ್ಲಿ ಕೂತು, ತೂಕಡಿಸುವುದು ಅಥವಾ ನಿದ್ದೆ ಮಾಡುವುದು ನಡೆದಿದೆ. ಇದರಿಂದ ಅವರ ಮೈ ಮನಸ್ಸುಗಳು ಜಡ್ಡು ಹಿಡಿದು, ಅವರವರ ನೋವುಗಳನ್ನೇ ಮೆಲುಕು ಹಾಕುತ್ತಾ ಕಾಲ ಕಳೆಯುತ್ತಾರೆ.. ಅದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಅವರಲ್ಲಿ ಒಂದಷ್ಟು ಬದಲಾವಣೆಯನ್ನು ತರಬೇಕು"

ಗುರಿ ನಿಶ್ಚಯವಾಗಿತ್ತು, ಆದರೆ ಯಾವ ದಾರಿಯೂ ಸ್ಪಷ್ಟವಾಗಿರಲಿಲ್ಲ... ಮೊದಲ ಹಂತದಲ್ಲಿ ನನಗೆ ಕೈಜೋಡಿಸಿದವರು ರತ್ನಪ್ರಭಾ ಹಾಗೂ ಶಕುಂತಲಾ.... ಕೆಲ ದಿನಗಳ ಮಟ್ಟಿಗೆ ನಾವು ಮೂರು ಜನ ಎಲ್ಲ ನಿವಾಸಿಗಳನ್ನು ವೈಯುಕ್ತಿಕವಾಗಿ ಮಾತನಾಡಿಸಿ ಅವರ ಭಾವನೆಗಳನ್ನು ಅರಿತೆವು. ಎಲ್ಲವನ್ನು ಕ್ರೋಢೀಕರಿಸಿ ವಿಶ್ಲೇಷಣೆ ಮಾಡಿದಾಗ ನಮಗನಿಸಿದ್ದು... ಅವರಲ್ಲಿ ಕೆಲವರು ನಿಜವಾಗಿಯೂ ಕೈಲಾಗದವರು, ಕೆಲವರು ಏನೂ ಮಾಡಲು ತೋಚದೆ ಇರುವವರು, ಇನ್ನು ಕೆಲವರು ಏನು ಮಾಡಲೂ ಉತ್ಸಾಹವಿಲ್ಲದವರು (ಸ್ವಲ್ಪಮಟ್ಟಿಗೆ ಸೋಮಾರಿಗಳು ಎಂದರೂ ಸರಿಯೇ) ಹಾಗಾಗಿ ಕೈಲಾಗದವರನ್ನು ಬಿಟ್ಟು ಬೇರೆಲ್ಲರ ಜೊತೆ ಒಂದಷ್ಟು ಚಟುವಟಿಕೆಗಳನ್ನು ಮಾಡೋಣ ( ಇಲ್ಲೂ ಸಹ ಏನು ಮಾಡಬಹುದು ಎಂಬ ಸ್ಪಷ್ಟತೆ ನಮ್ಮಲ್ಲಿರಲಿಲ್ಲ) ಎಂದು ಯೋಚಿಸಿ, ಅದನ್ನು ಆಡಳಿತ ವರ್ಗದವರೊಡನೆ ಹಂಚಿಕೊಂಡು, ಅವರ ಒಪ್ಪಿಗೆಯಿಂದ ಕಾರ್ಯನಿರತವಾದೆವು. ಇಲ್ಲಿ ಆಡಳಿತ ವರ್ಗದವರು ನಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರಿಯಲು ಕೊಟ್ಟ ಒಪ್ಪಿಗೆ ಶ್ಲಾಘನೀಯ. ಇದು ನಮಗೆ ಒಂದು ಅವಕಾಶ ಹಾಗೂ ಒಂದು ಸವಾಲಾಗಿತ್ತು.

ಎಲ್ಲರನ್ನೂ ಸಭಾಂಗಣಕ್ಕೆ ಬರುವಂತೆ ಮಾಡುವುದೇ ಮೊದಲ ಸವಾಲು.... ದೇವಸ್ಥಾನದ ಗಂಟೆ ಬಾರಿಸಿ ಸಮಯವನ್ನು ತಿಳಿಸುವುದು, ಧ್ವನಿ ವರ್ಧಕ ದ ಮೂಲಕ ಎಲ್ಲರನ್ನೂ ಬರಲು ಹೇಳುವುದು... ಹೀಗೆ ನಡೆದಿತ್ತು. ಆದರೆ ಬರುವ ಜನ ಮಾತ್ರ ಅಷ್ಟಕಷ್ಟೇ.. ಇದು ಒಂದಷ್ಟು ಬದಲಾವಣೆಯಾಗಲು ಕಾರಣವಾಗಿದ್ದು ಸಭಾದ ಕಾರ್ಯದರ್ಶಿಗಳಾದ ಶ್ರೀ ಅಶೋಕ್ ಕುಮಾರ್ ಅವರು ನಿವಾಸಿಗಳಿಗೆ ಕೊಟ್ಟ ಒಂದು ಖಡಕ್ ಸಂದೇಶ..... ಸಾಮಕ್ಕೆ ಬಗ್ಗದ್ದು ದಂಡಕ್ಕೆ ಬಗ್ಗಿತೇನೋ....

ಈ ಹಂತದಲ್ಲಿ ನಮ್ಮ ಜೊತೆಯಾದವರು ಅದಿತಿ ಮತ್ತು ಹೇಮಾ. ಇವರಿಬ್ಬರೂ ಯೋಗಭ್ಯಾಸಿಗಳು.... ಇಲ್ಲಿನ ನಿವಾಸಿಗಳ ಸಾಮರ್ಥ್ಯಕ್ಕೆ ಏನೇನು ಮಾಡಿಸಬಹುದು ಎಂದು ಯೋಚನೆ, ಅದನ್ನು ಮಾಡುವ ಪ್ರಯತ್ನ ಮುಂದುವರೆಯಿತು,

ನಮ್ಮ ಮತ್ತು ನಿವಾಸಿಗಳ ಮಧ್ಯೆ ಒಂದು ಬಾಂಧವ್ಯ ಏರ್ಪಡುವವರೆಗೆ ಒಂದಷ್ಟು ಹೆಣಗಾಡಿದ್ದಿದೆ... ಈಗ ಅದು ಸಂಪೂರ್ಣ ಬದಲಾಗಿದೆ. ಬರುವ ಎಲ್ಲರೂ ಉತ್ಸಾಹದಿಂದ ಬಂದು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ನಾವು ಹೋದಾಗ ನಮ್ಮನ್ನು ಸ್ವಾಗತಿಸುವ ರೀತಿ, ಮುಖದಲ್ಲಿನ ಹಾಸ ನಮಗೆ ನಮ್ಮ ಗುರಿಯೆಡೆಗೆ ತಲುಪುತ್ತಿರುವ ಸಂಕೇತ ಅಂತ ನನ್ನ ಅನಿಸಿಕೆ. 

ಸಂತೋಷ ವಿಷಯ ಇವರೆಲ್ಲ ಇಂದೂ ನಮ್ಮ ತಂಡದ ಭಾಗವಾಗಿರುವುದು. ತಂಡಕ್ಕೆ ಬಂದು ಒಂದಷ್ಟು ದಿನ ಕೆಲಸ ಮಾಡಿ ವೈಯಕ್ತಿಕ ಕಾರಣಗಳಿಂದ ಬಿಟ್ಟುಹೋದವರು ಸಾಕಷ್ಟು ಮಂದಿ... ಅದರಲ್ಲಿ ಈಗಲೂ ಉಳಿದಿರುವುದು ಸುಮಾYV. ನಂತರ ನಮ್ಮ ತಂಡ ಸೇರಿದವರು ಗೀತಾ,  ಸುಮ S, ಹಾಗೂ ಶೋಭಾಲತಾ.  ಇವರಿಗೆಲ್ಲಾ ನನ್ನ ನಮನಗಳು.

ಸಾಕಷ್ಟು ಪ್ರಯೋಗಗಳ ನಂತರ ಈಗ ಕಾರ್ಯಕ್ರಮಗಳು ಒಂದು ಹಂತಕ್ಕೆ ಬಂದಿವೆ, ಸುಲಲಿತವಾಗಿ ನಡೆಯುತ್ತಿದೆ.

ನಿವಾಸಿಗಳೆಲ್ಲರ ಚಟುವಟಿಕೆಗಳನ್ನು ಪ್ರದರ್ಶಿಸಿದರೆ ಹೇಗೆ ಎಂಬ ಯೋಚನೆ ಬಂದಾಗ ಶುರುವಾದದ್ದೆ ಯೋಗ ದಿನದ ಆಚರಣೆ. ಅದೂ ಸಹ ಸತತವಾಗಿ ನಡೆದು ಬಂದಿದೆ              ( ಕೋವಿಡ್ ಸಮಯದಲ್ಲಿ ನಿವಾಸಿಗಳೇ ಸೇರಿ ಹಿಂದಿನ ವರ್ಷದ ಕಾರ್ಯಕ್ರಮವನ್ನು ಮತ್ತೊಮ್ಮೆ ಮಾಡಿದ್ದಾರೆ)

ಸುಮಾರು ಎರಡು ತಿಂಗಳ ಕಾಲ ಈ ಕಾರ್ಯಕ್ರಮಕ್ಕೆ ತಯಾರಿ, ಬೇರೆ ಬೇರೆ ಆಟಗಳು ಗೆದ್ದವರಿಗೆ ಬಹುಮಾನಗಳು, ಕೋಲಾಟ, ಜಾನಪದ ನೃತ್ಯ (lezim ನೊಂದಿಗೆ), ಯೋಗಾಸನಗಳು, ಕಿರು ನಾಟಕ ಎಲ್ಲದರ ಅಭ್ಯಾಸ.

ಬಹುಮಾನ ಬಂದಿಲ್ಲ ಎಂದು ಕೆಲವರಿಗೆ ಬೇಸರ... ಮೋಸವಾಗಿದೆ ಎನ್ನುವ ಅಭಿಪ್ರಾಯ ಕೆಲವರು ಹೀಗೆ... ಯಾರ ಉತ್ಸಾಹವನ್ನು ಕುಂದಿಸದೆ.... ಎಲ್ಲರಿಗೂ ಸಮಾಧಾನ ಪಡಿಸುವ ದೃಷ್ಟಿಯಿಂದ 44 ಜನಕ್ಕೆ ಬಹುಮಾನ ಹಂಚಲಾಯಿತು ಎನ್ನುವುದು ಹೆಚ್ಚು ಸೂಕ್ತ.

ನೆನ್ನೆ ಸಂಜೆ ನಡೆದದ್ದೇ ಈ ಕಾರ್ಯಕ್ರಮ. ಸಂಜೆ ಸಭಾ ಒಳಗೆ ಹೋದಾಗ ಕಂಡ ದೃಶ್ಯ ವಾವ್.... ಎಲ್ಲರೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಿಂಗರಿಸಿಕೊಂಡು ಉತ್ಸಾಹದಿಂದ ಓಡಾಡುತ್ತಿದ್ದಾರೆ... ಚಿಕ್ಕ ಮಕ್ಕಳ ಸಡಗರ ನೆನಪಿಗೆ ಬಂತು. ಒಬ್ಬೊಬ್ಬರು ಬಂದು ತಮ್ಮ ಸಿಂಗಾರದ ಬಗ್ಗೆ ಅಭಿಪ್ರಾಯ ಕೇಳುವುದು, ಅವರು ಈ ಬಟ್ಟೆ ಹಾಕಿಕೊಳ್ಳಲಾ ಎಂದು ಕೇಳುವುದು ಏಲ್ಲ ನಡೆದಿತ್ತು...

ಕಾರ್ಯಕ್ರಮ ಶುರುವಾಗುವ ಸಮಯ ಬಂತು ...ಅದರ ಒಂದು ಚಿತ್ರ ಸಂಚಿಕೆ....

    ದೀಪ ಬೆಳಗುವುದು


ಪ್ರಾರ್ಥನೆ

    ಯೋಗ ಪ್ರದರ್ಶನ


    ಸೂರ್ಯ ನಮಸ್ಕಾರ 

ಏರೋಬಿಕ್ಸ್

ವೇದಿಕೆ ಕಾರ್ಯಕ್ರಮ. ..ಬಹುಮಾನ ವಿತರಣೆ

  ಸಭಾದವರು ನಮ್ಮನ್ನು ಗೌರವಿಸಿದ್ದು

   ಭಾರತ ದರ್ಶನ  ಮಾತು ...

    ಕೋಲಾಟ

    Lezim ತಂಡ

    ಕಿರು ನಾಟಕ

ಹಾಗೆ ಮುಂದುವರೆದು ಮುಗೀತು ಸಹ

ದೇವಸ್ಥಾನದಲ್ಲಿ ಆಂಜನೇಯನಿಗೆ ಮಂಗಳಾರತಿ, ರಾತ್ರಿಯ ಊಟದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು

ನನ್ನ ನೆನಪಿನ ಮೆರವಣಿಗೆಯೂ.. ಇಲ್ಲಿಗೆ ನಿಂತೇ ಹೋಯಿತು.. ನಮಸ್ಕಾರ. ..




Comments

  1. ಅರ್ಥಗರ್ಬಿತವಾಗಿ ನೆಡೆಸಿದ ಯೋಗ ದಿನಾಚಣೆಯ ಕಾರ್ಯಕ್ರಮಕ್ಕೆ ನಿಮಗೂ ಹಾಗೂ ಭಾಗವಹಿಸಿದ ಅಶಕ್ತ ಪೋಷಕ ಸಂಸ್ಥೆಯ ಹಿರಿಯ ನಾಗೀಕರೆಲ್ಲಾರಿಗೂ ನನ್ನ ಹೃತಪೂರ್ವಕ ನಮನಗಳು 👌😘

    ReplyDelete
  2. ಸಧ್ಯಕ್ಕೆ ನಿಮ್ಮ ನೆನಪಿನ ಬುತ್ತಿ ನಿಂತಿದೆ, ಮುಂದುವರೆಯುತ್ತದೆ.ನಿಮ್ಮ ನೇತೃತ್ವದಲ್ಲಿ ನಾವೆಲ್ಲಾ ಅಂದರೆ APS ತಂಡದವರು ಕೈ ಜೋಡಿಸುತ್ತೇವೆ. ಈ ಅವಕಾಶಕ್ಕಾಗಿ ನಿಮಗೆ ಹೃನ್ಮನದ ಧನ್ಯವಾದಗಳು🙏

    ReplyDelete
  3. ತುಂಬಾ ಚೆನ್ನಾಗಿದೆ
    ನಿಮ್ಮ ಮಾರ್ಗದರ್ಶನ ನಮಗೆ ಒಂದು ಶ್ರೀರಕ್ಷೆ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ