ಹಣ್ಣುಗಳ ರಾಜ - ಮಾವು

ಹಣ್ಣುಗಳ ರಾಜ - ಮಾವು ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು. ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ.. ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ, ರುಚಿ ರುಚಿ ಹಣ್ಣು ಅದರದ್ದೇ ರಸ ಅಪ್ಪೆಸಾರು ಉಪ್ಪಿನಕಾಯಿ ಕೋಸಂಬರಿಗೆ ಮಾವಿನಕಾಯಿ ಚಟ್ಣೀ ಗೊಜ್ಜು ಸಿಕರಣೆ ದೇವರೇ ನಿನಗೆ ಆರೋಗಣೆ ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ. ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿ...