ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

 


ಇದು ಚುನಾವಣೆಯ ಸಮಯ ಎಲ್ಲೆಲ್ಲೂ ಅದೇ ವಿಷಯ. ಟಿವಿಯಲ್ಲಿ ಅಂತೂ 24 ಗಂಟೆಯೂ ಅದರ ಬಗ್ಗೆಯೇ ಮಾತುಕತೆ. ಇನ್ನು ಜನಸಾಮಾನ್ಯರ ಮಾತಿನಲ್ಲಿ ಚುನಾವಣೆಯ ವಿಚಾರ ಬರದೇ ಇರುವುದು ಸಾಧ್ಯವೇ ಇಲ್ಲ. ರಾಜ ಯಾರಾದರೇನು ರಾಗಿ ಬೀಸುವುದು ತಪ್ಪಲಿಲ್ಲ ಎನ್ನುವುದು ಒಂದು ನಾಣ್ಣುಡಿ... ಆದರೆ ಪ್ರಜಾಪ್ರಭುತ್ವದಲ್ಲಿ ರಾಜನನ್ನು ಆರಿಸುವುದು ನಮ್ಮ ಜವಾಬ್ದಾರಿ. 

ಈಚೆಗೆ ಸ್ನೇಹ ಸೇವಾ ಟ್ರಸ್ಟ್ ನಡೆಸಿದ ಮಕ್ಕಳಿಗಾಗಿ ಬೇಸಿಗೆ ಶಿಬಿರದಲ್ಲೂ ಸಹ ಚುನಾವಣೆಯ ವಿಷಯ ರಿಂಗಣಿಸಿತು.  ಆದರೆ ಮಕ್ಕಳು ಮಾಡಿದ್ದು ಚುನಾವಣೆಯ ಬಗ್ಗೆ ಜಾಗೃತಿ. ಮಕ್ಕಳಿಗೆ ಈ ವರ್ಷವೂ ಒಂದು ಕಿರು ನಾಟಕವನ್ನು ಮಾಡಲು ಉಮೇದು. ಕಿರು ನಾಟಕದ ವಿಷಯ " ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ,  ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು".  ದಿವ್ಯ ಮತ್ತು ಅಶ್ವಿನಿ ಪಿಯುಸಿ ಓದುತ್ತಿರುವ ಹುಡುಗಿಯರು, ಈ ವಿಷಯವನ್ನು ತಮ್ಮದೇ ರೀತಿಯಲ್ಲಿ ರೂಪ ಕೊಟ್ಟು ಮಕ್ಕಳನ್ನು ತಯಾರಿ ಮಾಡಿದರು.  ಮಕ್ಕಳ ಉತ್ಸಾಹ ಹೇಳತಿರದು. ಒಂದು ವಾರದ ಅವಧಿಯಲ್ಲಿ ಅವರು ಮಾಡಿದ ಪ್ರಯತ್ನ ಯಶಸ್ವಿ ಆಯಿತು ಎಂದು ಹೇಳಲೇಬೇಕು. ಆದರೆ ಈ ವಿಷಯ ಎಷ್ಟು ಜನದ ಮೇಲೆ ಪ್ರಭಾವ ಬೀರಿ ಬದಲಾವಣೆ ತರಲಿದೆ ಎನ್ನುವುದು ಮಾತ್ರ ಆಶಾಭಾವ.

ಈ ಕಿರು ನಾಟಕ ನನ್ನ ಹಳ್ಳಿಯ ದಿನಗಳನ್ನು ನೆನಪಿಸಿತು. ನಾನು ಓದುತ್ತಿದ್ದದ್ದು 5ನೇ ತರಗತಿಯಲ್ಲಿ (1957 ರ ಸಾರ್ವತ್ರಿಕ ಚುನಾವಣೆ ಅಂತ ಈಗ ಹೇಳಬಲ್ಲೆ). ನಮ್ಮೂರಲ್ಲೂ ಚುನಾವಣೆಯ ಗಾಳಿ ಬಿಸುತ್ತಿತ್ತು. ಯಾರೆಲ್ಲಾ ಹೊಸಬರು ಊರಿನಲ್ಲಿ ಓಡಾಡುತ್ತಿದ್ದರು. ನಮಗೆಲ್ಲ ಕುತೂಹಲ.. ಹೀಗಿರಲು ನಮ್ಮೂರ ಗೌಡ ರಿಂದ ನನಗೊಂದು ಕರೆ ಬಂತು.. ಅವರ ಮನೆಗೆ ಹೋದಾಗ ಅಪರಿಚಿತ ಜನರಿದ್ದರು... ಏನೋ ಮಾತುಕತೆ ನಡೆಯುತ್ತಿತ್ತು.  ನಮ್ಮೂರ ಗೌಡರಿಗೆ ಹಾಗೂ ಗೌಡತಿಗೆ ನನ್ನ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನ. ಕರೆದು ಪಕ್ಕದಲ್ಲಿ ಕೂಡಿಸಿಕೊಂಡರು. ಬಂದವರು ಕುರ್ಚಿಯ ಮೇಲೆ, ನಾವೆಲ್ಲ ಚಾಪೆಯ ಮೇಲೆ.

ನನ್ನ ಪರಿಚಯ ಮಾಡಿಕೊಟ್ಟದ್ದು ಹೀಗಿತ್ತು.." ಶಾಮಣ್ಣೋರ ಮಗ ಚೂಟಿ, ಇವನಿಗೆ ಹೇಳಿ" ಅಂತ.

ಬಂದವರು ನನ್ನ ಶರಟಿಗೆ ಒಂದು ಬ್ಯಾಡ್ಜ್ ಹಾಕಿದರು.. ನನಗೂ ಬಲು ಹೆಮ್ಮೆ. ಒಂದು ಬಾವುಟ ಹಾಗೂ ಒಂದಷ್ಟು ಚೀಟಿಗಳನ್ನು ಕೊಟ್ಟರು( ರಾಷ್ಟ್ರಧ್ವಜ ಅಂತ ನನ್ನ ಭಾವನೆ.. ಪ್ರಭಾತ ಪೇರಿ ಮೆರವಣಿಗೆಯಲ್ಲಿ ಹಿಡಿದು ಹೋಗುತ್ತಿದ್ದದ್ದು.  ನನ್ನ ಮೊಮ್ಮಗಳು ಇಂದು ಕಾಂಗ್ರೆಸ್ ಬಾವುಟವನ್ನು Indi flag ಅಂತ ಗುರುತಿಸಿದಳು. ಇದೊಂದು ವಿಪರ್ಯಾಸ) 

ಅವರು ಹೇಳಿಕೊಟ್ಟಂತೆ ನೊಗ ಹೂಡಿದ ಜೋಡೆತ್ತಿಗೆ ವೋಟು ಕೊಡಿ, ವೋಟ್ ಫಾರ್ ಕಾಂಗ್ರೆಸ್ ಅಂತ ಗೆಳೆಯರೊಂದಿಗೆ ಜೋರಾಗಿ ಹೇಳುತ್ತಾ ಬಹಳಷ್ಟು  ಮನೆಗಳಿಗೆ ಚೀಟಿಯನ್ನು ಹಂಚಿದೆವು. (ಅದೇ ಮೊದಲು ಅದೇ ಕೊನೆ ನಾನು ಕ್ಯಾನ್ವಾಸ್ ಮಾಡಿಲ್ಲ). ಏನೂ ಅರ್ಥ ಮಾಡಿಕೊಳ್ಳದ ವಯಸ್ಸು.. ಹೇಳಿದ್ದನ್ನು ಕೇಳುವ ಪರಿ.

ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ, ಅದು ಸೇವೆಯಾಗಿ ಉಳಿದಿಲ್ಲ, ಒಂದು ವ್ಯಾಪಾರವಾಗಿದೆ. ಹಣದ ಹೊಳೆ ಹರಿಸಿ, ಗದ್ದುಗೆ ಏರಿದ ವ್ಯಕ್ತಿ ಹಣ ಮಾಡದೆ ಇದ್ದಾನೆಯೇ? ... ಎಲ್ಲವನ್ನೂ ಉಚಿತವಾಗಿ ಕೊಡುವ ಆಶ್ವಾಸನೆಗಳಿಂದ ಜನರನ್ನು ಸೋಮಾರಿಯಾಗಿ, ಬಿಕ್ಷುಕರನ್ನಾಗಿ ಬದಲಾಯಿಸುತ್ತಿದ್ದಾರೆ. ಒಂದು ವರ್ಗದ ಜನರಂತೂ ಎಲ್ಲರಿಂದಲೂ ಹಣವನ್ನು/ ವಸ್ತುಗಳನ್ನು ತೆಗೆದುಕೊಂಡು ತಮ್ಮ ಮತವನ್ನು ಯಾರಿಗೋ ಹಾಕುತ್ತಾರೆ... ಅಲ್ಲೂ ವಂಚನೆ... ಯಥಾ ರಾಜಾ.. ತಥಾ ಪ್ರಜಾ.

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಅದು ನಮ್ಮ ಇಚ್ಛೆಯಂತೆ ಮಾಡುವಂತದ್ದು. ನಮ್ಮ ಇಚ್ಚೆ ವಿವೇಚನೆಯಿಂದ ಕೂಡಿರಲಿ ಎಂಬುದೇ ಆಶಯ.

Politics is the last resort of a scoundrel ಅನ್ನುವುದು ಒಂದು ಮಾತು. ಏಕೆ ಬಂತು ಗೊತ್ತಿಲ್ಲ. ಆದರೆ ಅದರಲ್ಲಿ ಬಹಳಷ್ಟು ಸತ್ಯವಿದೆ. ಈ ದಿನಮಾನದ ಬಹಳಷ್ಟು ರಾಜಕಾರಣಿಗಳಲ್ಲಿ, ಸ್ವಾರ್ಥವೇ ತುಂಬಿದೆ. ಹಣ ಮಾಡಲು ಜನಸೇವೆಯ ಮುಖವಾಡದಲ್ಲಿ ಮಾಡುವ ದಂಧೆ. ಈಗಲೂ ಕೆಲ ರಾಜಕಾರಣಿಗಳಿದ್ದಾರೆ.. ಜನರ ಹಿತಕ್ಕಾಗಿ, ದೇಶದ ಏಳಿಗೆಗಾಗಿ ದುಡಿಯುತ್ತಿದ್ದಾರೆ. 

ಅದರಲ್ಲಿ ಮಂಚೂಣಿಯಲ್ಲಿರುವವರು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಯವರು. ದೇಶದ ಬಗ್ಗೆ ಅವರಿಗಿರುವ ಚಿಂತನೆ, ಅದಕ್ಕೆ ಪೂರಕವಾದ ಕಾರ್ಯ ಸಂಯೋಜನೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವಿಧಿ ವಿಧಾನ ಮೆಚ್ಚುವಂಥದ್ದು. ಕೆಲ ದೃಢ ನಿರ್ಧಾರದಿಂದ- ಕೆಲಸ ಸಮಯ ತೊಂದರೆಯಾಗಿರಲೂ ಬಹುದು. ಆದರೆ ಬಹುಪಾಲು ಜನ - ಸಿನಿಕರನ್ನು ಹೊರತುಪಡಿಸಿ - ಒಪ್ಪಿದ್ದಾರೆ. ಕೆಲವರು ರಾಜಕಾರಣದ ದೃಷ್ಟಿಯಿಂದ ಬಹಿರಂಗವಾಗಿ ಒಪ್ಪದಿರಬಹುದು ಆದರೆ ಅಂತರಾಳದಲ್ಲಿ ಮೆಚ್ಚುಗೆಯಂತೂ ಇರಲು ಸಾಧ್ಯ. ಅದಕ್ಕಾಗಿ ಹೊರನೋಟಕ್ಕೆ ಮೋದಿಯವರಿಗೆ ಬೈಗುಳ.

ಇದೇ ಕಾರಣಕ್ಕಾಗಿ ಇರಬಹುದು ಈಚೆಗೆ ಬೆಂಗಳೂರಿನಲ್ಲಿ ನಡೆದ ಮೋದಿಯವರ ರೋಡ್ ಶೋ ಕಾರ್ಯಕ್ರಮಕ್ಕೆ ಜನರು ಕೊಟ್ಟ ಉತ್ಸಾಹದ ಸ್ಪಂದನೆ.

ಏನಾದರೂ ಆಗಲಿ ನಾವು ನಮ್ಮ ಸರ್ಕಾರವನ್ನು ನಡೆಸುವ ಪ್ರತಿನಿಧಿಗಳನ್ನು ಆರಿಸುವ ಕರ್ತವ್ಯ ನಮ್ಮದು.

ನಮ್ಮ ಜನರ ಹಿತ ಕಾಯುವ, ಗೌರವ ರಕ್ಷಿಸುವ, ದೇಶಕ್ಕಾಗಿ ದುಡಿವವರನ್ನು ಆರಿಸುವ ಹೊಣೆ ನಮ್ಮದು. ನಿಜ ಇಂಥ ವ್ಯಕ್ತಿಗಳು ಬಲು ಅಪರೂಪ. ಇರುವುದರಲ್ಲಿ ಅತ್ಯುತ್ತಮವಾದ ವ್ಯಕ್ತಿಯನ್ನು ಆರಿಸೋಣ, ಇಲ್ಲವಾದಲ್ಲಿ NOTA ಗುಂಡಿಯನ್ನು ಒತ್ತೋಣ. ಆದರೆ ಮತದಾನ ಮಾಡದೆ ಬೇಜವಾಬ್ದಾರಿಯಾಗದಿರೋಣ.

ಒಂದು ವಿಪರ್ಯಾಸವೆಂದರೆ ನಗರಗಳ so called educated ಜನ ತಮ್ಮ ಮತ ಚಲಾಯಿಸದೆ ಇರುವುದು ಒಂದು ದೊಡ್ಡ ಕೊರತೆ. ಮತ ಚಲಾಯಿಸದ ಈ ವರ್ಗ ಭ್ರಷ್ಟ ರಾಗುತ್ತಿದ್ದಾರೆ, ಅಲ್ಲದೆ ಎಲ್ಲ ವಿಚಾರದಲ್ಲೂ ದೂರುವವರು ಇವರೇ.

ಇಂದಿನ ಯುವ ಜನತೆ ಮನಸ್ಸು ಮಾಡಿದರೆ ಎಂಥ ಬದಲಾವಣೆಯನ್ನಾದರೂ ತರಬಲ್ಲ ಶಕ್ತಿ ಉಳ್ಳವರು. ಈ ವರ್ಗ ಎಚ್ಚೆತ್ತುಕೊಂಡು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇ ಆದರೆ  ಬದಲಾವಣೆಗಳು ನಿಶ್ಚಿತ.

ನಾಳೆ ನಡೆಯುವ ಚುನಾವಣೆಯಲ್ಲಿ ನಾವೆಲ್ಲ ಸಕ್ರಿಯವಾಗಿ ಭಾಗವಹಿಸಿ ಮತದಾನ ಮಾಡೋಣ, ಒಳ್ಳೆಯ ವ್ಯಕ್ತಿಗಳನ್ನು ಆರಿಸೋಣ...


ಭಾರತ ಮಾತೆಗೆ ಜಯವಾಗಲಿ

ಸಾಧ್ಯವಾದರೆ..ಬೇರೆಯವರೊಂದಿಗೆ ಇದನ್ನು  ಹಂಚಿಕೊಳ್ಳಿ..ಸ್ವಲ್ಪ ಬದಲಾವಣೆ ಆಶಿಸೋಣ...ಧನ್ಯವಾದ 

Comments

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ