ಬೇವು - ಬೆಲ್ಲ... ಜೀವನವೆಲ್ಲ

 

ಯುಗ ಯುಗಾದಿ ಕಳೆದರೂ, 
ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ 
ಹೊಸತು ಹೊಸತು ತರುತಿದೆ..... ಬೇಂದ್ರೆ ಅಜ್ಜನ ಈ ಹಾಡು ಎಷ್ಟೋ ಯುಗಾದಿಗಳಿಂದ ಕೇಳುತ್ತಿದ್ದೇನೆ, ಅದು ಯುಗಾದಿಯಂತೆಯೇ ಹೊಸತು ಹೊಸದಾಗಿಯೇ ಇದೆ.

ಯುಗಾದಿ ಕನ್ನಡಿಗರಿಗೆ ಹೊಸ ವರ್ಷದ ಹಬ್ಬ. ವಸಂತ ಋತುವಿನಲ್ಲಿನ ಬಹು ಮುಖ್ಯ ಹಬ್ಬ. ವಸಂತ ... ಋತುಗಳ ರಾಜ... ಎಲ್ಲೆಲ್ಲಿಯೂ ಹಸಿರು ಚಿಗುರು ಒಡೆದು ಮರ-ಗಿಡಗಳೆಲ್ಲಾ ನಳನಳಿಸುವ ಸಮಯ. ಅದರಲ್ಲೂ ಮಾವಿನ ಮತ್ತು ಅರಳಿ ಮರದ ಚಿಗುರು ಎಲೆಗಳ ಕೆಂಪು ಮಿಶ್ರಿತ ಬಣ್ಣ ಚಿಕ್ಕಂದಿನಿಂದಲೂ ನನಗೆ ಬಲುಮೆಚ್ಚುಗೆ.

ಯುಗಾದಿಗೆ ಹೊಸ ಬಟ್ಟೆ ಒಂದು ಸಂಭ್ರಮ.... ನನಗಂತೂ ವಿಶೇಷ ಸಂಭ್ರಮ... ನಾನು ಹುಟ್ಟಿದ್ದು ಯುಗಾದಿಯ ಆಸು ಪಾಸಿನಲ್ಲಿ.. ಹಾಗಾಗಿ ನನ್ನ ಹುಟ್ಟಿದ ಹಬ್ಬ ಆಚರಿಸುವ ದಿನ ಯುಗಾದಿ.  ಹೇಗೂ ಮನೆಯಲ್ಲಿ ಒಬ್ಬಟ್ಟು ಮಾಡಿರುತ್ತದೆ, ಎಣ್ಣೆ ನೀರು ಹಾಕಿಕೊಂಡು, ದೇವರಿಗೆ ನಮಸ್ಕರಿಸಿ, ಒಂದು ಲೋಟ ಹಾಲು ಕುಡಿದರೆ ಅದು ಹುಟ್ಟಿದ ಹಬ್ಬದ ಆಚರಣೆ. ಮನೆ ತುಂಬಾ ಮಕ್ಕಳು ಜೊತೆಗೆ ಒಂದಷ್ಟು ಬಡತನ, ಹೀಗಿರುವಾಗ ಮಕ್ಕಳ ಹುಟ್ಟಿದ ಹಬ್ಬದ ಸಂಭ್ರಮ ಎಲ್ಲಿ ಬರಬೇಕು.. ಜೊತೆಗೆ ಅದೊಂದು ದೊಡ್ಡ ಸಂಗತಿ ಏನೂ ಆಗಿರಲಿಲ್ಲ.. ಅಂದಿನ ಕಾಲಕ್ಕೆ.
ಹೊಸ ಬಟ್ಟೆ ಎಂದರೆ ಸಾಮಾನ್ಯವಾಗಿ ನಮ್ಮೂರಿನ ಪರಿಣತ ಟೈಲರ್ ಆಗಿದ್ದ ಅಚ್ಚಪ್ಪನವರು ಹೊಲಿದುಕೊಟ್ಟದ್ದು . ಬಟ್ಟೆ ಅಂಗಡಿಗೆ ಹೋದಾಗ ಸಾಮಾನ್ಯವಾದ ಮಾತು- ಸ್ವಲ್ಪ ದೊಡ್ಡ ದೊಡ್ಡದಾಗಿ ಹೊಲಿಯಿರಿ ಬೆಳೆಯುವ ಮಗು ಸರಿ ಹೋಗುತ್ತೆ.... ಕೊಂಡ ಬಟ್ಟೆಯಲ್ಲ ಸಂಪೂರ್ಣ ಉಪಯೋಗ ಆಗಬೇಕು. ಹಾಗಾಗಿ ದೊಗಲೆ ಚಡ್ಡಿ ಸರ್ವೇಸಾಮಾನ್ಯ.
 
ಹಬ್ಬದ ಹಿಂದಿನ ದಿನ ಮನೆಯ ಮತ್ತು ಅಂಗಳದ ನೆಲವನ್ನೆಲ್ಲ ಸಗಣಿ ಹಾಕಿ ಸಾರಿಸಿ ರಂಗೋಲಿ ಕೆಮ್ಮಣ್ಣು ಮಾಡುವುದು- ಅದಕ್ಕೆ ಸಹಾಯ ಮಾಡುವುದು (ಇದೇ ಸಮಯದಲ್ಲಿ ಸಗಣಿ ನೀರಿನಲ್ಲಿ ಕುಣಿದಾಡುವುದು ಒಂದು ಮೋಜು) ತೋರಣಕ್ಕಾಗಿ ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪು ತರುವುದು ನಮ್ಮಗಳ ಜವಾಬ್ದಾರಿ. ರಂಗೋಲಿಯನ್ನು ರಂಗ ಒಲಿಯಲಿ ಎಂದು ಅರ್ಥೈಸಿದ್ದನ್ನು ಕೇಳಿ ನನಗೆ ಹೆಮ್ಮೆ.. ನಾನು ರಂಗ ಅಲ್ಲವೇ?

ಹಬ್ಬದ ವಿಶೇಷ ಅಪ್ಪನ ಪೂಜೆ  ಎಂದಿಗಿಂತಾ ಬಲು ನಿಧಾನ. (ಹಸಿವಾದಾಗ ನನಗನಿಸಿದ್ದು). ಬೆಳಿಗ್ಗೆಯೇ ಅಮ್ಮ ಏನಾದರೂ ನಮ್ಮ ಹೊಟ್ಟೆಯ ಚೀಲಕ್ಕೆ ತುಂಬಿಸುತ್ತಿದ್ದಳು ಆದರೂ ನಮ್ಮಪ್ಪನ ಪೂಜೆ ಮುಗಿದು ಊಟಕ್ಕೆ ಕೂರುವಷ್ಟರಲ್ಲಿ ಹಸಿವೋ ಹಸಿವು. ನಮ್ಮಮ್ಮ ಅಪ್ಪನಿಗೆ ಹೇಳುತ್ತಿದ್ದ ಮಾತು " ರಾಯರೇ ಮಕ್ಕಳು ಹಸಿದುಕೊಂಡಿದ್ದಾರೆ, ಅವರ ಮೇಲು ನಿಮ್ಮ ನಿಗಾ ಇರಲಿ" ಆದಮೇಲೆ ನಮ್ಮಪ್ಪನ ಶ್ಲೋಕಗಳ / ಮಂತ್ರಗಳ ಪಠಣ ಮುಗಿಯುತ್ತಿತ್ತು. ತೀರ್ಥ ತಗೊಂಡು, ಬೇವು ಬೆಲ್ಲ ತಿಂದರೆ ಹಬ್ಬದ ಒಂದು ಘಟ್ಟ ಮುಗಿದಂತೆ. ಅಪ್ಪ ಒಂದು ಚೂರು ಬೆಲ್ಲ ನನಗೆ ಜಾಸ್ತಿ ಕೊಡುತ್ತಿದ್ದರು ಅಂತ,  ನನ್ನ ನಂಬಿಕೆ.

ಇನ್ನು ಒಬ್ಬಟ್ಟಿನ ಊಟದ ಸಂಭ್ರಮ ಹೇಳಲು ಪದಗಳೇ ಇಲ್ಲ. ನಮ್ಮೆಲ್ಲರ ಊಟ ಆದ ಮೇಲೆ ಅಮ್ಮ ಊಟ ಮಾಡುವಾಗ ಅವಳ ಎಲೆಯಿಂದ ಅವಳ ಕೈಲಿ ಒಬ್ಬಟ್ಟನ್ನು ಬಾಯಿಗೆ ಇಡಸಿಕೊಂಡು ತಿನ್ನುವ ಖುಷಿ... ಮೇರೆ ಮೀರಿದ್ದು.. ಎಲ್ಲಿರುತ್ತಿತ್ತೋ.. ಹೊಟ್ಟೆಯಲ್ಲಿ ಜಾಗ.
ಅಂದಿನ ದಿನ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದವರು.. ತೋಟಿ ತಳವಾರರು, ಅಗಸರು, ಓಲಗದವರು ... ಹೀಗೆ ನಾನಾ ರೀತಿಯಲ್ಲಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾದವರು. ಎಲ್ಲರಿಗೂ ಒಬ್ಬಟ್ಟು ಚಿತ್ರಾನ್ನ ಕೊಡುವಾಗ ಅಮ್ಮನಿಗೆ ತುಂಬಾ ಖುಷಿ...

ಇದೆಲ್ಲಾ ಆದಮೇಲೆ ಉಳಿದ  ಹೂರ್ಣ ಕಣಕಕ್ಕೆ ಒಬ್ಬಟ್ಟಿನ ರೂಪ ಕೊಡುತ್ತಿದ್ದದ್ದು ಅಮ್ಮ ಮತ್ತು ಅಜ್ಜಿ. ಒಬ್ಬಟ್ಟನ್ನು 
ಒಂದು ಗಂಟು ಕಟ್ಟಿ, ಅಡುಗೆಮನೆ ಗೋಡೆಗೆ ನೇತು ಹಾಕುತ್ತಿದ್ದದ್ದು ಯಾಕೋ ಕಾಣೆ.  ಅಡಿಗೆ ಮನೆ ಗೋಡೆಗೆ ಭಾರ ಜಾಸ್ತಿಯಾಗಿದೆ, ಬೇಗ ತೆಗೆಯಿರಿ ಎಂಬ ಸಲಹೆಯನ್ನು ಯಾರೋ ಕೊಡುತ್ತಿದ್ದರು... ಅವರಿಗೆ ಒಬ್ಬಟ್ಟು ತಿನ್ನಲು ಬೇಕಾದಾಗ.

ಇನ್ನು ಊಟದ ನಂತರ ಆಟಗಳು.. ಜೂಜಾಟಗಳು ಎನ್ನಬಹುದೇನೋ.. ಅದನ್ನು ನೋಡುವುದಷ್ಟೇ ನಮ್ಮ ಕೆಲಸ... ಆದರೆ ನಾವು ತುಂಬಾ ಖುಷಿ ಪಡುತ್ತಿದ್ದದ್ದು ದೊಂಗರದ (ಮಳೆ ಬಂದಾಗ ನೀರು ಹರಿಯುತ್ತಿದ್ದ, ಮರಳಿಂದ ತುಂಬಿದ್ದ ಒಂದು ಹಾದಿ) ಪಕ್ಕ ಇದ್ದ ಹೊಂಗೆಯ ಮರ, ಕೆಳಗೆ ತುಂಬಿರುತ್ತಿದ್ದ ಮರಳಮೇಲಿನ ಹೊಂಗೆಯ ಹೂವಿನ ಹಾಸಿನ ಮೇಲೆ ಹೊರಳಾಟ, ಅಲ್ಲಿ ಆಡುತ್ತಿದ್ದ ಉಯ್ಯಾಲೆ, ಮರಕೋತಿ ಆಟ ಇತ್ಯಾದಿ...

ಇನ್ನೊಂದು ಉಗಾದಿಯ ಸವಿನೆನಪು -  ಅದು ನಾನು ಶಹಾಬಾದಿನಲ್ಲಿ ಇದ್ದಾಗಿನದು. ಯುಗಾದಿಯ ದಿನ ನನ್ನ ಸಹೋದ್ಯೋಗಿ ಲಕ್ಷ್ಮಣ ಶಾಸ್ತ್ರಿಗಳು ಅವರ ಮನೆಗೆ ಬೇವು ಬೆಲ್ಲಕ್ಕಾಗಿ ಕರೆದಿದ್ದರು (ನನಗೆ ಬೇವು ಬೆಲ್ಲಕ್ಕಾಗಿ ಒಂದು ಆಹ್ವಾನವ ಎಂದು ಅನಿಸಿದ್ದು ನಿಜ) ಅವರ ಮನೆಯಲ್ಲಿ ಕೊಟ್ಟ ಒಂದು ದೊಡ್ಡ ಲೋಟದ ತುಂಬಾ ಬೇವು ಬೆಲ್ಲ ಎಂದು ಕರೆದ ಅದ್ಭುತವಾದ ರುಚಿಯಾದ ಪಾನೀಯ, ಇಂದಿಗೂ ಅದರ ರುಚಿ ನನ್ನ ನಾಲಿಗೆಯಲ್ಲಿ ಇದೆ ಅನ್ನುವ ಭಾವ.

ಇನ್ನು ವರ್ಷ ತೊಡಕು - ಅಂದು ಹಿಂದಿನ ದಿನದ ಒಬ್ಬಟ್ಟು ಮತ್ತು ಒಬ್ಬಟ್ಟಿನ ಸಾರು ತಿನ್ನುವ ಸಂಭ್ರಮ ಮತ್ತು ದೊಡ್ಡವರಿಂದ ಬೈಗುಳ ಕೇಳಿದರೆ ಆಶೀರ್ವಾದ ಎನ್ನುವ ಆಗಿನ ನಂಬಿಕೆ.

ಯುಗಾದಿಯ ಸಂದೇಶ- ಜೀವನ ಬೇವು ಬೆಲ್ಲ, ಕಷ್ಟ ಸುಖಗಳ ಸಮ್ಮಿಶ್ರಣ. ಎರಡನ್ನು ಅನುಭವಿಸಿಯೇ ತೀರಬೇಕು. ಇಲ್ಲಿ ನೆನಪು ಬರುವುದು ಗಜಾನನ ಶರ್ಮ ಎಂಬುವರು ಬರೆದ ರಾಮನ ಹಾಡಿನ ಒಂದು ಸಾಲು..
"ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ, 
ಕಷ್ಟ ಸಹಿಸುವ ಸಹನೆ ಕೊಡು ಎನಗೆ ರಾಮ" 
ಎಷ್ಟು ಅರ್ಥಪೂರ್ಣವಲ್ಲವೇ?

ಯುಗಾದಿಯ ಸಂದೇಶವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ, ಎಲ್ಲರಿಗೂ ನೆಮ್ಮದಿ ಯನ್ನು ಕೊಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ....

ನಿಮಗೆಲ್ಲಾ ಯುಗಾದಿಯ ಹಾರ್ದಿಕ ಶುಭಾಶಯಗಳು...

ನಮಸ್ಕಾರ.

Comments

  1. Sooperb chikkappa 😁

    ReplyDelete
  2. ಯುಗಾದಿ ಹಬ್ಬದ ಶುಭಾಶಯಗಳು ಸರ್... ಹೊಸ ವರಷ ಎಲ್ಲರ ಬಾಳಲಿ ಹರುಷವ ತರಲಿ ..!!

    ಬಲು ಖುಷಿಯಿಂದ ಓದಿದೆ.. ಓದುವಾಗ ಹಳೆಯ ಸವಿ ಸವಿ ನೆನಪು ಮರೆಯಲಾಗದ ನೆನಪು .. ಆಹಾಹಾ ಬಣ್ಣಿಸಿದರು ಸಾಲದು..!! ಆಗದು....!!! ಅನುಭವ ಅನುಭವವೇ ಸರಿ.

    ಮಣಿಕಂಠ

    ReplyDelete
    Replies
    1. DC Ranhanatha Rao22 March 2023 at 10:26

      ಧನ್ಯವಾದ ಮಣಿ....

      Delete
  3. ಮೊದಲಿಗೆ ರಂಗಣ್ಣ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ನಿಮ್ಮ ನೆನಪುಗಳು ತುಂಬಾ ಸೊಗಸಾಗಿದೆ

    ReplyDelete
  4. DC Ranganatha Rao22 March 2023 at 16:34

    ಧನ್ಯವಾದ. ..ನಿಮ್ಮ ಹೆಸರು ಬರೆದರೆ....ಸಂತೋಷ ಆಗತ್ತೆ

    ReplyDelete
  5. ನಿಮ್ಮಸಿಹಿ ಸಿಹಿ ನೆನಪು ನಮ್ಮ ಬಾಲ್ಯವನ್ನು ನೆನಪಿಗೆ ತರುತ್ತದೆ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ