ನಿರಾಕರಣ - ಮನಸ್ಸಿನ ಅನಾವರಣ


ನಾನು ನನ್ನ ಮಡದಿ ಇಬ್ಬರೂ ಓದುವ ಹವ್ಯಾಸ ಉಳ್ಳವರು, ಹಾಗಾಗಿ ನಮ್ಮ ಮನೆಯಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹವಿದೆ. ಭೈರಪ್ಪನವರ ಕಾದಂಬರಿಗಳ ಸಂಗ್ರಹವೂ ಇದೆ. ಆದರೆ " ನಿರಾಕರಣ" ಕಾದಂಬರಿ ಮಾತ್ರ ನಮ್ಮಲ್ಲಿ ಇರಲಿಲ್ಲ.  ಕೆಲ ದಿನಗಳ ಹಿಂದೆ ನಿರಾಕರಣ ಪುಸ್ತಕವನ್ನು ತಂದು ಕೈಗಿಟ್ಟಳು ವಿಜಯ. ಓದಿ ಮುಗಿಸಿದಾಗ  " ನರಹರಿ ರಾಯರ " ತುಮುಲಗಳು ನನ್ನ ಮನಸ್ಸನ್ನು ಚಿಂತನೆಗೆ ದೂಡಿತ್ತು.

ಸಾಮಾನ್ಯವಾಗಿ ಮನುಷ್ಯ ಕಷ್ಟ ಬಂದಾಗ , ಮನಸ್ಸಿಗೆ ತೀವ್ರ ನೋವಾದಾಗ,  ನಿರಾಶೆಯಾದಾಗ, ಏನೂ ತೋಚದೆ ಗೊಂದಲದಲ್ಲಿದ್ದಾಗ ಬರುವ ಭಾವನೆಗಳು, 

" ಸಾಕಪ್ಪ ಈ ಜೀವನ "

" ಎಲ್ಲ ಬಿಟ್ಟು ಎಲ್ಲಾದರೂ ಓಡಿ ಹೋಗೋಣ ಅನ್ಸುತ್ತೆ  "

" ಸಾಯ್ಬೇಕು ಅನ್ಸುತ್ತೆ - ಆದರೆ ಧೈರ್ಯ ಇಲ್ಲ". ಹೀಗೆ....

ಈ ಭಾವನೆಗಳು / ಮಾತುಗಳು ಸಂದಿಗ್ಧ ಸಮಯದಲ್ಲಿ ಬರುವಂತ ತತ್ ಕ್ಷಣದ ಭಾವನೆಗಳು.. ಅದರಿಂದ ಪ್ರೇರಿತವಾದ ನಿರ್ಧಾರಗಳು ಸಹ.  ಬಹಳಷ್ಟು ಸಲ ಇವು ಕೆಲ ದಿನಗಳ ಕಾಲ ಧಾಳಿ ನಡೆಸುವಂಥಹವು. 

ಆಪ್ತ ಸಮಾಲೋಚನೆಗಾಗಿ ನನ್ನಲ್ಲಿ ಬರುವ ವ್ಯಕ್ತಿಗಳಿಗೆ ಇಂಥ ನಿರಾಶಾ ಸ್ಥಿತಿಯಲ್ಲಿ ಸಮಾಧಾನ ಮಾಡಿ, ಕಷ್ಟಗಳು ಸಹಜ ಆದರೆ ಅವು ನಿರಂತರವಲ್ಲ, ಒಳ್ಳೆಯ ದಿನಗಳು ಬರುತ್ತವೆ ಅದಕ್ಕಾಗಿ ಸ್ವಲ್ಪ ಸಮಯ ಸಹನೆಯಿಂದ ಇರಬೇಕು, ನಮ್ಮ ಯೋಚನಾ ಲಹರಿಯನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಬೇಕು, ಕತ್ತಲೆಯ ನಂತರ ಬೆಳಕು, ಬದಲಾವಣೆ ಜಗದ ನಿಯಮ... ಹೀಗೆ ಹೇಳಿ ಸಮಾಧಾನ ಮಾಡಿ ತಕ್ಕಮಟ್ಟಿನ ಯಶಸ್ಸನ್ನು ಕಂಡದ್ದಿದೆ.

ಭಾನುವಾರ ಬೆಳಿಗ್ಗೆ ನನ್ನ ಬೆಳಗಿನ ಕೆಲಸಗಳು - ಸಂಗೀತಾಭ್ಯಾಸವೂ ಸೇರಿ- ಯಾವಾಗಿನಂತೆ ಮುಗಿಸಿ ಕುಳಿತೆ. ಮನಸ್ಸು ಮುದುಡಿತ್ತು, ಹೊಟ್ಟೆಯಲ್ಲಿ ಏನೋ ತಳಮಳವಿತ್ತು.. ಕಾರಣವೇನೋ ಹುಡುಕಿದರೂ ತಿಳಿಯಲಿಲ್ಲ ( ವಿನಾ ಕಾರಣ ಎನ್ನಲೇ)..  ನಿರಾಕರಣದ ಗುಂಗಿನ ಪ್ರಭಾವ ಇರಬಹುದಾ? ಎಂದು ಮನಸ್ಸಿಗೆ ಬಂತು.  ಒಮ್ಮೆ ಹಾಗೆ ನನ್ನ ಜೀವನವನ್ನು ಹಿಂತಿರುಗಿ ನೋಡಿದೆ.. ಒಂದು ಕಾಲಘಟ್ಟದಲ್ಲಿ ನನ್ನ ಮನಸ್ಸು ತಲ್ಲಣಗೊಂಡಿದ್ದುಂಟು (ನರಹರಿ ಯಷ್ಟಲ್ಲದಿದ್ದರೂ) ಅನ್ನುವ ನೆನಪು ಬಂತು...

ಹೌದು.. ಮನಸ್ಸು ಘಾಸಿಗೊಂಡಿತ್ತು - ಎಲ್ಲ ಕಡೆಯೂ ನೋವುಗಳು ತುಂಬಿವೆ, ನನ್ನನ್ನು ಕಾಡುತ್ತಿವೆ ಅನ್ನುವ ಭಾವ... ಇದರಿಂದ ಬಿಡುಗಡೆಯಾಗಬೇಕು ಅನ್ನುವ ಮನಸ್ಸು..( ನಾನು ಒಬ್ಬ ಸಾಮಾನ್ಯ ಮನುಷ್ಯ ಅಲ್ಲವೇ? )

ಸಾಯುವುದೇ?  ಈ ಪ್ರಶ್ನೆಗೆ ಬೇಡ ಎಂಬುವ ತತ್ ಕ್ಷಣದ ಉತ್ತರ.. ಅದಕ್ಕೆ ಹುಡುಕಿದ ಕಾರಣ - ನನ್ನ ಹೆಂಡತಿಗೆ ನನಗೂ ಮುಂಚೆ ಸಾಯುವ ಆಸೆ.. ಅದಕ್ಕೆ ನಾನಾಗಿ  ನಾನು ಯಾಕೆ ಅಡ್ಡ ಬರಬೇಕು...( ಈಗ ನಗೆ ಬರುತ್ತಿದೆ)

ಹಾಗಾದ್ರೆ ಎಲ್ಲಾದರೂ ದೂರ ಹೋಗಬೇಕು.. ತಕ್ಷಣಕ್ಕೆ ಹೊಳೆದದ್ದು ಪಶ್ಚಿಮ ಘಟ್ಟಗಳ ಯಾವುದಾದರೂ ಒಂದು ಪುಟ್ಟ ಹಳ್ಳಿ... ಯಾಕೆಂದರೆ ನಾನು trekking ಗೆ ಹೋದಾಗ ನೋಡಿದ ಆ ಹಳ್ಳಿಯ ಸೊಗಸು... ಹಾಗೂ ಲೋಕಾ ರೂಢಿಯಾಗಿ ಹಳ್ಳಿಗರೊಂದಿಗೆ ಮಾತನಾಡುತ್ತಾ...  ನಿಮ್ಮೂರಿಗೆ ಬಂದು ಇರಬಹುದಾ ಎಂದು ಕೇಳಿದಾಗ ಅವರು ಕೊಟ್ಟ ಆತ್ಮೀಯ ಉತ್ತರ...

ಆದರೆ ಈ ಜಾಗವನ್ನು ಸುಲಭವಾಗಿ ಹುಡುಕಬಹುದು ಹಾಗಾಗಿ ಬೇಡ ಎಂಬ ನಿರ್ಧಾರ.  ಹಾಗಾದರೆ ದೇಶಾಂತರ ಹೋಗುವುದೇ?  ಇದೇ ಸರಿಯಾದ ನಿರ್ಧಾರ ಅನಿಸಿತು.

ಮುಂದಿನ ತಯಾರಿ....( ಓಡಿ ಹೋಗುವವಳು ಹೆಪ್ಪಿಟ್ಟಾಳೆ ಎಂಬ ನಾಣ್ಣುಡಿ ಎಷ್ಟು ಪ್ರಸ್ತುತ ಅಲ್ಲವೇ )

ಇರುವ ಒಂದು ಮನೆ... Power of attorney ಮಾಡಿದರೆ ಸರಿ ಹೋಗುತ್ತೆ....

ಒಂದಷ್ಟು ಹಣ ಅವರಿಗೆ ಬಿಟ್ಟರಾಯಿತು....

ನನಗಾಗಿ ಸ್ವಲ್ಪ ಹಣ ಬೇಡವೇ.... ಬ್ಯಾಂಕಲ್ಲಿ ಇದೆಯಲ್ಲ.. ಎಲ್ಲಿಂದ ಬೇಕಾದರೂ ತೆಗೆದುಕೊಳ್ಳಬಹುದು... ತಕ್ಷಣ ಹೊಳೆದದ್ದು ಅದರಿಂದ ನಾನಿರುವ ಜಾಗ ಗೊತ್ತಾಗಬಹುದು ಹಾಗಾಗಿ ಬೇಡ..

 ಒಂದಷ್ಟು ಕೈಲಿ ಹಿಡಿದರಾಯ್ತು.... ಖಾಲಿಯಾದ ಮೇಲೆ ಏನು ಮಾಡಬೇಕು... ಆಗ ನೋಡೋಣ ಎನ್ನುವ ಮನಸ್ಸು...

ಫೋನ್ನಲ್ಲಿರುವ ಎಲ್ಲ ನಂಬರುಗಳನ್ನು ಅಳಿಸಿಹಾಕಿ ಅದನ್ನು ಇಲ್ಲೇ ಬಿಟ್ಟರಾಯ್ತು...

ಈಗ ಮುಂದಿನ ಜೀವನದ ಚಿಂತನೆ... ನನ್ನ ಮನಸ್ಸಿನಲ್ಲಿ ಮೂಡಿದ ಚಿತ್ರಣ... ಕೈಯಲ್ಲಿ ಒಂದು ಬ್ಯಾಗು ಅದರಲ್ಲಿ ಒಂದು ಪಂಚೆ ಶರ್ಟು... ಬೆಳೆದ ತಲೆ ಕೂದಲು ಗಡ್ಡ... ಚಪ್ಪಲಿ ಇಲ್ಲದ ಕಾಲು... ಹಣ ಕಾಲಿಯಾದ ಮೇಲೆ ಊಟಕ್ಕೇನು ಎಂಬ ಚಿಂತೆ.... ಹೇಗೋ ಕಳೆಯುತ್ತೇನೆ ಅನ್ನುವ ಕೆಟ್ಟ ಧೈರ್ಯ.... ಭಿಕ್ಷೆ ಬೇಡಬೇಕಾದೀತೇನೋ ಎನ್ನುವ ಭಾವ... ಒಪ್ಪಿಗೆಯಾಗದ ವಿಚಾರ... ಮನಸ್ಸಿನ ಹಿನ್ನಡೆ.... ಆದರೂ ಮುಂದುವರಿಯಬೇಕು ಎನ್ನುವ ಮನಸ್ಸು.. ಇದಕ್ಕೆ ತಯಾರಿ ಮಾಡುವ ದಾರಿಗಳ ಬಗ್ಗೆ ಚಿಂತನೆ... ಪ್ರಯತ್ನ...

ಇಷ್ಟಾಗುವಾಗ ಮೂರ್ನಾಲ್ಕು ದಿನಗಳು ಕಳೆದಿತ್ತು.. ಮನಸ್ಸಿನ ತಲ್ಲಣವೂ ಕಡಿಮೆಯಾಗುತ್ತಿತ್ತು... ಆದರೆ ನಿರ್ಧಾರ ಮಾತ್ರ ಗಟ್ಟಿಯಾಗಿತ್ತು... ಹೊರಡುವ ಸಮಯ ಮಾತ್ರ ನಿಗದಿಯಾಗಬೇಕಿತ್ತು... ಹೇಗೆ,  ಯಾವಾಗ ಅನ್ನುವ ಗೊಂದಲವಿತ್ತು.  ಸಮಯ ಕಳೆಯಲು ತುಂಬಾ ಕಷ್ಟವಾಗುತ್ತಿತ್ತು.... ಆಸರೆ ಬೇಕಿತ್ತು... ಆಗ ನನ್ನ ಕೈಗೆ ಸಿಕ್ಕಿದ್ದು ನನಗೆ ಪ್ರಿಯವಾದ " ಮಂಕುತಿಮ್ಮನ ಕಗ್ಗ"..

ಕಾಕತಾಳಿಯವೋ ಏನೋ... ಪುಟ ತಿರುವಿದಾಗ ಕಂಡ ಮೊದಲ ಪದ್ಯ...

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು

ಬಿದಿಯ ಬಾಯಿಗೆ ಕವಳವಾಗದುಳಿಯುವನೇ?

ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ-

ನೆದುರು ನಿಲೆ  ಬಿದಿಯೊಲಿವ - ಮಂಕುತಿಮ್ಮ

ಇದನ್ನು ಎಷ್ಟು ಸಲ ಓದಿದೆನೋ ನನಗೆ ನೆನಪಿಲ್ಲ... ಅಷ್ಟರಲ್ಲಿ ನನ್ನೊಳಗಿದ್ದ ಆಪ್ತ ಸಮಾಲೋಚಕ ಎಚ್ಚರವಾಗಿದ್ದ... ಮನದೊಳಗೆ ಚಿಂತನ,  ಮಂಥನ... ಕೊನೆಗೆ ಗೆದ್ದದ್ದು... ಆಪ್ತ ಸಮಾಲೋಚಕ ರಂಗನಾಥನೇ...  

ಹೆಚ್ಎಸ್ವಿ ಯವರ ಕವನದ ಸಾಲು ನನ್ನ ಮನಸ್ಸಿನಲ್ಲಿ ಈಗ ಓಡುತ್ತಿದೆ...

ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ..


ಇದುವೇ ಜೀವನ.... ಜೀವನ ಸಾಗ್ತಾ ಇದೆ...

ನಮಸ್ಕಾರ. 




Comments

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ