ಬೇವು - ಬೆಲ್ಲ... ಜೀವನವೆಲ್ಲ
ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..... ಬೇಂದ್ರೆ ಅಜ್ಜನ ಈ ಹಾಡು ಎಷ್ಟೋ ಯುಗಾದಿಗಳಿಂದ ಕೇಳುತ್ತಿದ್ದೇನೆ, ಅದು ಯುಗಾದಿಯಂತೆಯೇ ಹೊಸತು ಹೊಸದಾಗಿಯೇ ಇದೆ. ಯುಗಾದಿ ಕನ್ನಡಿಗರಿಗೆ ಹೊಸ ವರ್ಷದ ಹಬ್ಬ. ವಸಂತ ಋತುವಿನಲ್ಲಿನ ಬಹು ಮುಖ್ಯ ಹಬ್ಬ. ವಸಂತ ... ಋತುಗಳ ರಾಜ... ಎಲ್ಲೆಲ್ಲಿಯೂ ಹಸಿರು ಚಿಗುರು ಒಡೆದು ಮರ-ಗಿಡಗಳೆಲ್ಲಾ ನಳನಳಿಸುವ ಸಮಯ. ಅದರಲ್ಲೂ ಮಾವಿನ ಮತ್ತು ಅರಳಿ ಮರದ ಚಿಗುರು ಎಲೆಗಳ ಕೆಂಪು ಮಿಶ್ರಿತ ಬಣ್ಣ ಚಿಕ್ಕಂದಿನಿಂದಲೂ ನನಗೆ ಬಲುಮೆಚ್ಚುಗೆ. ಯುಗಾದಿಗೆ ಹೊಸ ಬಟ್ಟೆ ಒಂದು ಸಂಭ್ರಮ.... ನನಗಂತೂ ವಿಶೇಷ ಸಂಭ್ರಮ... ನಾನು ಹುಟ್ಟಿದ್ದು ಯುಗಾದಿಯ ಆಸು ಪಾಸಿನಲ್ಲಿ.. ಹಾಗಾಗಿ ನನ್ನ ಹುಟ್ಟಿದ ಹಬ್ಬ ಆಚರಿಸುವ ದಿನ ಯುಗಾದಿ. ಹೇಗೂ ಮನೆಯಲ್ಲಿ ಒಬ್ಬಟ್ಟು ಮಾಡಿರುತ್ತದೆ, ಎಣ್ಣೆ ನೀರು ಹಾಕಿಕೊಂಡು, ದೇವರಿಗೆ ನಮಸ್ಕರಿಸಿ, ಒಂದು ಲೋಟ ಹಾಲು ಕುಡಿದರೆ ಅದು ಹುಟ್ಟಿದ ಹಬ್ಬದ ಆಚರಣೆ. ಮನೆ ತುಂಬಾ ಮಕ್ಕಳು ಜೊತೆಗೆ ಒಂದಷ್ಟು ಬಡತನ, ಹೀಗಿರುವಾಗ ಮಕ್ಕಳ ಹುಟ್ಟಿದ ಹಬ್ಬದ ಸಂಭ್ರಮ ಎಲ್ಲಿ ಬರಬೇಕು.. ಜೊತೆಗೆ ಅದೊಂದು ದೊಡ್ಡ ಸಂಗತಿ ಏನೂ ಆಗಿರಲಿಲ್ಲ.. ಅಂದಿನ ಕಾಲಕ್ಕೆ. ಹೊಸ ಬಟ್ಟೆ ಎಂದರೆ ಸಾಮಾನ್ಯವಾಗಿ ನಮ್ಮೂರಿನ ಪರಿಣತ ಟೈಲರ್ ಆಗಿದ್ದ ಅಚ್ಚಪ್ಪನವರು ಹೊಲಿದುಕೊಟ್ಟದ್ದು . ಬಟ್ಟೆ ಅಂಗಡಿಗೆ ಹೋದಾಗ ಸಾಮಾನ್ಯವಾದ ಮಾತು- ಸ್ವಲ್ಪ ದೊಡ್ಡ ದೊಡ್...