ಶಿವರಾತ್ರಿ ಹಬ್ಬವೂ... ಗೊಟ್ಟಿಗೆರೆ ಜಾತ್ರೆಯೂ..
ಇವತ್ತು ಶಿವರಾತ್ರಿ ಹಬ್ಬ.. ಆದರೆ ನಮ್ಮ ಕುಟುಂಬಕ್ಕೆ ಹಬ್ಬದ ಆಚರಣೆ ಇಲ್ಲ ಕಾರಣ - ನನ್ನ ದೊಡ್ಡಣ್ಣ ತೀರಿಕೊಂಡ ವರ್ಷ. ಇದರೊಡನೆ ಇನ್ನೊಂದು ಅಣ್ಣನ ನೆನಪು ಕಾಡಿತು. ಇಂದು ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ಗೆಳೆಯರು ನೆನೆಸಿಕೊಂಡ ವ್ಯಕ್ತಿ ಈ ಇನ್ನೊಂದು ಅಣ್ಣ.. ಜಿ.ಎನ್. ಶ್ರೀನಿವಾಸ ಮೂರ್ತಿ, ಹಾಗೂ ಶಿವರಾತ್ರಿ ಯೊಂದಿಗಿನ ಅವನ ನಂಟು. ಮೂರ್ತಿ ಗೊಟ್ಟಿಗೆರೆಯ ಮೂಲದವನು( ಗೊಟ್ಟಿಗೆರೆಯ ಮಾಜಿ ಜಮೀನ್ದಾರ ಹಾಗೂ ಅವನೇ ಹೇಳುತ್ತಿದ್ದಂತೆ ಒಬ್ಬ ಹೆಸರುವಾಸಿ ಸಂಗೀತ ಗಾಯಕಿಯ ಮದುವೆ ಪ್ರಪೋಸಲ್ ಬಂದಿದ್ದ ಮಾಜಿ ವರ).
ಶಿವರಾತ್ರಿ ಅಂದೊಡನೆ ನನಗೆ ಸಹಜವಾಗಿ ನೆನಪಿಗೆ ಬರುವುದು ಶಿವರಾತ್ರಿ ಮಾರನೆಯ ದಿನದ ಗೊಟ್ಟಿಗೆರೆ ಸೋಮೇಶ್ವರ ದೇವರ ಜಾತ್ರೆ. ಈ ಜಾತ್ರೆಗೆ ನಾವು ವಾಕಿಂಗ್ ಸ್ನೇಹಿತರೆಲ್ಲ ತಪ್ಪದೇ ಬಹಳಷ್ಟು ವರ್ಷಗಳ ಕಾಲ ಹೋಗಿ, ತೇರಿನ ಸಂಭ್ರಮ, ಬಾಳೆಹಣ್ಣು ಧವನ ಎಸೆಯುವುದು, ಪಾನಕ ಪನ್ಯಾರ, ಭರ್ಜರಿ ಊಟ ಸವಿದು ಬರುವುದು ಒಂದು ಸಂಪ್ರದಾಯವೇ ಆಗಿತ್ತು. ಅಣ್ಣನ ಕುಟುಂಬದವರ ಆತ್ಮೀಯತೆ , ಆದರ , ಸತ್ಕಾರ ಇವೆಲ್ಲ ಸ್ಮರಣೀಯ. ಕೋವಿಡ್ ಕಾಲದಲ್ಲಿ ನಿಂತ ಸಂಪ್ರದಾಯ ನಿಂತೇ ಹೋಯಿತು, ಅಣ್ಣನ ನಿಧನದಿಂದ.
ನನ್ನ ಜೀವನದ ಸರಿಸುಮಾರು 18 ವರ್ಷಗಳ ಕಾಲ ಒಡೆನಾಡಿದ ಆತ್ಮೀಯ ಗೆಳೆಯ. ಅದೇನೋ ಪ್ರೀತಿ ಅಭಿಮಾನ ಅವನನ್ನು ಕಂಡರೆ. ಬೆಳಿಗ್ಗೆ ವಾಕಿಂಗ್ ಸಮಯದಲ್ಲಿನ ಮಾತು, ತಲೆ ಹರಟೆ, ಹಳ್ಳಿ ಭಾಷೆಯ ಸೊಗಡು ಹಾಗೂ ಅದರಲ್ಲಿನ ರಸಿಕತೆ, ಹಾಡಿನ ಗುನುಗಾಟ ಹೀಗೆ ಯಾವ ವಿಷಯವಾದರೂ ಸರಿಯೇ ನಮ್ಮೆಲ್ಲರನ್ನು ಒಂದುಗೂಡಿಸಿತ್ತು. ಒಮ್ಮೊಮ್ಮೆ ರಸಿಕತೆಯ ಪರಮಾವಧಿಯಲ್ಲಿ ಅವನ ಸಂತೋಷದ ಕ್ಷಣಗಳು ಸಂತೋಷದಾಯಕ.
ಅಣ್ಣ ಒಬ್ಬ ಊಟ ತಿಂಡಿಯ ಪ್ರೇಮಿ (ತಿಂಡಿಪೋತ ಎನ್ನಲೇ?). ನಮಗೂ ತಿನ್ನಿಸಿದವ. ಸ್ನಾನ ಮಾಡದೆ ನಾನು ತಿನ್ನುವುದಿಲ್ಲ ಎಂದಾಗ.. ನಾನು ಅಷ್ಟೇ ಸ್ನಾನ ಮಾಡದೆ ತಿನ್ನುವುದಿಲ್ಲ.. ನೆನ್ನೆ ನಾನು ಮಾಡಿದ ಸ್ನಾನ 24 ಗಂಟೆಯವರೆಗೆ ಚಾಲ್ತಿಯಲ್ಲಿ ಇರುತ್ತದೆ ಎಂದು ತಮಾಷೆ ಮಾಡುತ್ತಿದ್ದ. ರಾತ್ರಿ 9:00ಗೆ ಊಟ ಮಾಡಿದ ಮೇಲೆ ಬೆಳಿಗ್ಗೆ ಕಾಫಿ ಕುಡಿಯುವ ತನಕ ಸುದೀರ್ಘ ಉಪವಾಸ ಮಾಡುತ್ತೇನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವ. ಮೂರ್ತಿಯನ್ನು ನಮ್ಮ ಪಾರ್ಕಿನ ಪಿ.ಬಿ. ಶ್ರೀನಿವಾಸ್ ಎಂದು ಕರೆಯುತ್ತಿದ್ದರು. ಪಿ ಬಿ ಶ್ರೀನಿವಾಸ್ ನ ಅಪ್ಪಟ ಪ್ರೇಮಿ ಹಾಗೂ ಅವರ ಹಾಡುಗಳನ್ನು ಮನಸ್ಸು ತುಂಬಿ ಹಾಡುತ್ತಿದ್ದ.
ಅಣ್ಣ ಕೀಬೋರ್ಡ್ ಕಲಿಯಲು ಗೆಳೆಯ ಮಂಜುವಿನ ಜೊತೆಯಲ್ಲಿ ಹೋಗುತ್ತಿದ್ದ.. ಕಲಿಕೆಯ ಬಗ್ಗೆ ಮಾತಾಡಿದಾಗ ಅವನು ಹೇಳುತ್ತಿದ್ದದ್ದು, ಅಂದು ಸಂಜೆ ತಾನು ಮಂಜುವಿನೊಡನೆ ತಿಂದ ತಿಂಡಿಯ ವಿಷಯ ಮಾತ್ರ. ಒಂದು ಹಂತದಲ್ಲಿ ತಾನು ಕೈಯಲ್ಲದೆ ಕಾಲಲ್ಲೂ ಸಹ ಕೀಬೋರ್ಡ್ ನುಡಿಸಬಲ್ಲೆ ಎಂದು ಹಾಸ್ಯಮಯವಾಗಿ ಜಂಬ ಕೊಚ್ಚಿಕೊಳ್ಳುತ್ತಿದ್ದ.
ಅಣ್ಣನ ದೊಡ್ಡ ಸಮಸ್ಯೆ ಸೊಳ್ಳೆಗಳದು... ಅವನ ಅಭಿಪ್ರಾಯದಂತೆ ಸೊಳ್ಳೆಗಳು ಅವನನ್ನು ಬಲು ಪ್ರೀತಿಯಿಂದ ಆವರಿಸಿಕೊಳ್ಳುತ್ತಿದ್ದವು... ಎಂತಹ ಸೆಕೆ ಇದ್ದರೂ ಮೈತುಂಬ ಬಟ್ಟೆ ಕಾಲು ಚೀಲ ಎಲ್ಲಾ ಹಾಕಿ ಕಂಬಳಿ ಹೊದ್ದು ಮಲಗಿದರೂ ಸೊಳ್ಳೆಯ ಕಾಟ ತಪ್ಪಿದ್ದಲ್ಲ ಎಂದು ಕೊರಗುತ್ತಿದ್ದ.
ಮೂರ್ತಿ ಒಬ್ಬ ಸಂಘ ಜೀವಿ. ನನಗಂತೂ ಬಹು ಆತ್ಮೀಯ... ಮನದಾಳದ ಎಲ್ಲ ಮಾತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದದ್ದು ಉಂಟು. ನನ್ನ ಎಲ್ಲಾ ಚಟುವಟಿಕೆಗಳನ್ನು ಸತತವಾಗಿ ವಿಚಾರಿಸಿ, ಪ್ರೋತ್ಸಾಹಿಸುತ್ತಿದ್ದವ.. "ಸಾಧಕನಪ್ಪ ನೀನು" ಎಂದು ಆಗಾಗ ಬೆನ್ನು ತಟ್ಟುತ್ತಿದ್ದ. ಕೆಲ ಗಂಟೆಗಳ ಕಾಲ ನನ್ನ ಜೊತೆಯಲ್ಲಿ ಕೂತು ನಾನು ನುಡಿಸಿದ ಕೀಬೋರ್ಡ್ ನ ಹಾಡುಗಳನ್ನು ಕೇಳಿ, ವಿಮರ್ಶಿಸಿ ಪ್ರೋತ್ಸಾಹ ಕೊಟ್ಟವನು.
ಅವನಿದ್ದಲ್ಲಿ ಏನೋ ತಮಾಷೆಯ ಮಾತುಗಳು ನಗು ಸದಾ ಇರುತ್ತಿತ್ತು.
ಅವನಿಗೆ ನನ್ನ ಮೇಲಿದ್ದ ಪ್ರೀತಿ, ಅಭಿಮಾನ, ಅಪಾರವಿಶ್ವಾಸ ಎಲ್ಲಾ ಈಗಲೂ ಇದೆ ಎನ್ನುವ ಭಾವ ನನ್ನದು - ಅವನು ದೈಹಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲದೆಯೂ.....
ನನಗೇ ಇಷ್ಟು ನೆನಪು ಕಾಡುತ್ತೆ... ಇನ್ನು ಅವನ ಜೊತೆ ಒಡನಾಡಿದ ಮನೆಯವರಿಗೆ..... ಊಹಿಸಲು ಕಷ್ಟ.
ಅವನ ನೆನಪೇ ಅವರ ಆಸ್ತಿ.. ಆ ನೆನಪೇ ಅವರಿಗೆಲ್ಲಾ ದಾರಿ ದೀಪವಾಗಲಿ ಎಂದು ಹಾರೈಸುತ್ತಾ....
ಅಣ್ಣ ನಿನಗೊಂದು ನಗೆಯ ಸಲ್ಯೂಟ್....
Sooperb chikkappa
ReplyDeleteSavi nenapugalu
ReplyDeleteWonderful uncle 🙏🙏
ReplyDeleteSuma