ಮದುವೆಯ ಸಡಗರ - ಅಭಿಮಾನದ ಮಹಾಪೂರ



ಈಗೀಗ ಮದುವೆಯ ಮನೆಯ ಸಮಾರಂಭಗಳು ವ್ಯವಹಾರಿಕವಾಗಿವೆ. ನಮ್ಮ ಪಾತ್ರ  / ಒಳಗೊಳ್ಳುವಿಕೆ ಇಲ್ಲವೇ ಇಲ್ಲ ಎನ್ನುವಷ್ಟು. ಪರಿಚಯದ ಕೆಲವರನ್ನು ಮಾತಾಡಿಸಿ ವಧೂವರರಿಗೆ ಕೈಕುಲುಕಿ ಊಟ ಮಾಡಿ ಬಂದರೆ ಮುಗಿಯಿತು. ಇನ್ನು ಕೆಲ ಕಡೆಗಳಲ್ಲಂತೂ ಜನಸಂದಣಿಯನ್ನು ಗಮನಿಸಿ ಮೊದಲು ಊಟ ಮಾಡಿ ನಂತರ ಕೈ ಕುಲುಕಿ ಬರುವುದೂ ಇದೆ.

ಎಲ್ಲವೂ.... ಎಲ್ಲಕ್ಕೂ  event management ಕಡೆಯಿಂದ ತಯಾರಿ.   ಬಂದವರನ್ನು ಸತ್ಕರಿಸುವ ಯೋಚನೆಯೂ ಇಲ್ಲದಿರುವಷ್ಟು ಅನುಕೂಲಗಳು.

ನಾವು ಚಿಕ್ಕವರಿದ್ದಾಗ ಮದುವೆ ಮನೆ ಅಂದರೆ ಕೈ ತುಂಬಾ ಕೆಲಸ. ಸಾಮಾನುಗಳು , ಪಾತ್ರೆ, ಸೌದೆ, ಆಮಂತ್ರಣ ಪತ್ರಿಕೆ ಹಂಚುವುದು, ಬಂದವರಿಗೆ ಆತಿಥ್ಯ , ಅಡಿಗೆ ಮಾಡುವವರಿಗೆ ಬೇಕಾದ ಸಾಮಾನುಗಳನ್ನು ಕೊಡುವುದು , ಕೆಲ  ಸಮಯದಲ್ಲಿ ಊಟಕ್ಕೆ ಬಡಿಸುವುದು ಸಹ ನಮ್ಮ ಮೇಲಿನ ಜವಾಬ್ದಾರಿಯಾಗಿತ್ತು. ಕೆಲಸದ ಮಧ್ಯಯೂ ಸಡಗರ ಸಂಭ್ರಮ ಇರುತ್ತಿತ್ತು... ಎಂಥಾ ಬದಲಾವಣೆ ಅಲ್ವಾ... 

ಇದೆಲ್ಲಾ ನೆನಪಿಗೆ ಬರಲು ಕಾರಣ ಈಚೆಗೆ ನಾನು ಭೇಟಿ ನೀಡಿದ ಒಂದು ಮದುವೆ. ಇಂದಿನ ಮದುವೆಯಲ್ಲಿ ನನಗೆ ತಕ್ಕಮಟ್ಟಿಗೆ ಪರಿಚಯವಿದ್ದವರು ಮೂರೇ ಜನ, ಅದರಲ್ಲಿ ಒಬ್ಬಳು ಮದುಮಗಳು. ನಾನು ಮದುವೆ ಮನೆ ಪ್ರವೇಶಿಸುತ್ತಿದ್ದಂತೆ ತುಂಬಾ ಆತ್ಮೀಯತೆಯಿಂದ ಬರಮಾಡಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದವರು ಇನ್ನಿಬ್ಬರು. ಅವರ ಪ್ರೀತಿ ಆದರಗಳು ಪರ್ವತದಷ್ಟು. ಈಚಿನ ದಿನಗಳಲ್ಲಿ ನಾನು ಕಂಡು ಕೇಳರಿಯದ ಆತ್ಮೀಯ ಭಾವ ಅನುಭವಿಸಿದೆ.   ಅದು ಬಾಲನ್ ಮಗಳ ಮದುವೆ.

ಬಾಲನ್ ಬಗ್ಗೆ ಒಂದೆರಡು ಮಾತು ಹೇಳಲೇಬೇಕು.. ಬಾಲನ್ ನನಗೆ ಪರಿಚಯವಾಗಿದ್ದು ಒಬ್ಬ lathe operator ಆಗಿ. ಆತನ ಕೆಲಸದಲ್ಲಿನ ಆಸಕ್ತಿ.. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನನಗೆ ಇಷ್ಟವಾದ ಗುಣ. ಒಂದು ಹಂತದಲ್ಲಿ ನನ್ನ ಕೆಲಸವನ್ನು ಬೇರೆಲ್ಲೋ ಹುಡುಕಿ ಮಾಡಿಸಿ ಕೊಟ್ಟವನು. ಹೀಗೆ ಪ್ರೋತ್ಸಾಹಿಸಿದಾಗ ತಾನೇ ಸ್ವಂತ ಉದ್ದಿಮೆ ಪ್ರಾರಂಭಿಸಲು ಚಿಂತಿಸಿ ಕಾರ್ಯಗತ ಗೈದವನು.  machining ವಿಚಾರದಲ್ಲಿ ನನ್ನ ಬಲಗೈ (ಭಂಟ) ಯಾಗಿದ್ದವನು.

ನೋಡು ನೋಡುತ್ತಲೇ ಬೆಳೆದ ವ್ಯಕ್ತಿ.. ಎರಡು ಮಕ್ಕಳು, ಸ್ವಂತ ಮನೆ. ಮಕ್ಕಳ ಓದಿನಲ್ಲಿ  ವಿಶೇಷ ಆಸಕ್ತಿ.   ಸರ್ ನಾನಂತೂ ಓದಿಲ್ಲ ಮಕ್ಕಳು ಚೆನ್ನಾಗಿ ಓದಬೇಕು ಎಷ್ಟಾದರೂ ದುಡಿದು ಓದುಸ್ತೀನಿ ಅನ್ನುತ್ತಿದ್ದವ. ಎಲ್ಲ ಹಂತದಲ್ಲೂ ತನ್ನ ವೈಯುಕ್ತಿಕ  ವಿಚಾರದಲ್ಲೂ ಆಗಾಗ ಸಮಾಲೋಚಿಸುತ್ತಿದ್ದವ. ಇಬ್ಬರು ಮಕ್ಕಳ ಓದಿನ ಹಂತದಲ್ಲಿ ಅವರನ್ನು ಕರೆತಂದು ಅವರ ಅಭಿರುಚಿಗಳನ್ನು ತಿಳಿದುಕೊಂಡು ಮುಂದೆ ಓದಲು ನಿರ್ಧರಿಸುತ್ತಿದ್ದವ. ನಾನು ನನ್ನ ವ್ಯವಹಾರಗಳನ್ನೆಲ್ಲ ಸಂಪೂರ್ಣ ಮುಗಿಸಿದ ಮೇಲೂ, ನನ್ನೊಂದಿಗೆ ಅವ್ಯಾಹತವಾಗಿ ಸಂಬಂಧ ಇರಿಸಿಕೊಂಡಿದ್ದವ.

ಮಕ್ಕಳ ಓದು ಮುಗಿ ದಾಗ,  ಕೆಲಸಕ್ಕೆ ಸೇರಿದಾಗ ಅವರನ್ನು ಕರೆದುಕೊಂಡು ಬಂದು ಸಿಹಿ ಕೊಟ್ಟು ಸಂಭ್ರಮಿಸಿದ ಮನುಷ್ಯ...

ಕರೋನಾ ಸಮಯದಲ್ಲಿ ಬಾಲನ್ ಸತ್ತ ಸುದ್ದಿ ಮಗ ಫೋನ್ ಮಾಡಿ ತಿಳಿಸಿದಾಗ ತುಂಬಾ ನೋವಾಯ್ತು.. ಹೋಗಲು ಆಗಲಿಲ್ಲ... ಮನೆಯವರಿಗೆ ಮುಖ ನೋಡಲು ಕಷ್ಟವಾಯಿತಂತೆ.

ಅಂತಹ ವ್ಯಕ್ತಿಯ ಮನೆಯಿಂದ ಮದುವೆಗೆ ಕರೆಯೋಲೆ ಬಂದಾಗ, ನನ್ನನ್ನು ನೆನೆಸಿಕೊಂಡು ಕರೆದದ್ದಕ್ಕೆ ಏನೋ ಸಂತೋಷ.

ಮದುವೆಯ ಮನೆಗೆ ಹೋಗುತ್ತಿದ್ದಂತೆ ಬಾಲನ್ ಮಗನಿಂದ ಪ್ರೀತಿಯ ಸ್ವಾಗತ. ಅವರ ಹತ್ತಿರದವರಿಗೆ ಪರಿಚಯ ಮಾಡಿಕೊಡುವುದು ಹೀಗೆ.. ....

ಬಾಲನ್ ಹೆಂಡತಿ ಅವರ ಅಪ್ಪನಿಗೆ  ಪರಿಚಯಿಸುತ್ತಾ " ನಿನ್ನ ಅಳಿಯ ವರ್ಕ್ ಶಾಪ್ ಹಾಕಲು ಇವರೇ ಕಾರಣ" ಅಂದಾಗ ಬಾಲನ್ ಗೆ ನನ್ನ ಮೇಲಿದ್ದ ಅಭಿಮಾನದ ಆಳ ಅರಿವಾಯಿತು. 

ಮದುಮಗಳು ನನ್ನ ಆಶೀರ್ವಾದ ಬೇಕೆಂದು ಕಾಯುತ್ತಿದ್ದಳು ಎಂದು ತಿಳಿದಾಗ ಕಣ್ತುಂಬಿ ಬಂತು. ದೇವರೇ ಆ ಮಗುವನ್ನು ಸುಖ ಸಂತೋಷದಿಂದ ಇರುವಂತೆ ಆಶೀರ್ವದಿಸು ಎಂದು ಮನದಲ್ಲೇ ಪ್ರಾರ್ಥಿಸಿದೆ.

ಸಿಹಿ ತಿಂದು, ತಾಂಬೂಲ ತೊಗೊಂಡು ಹೊರ ಬಂದಾಗ ಬಾಲನ್ ನ ನೆನಪು ಕಾಡಿತು. ಎಲ್ಲಾದರೂ ಇರು ಬಾಲನ್ ನಿನ್ನ ರಕ್ಷೆ ನಿನ್ನ ಮಕ್ಕಳ ಮೇಲೆ ಇರುತ್ತದೆ ಅನಿಸಿತು.

ನಿಜಕ್ಕೂ ಇಬ್ಬರೂ ಮಕ್ಕಳೂ ಧನ್ಯರು... ಅಂತ ಅಪ್ಪನನ್ನು ಪಡೆಯಲು....


    

Comments

  1. ಜಯಸಿಂಹ7 February 2023 at 09:33

    ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ನಾವುಸಹ ಮದುವೆ ಮನೆಗಳಲ್ಲಿ ಉಪಚಾರದ ನೀರೀಕ್ಷೆ ಇಟ್ಟುಕೊಳ್ಳದೆ ಹುಸಿನಗೆಯ ಹೊರಸೂಸಿ ಹಸ್ತಲಾಘವನಿತ್ತು ಭರ್ಜರಿ ಭೋಜನ ಸವಿದು ಅಲ್ಲಿಂದ ಹಾಗೆಯೇ ಕಳಚಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದ್ದೇವಲ್ಲ. ಆದರೂ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ಮನಸ್ಸಿಗೆ ಮುದವನ್ನು ಕೊಡುತ್ತವೆ.



    ReplyDelete
  2. ಹೌದು ಸಾರ್. ಈ ತೆರನಾದ ಮಾನವೀಯಸಂಬಂಧ ಭಾವನೆಗಳು ಜೀವಮಾನ ಪೂರ್ತಿ ಪಯಣಿಸಿ ಉಲ್ಲಸಿತರಾಗಿಸುತ್ತದೆ.ಅಂತಹ ಕ್ಷಣಗಳನ್ನು ಅಹ್ಲಾದಿಸುವ ಮನಸ್ಥಿತಿ ನಮ್ಮಲ್ಲಿರಬೇಕಷ್ಟೆ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ