ಮಕ್ಕಳ ಪ್ರತಿಭಾ ಪ್ರದರ್ಶನ - ಪೋಷಕರಿಗೆ ಸಂಭ್ರಮದ ಕ್ಷಣ

 


ಇದು ನೆನ್ನೆಯ ದಿನದ ಸಂಜೆಯ ನನ್ನ ಅನುಭವ, ಬನ್ನೇರುಘಟ್ಟ ರಸ್ತೆಯಲ್ಲಿರುವ ಸುದರ್ಶನ್ ವಿದ್ಯಾ ಮಂದಿರದ ಶಾಲೆಯ ಆವರಣವನ್ನು ಹೊಕ್ಕಾಗ ಆದದ್ದು. ಕಣ್ಣಳತೆಯಲ್ಲೆಲ್ಲ ಚಿಕ್ಕವಯಸ್ಸಿನ ಅಪ್ಪ ಅಮ್ಮಂದಿರು ಜೊತೆಗೆ ನಾವುಗಳು ಅಜ್ಜಿ ತಾತಂದಿರು. ಕೆಲ ಚಿಕ್ಕ ಮಕ್ಕಳು ಸಹ. ಕಾರಣ LKG, UKG ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ. ಎಲ್ಲರ ಸಡಗರ ಸಂಭ್ರಮ. 

ನಾವು ಹೋದಾಗ ಮಕ್ಕಳನ್ನು  ಕರೆದು ತಂದು ವೇದಿಕೆಯ ಹತ್ತಿರ ಕೂಡಿಸುತ್ತಿದ್ದರು. ಮಕ್ಕಳ ಉತ್ಸಾಹ ಅದೆಷ್ಟೋ.... ಶಿಕ್ಷಕರ ಪರಿಶ್ರಮ ಮೆಚ್ಚುವಂಥದ್ದು.

ನನ್ನ ಮೊಮ್ಮಗಳು ವಿಸ್ಮಯ ಸಹ ಒಂದು ನೃತ್ಯದಲ್ಲಿ ಭಾಗಿ ಹಾಗಾಗಿ ನಾವು ಸಹ ಅಲ್ಲಿ ಕಾತುರದಿಂದ ಇದ್ದ ಪ್ರೇಕ್ಷಕರು.

ಯಾವ ಪೂರ್ವಾಗ್ರಹವು ಇಲ್ಲದ ಮುಗ್ಧ ಮನಸ್ಸಿನ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ವೇದಿಕೆಯ ಮೇಲೆ ಬಂದು ಅವರಿಗೆ ಕಲಿಸಿದಂತಹ ಭಾಗವನ್ನು ಅವರದೇ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ನೋಡಲು ಚಂದ. ಮಕ್ಕಳು ಹೇಗೆ ಹಾಡಿದರೂ ಕುಣಿದರೂ ಚಂದ.. ಅದರಲ್ಲೂ ನಮ್ಮ ಮಕ್ಕಳು ಕುಣಿದರಂತೂ ಇನ್ನೂ ಚೆಂದ.....ಪ್ರೇಕ್ಷಕರ ಚಪ್ಪಾಳೆ..

ಮಕ್ಕಳ  ಈ ಪ್ರದರ್ಶನಕ್ಕೆ ಶಿಕ್ಷಕರ ಪ್ರಯತ್ನ ಹೇಳಲಾಗದು.

ಅವರವರ ಮಕ್ಕಳು  ವೇದಿಕೆಯ ಮೇಲೆ ಬಂದಾಗ ಅವರ ಅಪ್ಪ ಅಮ್ಮ ಅಜ್ಜಿ ತಾತಂದಿರ ಸಂಭ್ರಮ ಹೇಳತೀರದು. ಈಗಿನ ಮೊಬೈಲ್ ಫೋನ್ ಯುಗದಲ್ಲಿ ಎಲ್ಲರೂ ಫೋಟೋ ತೆಗೆಯುವವರೆ ವಿಡಿಯೋ ಮಾಡುವವರೇ.. (ಮಾಡಬಾರದೆಂಬ ಸೂಚನೆ ಮತ್ತು ವಿನಂತಿ ಇದ್ದರೂ ಸಹ). ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ, ಎಲ್ಲ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವಂತಿತ್ತು. ಸುಮಾರು 100 ನಿಮಿಷಗಳ ಕಾಲ ಮಕ್ಕಳ ಹಾಡು ಕುಣಿತ ನೋಡಿ ಮನಸ್ಸು ತುಂಬಿ ಬಂತು.

ಅದರಲ್ಲೂ ಆರಾಧ್ಯ ಅನ್ನುವ ಯುಕೆಜಿ ಮಗು ಕೊಟ್ಟ vote of thanks .. ಚೇತೋಹಾರಿ ಯಾಗಿತ್ತು

ಇದೆಲ್ಲವನ್ನು ಆಗು ಮಾಡಿದ ಆಡಳಿತ ವರ್ಗ, ಶಿಕ್ಷಕ ವರ್ಗ ಹಾಗೂ ಸಹಾಯಕ ವರ್ಗದ ಎಲ್ಲರೂ ಅಭಿನಂದನೀಯರು....hats off to all of them.

ಇದನ್ನೆಲ್ಲಾ ನೋಡಿದಾಗ, ಮೆಲುಕು ಹಾಕಿದಾಗ ನಾನು ನನ್ನ ಬಾಲ್ಯಕ್ಕೆ ಜಾರಿದೆ. ಆ ದಿನಗಳಲ್ಲಿ ನಮ್ಮ ಮೇಷ್ಟ್ರುಗಳು ಹೇಳಿಕೊಡುತ್ತಿದ್ದ ಹಾಡು, ಕೋಲಾಟ, ನಾಟಕ, ಭಾಷಣ,ಲಾವಣಿ, ಯಕ್ಷಣಿ ಹೀಗೆ ವಿವಿಧ ಆಯಾಮಗಳು .  ನಾವು ಮಕ್ಕಳು ಹಳ್ಳಿಯಲ್ಲಿ ಆಡುತ್ತಿದ್ದ ನಾಟಕಗಳು - ಸ್ವರ್ಗದಲ್ಲಿ ಎಲೆಕ್ಷನ್, ನರಕದಲ್ಲಿ ಲಂಚ - ಹೀಗೆ...

ಬರೀ ಪಂಚೆಯುಟ್ಟು ಹಣೆಗೆ ಇಟ್ಟು, ತಲೆಗೆ ಒಂದು ಗಂಟು ಕಟ್ಟಿದರೆ ಈಶ್ವರನ ಪಾತ್ರ... ಅದೇ ಪಂಚೆಯ ಮೇಲೆ ಶರ್ಟ್ ತೊಟ್ಟು ತಲೆಗೊಂದು ರಟ್ಟಿನ ಕಿರೀಟವಿಟ್ಟರೆ ರಾಜನ ಪಾತ್ರ. ಹಾಗಿತ್ತು ನಮ್ಮ ವೇಷಭೂಷಣ.  ನಾನು ರಂಗಕ್ಕೆ ಬಂದಾಗ ನಮ್ಮೂರಿನ ಹಿರಿಯರೊಬ್ಬರು( ಅಭಿಮಾನಿ ಎನ್ನಲೇ) ಬಾಯಲ್ಲಿ ಸೀಮೆಎಣ್ಣೆ ತುಂಬಿ ಅದನ್ನು ಆಚೆಗೆ ಊದಿ ಬೆಂಕಿ ಕಡ್ಡಿ ಗೀರಿ, ಬೆಳಕು ತರಿಸುತ್ತಿದ್ದ ಪ್ರಯೋಗ ಮೈ ಜುಮ್ಮನಿಸುತ್ತಿತ್ತು..

ವಾವ್..... ಎಂಥ ನೆನಪುಗಳು... ಮೈ ನವಿರೇಳಿ ಸುತ್ತಿದೆ...

ಇದಕ್ಕೆ ಮೂಲ ಕಾರಣ ನನ್ನ ಮೊಮ್ಮಗಳು ವಿಸ್ಮಯ... ದೇವರ ಆಶೀರ್ವಾದ ಅವಳ ಮತ್ತು ಎಲ್ಲ ಮಕ್ಕಳ ಮೇಲಿರಲೆಂದು ಪ್ರಾರ್ಥಿಸುತ್ತಾ... ವಿರಮಿಸುತ್ತೇನೆ...



Comments

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ