ಎಂದರೋ ಮಹಾನು ಭಾವುಲು... ಮೊದಲಕ್ಷರ ಕಲಿಸಿದ ನಂಜುಂಡಯ್ಯ ಮೇಷ್ಟ್ರು.


ಎಂದರೋ ಮಹಾನು ಭಾವುಲು... ಅಂದರಿಕಿ ವಂದನಮುಲು... ಇದು ನಾನು ಹೈಸ್ಕೂಲಿನಲ್ಲಿ ಓದುತಿದ್ದಾಗಿನಿಂದ ಕೇಳಿದ ಹಾಡು. ಆಗ ನನಗದು ತ್ಯಾಗರಾಜರ ಪಂಚರತ್ನ ಕೃತಿ ಎಂದಾಗಲಿ ಅದರ ಅರ್ಥವಾಗಲಿ ತಿಳಿಯದು. ಆದರೆ ಹಾಡು ಮಾತ್ರ ನನಗೆ ತುಂಬ ಪ್ರಿಯ.

ಮಾವಳ್ಳಿಯಲ್ಲಿ ಚಂದ್ರ ಕಲಾವಿದರು (ನನ್ನಣ್ಣಂದಿರು ಚೂಡಣ್ಣ, ಕಿಟ್ಟಣ್ಣ ಅದರ ಸಕ್ರಿಯ ಸದಸ್ಯರು) ನಡೆಸುತ್ತಿದ್ದ ತ್ಯಾಗರಾಜ ಆರಾಧನೆಯ ಸಮಯದಲ್ಲಿ ಕೇಳಿದ್ದು.

ಈಗ ನನ್ನ ಸಂಗೀತದ ಭಾಗವಾಗಿ ಈ ಹಾಡು ಮತ್ತಷ್ಟು ಹೃದಯಕ್ಕೆ ಹತ್ತಿರವಾಗಿದೆ.. ಹಾಗೂ ನನ್ನ ಜೀವನದ ಹಾದಿಯಲ್ಲಿ ಪ್ರಭಾವ ಬೀರಿದ ಮಹಾನುಭಾವರುಗಳನ್ನು ನೆನಪಿಸಿಕೊಳ್ಳಲು ಸ್ಪೂರ್ತಿ ನೀಡಿದೆ. ನನ್ನ ಈಗಿನ ವ್ಯಕ್ತಿ ಚಿತ್ರವನ್ನು ರೂಪಿಸಲು ಬಹಳಷ್ಟು ಮಹಾನುಭಾವರುಗಳು ಗೆರೆಗಳನ್ನು ಎಳೆದು ಬಣ್ಣಗಳನ್ನು ತುಂಬಿದ್ದಾರೆ.

"ಕಲಿಸಿದಾತಂ ವರ್ಣಮಾತ್ರಂ ಗುರು" ಈ ಲೋಕೋಕ್ತಿಯಂತೆ ನನಗೆ ಮೊದಲ ಅಕ್ಷರಗಳನ್ನು ಕಲಿಸಿದ ಗುರುಗಳಿಗೆ ನನ್ನ ಭಕ್ತಿಪೂರ್ವಕ ನಮನ.

ಹೀಗಿದೆ  ನನಗೆ ಅ ಆ ಇ ಈ ಕಲಿಸಿದ ನಂಜುಂಡಯ್ಯ ಮೇಷ್ಟರ ನೆನಪು. ನಂಜುಂಡಯ್ಯ ಮೇಷ್ಟ್ರು ಅಂದರೆ ಬಿಳಿಯ ಕಚ್ಚೆ ಪಂಚೆ, ಬಿಳಿಯ ಶರ್ಟು ಕಂದು ಬಣ್ಣದ ಕೋಟು ಕರಿಯ ಟೋಪಿ ಕಾಲಿಗೆ ಚಪ್ಪಲಿ ಇದು ಮನದಲ್ಲಿ ಅಚ್ಚು ಮೂಡಿದ ಚಿತ್ರಣ. ಮುಖದ ನೆನಪು ಮಾತ್ರ ಇಲ್ಲ. 

ಹಳ್ಳಿಯಲ್ಲಿ ಮಕ್ಕಳು ಮನೆಯಲ್ಲಿ ತುಂಬಾ ಚೇಷ್ಟೆ ಮಾಡುತ್ತಾರೆ ಅಂದರೆ ಅವರನ್ನು ಶಾಲೆಗೆ ಕಳಿಸುವುದು ಒಂದು ಸಂಪ್ರದಾಯವೇ ಆಗಿತ್ತು. ನನ್ನನ್ನು ಹಾಗೆ ಮುಂಚೆಯೇ ಶಾಲೆಗೆ ಕಳಿಸಿದರಂತೆ. ನನಗೆ ಚೆನ್ನಾಗಿ ಜ್ಞಾಪಕವಿರುವುದು, ನನ್ನನ್ನು ತರಗತಿಯ ಹಿಂದುಗಡೆ ಗೋಡೆಯ ಪಕ್ಕಕ್ಕೆ ಕೂಡಿಸಿದ್ದು. ನಂಜುಂಡಯ್ಯ ಮೇಷ್ಟ್ರು ಬಂದು ನನ್ನ ಮುಂದೆ ಬಗ್ಗಿ ನೆಲದ ಮೇಲೆ ಅ ಆ ಅಕ್ಷರಗಳನ್ನು ನನ್ನ ಮುಂದೆ ನನಗೆ ಸರಿಯಾಗಿ ಕಾಣುವಂತೆ ಬರೆದದ್ದು... ಹಾಗೂ ಒಂದು ಡಬ್ಬದ ತುಂಬಾ ಹುಣಸೆ ಬೀಜವನ್ನು ಕೊಟ್ಟು ಅಕ್ಷರದ ಮೇಲೆ ಒಂದೊಂದೇ ಬೀಜವನ್ನು ಜೋಡಿಸಲು ಹೇಳಿದ್ದು. ಅದನ್ನು ಮಾಡಿದ ನೆನಪು ಇದೆ. ಹಾಗಾಗಿ ನನಗೆ ಮೊದಲ ಅಕ್ಷರಗಳನ್ನು ಕಲಿಸಿದವರು ನಂಜುಂಡಯ್ಯ ಮೇಷ್ಟ್ರು .


ನಂಜುಂಡಯ್ಯ ಮೇಷ್ಟ್ರು ನನ್ನ ಮೇಲೆ ದೂರು ಹೇಳಿದ್ದರಂತೆ.. ಅದು ನಾನು ಶಾಲೆಯಿಂದ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದನಂತೆ ಮತ್ತು ಸ್ವಲ್ಪ ಸಮಯದ ನಂತರ ನನ್ನ ಪಾಡಿಗೆ ನಾನು ಹಾಜರಿ ಹಾಕುತ್ತಿದ್ದನಂತೆ. ಇದರ ಕಾರಣ ಹುಡುಕಿದಾಗ ಹೊರಬಂದ ವಿಷಯ- ನಾನು ಇದ್ದಕ್ಕಿದ್ದಂತೆ ಓಡುತ್ತಿದ್ದದ್ದು ಅಮ್ಮನ ಬಳಿಗೆ ಹಾಲು  ಕುಡಿಯಲು, ಅಮ್ಮನ ಹಾಲಿನ ಚಪಲ ಬಂದಾಗ. ಸುಮಾರು ನಾಲ್ಕೂವರೆ ವರ್ಷಗಳ ಕಾಲ ಆ ಭಾಗ್ಯ ಪಡೆದವನು. ಆ ಕಾಲಕ್ಕೆ ಅದು ವಿಶೇಷವಲ್ಲ.


ನನ್ನ ವಿಧ್ಯಾಭ್ಯಾಸದ ತಳಪಾಯ  ಭಧ್ರಪಡಿಸಿದ ಮಹಾನುಭಾವರು... ನಂಜುಂಡಯ್ಯ ಮೇಷ್ಟ್ರು.

ಅವರಿಗೆ ನನ್ನ ವಂದನೆಗಳು.... ಹೃತ್ಪೂರ್ವಕ ನಮನಗಳು.


Comments

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ