ಕನ್ನಡಿ ಸುಳ್ಳು ಹೇಳಿತೇ?
" ತಾತ ಒಂದು, ಮೂರು ಆಡೋಣ ಬಾ" ಅಂತ ನನ್ನ ಮೊಮ್ಮಗಳು ಕಣ್ಣಾ ಮುಚ್ಚಾಲೆ ಆಟಕ್ಕೆ ಕರೆದಾಗ ಬೇಡ ಅನ್ನುವ ಪ್ರಮೇಯವೇ ಇಲ್ಲ. ಆ ಉತ್ಸಾಹದ ಚಿಲುಮೆಯ ಜೊತೆ ಕಾಲ ಕಳೆಯುವುದು ನನಗಿಷ್ಟ. ಅವಳ ಜೊತೆ ಎಲ್ಲಾ ಆಟಗಳನ್ನು ಆಡಿದರೂ... ಕೆಲಸ ಸಮಯ ಅವಳ ಕುಣಿತಕ್ಕೆ , ಓಟಕ್ಕೆ, ಆಟಕ್ಕೆ ಸರಿಸಮನಾಗಿ ನಿಲ್ಲುವುದು ಕಷ್ಟ. ಆಗ ಮೆತ್ತಗೆ ಜಾರಿಕೊಂಡದ್ದು ಇದೆ.
ನಮ್ಮ ದೊಡ್ಡ ಕುಟುಂಬದ ಮಕ್ಕಳು ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಕಾಲ ಕಳೆಯುವ ಸಮಯ ತುಂಬ ಸೊಗಸು. ಹಾಗೆಯೇ ಅವರುಗಳೂ ಸಹ ನನ್ನ ಜೊತೆ ಗೌರವಪೂರ್ವಕ ಸಲುಗೆಯಿಂದ ನಮ್ಮನ್ನು ಕೀಟಲೇ ಮಾಡುವುದೂ ಸಹ ಮುದ ಕೊಡುವ ವಿಚಾರ. ಇದು ನಮ್ಮ ಹತ್ತಿರದ ನೆಂಟರಿಷ್ಟರ ಮಕ್ಕಳಿಗೂ ಅನ್ವಯಿಸುತ್ತದೆ. ಅವರುಗಳು ನನ್ನ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎನ್ನುವುದು ನನಗೆ ಹೆಮ್ಮೆಯೇ...
ಇಂಥ ಸಮಯಗಳಲ್ಲಿ ನನ್ನ ಹೆಂಡತಿ ನನಗೆ ಹೇಳುವ ಮಾತು " ನಿಮಗೆ ವಯಸ್ಸಾಗಿದೆ ಅಷ್ಟೇ..." ಬುದ್ಧಿ ಬಂದಿಲ್ಲ ಅನ್ನುವ ಮಾತನ್ನು ಇಲ್ಲಿಯತನಕ ಹೇಳಿಲ್ಲ ಅಷ್ಟೇ. ಇದು ಕೆಲಸಲ ಆರೋಪ, ಮೂದಲಿಕೆ ಅನಿಸಿದರೆ ಕೆಲಸಲ ಮೆಚ್ಚುಗೆಯೂ ಇರಬಹುದೇನೋ ಅನಿಸಿದೆ.
ಇನ್ನೊಂದು ಮುಖ... ನಿಮ್ಹಾನ್ಸ್ ನ ಒಂದು ಅಂಗವಾದ "ವಯೋಮಾನಸ ಸಂಜೀವಿನಿ" ಹಿರಿಯ ನಾಗರಿಕರಿಗಾಗಿ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಒಂದು ಸಂಘಟನೆ. ಇದರಲ್ಲಿ ನಾನು ಸಹ ಕೆಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಮೂಡಿ ಬರುವ ಅಭಿಪ್ರಾಯಗಳು.... ಹಿರಿಯ ನಾಗರಿಕರು ತಮಗಿಂತ ಕಿರಿಯರೊಡನೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಆರೋಗ್ಯದ ಕಡೆ ಗಮನಕೊಡಬೇಕು, ಸಾಧ್ಯವಾದಷ್ಟು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ವಯಸ್ಸು ಒಂದು ಅಂಕಿ ಮಾತ್ರ ಅನ್ನುವುದು ನನಗೆ ಬಲುಪ್ರಿಯ. ಹಾಗೆ ಖಾಯಿಲೆಗಳ ಬಗ್ಗೆ ವಿಷದವಾದ ಚರ್ಚೆ ನನ್ನ ಮನಸ್ಸಿಗೆ ಹಿಡಿಸಿಲ್ಲ. ಪ್ರಾಯಶಃ ನನ್ನ ಆರೋಗ್ಯ ತಕ್ಕ ಮಟ್ಟಿಗೆ ಚೆನ್ನಾಗಿದೆ. ದೇವರ ದಯೆ..Thank GOD.. ಅವನಿಗೆ ನನ್ನ ವಂದನೆ.
ಈಗೀಗ ತಿನ್ನುವಾಗ ನನ್ನ ಹಲ್ಲುಗಳ ಅಸಹಕಾರ, ಮೆಟ್ಟಿಲು ಏರಿಳಿಯುವಾಗ ಆಗಿರುವ ನಿಧಾನ, ಕೈ ಮೇಲೆ ಸುಕ್ಕು ಮೂಡುತ್ತಿರುವ ಚರ್ಮ ಇವು ಶರೀರದ ಮೇಲಾದ ವಯಸ್ಸಿನ ಪ್ರಭಾವ.
108 ವರ್ಷಗಳ ಕಾಲ ಜೀವಿಸಿದ್ದ ನನ್ನಪ್ಪ, ಹಿರಿಯ ನಾಗರಿಕರ ಜೀವನ ಶೈಲಿಯ ವಿಚಾರದಲ್ಲಿ ಸ್ಪೂರ್ತಿ. ಅವರ ಹಿತಮಿತವಾದ ಆಹಾರ ಶೈಲಿಯನ್ನು ಪಾಲಿಸುವ ದಿಕ್ಕಿನಲ್ಲಿ ನನ್ನ ಪ್ರಯತ್ನ ಇನ್ನೂ ನಡೆಯುತ್ತಿದೆ. ಅವರ ಜೀವನೋತ್ಸಾಹ ಜೊತೆ ಜೊತೆಗೆ ಸಾಂಸಾರಿಕ ವಿಚಾರಗಳ ಬಗ್ಗೆ ನಿರ್ಲಿಪ್ತತೆ ನಾವು ಪಾಲಿಸಬೇಕಾದ ಮಾದರಿ.
ಇದೆಲ್ಲ ವಿಷಯ ಮನಸ್ಸಿಗೆ ಬರಲು ಕಾರಣ ನಾನು ನೋಡಿದ ನನ್ನದೇ ಹಳೆಯ ಫೋಟೋಗಳು ನಂತರ ನನ್ನನ್ನು ನಾನೇ ಕನ್ನಡಿಯಲ್ಲಿ ನೋಡಿಕೊಂಡಾಗ ಕನ್ನಡಿ ಹೇಳಿದ್ದು.." ನಿನ್ನ ತಲೆ ಸಾಕಷ್ಟು ನುಣ್ಣಗಾಗಿದೆ.. ಕೂದಲು ನರೆತಿದೆ " ಎಂಬ ಸತ್ಯ.
ಆದರೆ ನನ್ನ ಮನಸ್ಸು ನನ್ನ ಹೆಂಡತಿ ಹೇಳಿದ ”ನಿಮಗೆ ವಯಸ್ಸಾಗಿದೆ ಅಷ್ಟೇ..." ಎನ್ನುವ ಮಾತನ್ನು ಪೂರ್ತಿಯಾಗಿ ಒಪ್ಪುತ್ತದೆ.. ಮತ್ತು ನನಗಿಂತ ಚಿಕ್ಕವರ ಜೊತೆ ಒಡನಾಟ ಸಣ್ಣಪುಟ್ಟ ಚೇಷ್ಟೆ ನೆನೆಸಿಕೊಂಡಾಗ ನನ್ನ ಒಳ ಮನಸು ಕೇಳಿದ ಪ್ರಶ್ನೆ " ಕನ್ನಡಿ ಸುಳ್ಳು ಹೇಳಿತೇ?"
ವಯಸ್ಸು ದೇಹಕ್ಕೆ ಮಾತ್ರ.. ಮನಸ್ಸಿನಲ್ಲಿ ನಾವು ಎಳೆಯರಾಗಿ, ಎಳೆಯರ ಗೆಳೆಯರಾಗಿ ಇರಲು ಸಾಧ್ಯ.
ಈ ಮನೋಭಾವ ರೂಢಿಸಿಕೊಂಡು ಜೀವನವನ್ನು ಸೊಗಸು ಮಾಡಿಕೊಳ್ಳೋಣ.
ಎಲ್ಲಾ ಹಿರಿಯರು ಹಾಗೂ ಕಿರಿಯರಿಗೂ ನನ್ನ ಪ್ರೀತಿಯ ನಮಸ್ಕಾರಗಳು.
ಸುಂದರ ಬರವಣಿಗೆ ಮೂಲಕ ಸಂಸಾರದ ಹಲವು ಖುಷಿ ಹಲವು ಜವಾಬ್ದಾರಿಗಳ ಸೂಚನೆ ನನಗೆ ಇಷ್ಟವಾಯಿತು, ರಂಗ.
ReplyDeleteSooperb chikkappa
ReplyDeleteEven I believe that age is just a number,we should always remember the kid inside us and live
ಅಣ್ಣ ನಿನಗೆ ವಯಸ್ಸು ಹಿಂದಕ್ಕೆ ಚಲಿಸುತ್ತದೆ.ನೀನೊಂದು ಉತ್ಸಾಹದ ಚಿಲುಮೆ
ReplyDelete