ಯೋಗಾ ಯೋಗ - Narrow gauge train ಇಂದ ವಿಮಾನಯಾನದ ವರೆಗೆ

30 Dec 2022 

2022ರ ಕೊನೆಯ ವಾರ ಒಂದು ವಿಶಿಷ್ಟ ಅನುಭವ. 33 ಜನರೊಡನೆ... ಅದರಲ್ಲೂ ಅಕ್ಕತಂಗಿಯರು ಅಣ್ಣ ತಮ್ಮಂದಿರು ಮತ್ತು ಅವರ ಮಕ್ಕಳು ಮೊಮ್ಮಕ್ಕಳೊಡನೆ ವಿಮಾನಯಾನ.


ಸಂದರ್ಭ ನಮ್ಮಪ್ಪನ ಹಿರಿಯ ಮೊಮ್ಮಗ ರವಿ ಹಾಗೂ ವಿನುತಾ ದಂಪತಿಯ ಮೊದಲ ಮಗಳ ಮದುವೆಯ ನಿಶ್ಚಿತಾರ್ಥ ದೂರದ ಕಲ್ಬುರ್ಗಿಯಲ್ಲಿ. ಮೈಸೂರಿನ ಹುಡುಗಿ... ಕಲ್ಬುರ್ಗಿಯ ಹುಡುಗ.. ಇದೇ ಅಲ್ಲವೇ ಋಣಾನುಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತ ಸಂಬಂಧವಯ್ಯಾ.. ಎಷ್ಟು ಸತ್ಯ ಅಲ್ಲವಾ?

ಮೂರು ದಿನದ ನಮ್ಮ ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದವರು ರವಿ ವಿನುತಾ ದಂಪತಿ.... ಅತ್ತ ಕಲ್ಬುರ್ಗಿಯ ಶ್ರೀಮತಿ ಆರತಿ ಹಾಗೂ ಡಾಕ್ಟರ್ ಅರುಣ್ ಕುಮಾರ್ ಕುಲಕರ್ಣಿ ದಂಪತಿಗಳ ಆದರ ಆತಿಥ್ಯವು ಕಲ್ಬುರ್ಗಿಯ ಬಿಸಿಲಿನ ನಡುವೆಯೂ ನಮ್ಮನ್ನು ತಂಪಾಗಿರಿಸಿತ್ತು. ಇಷ್ಟು ದೊಡ್ಡ ನಮ್ಮವರ ಗುಂಪಿನಲ್ಲಿ ಪ್ರಯಾಣ ಮಾಡಿದ ಅನುಭವ ಬಹು ವರ್ಷಗಳ ನಂತರ ಸಿಕ್ಕಿತ್ತು.


ಕಾರ್ಯಕ್ರಮ ಮುಗಿದು ನೆನ್ನೆ ಬೆಂಗಳೂರಿಗೆ ಬಂದೆವು... ವಿಮಾನ ನಿಲ್ದಾಣದಿಂದ ನಾನು ಮತ್ತು ನನ್ನಾಕೆ ವಿಜಯ, ನಮ್ಮ ಮನೆಗೆ ಬರುವ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ನನ್ನೂರು, ನಾ ಹುಟ್ಟಿದ ಊರು ದೊಡ್ಡ ಜಾಲ. ಈ ಸಲ ಸಮಯ ನನ್ನ ಪರವಾಗಿತ್ತು.. ಜೊತೆಯಲ್ಲಿದ್ದ taxi driver ಸಹ ನನ್ನ ಪರವಾಗಿದ್ದ,  ಹಾಗಾಗಿ ನನ್ನೂರಿನಲ್ಲಿ ಸಮಯ ಕಳೆಯುವ ಒಂದು ಅವಕಾಶ ಸಿಕ್ಕಿತ್ತು.  ಕೆಲ ಬೀದಿಗಳಲ್ಲಿ ಓಡಾಡಿ ಹಳೆಯ ಮಿತ್ರರನ್ನು, ಪರಿಚಿತರನ್ನು (ಕೆಲವರನ್ನು ಕಷ್ಟಪಟ್ಟು ಗುರುತು ಹಿಡಿದು) ಮಾತಾಡಿ ಹಳೆಯ ನೆನಪುಗಳನ್ನು ಸವಿದು ಪ್ರಯಾಣ ಮುಂದುವರಿಸಿದೆವು.

ದಾರಿಯಲ್ಲಿ ದೊಡ್ಡಜಾಲ ರೈಲ್ವೆ ನಿಲ್ದಾಣ ನೋಡಿ ನನ್ನ ಮನಸ್ಸಿನ ಸಂತೋಷ ಮಿತಿಮೀರಿತ್ತು. ಹಳೆಯ ನೆನಪುಗಳೊಡನೆ ಬೇರೊಂದೇ ಲೋಕದಲ್ಲಿ ತೇಲಾಡುತ್ತಿದ್ದೆ.

ರಾತ್ರಿ ಕನಸಿನಲ್ಲೂ ಅದೇ ಚಿತ್ರಣ..Narrow gauge train ಪ್ರಯಾಣದ ಅನುಭವ.

ಬೆಳಗಿನ ಜಾವ ನೆನಪಿನ ಓಟಗಳು ಮತ್ತೆ ಶುರು...

ಟ್ರೈನ್ ಅಂದಾಗ ನನ್ನ ಮನಸ್ಸಿಗೆ ಬರುವುದು ಭಯ. ಅದರ ಗಾತ್ರ ಮತ್ತು ಛುಕ್ ಪುಕ್ ಶಬ್ದ ಮಾಡಿಕೊಂಡು ಬರುತ್ತಿದ್ದ ದೃಶ್ಯ. ಅದರ ಜೊತೆಗೆ ಕೂ ಎಂದು ಹೇಗೆ ಕೂಗತ್ತೆ ಎಂಬ ಕುತೂಹಲ ಸಹ. ಮತ್ತೆ ಆಯುಧ ಪೂಜೆಯ ದಿನ ಅದಕ್ಕೆ ಮಾಡುತ್ತಿದ್ದ ಶೃಂಗಾರ ಹಾಗೂ ಅದನ್ನು ನೋಡಲು ನಾವು ಕಾಯುತ್ತಿದ್ದದ್ದು. ಇನ್ನು ನಮ್ಮ ದೊಡ್ಡಜಾಲ ರೈಲ್ವೆ ನಿಲ್ದಾಣ... ಅದರ ಸೊಗಸೇ ಸೊಗಸು.. ಇಂದಿಗೂ ಆ ಸೊಗಸನ್ನು ಉಳಿಸಿಕೊಂಡಿದೆ.  ಹಾಗೆ ಭಾರತದ ರೈಲ್ವೆ ಚರಿತ್ರೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಸ್ಟೇಷನ್ ಮಾಸ್ಟರ್ ಅಪ್ಪನ ಸ್ನೇಹಿತರಾದರು ಸಹ ನನಗೆ ಕಿಟಕಿಯ ಮೂಲಕ ಟಿಕೆಟ್ ಖರೀದಿಸುವ ಆಸೆ... ಆ ಕಿಟಕಿ ನನಗಿಂತ ಬಹು ಎತ್ತರದಲ್ಲಿದ್ದರೂ ಸಹ... ಟಿಕೆಟ್ ಕೊಡುವಾಗ ಅದರ ಮೇಲೆ ದಿನಾಂಕ ಮೂಡಿಸುವ ಮಿಷಿನಿನ ಸದ್ದು ಸಹ ನನ್ನ ಕಿವಿಯಲ್ಲಿ ಇಂದೂ ಇದೆ. ಕಟ್ಟ ಕಡ.. ಕಡಕಟ್ಟ.. ಶಬ್ದದೊಂದಿಗೆ ಸ್ಟೇಷನ್ ಮಾಸ್ಟರ್ ಕಳಿಸುತ್ತಿದ್ದ ಟೆಲಿಗ್ರಾಫಿಕ್ ಮೆಸೇಜ್  ಒಂದು ಅದ್ಭುತ ದೃಶ್ಯ.

ಇನ್ನು ಟ್ರೈನ್ ಬಂದಾಗ ಪೋರ್ಟರ್ ಕೊಡುತ್ತಿದ್ದ ಒಂದು ಸಾಧನ (line clear)ಹಾಗೂ ಅದನ್ನು ಟ್ರೈನ್ ಡ್ರೈವರ್ ಚಲಿಸುತ್ತಿದ್ದ ಟ್ರೈನಿಂದಲೇ ಹಿಡಿಯುತ್ತಿದ್ದ ಪರಿ ನನಗೆ ಆಶ್ಚರ್ಯ ತರುತ್ತಿತ್ತು. ಇನ್ನು ಕೈಮರ, ರಾತ್ರಿ ಸಮಯ ಅದಕ್ಕೆ ಹಚ್ಚುತ್ತಿದ್ದ ದೀಪ... ರಾತ್ರಿ ಟ್ರೈನ್ ಬಂದಾಗ ಪೋರ್ಟರ್ ಕೂಗುತ್ತಿದ್ದ ದೊಡ್ಡ ಜಾ...ಲಾ.... ಎಂಬುವ ವಿಶಿಷ್ಟ ಸೂಚನೆ ಇಂದಿಗೂ ಖುಷಿ ಕೊಡುವಂಥದ್ದು.....

ನಮ್ಮೂರಿಂದ ಸುಮಾರು 20 ಕಿಲೋ ಮೀಟರ್ ಬೆಂಗಳೂರು ತಲುಪಲು ತೆಗೆದುಕೊಳ್ಳುತ್ತಿದ್ದ ಸಮಯ ಎರಡು ಗಂಟೆಗೂ ಹೆಚ್ಚು.. ಆದರೆ ನನ್ನ ಹಾಫ್ ಟಿಕೆಟ್ ಬೆಲೆ ಮಾತ್ರ 24 ಪೈಸೆ....ವಾಹ್..

ಸಿಹಿ ನೆನಪುಗಳ ಸರಮಾಲೆ...

Narrow gauge train ನಿಂದ ಶುರುವಾದ ದೂರದೂರಿನ ಪ್ರಯಾಣ ಇಂದು ವಿಮಾನಯಾನದವರೆಗೂ ಮುಟ್ಟಿದೆ... ಎಂಥ ಬದಲಾವಣೆ ಅಲ್ಲವಾ? ಆ ದಿನಗಳಲ್ಲಿ ಇದನ್ನು ಯೋಚಿಸಲೂ ಸಾಧ್ಯ ಆಗದ ಸ್ಥಿತಿ.... ದೇವರು ದಯಾಮಯ..

ಇಲ್ಲಿಗೆ ನನ್ನ ನೆನಪುಗಳ ರೈಲು ಬಿಟ್ಟಿದ್ದು ಮುಕ್ತಾಯ... ನಮಸ್ಕಾರ

Comments

  1. As usual amazing ,chikkappa 👏

    ReplyDelete
  2. Enjoyed the journey

    ReplyDelete
  3. ಅಂದಿಗೂ ಇಂದಿಗೂ ನಮ್ಮ ಹಳೆಯ ನೆನಪು ಗಳು ಯಾವಾಗಲೂ ಮಧುರವಾಗಿ ಇರುತ್ತದೆ ಕೇಳಲು ಮತ್ತು ಹೇಳಲು. 👍👍🙏

    ReplyDelete
  4. Wow sooper Bhavaji❤

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ