ಒಂದು ಸಾವಿನ ಸುತ್ತ..
ಒಂದು ಸಾವಿನ ಸುತ್ತ..
ಯಾವಾಗಿನಂತೆ ನನ್ನ ಸರದಿ ಯಾದ ಸೋಮವಾರದಂದು ಅಶಕ್ತ ಪೋಷಕ ಸಭಾಗೆ ಹೋದೆ. ಪ್ರವೇಶ ದ್ವಾರದಿಂದಲೇ ವಾತಾವರಣ ಗಂಭೀರವಾಗಿದ್ದು... ಅಲ್ಲೊಂದು ಆಂಬುಲೆನ್ಸ್ ಬಂದು ನಿಂತಿತ್ತು. ಯಾರಿಗೋ ಆರೋಗ್ಯ ತಪ್ಪಿರಬಹುದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಬಂದಿರಬಹುದು ಅಂದುಕೊಂಡು ಹತ್ತಿರ ಹೋಗಿ ನೋಡಿದಾಗ ಅದು ಶವವನ್ನು ಸಾಗಿಸುವ ವಾಹನವಾಗಿತ್ತು. ವಿಚಾರಿಸಿದಾಗ ಒಬ್ಬ ಹೆಣ್ಣು ಮಗಳು ಸಾವನ್ನಪ್ಪಿದ್ದಾರೆಂದು ತಿಳಿಯಿತು. ಹೆಸರು ನಾಗರತ್ನಮ್ಮ ಒಂದು ಕ್ಷಣ ನನಗೆ ಮುಖದ ನೆನಪು ಬರಲಿಲ್ಲ. ಒಂದೆರಡು ಮಾತುಗಳ ನಂತರ ನನಗೆ ಹೊಳೆಯಿತು ಅದು ಬಿ ಆರ್ ನಾಗರತ್ನಮ್ಮ ಅಂತ. ಸಾಕಷ್ಟು ಬಾರಿ ಮಾತನಾಡಿದ ನೆನಪಾಯಿತು. ಇಚೀಚೆಗೆ ನೋಡಿರಲಿಲ್ಲ.
ಇಂಥ ಸಮಯದಲ್ಲಿ ಲೋಕಾಭಿರಾಮವಾಗಿ ಮಾತನಾಡುವುದು ಸರಿ ಅನ್ನಿಸಿ ನಿವಾಸಿಗಳೊಡನೆ ಅವರ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿದೆ.
ಕೆಲ ಅಭಿಪ್ರಾಯಗಳು ಹೀಗಿತ್ತು:
" ತುಂಬಾ ಸಕ್ಕರೆ ಕಾಯಿಲೆ ಇತ್ತು.. ಆದರೆ ಹೇಳಿದ ಮಾತು ಕೇಳುತ್ತಿರಲಿಲ್ಲ... ತಿನ್ನುವುದರ ಮೇಲೆ ಹತೋಟಿ ಇರಲಿಲ್ಲ"
" ಓಡಾಡಕ್ಕೆ ಆಗ್ತಿರಲಿಲ್ಲ ತುಂಬಾ ಕಷ್ಟಪಡುತ್ತಿದ್ದರು"
" ಹೋಗ್ಲಿ ಬಿಡಿ ತುಂಬಾ ನರಳಲಿಲ್ಲ.. ಗೆದ್ದಳು"
" ನೆನೆಸಿಕೊಂಡರೆ ಭಯ ಆಗುತ್ತೆ ನಮಗೇನು ಕಾದಿದಿಯೋ ಅಂತ"
" ಒಂದಲ್ಲ ಒಂದು ದಿವಸ ಸಾಯಬೇಕಲ್ವಾ?"
"ಎಲ್ಲರೂ ಹೋಗೋದೇ.. ಅವರು ಇವತ್ತು ನಾವು ನಾಳೆ ಅಷ್ಟೇ"
ಹೀಗೆ ಅಲ್ವೇ ಮನುಷ್ಯನ ಮನಸ್ಸಿನ ಓಟ... ಸಂದರ್ಭ ಒಂದೇ ಆದರೂ ಬೇರೆ ಬೇರೆ ಮನುಷ್ಯರ ಭಾವನೆಗಳು ಬೇರೆ ಬೇರೆ... ಅದು ಅವರವರ ಅನುಭವದ ಮೇರೆಗೆ....
ಇಷ್ಟೆಲ್ಲ ಇದ್ದರೂ ಯಾವುದೇ ವೈರಾಗ್ಯದ ಭಾವ ಬಹಳ ಕಾಲ ಉಳಿಯುವುದಿಲ್ಲ. ನಮ್ಮ ಜೀವನಕ್ಕೆ ಬಹುಬೇಗ ಹಿಂದಿರುಗುತ್ತೇವೆ.
ಜಾತಸ್ಯ ಮರಣಂ ಧ್ರುವಂ.. ಹುಟ್ಟಿದವರಿಗೆ ಸಾವು ನಿಶ್ಚಿತ.... ಅಂತಕನ ದೂತನಿಗೆ ಕಿಂಚಿತ್ತು ದಯವಿಲ್ಲ.. ಎಷ್ಟು ಸತ್ಯ ಅಲ್ಲವಾ? ನಮ್ಮ ಅಂತ್ಯ ಯಾವಾಗ ಬೇಕಾದರೂ ಆಗಬಹುದು.. ದಯಾಮಯಾ ದೇವರು ಆ ದಿನವನ್ನು ನಮಗೆ ಗೊತ್ತುಪಡಿಸಿಲ್ಲ. ಗೊತ್ತಾದರೆ ನಮ್ಮ ಮನಸ್ಥಿತಿ ಹೇಗಿರಬಹುದು ಎಂದು ಊಹಿಸಲೂ ಅಸಾಧ್ಯ. ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಗಲ್ಲು ಶಿಕ್ಷೆಗಾಗಿ ಕಾಯುತ್ತಿರುವ ಖೈದಿಗಳ ಮನಸ್ಥಿತಿ. ಎಷ್ಟು ತಲ್ಲಣವಿರಬಹುದೋ...
ಇಷ್ಟೆಲ್ಲ ಆದರೂ ನಾವು ಬಯಸುವುದು " ಅನಾಯಾಸೇನಾ ಮರಣಂ.. ವಿನಾ ದೈನ್ಯೇನ ಜೀವನಂ"... ಸಾವನ್ನು ಬಯಸುವಲ್ಲು ನಮ್ಮದೊಂದು ಆಸೆ.
ಬಹಳಷ್ಟು ಜನ ತಾವು ಸಾಯಲು ಸಿದ್ದರಿರುವರೆಂದು ಹೇಳುತ್ತಾರೆ.. ಆದರೆ ಸಣ್ಣಪುಟ್ಟ ಆರೋಗ್ಯದ ಬದಲಾವಣೆಗೆ ಹೆದರಿ ವೈದ್ಯರ ಬಳಿ ಓಡುತ್ತಾರೆ... ಸಣ್ಣ ನೋವನ್ನೂ ಸಹಿಸಲಾರರು..
ನನ್ನ ನೆಚ್ಚಿನ ಬೀchi ಯವರು ಸಾವಿನ ಬಗ್ಗೆ ವಿಶ್ಲೇಷಿಸುತ್ತ..." ಎಲ್ಲೋ ದೂರ ದೇಶದಲ್ಲಿ ಆದ ಭೂಕಂಪಕ್ಕೆ ಸಾವಿರಾರು ಜನ ಸತ್ತರು ಎಂಬುದು ಕೇವಲ ಸುದ್ದಿ... ಅದು ನಮ್ಮ ಹತ್ತಿರ ಹತ್ತಿರ ಬಂದದ್ದೇ ಆದರೆ ನಮ್ಮ ಪ್ರತಿಕ್ರಿಯೆ ಸಹ ಬದಲಾಗುತ್ತದೆ... ಅದು ನಮ್ಮ ಕಾಲಿನ ಬುಡಕ್ಕೇ ಬಂದಾಗ ನಮಗೆ ನೋವು ದುಃಖ ಸಂಕಟ ಎಲ್ಲವನ್ನೂ ಕೊಡುತ್ತದೆ". ಏನಾದರೂ ಜೀವನ ಮುಂದುವರಿಯುತ್ತದೆ ಅಲ್ಲವೇ?
ನಮ್ಮ ನಾಡನ್ನು ರಕ್ಷಿಸಲು ಸದಾ ಸಿದ್ಧವಿರುವ... ಸಾವು ತಮ್ಮ ಮುಂದೆಯೇ ಇದ್ದರೂ ಹಿಮ್ಮಟ್ಟದೆ ನಮಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ನಮ್ಮ ದೇಶದ ಎಲ್ಲಾ ಸೈನಿಕ ಬಂಧು ಬಾಂಧವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು...
ಸತ್ಯ ದ ಮಾತು.
ReplyDelete