ಅನೂಗೆ ಕೃಷ್ಣನ ಚಿಂತೆ - ನಂದೊಂದು ಕವಿತೆ

 ಇವತ್ತು ನನ್ನ whatsup ಗೆ ಬಂದಿದ್ದ ಒಂದು ಫೋಟೋ ನೋಡಿದೆ. ತಕ್ಷಣ ಅದು ಏನೆಂದು ಹೊಳೆಯಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಕಾಗದದ ತುಣುಕಿನ ಮೇಲೆ ಬರೆದಿರುವುದು ಕಂಡಿತು. ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮೊದಲು ಕಂಡದ್ದು "7th july,2004, wednesday 10.45" ಮತ್ತೆ ಗಮನಿಸಿದಾಗ "ರಂಗನಾಥ್ ಸರ್" ಕಾಣಿಸಿತು. ಮಿಕ್ಕಿದ್ದೆಲ್ಲಾ ಕನ್ನಡ ಬರಹ, ಆದರೆ ಸ್ಪಷ್ಟವಾಗಿ ಕಾಣದು. ಇದನ್ನು ಕಳಿಸಿದ್ದು ನನ್ನ ಪರಿಚಯದ ಅನು (ಅನುರಾಧ). ಕುತೂಹಲದಿಂದ ಕಷ್ಟಪಟ್ಟು ಓದಿದೆ. ಅದು ನನ್ನದೇ ಕೈಬರಹ. ಅದರ ಪೂರ್ಣಪಾಠ ಹೀಗಿದೆ:

ಗೋಕುಲದ ಗೋಪಿಯರು

ಕೃಷ್ಣನನು ದೂರುವರು

ಅವನು ಬಲು ದುಷ್ಟನೆಂದು

ಯಾವ ಮಾತಿಗೂ ಕಿವಿಗೊಡದೆ

ಮನದೆ ನೊಂದರೂ ಯಶೋದೆ

ರಮಿಸಿದಳು ತನ್ನ ಮಗನನಂದು

ಆಗಲಿಲ್ಲವೆ ಕೃಷ್ಣ ಮುಂದೆ ಜಗದೊಡೆಯ

ಎಲ್ಲರ ಒಳಿತನ್ನು ಬಯಸುವ ಸಹೃದಯ

ಯಶೋದೆ ನಿರಾಶೆಗೊಂಡಿದ್ದರೆ ಅಂದು

ಕೃಷ್ಣಚರಿತೆಯೆ ಬೇರೆ ಇರುತಿತ್ತು ಇಂದು


ಮನಸ್ಸು ಹಿಂದಕ್ಕೋಡಿತು: ಅಂದು ಅನು ತನ್ನ ಮಗನ ಬಗ್ಗೆ ನೊಂದಿದ್ದಳು. ಮುಂದೆ ಎನಿದೆಯೊ ಎಂದು ಆತಂಕ ಗೊಂಡಿದ್ದಳು ( ಕಾರಣಗಳು ನೆನಪಿಲ್ಲ). ಮಕ್ಕಳು ಚೆನ್ನಾಗಿರಬೇಕು, ಚೆನ್ನಾಗಾಗಬೇಕು ಅನ್ನುವ ಆಸೆ ಎಲ್ಲ ಅಮ್ಮಂದಿರದು, ಅನು ಸಹ ಅದಕ್ಕೆ ಹೊರತಾಗಿರಲಿಲ್ಲ. ಮಗ ಕೃಷ್ಣನ ಬಗ್ಗೆ ತುಂಬಾ ಚಿಂತೆಯಲ್ಲಿದ್ದಳು.ಪ್ರಾಯಶಃ ಆಗ ಕೃಷ್ಣ 1 ಅಥವಾ 2 ನೇ ತರಗತಿಯಿದ್ದಿರಬಹುದು. ನಾನೊಬ್ಬ ಆಪ್ತಸಲಹೆಗಾರ ಎನ್ನುವ ನಂಬಿಕೆ ಆಕೆಗೆ. ಆ ವಯಸ್ಸಿನ ಮಗುವಿನ ಬಗ್ಗೆ ಅಷ್ಟು ಯೋಚನೆ ಮಾಡಬೇಕಾ ಅಂತ ತಮಾಷೆ ಮಾಡಿದ್ದೆ. ಸಮಾಧಾನಕ್ಕಾಗಿ " ಹೆಸರೇ ಕೃಷ್ಣ ಅಲ್ಲವಾ...ಅದಕ್ಕೆ ಹೆಸರಿಗೆ ತಕ್ಕಂತೆ ತುಂಟಾಟ - ಹಾಗಾಗಿ ದೂರುಗಳೂ ಬರಬಹುದು. ವಯೋಸಹಜ- ಕೆಲ ಮಕ್ಕಳು ಎರಡು ಹೆಜ್ಜೆ ಮುಂದೆ ಇರುತ್ತಾರೆ" ಅಂತ ಹೇಳಿದ ನೆನಪು. ಅದೂ ಇದೂ ಮತಾಡ್ತಾ ಇದ್ದಾಗ ಹೊಳೆದದ್ದು, ತೋಚಿದ್ದು ಹಾಗೂ ಗೀಚಿದ್ದು, ಅದೂ ಕೈಗೆ ಸಿಕ್ಕ ಹಾಳೆಯಮೇಲೆ. ಅದನ್ನು ಅನುಗೆ ಕೊಟ್ಟು ಓದಕ್ಕೆ ಹೇಳಿದೆ. ಓದಿದ್ದಾಯ್ತು. ಏನೋ ಅರೆ ಮನಸ್ಸಿನಿಂದ ಹೋದಳು ಅಂತ ಅನ್ನಿಸ್ತು.

ಏನು ಪ್ರಭಾವ ಬೀರಿತೋ ಏನೋ... ಕೆಲ ದಿನಗಳ ನಂತರ ಸಮಧಾನದಿಂದ ಫೋನ್ ಮಾಡಿ ಮಾತಾಡಿ, ನಾ ಬರೆದ ಸಾಲುಗಳನ್ನು ತನ್ನ ಸಂಗೀತದ ಹೊಳಪು ಸೇರಿಸಿ ಹಾಡಿ ಕೇಳಿಸಿದಳು.ಚೆನ್ನಾಗಿತ್ತು ( ನಾನು ಬರೆದಿದ್ದು ಅಲ್ವಾ --ಚೆನ್ನಾಗಿರಲೇಬೇಕು ಹ್ಹ ಹ್ಹ ಹ್ಹಾ).

ಅದಾದ ಮೇಲೆ ಈ ವಿಷಯ ಅಲ್ಲಿಗೇ ನಿಂತಿತ್ತು. ಇಂದು ದುತ್ತೆಂದು ನನ್ನ ಮುಂದೆ ಬಂದಿದೆ. ನನಗೆ ಖುಷಿ, ಆಶ್ಚರ್ಯ ಸಹ. ಇಷ್ಟು ವರ್ಷಗಳ ಕಾಲ ಆ ಹಾಳೆಯನ್ನು ಜೋಪಾನ ಮಾಡಿರಬೇಕಾದರೆ ಅದು ಬೀರಿದ ಪ್ರಭಾವ, ಅದರ ಮೇಲಿನ ಪ್ರೀತಿಯ ಆಳ ಎಷ್ಟು ಅಂತ ಊಹಿಸಲು ಆಗುತ್ತಿಲ್ಲ. ಹೃದಯ ತುಂಬಿದೆ. ನಮ್ಮ ಕೆಲ ಕ್ರಿಯೆಗಳು, ಕೆಲ ಸಮಯದಲ್ಲಿ ಎಷ್ಟು ಪರಿಣಾಮಕಾರಿಯಾಗಿರತ್ತೆ ಅಲ್ವಾ? ಎಂಥಾ ಸಿಹಿ ನೆನಪು ತಂತು ಈ ಫೋಟೋ...Thank you ANU.....





Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ