ಕಾಯುವ ದೈವ ಯಾವ ರೂಪದಲ್ಲಿ ಬಂದ?

ಕಾಯುವ ದೈವ ಯಾವ ರೂಪದಲ್ಲಿ ಬಂದ?
ನೆನ್ನೆ ಮಳೆಯ ಆರ್ಭಟ ಎಷ್ಟಿತ್ತೆಂದರೆ - ನನ್ನ ನೆನಪಿನಲ್ಲಿರುವಂತೆ ಇಷ್ಟು ಭಯಾನಕ ಪರಿಸ್ಥಿತಿಯನ್ನು ನಾನು ಕಣ್ಣಾರೆ ಕಂಡಿರಲಿಲ್ಲ. ಕಿವಿಯಿಂದ ಕೇಳಿದ್ದೆ ಮತ್ತು ವಾರ್ತೆಗಳ ಮೂಲಕ ತಿಳಿದಿದ್ದೆ.
ಸಂಜೆ ಸುಮಾರು 7.30 ರ ಸಮಯ. ಮನೆಯಕಡೆ ಬರುತ್ತಿದ್ದೆ. ಜೊತೆಯಲ್ಲಿದ್ದಳು ನನ್ನ ಮಡದಿ. ಮಳೆಯ ಹನಿ ಶುರುವಾಯಿತು. ಕೆಲವೇ ಕ್ಷಣಗಳಲ್ಲಿ ಮಳೆಯ ಆರ್ಭಟ ಎಷ್ಟು ಹೆಚ್ಚಾಯಿತೆಂದರೆ ನನಗೆ ಮುಂದಿನ ರಸ್ತೆ ಕಾಣದಷ್ಟು. ನನಗೆ ಕಾರನ್ನು ಓಡಿಸಲು ಸಾಧ್ಯವಾಗಲಿಲ್ಲ. ಹೇಗೋ ಕಷ್ಟಪಟ್ಟು ಮನೆಯ ಹತ್ತಿರ ಬಂದು ಕಾರನ್ನು ನಿಲ್ಲಿಸಿ ಹೊರಗೆ ಬರಲಾರದೆ ಯೋಚಿಸುತ್ತಿದ್ದೆವು. ಸುತ್ತಲೂ ಕಾರ್ಗತ್ತಲು. ಗುಡುಗು ಮಿಂಚಿನ ಆರ್ಭಟ. ಜೊತೆಯಲ್ಲಿ ನಮ್ಮ ಹಿಂದೆ ಏನೋ ಬಿದ್ದ ಸದ್ದು. ಹೇಗಾದರಾಗಲಿ ಮನೆ ಒಳಗೆ ಹೋಗೋಣವೆಂದು ನಿರ್ಧರಿಸಿ, ಓಡಿ ಮನೆಯೊಳಗೆ ಸೇರಿ ದೀಪ ಬೆಳಗಿಸಿ ರಸ್ತೆಯ ಕಡೆ ನೋಡಿದಾಗ ನಮಗೆ ಒಂದು ತರಹ ಆಘಾತ. ನಮ್ಮ ಕಾರಿನ ಸ್ವಲ್ಪ ಹಿಂದೆ ಪಕ್ಕದ ಮರದ ಒಂದು ದೊಡ್ಡ ಕೊಂಬೆ ಮುರಿದು ಬಿದ್ದಿದೆ. ಒಂದು ಕೊನೆ ರಸ್ತೆಯಮೇಲೆ ಇನ್ನೊಂದು ಕೊನೆ ಎಲೆಕ್ಟ್ರಿಕ್ ತಂತಿಯ ಮೇಲೆ. ಆ ಕೊಂಬೆ ತಂತಿಯ ಮೇಲೆ ಬೀಳದಿದ್ದರೆ, ನಮ್ಮ ಕಾರು ಕೊಂಬೆಯ ಕೆಳಗೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಊಹೆಗೂ ನಿಲುಕದು. ಕಾಯುವ ದೈವ ಯಾವ ರೂಪದಲ್ಲಿ ಬರುತ್ತದೋ ಬಲ್ಲವರಾರು. ನೆನ್ನೆ ನಮ್ಮನ್ನು ಕಾಯ್ದ ದೈವ ಎಲೆಕ್ಟ್ರಿಕ್ ತಂತಿಯ ರೂಪದಲ್ಲಿತ್ತು.
ಆ ದೈವಕ್ಕೆ ಇದೋ ನನ್ನ ನಮನ.

ಇಂದು ಬೆಳಗ್ಗೆ ವಾಯುವಿಹಾರಕ್ಕೆ ಹೊರಟಾಗ ರಸ್ತೆಯಲ್ಲಿ ಅಲ್ಲಲ್ಲಿ ಮರಗಳು, ಕೊಂಬೆಗಳು ಬಿದ್ದದ್ದು ಕಂಡು ಬಂತು. ತಿಮ್ಮೇಶ ಪ್ರಭು ಉದ್ಯಾನವನ್ನು ಹೊಕ್ಕು ಒಳಗೆ ನೋಡಿದಾಗ ತಿಳಿದುಬಂತು ನೆನ್ನೆಯ ಮಳೆಯ ಆರ್ಭಟ. ಡೊಡ್ದ ಮರ ಬುಡಸಮೇತ ಕೆಳಗೆ ಬಿದ್ದಿತ್ತು. ಆದು ಬಿದ್ದಿದ್ದು ಹೆಂಚು ಹೊದಿಸಿದ ಕಬ್ಬಿಣದ ಚಪ್ಪರದ ಮೇಲೆ. ಹೆಂಚು ಪುಡಿ ಪುಡಿ, ಎಲ್ಲಾ ನೆಲಸಮ. ಈ ಜಾಗದಲ್ಲೇ ನಾವು ಸೋಮವಾರದ ದಿನ ಭಜನೆ ಮಾಡುತ್ತಿದ್ದದ್ದು. ಇದಲ್ಲದೇ ಇನ್ನೂ ಎರಡು ಮರದ ಕೊಂಬೆಗಳು ಬಿದ್ದು ಓಡಾಡಲು ಅಡಚಣೆಯಾಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ನಮಗೆ ಈಗ ಮಳೆಯ ಇನ್ನೊಂದು ಮುಖದ ಅನುಭವ.
ಪ್ರಕೃತಿಯ ಸೊಬಗು, ಮುನಿಸು ಎಲ್ಲಾ ಈ ಜೀವನದ ಅವಿಭಾಜ್ಯ ಅಂಗ.
ಪ್ರಕೃತಿಯ ಆರಾಧನೆಯಿಂದಲೇ ನಮ್ಮ ದೇವರ ಕಲ್ಪನೆ ಶುರುವಾದದ್ದು. ಈಗೀಗ ಪ್ರಕೃತಿಯ ಮೇಲೆ ಮಾನವನ ಅಟ್ಟಹಾಸ ಜಾಸ್ತಿಯಾಗಿದೆ. ಪ್ರಕೃತಿಯ ಕೋಪವೇ ದೇವರ ಕೋಪ.

ಪ್ರಕೃತಿಯನ್ನು ಆರಾಧಿಸೋಣ, ಆನಂದಿಸೋಣ.

Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ