ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ"


ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ"
ಇಂದು (28.09.2017) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕೇನಹಳ್ಳಿ, ಬೆಂಗಳೂರು - 19, ಇಲ್ಲಿಯ ಮಕ್ಕಳು, ತಮ್ಮ ಶಾಲಾ ಮಕ್ಕಳ ಸಂಸತ್ತು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ನನ್ನ ಸೌಭಾಗ್ಯ, ಇದರಲ್ಲಿ ಭಾಗವಹಿಸಲು ನನ್ನನ್ನೂ ಆಹ್ವಾನಿಸಿದ್ದರು.
ಕಾರ್ಯಕ್ರಮವನ್ನು ಎಲ್ಲ ಮಕ್ಕಳೇ ನಿರ್ವಹಿಸಿದ ರೀತಿ ಹೆಮ್ಮೆಯೆನಿಸುತ್ತಿತ್ತು. ಅವರ ವಯಸ್ಸಿಗೂ ಮೀರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ನಿರೂಪಕಿಯರು ಕಾರ್ಯಕ್ರಮವನ್ನು ನಡೆಸಿಕೊಟ್ಟ ಶೈಲಿ (ಪರಸ್ಪರ ಮಾತನಡುತ್ತಾ - ಕಾರ್ಯಕ್ರಮಕ್ಕೆ ಹೊಂದಿಸುತ್ತಾ) ವೃತ್ತಿಪರ ನಿರೂಪಕಿಯರಿಗೂ ಸರಿಸಮನಾಗಿತ್ತು.
ಮಾಮೂಲಿನಂತೆ ಪ್ರಾರ್ಥನೆ, ಸ್ವಾಗತದ ನಂತರ, ಒಬ್ಬೊಬ್ಬ ವಿದ್ಯಾರ್ಥಿ ಒಬ್ಬ ಉಪಾಧ್ಯಾಯರ ಬಗ್ಗೆ ಮಾತನಾಡಿದರು. ಅವರದೇ ಆದ ನಿಷ್ಕಲ್ಮಷವಾದ, ಮುಗ್ಧ ಅಭಿಪ್ರಾಯಗಳು, ಸರಳ ಸುಂದರವಾಗಿದ್ದವು.
ಎಲ್ಲ ಉಪಧ್ಯಾಯರುಗಳಿಗೆ ಉಡುಗೊರೆಗಳನ್ನೂ ಸಹ ಕೊಟ್ಟರು. ಆದರೆ ಇದನ್ನೆಲ್ಲಾ ಮಾಡಿದ ರೀತಿ ಮೆಚ್ಚುಗೆ ಸೂಸುವಂತಿತ್ತು.
ನನ್ನ ಜೀವನದ ಮೊದಲ ಅನುಭವ - ಉಪಾಧ್ಯಾಯನಾಗಿ ಈ ಗೌರವ ಪಡೆದದ್ದು. ಆ ಕ್ಷಣ ನನ್ನೆಲ್ಲಾ ಗುರುಗಳಿಗೆ ಈ ಗೌರವವನ್ನು ಮನಸ್ಸಲ್ಲೇ ಸಮರ್ಪಿಸಿದೆ.


ಇಂದಿನ ವಿಶೇಷ ಮತ್ತು ನನಗೂ ಇದು ಇಂದೇ ತಿಳಿದ ವಿಷಯ - ಭಾರತಾಂಬೆಯ ಮೊದಲ ಶಿಕ್ಷಕಿಯೆಂಬ ಗೌರವಕ್ಕೆ ಪಾತ್ರರಾದ ಶ್ರೀಮತಿ.ಸಾವಿತ್ರಿಬಾಪುಲೆಯವರು. ಅಂದಿನ ಸಮಾಜದ ಕಟ್ಟುಪಾಡುಗಳನ್ನು ಎದುರಿಸಿ ಹೆಣ್ಣು ಮಕ್ಕಳು ಓದುವುದನ್ನು ಪ್ರೊತ್ಸಾಹಿಸಿದವರು. ಈ ವಿಷಯವನ್ನು ಮಕ್ಕಳು ಉತ್ತಮವಾಗಿ ತಿಳಿಸಿದರು.

ಇದರ ಜೊತೆಯಲ್ಲಿ ಅಲ್ಲಿನ ಶಿಕ್ಷಕರಾದ ಶ್ರೀ. ಸಿದ್ದಗಂಗಯ್ಯನವರಿಗೆ ತಾಲ್ಲೂಕು ಮಟ್ಟದ "ಉತ್ತಮ ಶಿಕ್ಷಕ" ಮತ್ತು ಶ್ರೀಮತಿ. ತಾರಾ ಅವರಿಗೆ ಲಯನ್ಸ್ ಕ್ಲಬ್ ನವರು "ಉತ್ತಮ ಶಿಕ್ಷಕಿ" ಎಂದು ಗೌರವಿಸಿರುವುದನ್ನು ಮಕ್ಕಳು ತಮ್ಮ ಮಾತಿನಲ್ಲಿ ವಿವರಿಸಿದರು ಮತ್ತು ಸಂಭ್ರಮಿಸಿದರು. ಇದು ಶಾಲೆಗೆ ಹೆಮ್ಮೆಯ ವಿಷಯ.

ಮಕ್ಕಳಿಗೆ ಸಿಹಿಯೆಂದರೆ ಅಚ್ಚುಮೆಚ್ಚು. ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಇದು ನನಗೆ ಸಿಕ್ಕಿದ ಅಮೂಲ್ಯ ಕೊಡುಗೆಗಳಲ್ಲೊಂದು







Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ