ಪರಿಸರ - ಗಣಪ:

 ಪರಿಸರ - ಗಣಪ:

ನಮ್ಮ ಸುತ್ತಲಿನ ಪರಿಸರದ ಬಗೆಗಿನ ಕಾಳಜಿ ಈಗ ಬಹಳ ಬೇಕಿದೆ. ಯಾಂತ್ರೀಕರಣಕ್ಕೂ, ಪರಿಸರಕ್ಕೂ ಉತ್ತರ ಧೃವ, ದಕ್ಷಿಣ ಧೃವ ಸಂಭಂಧ. ಹಾಗೇ ಮನುಷ್ಯನ ದುರಾಸೆಗೂ ವಿಲೋಮ ಸಂಭಂಧ.
ಪುರಾತನ ಕಾಲದಿಂದಲೂ ನಮ್ಮ ಹಿರಿಯರ ಜೀವನಶೈಲಿ ಪರಿಸರಕ್ಕೆ ಹೊಂದಿಕೊಂಡು ಅದಕ್ಕೆ ಪೂರಕವಾಗಿರುತ್ತಿತ್ತು. ತನ್ನೆಲ್ಲ ಬೇಕುಗಳಿಗೆ ಮನುಷ್ಯ ಪರಿಸರದಮೇಲೆ ಅವಲಂಬಿಸಿದ್ದರೂ, ತನ್ನ ಬೇಕುಗಳನ್ನು ಮಿತಿಯಲ್ಲಿಟ್ಟಿರುತ್ತಿದ್ದ. ಪ್ರಕೃತಿ ತನ್ನದೆಲ್ಲವನ್ನೂ ಜೀವ ಸಂಕುಲಕ್ಕೆ ಧಾರೆಯೆರೆದಿದೆ. ಮೂಕ ಪ್ರಾಣಿಗಳು ಸಹ ತಮ್ಮ ಜೀವನವನ್ನು ಪ್ರಕೃತಿಯಮೇಲೆ ಅವಲಂಬಿಸಿಕೊಂಡಿವೆ. ಆದರೆ ಅವುಗಳು ತಮ್ಮ ಹೊಟ್ಟೆ ತುಂಬಿದನಂತರ ಅವುಗಳ ಬೇಕುಗಳಿಗೆ (brake) ಕಡಿವಾಣ ಹಾಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಹೊರತು. ಅವನ ಆಸೆಗೆ (ದುರಾಸೆಗೆ) ಮಿತಿಯೇ ಇಲ್ಲ. ಹಾಗಾಗಿ ನೆಲ, ಜಲ, ಗಾಳಿ, ಮರಗಿಡಗಳು, ಖನಿಜಸಂಪತ್ತು ಎಲ್ಲದರ ಮೇಲೂ ತನ್ನ ದುರಾಸೆಯ ಹಸ್ತವನ್ನು ಚಾಚಿದ್ದಾನೆ. ಹಾಗಾಗಿ ಇಂದು ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ.

ಗಣೇಶನ ಹಬ್ಬ ಬಂದಿದೆ. ಇದು ನಮ್ಮೆಲ್ಲರಿಗೂ ಸಡಗರ ನಿಜ. ಈ ಸಡಗರದ ಜೊತೆ ಜೊತೆಗೆ ನಮ್ಮ ಪರಿಸರದ ಬಗ್ಗೆ ಯೋಚಿಸಬೇಕಾದ್ದು ನಮ್ಮ ಕರ್ತವ್ಯ. ಈ ವಿಷಯ ಚರ್ವಿತ ಚರ್ವಣವಾದರೂ ಸಹ ಮತ್ತೊಮ್ಮೆ ನೆನಸಿಕೊಳ್ಳುವುದು ಸಮಂಜಸ ಎಂದು ನನ್ನ ನಂಬಿಕೆ.
ಮೊದಲು ಮನೆ. ಮನೆಗೆ ತರುವ ಗಣಪ ಮತ್ತು ಗೌರಿಯ ಮೂರ್ತಿಗಳನ್ನು ಚಿಕ್ಕದಾಗಿ ಹಾಗೂ ನೀರಿನಲ್ಲಿ ಕರಗುವ ಬಣ್ನ ಹಾಕಿರುವ ಮೂರ್ತಿಗಳನ್ನೇ ತರೋಣ. ಸಾಧ್ಯವಾದರೆ ಬಣ್ಣ ಇಲ್ಲದಿರುವ ಮೂರ್ತಿಗಳನ್ನು ತರೋಣ. ಇನ್ನು ಗಣಪನ ವಿಸರ್ಜನೆ ಸಮಯದಲ್ಲಿ ಮಣ್ಣಿನ ಮೂರ್ತಿಯನ್ನು, ಎಲ್ಲಾ ಪೂಜಾ ಸಮಗ್ರಿಗಳಿಂದ ಬೇರ್ಪಡಿಸಿ ನೀರಿನಲ್ಲಿ ಮುಳುಗಿಸೋಣ. ಇದು ನಾವು ಸುಲಭವಾಗಿ ಮಾಡಬಹುದಾದದ್ದು. ಬದಲಾವಣೆಯ ಮೊದಲ ಹೆಜ್ಜೆಯನ್ನು ಇಡಬೇಕಾದ್ದು ಮತ್ತು ಶುರುವಾಗುವುದು ವ್ಯಕ್ತಿಯ ಮಟ್ಟದಿಂದ. ಬದಲಾವಣೆ ಯಾವಾಗಲೂ ನನ್ನಿಂದಲೇ ಮೊದಲಾಗಬೇಕು. ಬದಲಾವಣೆಯ ಹರಿಕಾರ ನಾನಾಗುತ್ತೇನೆ ಎಂದು ನಿರ್ಧರಿಸೋಣ. ಅದನ್ನು ಈಗಿನಿಂದಲೇ ಕಾರ್ಯರೂಪಕ್ಕೆ ತರೋಣ. ಎಲ್ಲ ಕೆಲಸದ ಶುರುವಿನಲ್ಲಿ ಗಣಪನ ಪೂಜೆ ಮಾಡುವುದು ಸಂಪ್ರದಾಯ - ವಂದಿಸುವುದಾದಿಯಲಿ ಗಣನಾಥನ.
ಈ ಗಣಪನ ಹಬ್ಬವೇ ಅದಕ್ಕೆ ಮುಹೂರ್ತವಾಗಲಿ. ಗಣೇಶ..ದೇವ್ರೇ...ನಮ್ಮ ಈ ಕೆಲಸ ನಿರ್ವಿಘ್ನವಾಗಿ ನಡೆಯಲೆಂದು ಆಶೀರ್ವಾದ ಮಾಡು.

ಇನ್ನು ರಸ್ತೆ ಗಣಪ. ಇಲ್ಲಿ ನೀರಿನಲ್ಲಿ ಕರಗದ ದೊಡ್ಡ ದೊಡ್ಡ ಮೂರ್ತಿಗಳು, ರಸ್ತೆಯ ಮಧ್ಯದಲ್ಲಿ ಚಪ್ಪರ, ಅಬ್ಬರದ ಸಂಗೀತ, ಪ್ರಸಾದ ತಿಂದು ಬಿಸಾಕಿದ ಪ್ಲಾಸ್ಟಿಕ್ ದೊನ್ನೆಗಳು, ಮೆರವಣಿಗೆಯಲ್ಲಿ ಹೂಗಳನ್ನು ಎಸೆದಾಡುವುದು, ಇದೆಲ್ಲಾ ಪರಿಸರಕ್ಕೆ ಮಾರಕ. ಇದು ಎಲ್ಲೆಲ್ಲೂ ಇರಿವುದರಿಂದ ನೀರಿನಲ್ಲಿ ಗಣಪ ಮುಳುಗಲೂ ಪೂರ ಜಾಗ ಸಿಗುವುದಿಲ್ಲ. ನೀರೂ ಸಹ ಕಲುಷಿತಗೊಳ್ಳುತ್ತದೆ. ಎಲ್ಲೆಲ್ಲಿ ನಾವು ಪ್ರಭಾವ ಬೀರಬಹುದೋ ಅಲ್ಲೆಲ್ಲ ಪರಿಸರವನ್ನು ಹಾಳುಗೆಡವುವುದನ್ನು ತಪ್ಪಿಸೋಣ.
ಶರಣು ಶರಣುವಯ್ಯ ಗಣನಾಯಕ, ನಮ್ಮ ಕರುಣದಿಂದಲಿ ಕಾಯೋ ಗಣನಾಯಕ.... ನಮ್ಮ ಪರಿಸರದ ಬಗ್ಗೆ ಕಾಳಜಿ ಕೊಡೋ ಗಣನಾಯಕ.

Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ