ಕೆಂಗಲ್ ಹನುಮಂತಯ್ಯ ಕಲಾಸೌಧ

ಕೆಂಗಲ್ ಹನುಮಂತಯ್ಯ ಕಲಾಸೌಧ
ಹೆಸರು ಹೊಸದೋ? ಅಥವಾ ಎಲ್ಲೋ ಕೇಳಿದ ನೆನಪೇ? ಇದೇ ನಮ್ಮ ಕನ್ನಡಿಗರ ದೌರ್ಭಾಗ್ಯ. ಈಗ ಹೇಳಿ "ಕೆ.ಹೆಚ್. ಕಲಾಸೌಧ" ಗೊತ್ತಾ?
ಹೌದು ನಿಮ್ಮ ಯೋಚನೆ ಸರಿಯಾಗಿದೆ. ಇದು ಹನುಮಂತನಗರದ ರಾಮಾಂಜನೇಯ ಗುಡ್ಡದ ಒಂದು ಭಾಗದಲ್ಲಿದೆ.
"ಕೆಂಗಲ್ ಹನುಮಂತಯ್ಯ ಕಲಾಸೌಧ" ಅಂತ ಸುಂದರವಾದ ಕನ್ನಡದ ಹೆಸರನ್ನ ಕುಲಗೆಡಿಸಿ "ಕೆ.ಹೆಚ್. ಕಲಾಸೌಧ" ಮಾಡಿಬಿಟ್ಟರು. ಇದು ಮಾಡಿದ್ದು ಯಾರು ಗೊತ್ತೇ... ಕನ್ನಡದ ಕಂದಮ್ಮಗಳೆಂದು ಹೊಗಳಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಅದೇ ರೀ.. ಬಿ.ಬಿ.ಎಮ್.ಪಿ). ಇದು ನಡೆದಿರೊದು ನಮ್ಮ ಕನ್ನಡದ ಆಗು ಹೋಗು ನೊಡಿಕೊಳ್ಳುವ ಸರ್ಕಾರಿ ಕೃಪಾಪೋಷಿತ ಕನ್ನಡ ಕಾವಲು ಸಮಿತಿಯ ಮೂಗಿನ ಕೆಳಗೆ. ಇದಲ್ಲದೇ ಕನ್ನಡಕ್ಕಾಗಿ ಪ್ರಾಣವನ್ನು ಕೊಡಲು ತಯಾರಿರುವ ಕಟ್ಟಾಳುಗಳ ಕನ್ನಡ ಕೋಟೆಯಲ್ಲೇ.
ಇದು ಹೆಸರಿನ ಕಥೆ ಮತ್ತು ವ್ಯಥೆ. ಇದು ಇಲ್ಲಿಗೆ ಮುಗಿಯದ ಕಥೆ (ವ್ಯಥೆ ಕೂಡ).
ಸದಾ ಚಟುವಟಿಕೆ ಇಂದ ಇರುತ್ತಿದ್ದ ಈ ಜಾಗ ಈಗ ಬಿಕೋ ಎನ್ನುತ್ತಿದೆ. ಈ ಭಾಗದ ಕಲಾರಸಿಕರ ತಾಣವಾಗಿದ್ದ ಈ ಜಾಗವನ್ನು ಕೊಂಪೆಯಾಗಿ ಮಾಡುವ ಕಾರ್ಯಕ್ರಮವೇ ಸಿಧ್ಧಗೊಂಡಿದೆಯೇನೋ ಎನ್ನುವಂತೆ ಇದನ್ನು ಮುಚ್ಚಲಾಗಿದೆ.
ಕನ್ನಡದ ಬೆಳವಣಿಗೆಗೆ ಚಿಂತನೆ ಮಾಡುವ ಎಲ್ಲರೂ ಯೋಚಿಸಬೇಕಾದ ವಿಷಯ. ಇದನ್ನು ಹೀಗೇ ಮುಚ್ಚಲು ಬಿಡಬೇಕೆ?
ಯಾವುದೇ ವಸ್ತು ಉಪಯೋಗಿಸದೆ ಬಿಟ್ಟಾಗ ಅದು ಬಹಳ ಬೇಗ ಹಾಳಾಗುತ್ತದೆ. ಕೆಂಗಲ್ ಹನುಮಂತಯ್ಯ ಕಲಾಸೌಧದ ಕಥೆಯೂ ಆ ಸ್ಥಿತಿಗೆ ಬಂದಿದೆ. ಇಷ್ಟೊಂದು ಹಣ ವೆಚ್ಚಮಾಡಿ ಕಟ್ಟಿರುವ ಸೌಧವನ್ನು ಹಾಳಾಗಲು ಬಿಟ್ಟು ಸಾಧಿಸುವುದೇನೋ ತಿಳಿಯದು. ಅದರಿಂದ ಹಣ ಸಂಪಾದನೆ ಮಾಡುವ ಯೋಚನೆಯನ್ನು ಕೈಬಿಟ್ಟು, ಅದನ್ನು ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ಮಾಡಿದರೆ ವೆಚ್ಚ ಮಾಡಿರುವ ಹಣಕ್ಕೆ ನಿಜವಾದ ಬೆಲೆ. ನನಗನ್ನಿಸಿದಂತೆ, ಇದರ ವ್ಯವಹಾರವನ್ನು, ಯಾರಾದರೂ ಪ್ರಜ್ಞಾವಂತ, ಕನ್ನಡದ
ಅಭಿಮಾನಿ ಅಧಿಕಾರಿಗೆ ವಹಿಸಿದರೆ ಕೆಲವೇ ದಿನದಲ್ಲಿ, ಸಮಸ್ಯೆಯನ್ನು ಬಗೆಹರಿಸಿ ಕೆಂಗಲ್ ಹನುಮಂತಯ್ಯ ಕಲಾಸೌಧವನ್ನು ಮತ್ತೆ ಸಾರ್ವಜನಿಕರ ಉಪಯೋಗಕ್ಕೆ ಕೊಡಬಹುದು. ಸರ್ಕಾರಕ್ಕೆ/ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇದರಿಂದ ಬರುವ ಹಣ ಸಮುದ್ರದಲ್ಲಿ ಒಂದು ಬೊಗಸೆಯ ನೀರಿಗೆ ಸಮ. ಸಾವಿರಾರು ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡುವ ಹಣದ ಒಂದು ಸಣ್ಣ ಪಾಲು. ಯಾವುದೇ ಪ್ರತಿಷ್ಟೆಗೆ ಬೀಳದೆ ಇದನ್ನು ಕನ್ನಡಕ್ಕಾಗಿ ಮಾಡಿದ ಒಂದು ಸಣ್ಣ ಖರ್ಚು ಎಂದು ಪರಿಗಣಿಸಿದರೆ, ಈಗಿನ ವ್ಯವಹಾರದ ಕಗ್ಗಂಟನ್ನು ಬಿಡಿಸಬಹುದು. ಇದರಲ್ಲಿ ಕಲಾವಿದರ ಪಾತ್ರವೂ ಇದೆ ಅನ್ನಿಸುತ್ತೆ. ಒಂದಷ್ಟು ಸಮಾನ ಮನಸ್ಕರು ಸೇರಿ ಈ ಕೆಲಸ ನಿಭಾಯಿಸುವುದು ಸುಲಭ ಎಂದು ನನ್ನ ಭಾವನೆ. ಇಲ್ಲೂ ಕನ್ನಡದ ಮೇಲಿನ ಅಭಿಮಾನ ಒಂದನ್ನು ಪರಿಗಣಿಸಿದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ.
ಸಂಭಂದಪಟ್ಟವರ ಮನಸ್ಸುಗಳು ಬೇಗ ತಿಳಿಯಾಗಿ, "ಕೆಂಗಲ್ ಹನುಮಂತಯ್ಯ ಕಲಾಸೌಧ" ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿಜೃಂಭಿಸಲಿ ಎಂದು ಹಾರೈಕೆ.
ಸಾಧ್ಯವಾದರೆ ಹೆಸರನ್ನು ಚಿಕ್ಕದಾಗಿ "ಕೆಂಗಲ್ ಕಲಾಸೌಧ" ಎಂದು ಬದಲಾಯಿಸಿ ಕೆಂಗಲ್ ಹನುಮಂತಯ್ಯನವರ ಹೆಸರನ್ನು ನೆನಪಿಸಿಕೊಳ್ಳುವ ಹಾಗೆ ಮಾಡೋಣ. ಮೂಲ ಅಭಿಲಾಷೆಗೆ ಹೊಂದಿಕೆಯಾಗದ "ಕೆ.ಹೆಚ್. ಕಲಾಸೌಧ" ಹೆಸರನ್ನು ಪಕ್ಕಕ್ಕಿಡೋಣ.
ಹೇಳುವುದು ಸುಲಭ.... ಈ ಕೆಲಸದಲ್ಲಿ ನಾನು ನನ್ನನ್ನು ತೊಡಗಿಸಿಕೊಳ್ಳಲು ತಯಾರಿದ್ದೇನೆ - ಯಾವುದೇ ತರಹದ ಆಸೆಗಳಿಲ್ಲದೆ- ಕೇವಲ ಕನ್ನಡದ ಸೇವೆಗಾಗಿ.. ಬನ್ನಿ ಜೊತೆಗೂಡೋಣ.


Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ