ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ.... ಬಹಳಷ್ಟು ಸಂಭ್ರಮ
ಒಬ್ಬೊಬ್ಬರ ಆಚರಣೆ ಒಂದೊಂದು ತರಹ. ಕೆಲವರಿಗೆ ಸಂತೋಷ ಸಂಭ್ರಮಕ್ಕೆ ಬೇರೆಲ್ಲರಿಗೂ ಸಿಹಿ ಹಂಚಿ ತಾವೂ ತಿನ್ನುವ ಮನಸ್ಸು. ಇನ್ನು ಕೆಲವರು ಸಂತೋಷದ ಭರದಲ್ಲಿ ತಿನ್ನುವುದನ್ನೇ ಮರೆತಿದ್ದಾರೆ. ಇವರು ಉಪವಾಸ ಹಾಗಾಗಿ ಇವರನ್ನು ನಂಬಿದವರಿಗೆಲ್ಲ ಉಪವಾಸ. ನಾವು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ನಾನು ವೈಯುಕ್ತಿಕವಾಗಿ ಮೊದಲ ಗುಂಪಿನಲ್ಲಿ ಗುರುತಿಸಿಕೊಳ್ಳುವವನು.

ಕೃಷ್ಣನನ್ನು ಬಹುರೂಪಿ ಎನ್ನುತ್ತಾರೆ. ವಸ್ತುಸ್ಥಿತಿ ಏನೇ ಇರಲಿ ರಾಧೆ, ರುಕ್ಮಿಣಿ, ಸತ್ಯಭಾಮೆ, ಮೀರಾ, ಗೋಪಿಕೆಯರು, ಇನ್ನು ಬಾಲ್ಯದ ಗೆಳೆಯ ಸುಧಾಮ, ದ್ರೌಪದಿ ಹೀಗೆ ಎಲ್ಲರೂ ಕೃಷ್ಣನನ್ನು ಅವರವರ ದೃಷ್ಟಿಯಲ್ಲಿ ಕಂಡವರೇ. ನನ್ನ ತಿಳುವಳಿಕೆಯ ಮಟ್ಟದಲ್ಲಿ ಎಲ್ಲರೂ ಕೃಷ್ಣನಿಂದ ಪಡೆಯಲು ಬಯಸಿದವರೆ (ಏನಾದರಿರಲಿ). ಇವರಲ್ಲಿ ಸುಧಾಮ ಮಾತ್ರ ವಿಶಿಷ್ಟ ರೀತಿಯಲ್ಲಿ ಕಾಣುತ್ತಾನೆ. ತನ್ನ ಹೆಂಡತಿಯ ಆಗ್ರಹದ ಮೇರೆಗೆ ಕೃಷ್ಣನನ್ನು ಭೇಟಿ ಮಾಡಲು ಬರುವುದು ಕೇಳುವುದಕ್ಕಾಗಿಯೆ, ಆದರೆ ಅವನು ಬರುವಾಗ ತಾನು ಕೃಷ್ಣನಿಗೆ ಏನು ಕೊಡಬೇಕು ಎಂದು ಯೋಚಿಸುತ್ತಾನೆ. ಕಡೆಗೆ ಬಡತನದ ತನ್ನ ಮನೆಯಲ್ಲಿದ್ದ ಒಂದು ಹಿಡಿ ಅವಲಕ್ಕಿಯನ್ನು ಗಂಟು ಮಾಡಿ ಕೃಷ್ಣನಿಗಾಗಿ ಪ್ರೀತಿಯಿಂದ ತರುತ್ತಾನೆ. ಈ ಭಾವ ನನಗೆ ತುಂಬಾ ಪ್ರಿಯವಾಗಿದ್ದು. ಹಾಗಾಗಿ ನನಗೆ ಸುಧಾಮನ ಬಗ್ಗೆ ವಿಶೇಷ ಅಭಿಮಾನ. ಹೀಗೆ ತಮ್ಮಲ್ಲಿಲ್ಲದಿದ್ದರೂ ಬೇರೆಯವರಿಗೆ ಕೊಡುವ ಮಹಾನುಭಾವರು ಬಹಳಷ್ಟು ಮಂದಿಯಿದ್ದಾರೆ, ಎಲೆಮರೆಯ ಕಾಯಿಯಂತೆ. (ತಮ್ಮಲ್ಲಿದ್ದರೂ ಬೇರೆಯವರಿಗೆ ಕೊಡುವುದು ಹಾಗಿರಲಿ ಇನ್ನಷ್ಟು ಬೇಕೆನ್ನುವ ಹಪಾಪಿತನವಿರುವವರೂ ಇದ್ದಾರೆ. ನಮ್ಮಲ್ಲಿನ ಬಹಳಷ್ಟು ರಾಜಕಾರಣಿಗಳಂತೆ).

ಆದರೆ ಈಗ ನನ್ನ ನೆನಪಿಗೆ ಬರುತ್ತಿರುವುದು ಮೊದಲನೆಯ ಗುಂಪಿನ ಜನರು. ಅಂದು ಶನಿವಾರ. ಶನಿವಾರಗಳಂದು ಅಶಕ್ತ ಪೋಷಕ ಸಭಾದ ನಿವಾಸಿಗಳಿಗೆ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸುವುದನ್ನು ನಡೆಸಿಕೊಂಡು ಬಂದಿದ್ದೇವೆ. ಆ ದಿನದ ಭಜನೆ ಕಾರ್ಯಕ್ರಮ ನಡೆಸಿಕೊಡಲು "ಸಹನ" ಸಂಸ್ಥೆಯ ಸುಮಾರು 10 ಅಂಧ ಹೆಣ್ಣು ಮಕ್ಕಳು ತಾಳ, ಹಾರ್ಮೋನಿಯಮ್ ಸಮೇತ ಬಂದಿದ್ದರು. ಕಾರ್ಯಕ್ರಮ ಚೆನ್ನಾಗಿ ಮೂಡಿಬಂತು. ಆಶ್ರಮದ ನಿವಾಸಿಗಳು ಬಹಳ ಸಂತೋಷ ಪಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಗೌರವಪೂರ್ವಕವಾಗಿ ಸ್ವಲ್ಪ ಹಣವನ್ನು ಕೊಡಲಾಯ್ತು.(ಇದೇನು ವಿಶೇಷವಲ್ಲ). ಆ ಕ್ಷಣದಲ್ಲಿ ಮಿಂಚಿನಂಥ ಒಂದು ಘಟನೆ ನಡೆಯಿತು. ಓರ್ವ ಹೆಂಗಸು ಮುಂದೆ ಬಂದು ತನ್ನಲ್ಲಿದ್ದ 20 ರೂಪಾಯಿಯನ್ನು ಒಬ್ಬ ಅಂಧ ಹೆಣ್ಣು ಮಗಳ ಕೈಲಿಟ್ಟರು. ಕೂಡಲೇ ಬಹುಶಃ ಎಲ್ಲ ನಿವಾಸಿಗಳು ಹಣ ಕೊಡಲು ಮುಂದಾದರು. ಆಗ ಹರಿದ ಹಣದ ಹೊಳೆ ( ಎಷ್ಟು ಅನ್ನುವುದಕ್ಕಿಂತ ಅದರ ಹಿಂದಿದ್ದ ಭಾವ) ನನ್ನನ್ನು ಮೂಕವಿಸ್ಮಿತನಾಗಿ ಮಾಡಿತು. ನಿವಾಸಿಗಳೇನು ಹಣವಂತರಲ್ಲ. ಆದರೆ ಆ ಸಮಯದಲ್ಲಿ ಅವರಲ್ಲಿದ್ದ ಕೊಡುವ ಮನಸ್ಸು.
ಇದರ ಮುಂದುವರಿದ ಭಾಗ- ಭಜನೆ ಮಾಡಿದವರಿಗೆ ತಿಂಡಿ ಕೊಡಿಸುವುದಕ್ಕಾಗಿ ಹೋಟೆಲ್ ಒಳಗೆ ಕರೆದುಕೊಂಡು ಹೋಗುವಾಗ ಒಬ್ಬ ಅಪರಿಚಿತ ವ್ಯಕ್ತಿ ಇವರ ಬಗ್ಗೆ ವಿಚಾರಿಸಿದರು. ಎಲ್ಲ ವಿಷಯ ತಿಳಿದನಂತರ, ನನ್ನಲ್ಲಿ ಅವರ ವಿನಂತಿ " ಸರ್ ದಯವಿಟ್ಟು ಇಂದಿನ ತಿಂಡಿಯ ಖರ್ಚು ಕೊಡಲು ಸಮ್ಮತಿಸಿ". ನಾನು ಹಿಂದು ಮುಂದು ನೋಡಿದಾಗ ಆ ವ್ಯಕ್ತಿ ಹೋಟೆಲ್ ನವರಿಗೆ ಮುಂದಾಗಿ ಹಣ ಕೊಟ್ಟು ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಹೊರಟು ಹೋದರು.



ಪ್ರಪಂಚ ಬರೀ ಸ್ವಾರ್ಥಿಗಳಿಂದ ತುಂಬಿಲ್ಲ, ಒಳ್ಳೆಯ ಮನಸ್ಸಿನ ಜನ ಎಲ್ಲೆಲ್ಲೂ ಇದ್ದಾರೆ. ಗುರುತಿಸುವ ಶಕ್ತಿ ನಮಗೆ ಬೇಕು.... ಹೃದಯವಂತರಿಗೆ ಇದೋ ನನ್ನ ನಮನ.

Comments

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ