ಬಾಲ್ಯದ ಪ್ರಸಂಗಗಳು

ಮೊನ್ನೆ ಶನಿವಾರ ಅಶಕ್ತ ಪೋಷಕ ಸಭಾದಲ್ಲಿ ಎಂಟನೆಯ“ಯೋಗ ದಿನಾಚರಣೆ” ಹಾಗೂ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲಿನ ನಿವಾಸಿಗಳು, ಎಲ್ಲರೂ ಹಿರಿಯ ನಾಗರಿಕರು. ಆದರೆ ಈ ಕಾರ್ಯಕ್ರಮಕ್ಕೆ ತಯಾರಿ ಮಾಡುವಾಗಿನ ಉತ್ಸಾಹ ಎಳೆಯರನ್ನು ಮೀರಿಸುತ್ತಿತ್ತು. ಒಂದು ಮಾತಿದೆ ವಯಸ್ಸಾದಂತೆ... ಮುದುಕರು ಮಕ್ಕಳಾಗುತ್ತಾರೆ ಎಂದು. ಇದು ಅಕ್ಷರ ಸಹ ಕಣ್ಣಿಗೆ ಕಟ್ಟುವಂತೆ ಕಾಣುತ್ತಿತ್ತು. ತೊಡುವ ಬಟ್ಟೆ, ಅಲಂಕಾರ, ಅವರು ಮಾಡುವ ಕಾರ್ಯಕ್ರಮಕ್ಕೆ ತಕ್ಕ ಹಾಗೆ ಹೊಂದಿಸಿಕೊಳ್ಳುವ ಉತ್ಸಾಹ... ಅದು ಸರಿ ಇದೆಯೇ ಎಂದು ನಮ್ಮಗಳಿಂದ ತಿಳಿದುಕೊಳ್ಳುವ ಕಾತರ.... ಚಟುವಟಿಕೆಯಿಂದ ಓಡಾಡುವ ಅವರುಗಳನ್ನು ನೋಡಿ ಸಂಭ್ರಮ ಪಟ್ಟವರು ನಮ್ಮ ತಂಡದವರು. ಅವರುಗಳ ಈ ಕ್ರಿಯಾಶೀಲತೆ ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ಯಿತು. ನನಗೆ ಇನ್ನೂ ನೆನಪಿದೆ...." ಸ್ವರ್ಗದಲ್ಲಿ ಎಲೆಕ್ಷನ್" ಎನ್ನುವ ನಾಟಕ... ಅದರಲ್ಲಿ ನಾರದನ ಪಾತ್ರ ನನ್ನದು. ಪಂಚೆ, ಶಲ್ಯ, ಜನಿವಾರ, ತಲೆಯ ಜುಟ್ಟು ಅದಕ್ಕೆ ಹೂ, ಎಲ್ಲವೂ ಹೊಂದಿಸಿಯಾಯ್ತು. ಚಿಟಿಕೆಯನ್ನೂ ಹೊಂದಿಸಿಯಾಯ್ತು ಆದರೆ.. ನಾರದನ ಕೈಯಲ್ಲಿನ ವೀಣೆ ಸಿಗುವುದು ಎಲ್ಲಿ?.... ನನ್ನ ಹಳ್ಳಿ ದೊಡ್ಡ ಜಾಲದಲ್ಲಿ. ಉತ್ಸಾಹದ ಮೇಲೆ ನೀರು ಚೆಲ್ಲಿದಂತಾಯ್ತು.. ಇನ್ನೇನು ಅಳುವುದೊಂದೇಬಾಕಿ... ಆಗ ಬಂದ ಸಲಹೆ.. ನೇಯ್ಗೆ ಅಜ್ಜನ ಬಳಿ ಇದ್ದ ಏಕತಾರಿ. ಅದನ್ನೇ ವ...