ನನ್ನಮ್ಮ...

ಇವತ್ತು ನನ್ನ ಆತ್ಮೀಯ ಪದ್ಮನಾಭ ಅವರ ಮೊಮ್ಮಗನ ಮದುವೆಯ ಮನೆಯ ಊಟ. ಪಾಯಸದ ವಿಚಾರಣೆ ಸಮಯ. ನಾನು ಪಾಯಸವನ್ನು ಸ್ವಲ್ಪವೇ ಹಾಕಿ ಅಂತ ಕೇಳಿದೆ... ಅದಕ್ಕೆ ಬಡಿಸುವವರು ಎರಡೇ ತೊಟ್ಟು ಬೀಳುವಂತೆ ಬಡಿಸಿ ತಮಾಷೆಯಾಗಿ ಸಾಕ ಸರ್ ಅಂದರು... ತುಂಬಾ ಖುಷಿಯಾಯಿತು ಅವರ ಹಾಸ್ಯ ಪ್ರಜ್ಞೆಯಿಂದ. ಪಕ್ಕದ ಸ್ನೇಹಿತ ಕೇಳಿದ ಅಷ್ಟೇ ಹಾಕಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ? ಅದಕ್ಕೆ ನನ್ನ ಉತ್ತರ "ಅಮ್ಮ " . ಹೌದು ನಾನು ಎಲ್ಲೇ ಊಟ ಮಾಡಲಿ, ಪಾಯಸ ಬಂದಾಗ ಬೇಡ ಅನ್ನುವುದೇ ಇಲ್ಲ... ಇದಕ್ಕೆ ಕಾರಣ ನನ್ನಮ್ಮ. ಯಾವ ಸಮಯದಲ್ಲಿ ಹೇಳಿದ್ದೋ ಗೊತ್ತಿಲ್ಲ ಆದರೆ ಅದು ನನ್ನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. " ಪಾಯಸ ಬೇಡ್ವಾ , ಅಮ್ಮನ ಮೇಲೆ ಪ್ರೀತಿ ಇಲ್ವಾ, ಪಾಯಸ ಬೇಡ ಅಂದ್ರೆ ನಿಮ್ಮಮ್ಮ ಸತ್ತೋಗ್ತಾಳೆ" ಯಾಕೆ ಹಾಗೆ ಹೇಳಿದಳೋ... ಪ್ರಾಯಶಃ ಮಗ ಪಾಯಸ ತಿನ್ನಲಿ ಎಂದಿರಬೇಕು.... ನನಗೆ ಕೋಪ ಬಂದಿತ್ತು, ದುಃಖ ಆಗಿತ್ತು, ಪಾಯಸ ಹಾಕಿಸಿಕೊಂಡು ತಿಂದದ್ದು ನೆನಪಿದೆ. ಕೋಪ ಮತ್ತು ದುಃಖ ಅಳುವಿನ ರೂಪದಲ್ಲಿ ಅಮ್ಮನ ಮುಂದೆ ಹೊರಹಾಕಿದ್ದು, ಅಮ್ಮ ಮುದ್ದು ಮಾಡಿದ್ದು ಸಹ ನೆನಪಿದೆ... ಇದು ಪಾಯಸದ ಹಿಂದಿನ ಪ್ರಸಂಗ. ಮಾತು ಮುಂದುವರಿದು ಇವತ್ತು mother's day ಅನ್ನುವ ವಿಚಾರ ಹೊರಕ್ಕೆ ಬಂತು. ನನಗೆ ವರ್ಷಕ್ಕೊಮ್ಮೆ ಆಚರಣೆ ಮಾಡುವ ಇಂತಹ ದಿನಗಳು ಅಷ್ಟೇನೂ ಪ್ರಭಾವ ಬೀರಿಲ್ಲ. ಹಾಗಂತ ನಾನು ವಿರೋಧಿಯಲ್ಲ. ಹಾಗಾಗಿ ಅಮ್ಮನ ನೆನಪುಗಳ ಈ...